ಶ್ರಾವಣ ಅಂದರೆ ಸೊಬಗು ಶ್ರಾವಣ ಅಂದರೆ ಸಂಭ್ರಮ. ಭೂದೇವಿಯು ಹಸಿರುಟ್ಟು ಸಿಂಗಾರ ವಾಗಿ ರಂಗಿನ ಹೂವರಳಿಸಿ ವರುಣನ ತುಂತರಿಗೆ ಪುಳಕಿತಳಾಗುತ್ತಾ ಮಧ್ಯೆ ಮಧ್ಯೆ ಮೋಡದ ಮರೆ ಯಿಂದ ಇಣುಕುವ ರವಿಯ ನೋಟಕ್ಕೆ ಬೆಚ್ಚಗಾ ಗುತ್ತಾ ಇರುವ ಸಮಯ.ಈಸೊಬಗ ಕಾಣಲೆಂದೇ ದೇವಾನುದೇವತೆಗಳು ಪೂಜಿಸಿಕೊಳ್ಳಲು ಈ ಸಮಯದಲ್ಲೇ ಭೂಮಿಗೆ ಬರುವುದು. ಇಂತಹ ಆಹ್ಲಾದಮಯ ವಾತಾವರಣಕ್ಕೆ ಹಬ್ಬಗಳದಿಬ್ಬಣ. ಶ್ರವಣವೆಂದರೆ ಕೇಳುವಿಕೆ. ಪುರಾಣ ಪುಣ್ಯಕಥೆಗ ಳನ್ನು ಕೇಳಲು ಶ್ರಾವಣ ಸೂಕ್ತ ಕಾಲ.ಪ್ರಕೃತಿ ಇಡೀ ತಂಪಿನ ಹಸಿರುಟ್ಟು ನಲಿಯುವಾಗ ಮನದಲ್ಲಿ ಪಾವನತೆಯ ಸಾರ್ಥಕ್ಯ ಭಾವಭಕ್ತಿಯ ಪವಿತ್ರತೆ ಯನ್ನು ಅರಳಿಸುವ ಸುಸಮಯ ಈ ಶ್ರಾವಣ. ಕಣ್ಮನಗಳಿಗೆ ಸೊಂಪಿನ ಪೆಂಪಿನ ಆವರಣ, ನೋಂಪಿಗಳ ಆಚರಣ.

ಶ್ರಾವಣವನ್ನು ದ.ರಾ.ಬೇಂದ್ರೆಯವರು ಬಹಳ (ಸುಮಾರು ೧೧) ಕವನಗಳಲ್ಲಿ ವರ್ಣಿಸಿದ್ದಾರೆ. “ಶ್ರಾವಣದ ಕವಿ” ಎಂತಲೇ ಹೆಸರು ಅವರಿಗೆ. ಅವರು ಹೇಳುವಂತೆ:
ಶ್ರಾವಣ ಬಂತು
ನಾಡಿಗೆ ಬಂತು
ಬೀಡಿಗೆ ಬಂತು ಶ್ರಾವಣಾ
ಕುಣಿದ್ಹಾಂಗ ರಾವಣಾ
ಶ್ರಾವಣದ ಸ್ವಾಗತಕ್ಕೆಂದು ಆಷಾಢದ ಕಡೆಯ ದಿನ ಭೀಮನಮಾವಾಸ್ಯೆ.ಭೀಮೇಶ್ವರನಿಗೆಹೆಂಗೆಳೆ ಯರು ಪೂಜೆ ಸಲ್ಲಿಸಿ ಗಂಡನ ಆಯುರಾರೋಗ್ಯ ಗಳಿಗಾಗಿ ಪ್ರಾರ್ಥಿಸುತ್ತಾರೆ.ಮುಂಬರುವ ಹಬ್ಬಗಳ ಸಾಲು ಶ್ರಾವಣದ ಹಬ್ಬಗಳಿಗೆ ಮುನ್ನುಡಿ ಈಹಬ್ಬ.

