ಇಲ್ಲಿಗೀ ಕಥೆ ಮುಗಿಯಿತು ಎಂದು ಹತ್ತು ಸಲ ಅಂದುಕೊಂಡಿದ್ದೆ. ಯಾಕೋ ಗೊತ್ತಿಲ್ಲ… ಈ ಪ್ಯಾರಿಸ್ ಬಿಡದೇ ಕಾಡುವ ಮೋಹಿನಿಯಾಗುತ್ತಿ ದ್ದಾಳೆ. ಆಯ್ ಪ್ರೊಮಿಸ್.. ಈ ಸರಣಿಯಲ್ಲಿ ಇದೇ ಕಡೆಯದು..ಮುಂದೆ ಹೊಸ ದೇಶ, ಹೊಸ ಜಾಗಕ್ಕೆ ಹೋಗೋಣ. ಈಗ ಆ ಕಾಡುವ ವಿಷಯ ಗಳೆಡೆಗೆ ಬರೋಣ.

ಈ ಫ್ರೆಂಚರಿದಾರಲ್ಲ.. ಇವರ ಸ್ಟೈಲೇ ಬೇರೆ.. ಇವರ ಖದರೇ ಬೇರೆ…ಇವರ ಜೀವನ ವಿಧಾನವೇ ತುಂಬಾ ಅನುಕರಣೀಯ. ಅವರಲ್ಲಿ ಕಲಿಯಬೇ ಕಾದ ವಿಷಯಗಳು ಸಾಕಷ್ಟಿವೆ. (ಕಲಿಯ ಬಾರದ ಒಂದೆರಡು ವಿಷಯಗಳನ್ನೂ ಕೊನೆಯಲ್ಲಿ ಹೇಳಿ ಬಿಡುತ್ತೇನೆ). ಅವರ ವಿಭಿನ್ನ ಜೀವನ ವಿಧಾನಗಳ ನ್ನು ನೋಡಿದಾಗೆಲ್ಲ ನನ್ನ ಇಂಡಿಯನ್ ಮೈಂಡ್ ಸೆಟ್ ಚಕಿತಗೊಂಡಿದೆ. ಮತ್ತು ಅವುಗಳನ್ನು ಯಾವಾಗಲೂ ನಮ್ಮವಿಚಾರಗಳೊಂದಿಗೆ ತುಲನೆ ಮಾಡಿವೆ. ಎಲ್ಲಕ್ಕಿಂತ ಮಿಗಿಲಾಗಿ ನಾನು ಹೇಳಲೇ ಬೇಕಾಗಿದ್ದು ಅವರ ಆಹಾರ-ವಿಹಾರ.

ಮೊಟ್ಟಮೊದಲು ಫ್ರಾನ್ಸಗೆ ಹೋದಾಗಲೇ ನಾನು, ಫ್ರೆಂಚರು ಬಹುತೇಕವಾಗಿ ದಿನವೂ ಕೆಫೆಗಳಲ್ಲಿ ಬಗೆಬಗೆಯ ಭಕ್ಷ್ಯಗಳು..ಬೇಕ್ಡ್ ಸಿಹಿ ತಿನಿಸುಗಳ ನ್ನು ತಿನ್ನುವದನ್ನು ಕಂಡಿದ್ದೆ. ಪ್ಯಾರಿಸ್ ನಲ್ಲಂತೂ ಈ ಫ್ರೆಂಚರು ಮನೆಯಲ್ಲಿ ಅಡುಗೆ ಮಾಡುವದೇ ಅಪರೂಪ. ದಿನವೂ ಕೆಫೆಗಳಲ್ಲಿ ಅಷ್ಟೊಂದು ಬೆಣ್ಣೆ ಮತ್ತು ಚೀಸ್ ಭರಿತ ಆಹಾರ ತಿಂದೂ ಬಹು ತೇಕ ಫ್ರೆಂಚರು ಚೂರೂ ಕೊಬ್ಬಿಲ್ಲದ, ಸುಂದರ ಮತ್ತು ಸಪೂರ ಮೈಕಟ್ಟನ್ನು ಹೊಂದಿರುವದು ಸೋಜುಗದ ಸೂಜುಮಲ್ಲಿಗೆಯಾಗಿ ಕಾಡುತ್ತಿತ್ತು. ಆ ರಹಸ್ಯವನ್ನು ಮುಂದಿನ ಭೇಟಿಗಳಲ್ಲಿ ಭೇದಿ ಸಲು ಪಣ ತೊಟ್ಟು ಕಂಡ ಕಂಡ ಫ್ರೆಂಚರನ್ನು ಎಡ ತಾಕಿದ್ದೆ. ಇದೋ ನನ್ನ ಕಲಿಕೆ ನಿಮಗಾಗಿ …