ಜೋರು ಮಳೆಯ ಪ್ರತಾಪ ನಿಂತು ಪನ್ನೀರ ಸಿಂಚನದ ತುಂತುರು ಮಳೆಗೆ ಅರಳಿನಿಂತ ಹೂವು ಗಳಿಗೆ ಹಿತ ಮಜ್ಜನ. ಸ್ಫಟಿಕ ಕಾಕಡ ಕನಕಾಂಬರ ಗುಲಾಬಿ,ಜಾಜಿ,ಮಲ್ಲಿಗೆಗಳಲ್ಲದೆ ಶ್ರಾವಣದರಾಣಿ ಬೆಟ್ಟತಾವರೆ ಡೇಲಿಯಾಳದ್ದೂ ಆಗಮನ.ತುಳಸಿ, ಮರುಗ, ಪನ್ನೀರೆಲೆ, ಕಾಮಕಸ್ತೂರಿ, ದವನ, ಮಾಚಿಪತ್ರೆಗಳ ಪತ್ರೆಗಳಂತೂ ನಳನಳಿಸುತ್ತಿರು ತ್ತವೆ. ಪೂಜೆಗೂ ಸಮೃದ್ಧಿ, ಹೆರಳಿಗೇರಿಸಲೂ ಧಾರಾಳ. ಧರಣಿಗೆ ಶ್ರಾವಣನ ದೇಣಿಗೆ ಈ ಪುಷ್ಪ ಪರ್ಣರಾಶಿ . ಆಷಾಢದಲ್ಲಿ ಮಳೆಯ ಆಗಮನದ ಸೂಚನೆ ಶ್ರಾವಣದಲ್ಲಿ ಅವನಿ -ಆಕಾಶ ಒಂದಾಗು ವ ಹಾಗೆ ಮಳೆ. ಚಿಗುರಿದ ಹಸಿರು ಹುಲ್ಲಿನ ಜಮ ಖಾನ ಭೂಮಿ ತಾಯಿಗೆ. ಅದನ್ನೇ ಬೇಂದ್ರೆ ಯ ವರು ಹೇಳಿದ್ದು“ಬೆಟ್ಟತೊಟ್ಟಾವ ಕುತನಿಯ ಅಂಗಿ” ಎಂದು.

ಶ್ರಾವಣದ ಸೋಮವಾರಗಳಂದು ಶಿವ ಪೂಜೆಗೆ ಶ್ರೇಷ್ಠ. ಇಡೀ ವರ್ಷದಲ್ಲಿ ಮಾಡಲಾಗದಿದ್ದ ಶಿವ ಪೂಜಾ ಕೈಂಕರ್ಯಗಳನ್ನುಈ ಮಾಸದಲ್ಲಿ ಮಾಡ ಬಹುದು ಎಂದು ಹೇಳುತ್ತಾರೆ. ಇನ್ನು ಮಂಗಳ ವಾರ ಮಂಗಳ ಗೌರಿ, ಶ್ರಾವಣ ಶನಿವಾರದಂದು ಶ್ರೀನಿವಾಸನ ಪೂಜೆ, ಶುಕ್ರವಾರಗಳಂದು ಲಕ್ಷ್ಮಿಗೆ ಮೀಸಲು, ವರಮಹಾಲಕ್ಷ್ಮಿ ವ್ರತದ ಆಚರಣೆ. ಶ್ರಾವಣದ ಶುಕ್ರವಾರಗಳು ದೇವಿ ಪೂಜೆಗೆ ಅತ್ಯಂತ ಶುಭಕರವೆಂಬ ನಂಬಿಕೆ ಶ್ರಾವಣದ ಪ್ರತಿ ದಿನವೂ ಹಬ್ಬವೇ. ಪ್ರತಿ ಕ್ಷಣವೂ ಸಡಗರದ ಕಬ್ಬವೇ.