ಅಂದಹಾಗೆ ನಾನು ಈ ವಿಧಾನವೇ ಪರಮ ಶ್ರೇಷ್ಠ ಎಂದೇನೂ ಹೇಳುತ್ತಿಲ್ಲ…ಆದರೆ ಫಲಿತಾಂಶವನ್ನು ಕಣ್ಣಾರೆ ನೋಡಿ ಬೆರಗಾಗಿದ್ದು ನಿಜ.ನನ್ನ ಪ್ರವಾಸ ದ ಇಂಥಹ ಕಲಿಕೆಗಳಿಂದ ಯಾರಿಗಾದರೂ ಲಾಭ ಆಗುವಂತಿದ್ದರೆ ಆಗಲಿ ಅಷ್ಟೇ.

ಫ್ರೆಂಚರು ಸರಿಯಾದ ಅರ್ಥದಲ್ಲಿ ಊಟ ಬಲ್ಲವ ರು. ಈಗೀಗ ಎಲ್ಲ ಕಡೆ ಜನಪ್ರಿಯವಾಗುತ್ತಿರುವ ಈ Mindful eating ಎನ್ನುವ ಅದ್ಭುತವಾದ ಊಟದ ವಿಧಾನವನ್ನು ಮೊದಲಿನಿಂದಲೂಪಾಲಿ ಸುತ್ತಿರುವ ಇವರು ಡಯಟ್ ಎನ್ನುವ ದೇಹದಂಡ ನೆಯಿಂದ ಮಾರು ದೂರ.ಜೀವನದಪ್ರತಿಯೊಂದು ಕ್ಷಣವನ್ನೂ, ಆಹಾರದ ಪ್ರತಿಯೊಂದು ಕಣವನ್ನೂ ಸವಿಯಬೇಕು ಎನ್ನುವದೇ ಅವರ ಧ್ಯೇಯ.