ಬೇಂದ್ರೆಯವರು ಇದನ್ನು ಜಗದ್ಗುರುಗಳ ಮಾಸ ವೆಂದೇ ಹೇಳಿದ್ದಾರೆ. ಶ್ರೀಅರವಿಂದರು ಹುಟ್ಟಿದ್ದು ಇದೇ ಮಾಸದಲ್ಲಿ. ರಾಘವೇಂದ್ರ ಸ್ವಾಮಿಗಳ ಆರಾಧನೆಯೂ ಶ್ರಾವಣದಲ್ಲೇ.ಮಹರ್ಷಿಗಳಾದ ಪಾಣಿನಿಯ ಜಯಂತಿ ಶ್ರಾವಣಹುಣ್ಣಿಮೆಯಂದು ನಡೆಯುವುದು.ರಕ್ಷಾಬಂಧನದ ಈ ಪವಿತ್ರದಿನವು ಶ್ರಾವಣದಲ್ಲಿಯೇ ಉಪಾಕರ್ಮಗಳೂ ಸಹ ಶ್ರಾವಣದಲ್ಲಿಯೇ ನಡೆಯುವುದು. ನಾಗರ ಚೌತಿ ಪಂಚಮಿಯ ತನಿ ಎರೆಯುವ ಪಾವಿತ್ರ್ಯತೆ. ಚುಮುಚುಮು ಮಳೆಯಲ್ಲಿ ಬಾಳೆಲೆಯ ಮೇಲೆ ಬಿಸಿಬಿಸಿ ಕುಚ್ಚಲ ಕಡಬು ಅದರ ಮೇಲೆ ಬಿದ್ದ ತುಪ್ಪ….. ಆಹಾ !……ಬೇರೆ ಸ್ವರ್ಗವೇ ಬೇಡ.

ಪಂಚಮಿಯ ಉಂಡೆಗಳು ಜೋಕಾಲಿಯಸಡಗರ ನಂತರ ಗೋಕುಲಾಷ್ಟಮಿಯ ತಿಂಡಿಗಳ ಅಬ್ಬರ. ಇನ್ನೂ ಕೃಷ್ಣನ ಆರತಿ ಲಕ್ಷ್ಮಿಯ ಆರತಿ ಎಂದೆಲ್ಲಾ ಸಂಭ್ರಮಿಸುವ ಹೆಂಗೆಳೆಯರ ಸಡಗರಕ್ಕೆ ಕೊನೆ ಯೇ ಇಲ್ಲ. ಒಳಗಿಟ್ಟ ರೇಷ್ಮೆ ಸೀರೆ ಹೊಸ ಗಾಜಿನ ಬಳೆ ತೊಟ್ಟು ಕುಂಕುಮಕ್ಕಾಗಿ ಕರೆಯುವ ಹೆಣ್ಣು ಮಕ್ಕಳ ಸರಭರ. ಕಲಾತ್ಮಕ ಕೃತಿಗಳ ರಂಗವಲ್ಲಿ ಗಳ ಸೃಜನಾತ್ಮಕ ಪ್ರದರ್ಶನ. ಓಹೋ ಶ್ರಾವಣವೇ ನೀನೆಂದರೆ ಖುಷಿ ಖುಷಿಯೇ. ಅಪಾರ ಹರ್ಷದ ಭರಣಿ ಈ ಶ್ರಾವಣಿ.
ಆಷಾಢದಲ್ಲಿ ದೂರಾಗಿ ವಿರಹದಿಂದ ಬೆಂದ ನವ ಜೋಡಿಗಳಿಗೆ ಈಗ ಮರು ಮಿಲನದ ಸಂಭ್ರಮ. ಅದನ್ನೇ ತಾನೆ ಶ್ರಾವಣ ಬಂತು ಸಿನೆಮಾದಲ್ಲಿ ಅಣ್ಣಾವ್ರು ಹಾಡಿದ್ದು:

“ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ” ಎಂದು.
ಮನೆ ತುಂಬಾ ನೆಂಟರು ಇಷ್ಟರು ಹೆಣ್ಣುಮಕ್ಕಳು ತುಂಬಿಕೊಂಡು ದಿನವೂ ಔತಣದ ಅಡಿಗೆ ಸಿಹಿ, ಶ್ರಾವಣವೆಂದರೆ ಬಾಳಿನ ಹೋಳಿಗೆ ಹೂರಣ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಎಷ್ಟೋ ಮಹ ನೀಯರ ಪುಣ್ಯದ ಫಲದ ಸ್ವಾತಂತ್ರ್ಯೋತ್ಸವ ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಬರು ವುದು ವಿಶೇಷ.