ಮೊಟ್ಟ ಮೊದಲನೆಯದಾಗಿ, ಅಲ್ಲೆಲ್ಲೂ ಈನಿಂತು ಕೊಂಡೇ ಧಾವಂತದಲ್ಲಿ ತಿನ್ನುವ ಉಪಾಹಾರ ದರ್ಶಿನಿಗಳ concept ಇಲ್ಲವೇ ಇಲ್ಲ. ಫ್ರೆಂಚರು ತಮ್ಮ ಊಟ-ಉಪಹಾರವನ್ನು ಕಡ್ಡಾಯವಾಗಿ ಕುಳಿತೇ ಸೇವಿಸುತ್ತಾರೆ. ನಮ್ಮ ಪದ್ಧತಿಯೂ ಅದನ್ನೇ ಅನುಮೋದಿಸಿದರೂ ನಾವು ಹಿಂದಿನ ಒಳ್ಳೆಯ ವಿಧಾನಗಳನ್ನು ಒಂದೊಂದಾಗಿ ಕೈ ಬಿಟ್ಟಿ ದ್ದೇವೆ. ಊಟದ ಸಮಯದಲ್ಲಿ ಬಹುತೇಕ ಫ್ರೆಂಚರು ಫೋನ್ ನೋಡುವುದೇ ಇಲ್ಲ.ಒಂದೊಂ ದು ಅಗಳನ್ನೂ ಚೆನ್ನಾಗಿ ಅಗಿದು, ನಿಧಾನವಾಗಿ ಸವಿಯುತ್ತಾರೆ. ಅವರಿಗೆ ಊಟ ಎನ್ನುವದು ಒಂದು ಸಂಭ್ರಮ.. ಪವಿತ್ರವಾದ ಸಡಗರ..ಕಛೇರಿ ಕೆಲಸದಷ್ಟೇ ಮುಖ್ಯವಾದ ಕ್ರಿಯೆ. ಅದು ನಮ್ಮ ಹಾಗೆ ಎರಡು ಕೆಲಸಗಳ ಮಧ್ಯೆ ಹೇಗೋ ಹೊಟ್ಟೆ ತುಂಬಿಸಿಕೊಳ್ಳುವದಲ್ಲ. ಅವರ ಪ್ರಕಾರ ನಿಂತು, ಟಿವಿ/ ಫೋನ್ ನೋಡುತ್ತ ಗಡಿಬಿಡಿಯಲ್ಲಿ ತಿಂದರೆ ಅನವಶ್ಯಕವಾಗಿ ಹೆಚ್ಚು ಆಹಾರ ಸೇವಿಸುತ್ತೇವೆ. ಚೆನ್ನಾಗಿ ಅಗಿಯದೇ ಅದು ಸರಿಯಾಗಿ ಜೀರ್ಣ ವಾಗದು ಮತ್ತು ತಿಂದ ತೃಪ್ತಿಯೂ ಸಿಗದು. ಅವರ ಊಟದ ವಿರಾಮವೇ ಒಂದೂವರೆಯಿಂದ 02 ಗಂಟೆಗಳವರೆಗೂ ಇರುತ್ತದೆ. ಅವರ ಪ್ರಕಾರ, ಪ್ರತಿ ಕೆಲಸವನ್ನೂ ಮನವಿಟ್ಟು, ಅದೇ ಶ್ರದ್ಧೆಯಿಂ ದ ಮಾಡಿದರೆ, ಎಲ್ಲವೂ ಸರಿಯಾದ ಸಮಯಕ್ಕೆ ಮುಗಿದು me time ಅನ್ನು ಆನಂದಿಸಬಹುದು.. ಜೀವನ ಮಟ್ಟ ತಾನೇ ತಾನಾಗಿ ಸುಧಾರಿಸುತ್ತದೆ.

ಅನೇಕ course ಗಳ ಊಟ. ಅಲ್ಲಿ ತುಂಬಾ ಸಾಮಾನ್ಯ. ಸೂಪು, ಆಂಟ್ರೆ ಎನ್ನುವ ಸ್ಟಾರ್ಟರ್, ಮೇನ್ ಕೋರ್ಸ್, ಚೀಸ್, ಡೆಸರ್ಟ್ ಎಂದು ವಿಧವಿಧವಾದ ಬಗೆಗಳನ್ನು ತಿನ್ನುವಾಗ ಎಷ್ಟೊಂ ದು ತಿನ್ನುತ್ತಿದ್ದೇವೆ ಎಂಬ ಭಾವನೆ ಬರುತ್ತದೆ. ಆ ಭಾವನೆಯೇ ಹೊಟ್ಟೆ ತುಂಬಿದ ಅನುಭೂತಿ ಹುಟ್ಟಿ ಸುತ್ತದೆ. ಅಸಲಿಗೆ ಅಷ್ಟೊಂದು ತಿಂದಿರುವದೇ ಇಲ್ಲ. ಪ್ರತಿ ಬಗೆಯ ತಿನಿಸಿನ ಅಳತೆಯೂನಮ್ಮಲ್ಲಿ ಗೆ ಹೋಲಿಸಿದರೆ ತುಂಬಾ ಚಿಕ್ಕದು ಮತ್ತು ಸಾಕಷ್ಟು ಹಸಿತರಕಾರಿಗಳನ್ನು ಒಳಗೊಂಡಿರು ತ್ತದೆ. ಸುಂದರವಾಗಿ ಅಲಂಕರಿಸಿದ ಬಟ್ಟಲಲ್ಲಿ ಸ್ವಲ್ಪವೇ ಸ್ವಲ್ಪ ಸಿಹಿಯಿರುತ್ತದೆ. ಅದನ್ನು ಚಿಕ್ಕದಾ ದ ಚಮಚೆಯಿಂದ ನಿಧಾನವಾಗಿ, ಆ ಕ್ಷಣದಲ್ಲಿ, ಅಲ್ಲಿಯೇ ಮನವಿಟ್ಟು, ತಿಂದು ತೃಪ್ತರಾಗುತ್ತಾರೆ.

ಒಂದೊಂದು ಬಗೆಯ ಆಹಾರ ಟೇಬಲ್ಲಿಗೆ ಬಂದಾಗಲೂ ಚಿಕ್ಕಮಕ್ಕಳಂತೆ ಸಂಭ್ರಮಿಸುತ್ತಾರೆ. ಮುಂದಿನದಕ್ಕೆ ಕಾತರದಿಂದ ಕಾಯುತ್ತಾರೆ. ಇಡೀ ದಿನದಲ್ಲಿ ಮಧ್ಯಾಹ್ನದ ಊಟವೇ ಅವರಿಗೆ ಅತಿ ಮುಖ್ಯವಾದದ್ದು. ಬಹುತೇಕವಾಗಿ ಬ್ರೇಕ್ ಫಾಸ್ಟ ಮತ್ತು ಲಂಚ್ ಸೇರಿಸಿ ಮಧ್ಯಾಹ್ನದೊಳಗೇ ಬ್ರಂಚ್ ಮಾಡಿಬಿಡುತ್ತಾರೆ.

ಯಾವಾಗಲೂ ಹತ್ತಿರದ ರೈತರಿಂದ ಅಥವಾ ಸಂತೆಯಿಂದ ತಾಜಾ ತರಕಾರಿ, ಮಾಂಸ ಮತ್ತು ಹಣ್ಣುಗಳನ್ನು ಕೊಳ್ಳುತ್ತಾರೆ.ಆಯಾ ಋತುಮಾನ ಕ್ಕೆ ಅನುಗುಣವಾಗಿ ಹಣ್ಣು, ತರಕಾರಿಗಳನ್ನು ಬಳ ಸುತ್ತಾರೆ. ಹವಾಮಾನಕ್ಕೆ ಹೊಂದಿಕೊಳ್ಳುವ ಬಗೆ ಯ ವೈನ್ ಆಯ್ದುಕೊಂಡು ಊಟದೊಂದಿಗೆ ಹಿತಮಿತವಾಗಿ ಸೇವಿಸುತ್ತಾರೆ.ಇನ್ನೊಂದು ಮುಖ್ಯ ವಾದ ವಿಚಾರವೆಂದರೆ ಕುರುಕಲು ತಿನ್ನುವ ಪದ್ಧತಿ ಯೂ ಇಲ್ಲ. ಅಪ್ಪಿ ತಪ್ಪಿ ತಿಂದರೂ ಹಿತಮಿತ. ಅದ್ಭುತವೆಂದರೆ ಇವೆಲ್ಲವೂ ತುಂಬಾ ಹಿಂದಿನಿಂದ ಲೇ ಅನುಸರಿಸಲಾಗುತ್ತಿದೆ. ಚಿಕ್ಕ ಮಕ್ಕಳಿರುವಾಗ ಲೇ ಈ ಜೀವನ ವಿಧಾನವನ್ನು ಕಲಿಸಿಬಿಡುತ್ತಾರೆ. ಅದಕ್ಕೇ ಇವರು ahead of times ಆಗಿರು ವುದು. ಇಡೀ ಜಗತ್ತು ಕುರುಕಲು ತಿಂಡಿ, ತಂಪು ಪಾನೀಯಗಳ ಮುಂದೆ ಮಂಡಿಯೂರಿ ಕೂತಾಗ ಫ್ರೆಂಚ್ ಸರಕಾರ ಅವುಗಳ ಸುಂಕವನ್ನುದುಪ್ಪಟ್ಟು ಮಾಡಿ ತನ್ನ ಪ್ರಜೆಗಳ ಆರೋಗ್ಯ ರಕ್ಷಣೆಗೆ ಮುಂದಾಗಿತ್ತು.