ಇದೆಲ್ಲಾ ಬಾಲ್ಯದ ವೈಭವದ ಮೆಲುಕು. ಇನ್ನು ನಂತರದ ಜೀವನ, ಸಡಗರ – ಸಂಭ್ರಮ ಇರುವ ಇತಿಮಿತಿಯಲ್ಲೇ.ನೌಕರಿಜವಾಬ್ದಾರಿಗಳ ಧಾವಂತ ತದಲ್ಲೇ ಆಚರಿಸುವ ಮನಸ್ಥಿತಿ ಉಳಿದೇ ಇದೆ ಕೊಂಚ ಮಾರ್ಪಾಡುಗಳೊಂದಿಗೆ. ನಮ್ಮ ಅಮ್ಮ ನಂತಹ ಹಿರಿಯರಷ್ಟೇ ಚಾಚೂ ತಪ್ಪದೆ ನಡೆಸದಿ ದ್ದರೂ ಮನದಾಳದ ಭಾವನೆಗಳಿಗೆ ಸಂಪ್ರದಾಯ ಗಳಿಗೆ ಕುಂದು ಬಂದಿಲ್ಲ.
ಆದರೆ ಕಳೆದ ವರ್ಷದಿಂದ ಕರೋನಾದಿಂದಾಗಿ ಮನಸ್ಸು ಜಡವಾಗಿದೆ. ಸಂಭ್ರಮ ಸಂತೋಷವಿ ಲ್ಲದೆ ಕರ್ತವ್ಯ ನಿರ್ವಹಿಸುವ ಭಾರವಾದ ಸ್ಥಿತಿ. ಶ್ರಾವಣನಿಗೂ ಈ ಮಹಾಮಾರಿಯ ಸೂತಕ ಆವರಿಸಿದೆ. ಮುಂದಿನ ವರ್ಷಕ್ಕಾದರೂ ಶ್ರಾವಣ ನಿಗೆ ಸಂಭ್ರಮದ ಸ್ವಾಗತ ಕೋರುವಂತಾಗಲಿ.

ದುಗುಡ ದುಮ್ಮಾನದ ಕಲೆಗಳ ಅಳಿಸಿ ಹೊಸ ಹರ್ಷದ ಆಗಮನಕ್ಕೆ ಶ್ರಾವಣವನ್ನು ಸಂಕೇತ ವನ್ನಾಗಿ ಇರಿಸುವುದು ವಾಡಿಕೆ.. ಇನ್ನು ಮುಂದಾ ದರೂ ನಿಜ ಅರ್ಥದ ಶ್ರಾವಣ ಎಲ್ಲರಿಗೂ ಬರಲಿ, ಸಂಭ್ರಮ ಸಂತೋಷ ಮನಮನೆಗಳನ್ನ ತುಂಬಲಿ.
ಸುಜಾತಾ ರವೀಶ್, ಮೈಸೂರು
ಸೂಪರ್ ಮಾಮ್ ತುಂಬಾ ಚಂದವಿದೆ ಶ್ರಾವಣ ಮಾಸದ ಕಳಕಳಿ ಮುಂಬರುವ ಹಬ್ಬಗಳಿಗೆ ಶುಭ ಕೋರಿ ಸ್ವಾಗತ ಬಯಸುತಿದೆ.ಸುಂದರ ಮನ ಅರಳುವ ಬರಹ ಶ್ರಾವಣ ವಿಶೇಷತೆಯ ಘಮಲು ❤❤👌
R.ಸಾವಿತ್ರಿ ಕೋಲಾರ
LikeLiked by 1 person
ಯುಕ್ತ ಸಾಂಧರ್ಬಿಕ ಚಿತ್ರಗಳೊಂದಿಗೆ ನನ್ನ ಬರಹವನ್ನು ಅಂಗೀಕರಿಸಿದ್ದಕ್ಕೆ ಪ್ರಕಟಿಸಿದ್ದಕ್ಕೆ ಸಂಪಾದಕರಿಗೆ ತುಂಬಾ ತುಂಬಾ ಧನ್ಯವಾದಗಳು
ಸುಜಾತಾ ರವೀಶ್ .
LikeLiked by 1 person
ಚೆಂದದ ಶ್ರಾವಣದ ಶ್ರಾವಣಕೆ
ಶುಭಕೋರಿ ಅಭಿನಂದಿಸುವೆ .
….. ನಾ ಕಡಮೆ .
LikeLike