ನಾನು ನೋಡಿದ ಪ್ರಕಾರ, ತಿನ್ನುವ ಆಹಾರಕ್ಕೆ ಫ್ರೆಂಚರು ಕೊಡುವ ಗೌರವ, ಪ್ರಾಮುಖ್ಯತೆ ಮತ್ತು ತೋರುವ ಶ್ರದ್ಧೆ ಜಪಾನ್ ಅನ್ನು ಬಿಟ್ಟರೆ ಜಗತ್ತಿನ ಇನ್ನಲ್ಲೂ ನೋಡಿಲ್ಲ. ನನಗಂತೂ ಈ ಎರಡೂ ದೇಶಗಳ ಆಹಾರ ಕ್ರಮಗಳೇ ಅಲ್ಲಿಯ ಜನರನ್ನು ಅತ್ಯಂತ ಆರೋಗ್ಯವಂತರು ಮತ್ತು ದೀರ್ಘಾಯು ಗಳನ್ನಾಗಿ ಮಾಡಿದೆ ಅನ್ನಿಸುತ್ತದೆ. ಈ ಎರಡೂ ದೇಶಗಳಲ್ಲೂ ಪ್ರತಿ ಖಾದ್ಯವನ್ನು ತಂದಿಟ್ಟಾಗಲೂ ಅದರ ಇತಿಹಾಸದ, ಬಳಸಿದ ಸಾಮಗ್ರಿಗಳ, ತಯಾರಿಸಿದ ವಿಧಾನಗಳ ಬಗ್ಗೆ ತುಂಬ ಹೆಮ್ಮೆ ಯಿಂದ ದೀರ್ಘ ವಿವರಣೆ ಕೊಡುವದನ್ನು ಗಮ ನಿಸಿದ್ದೇನೆ.

ಮೊದಲ ಸಲ ಹೋದಾಗ ಒಂದು ಅತಿ ಚಿಕ್ಕ ಬಟ್ಟ ಲಲ್ಲಿ ಇಷ್ಟೇ ಇಷ್ಟು ಕ್ರಾಂಬುಲೆ ಎನ್ನುವ ಫ್ರೆಂಚರ ಪ್ರಸಿದ್ಧ ಸಿಹಿ ತಿನಿಸು ತಂದಿಟ್ಟು ಉದ್ದನೆಯ ವಿವರಣೆ ನೀಡಿದಾಗ ಮೂಗಿಗಿಂತ ಮೂಗುತಿಯೇ ದೊಡ್ಡದು ಅನಿಸಿತ್ತು.

ಫ್ರೆಂಚರ ಈ ಆಹಾರೋಪಾಖ್ಯಾನದಿಂದ ಅದೆಷ್ಟು ಪ್ರಭಾವಿತರಾಗಿದ್ದೆವು ಅಂದರೆ Laduree (ಲಾಡು..ರೀ…ಅಲ್ಲ..ಲಾಡ್ಯೂರಿ) ಎನ್ನುವ 1862 ರಲ್ಲಿ ಪ್ರಾರಂಭಿಸಿದ ವಿಶ್ವ ವಿಖ್ಯಾತ ಐಶಾರಾಮಿ ಪೇಸ್ಟ್ರಿ ಶಾಪ್ ಅಥವಾ ಟೀ ರೂಮ್ ಗೆಹೋಗಲು ನಿರ್ಧರಿಸಿದೆವು. ಅಲ್ಲಿಯ ಮ್ಯಾಕರೊನ್ ಎಂಬ ಪೇಸ್ಟ್ರಿ ಗೆ The best in the world ಎನ್ನುವ ಹಣೆ ಪಟ್ಟಿ ಬೇರೆ. ಫ್ರೆಂಚ್ luxury ಯ ರುಚಿ ಯನ್ನೂ ನೋಡೇ ಬಿಡೋಣ ಎಂದು ಶೊನ್ ತ್ಸಲೀತ್ಸೆ (champs élysées) ಯಲ್ಲಿರುವ ಲಾಡ್ಯೂರಿ ಬೇಕರಿಗೆ ಬಂದಾಗ ಜನರು ಕ್ಯೂ ನಲ್ಲಿ ನಿಂತಿದ್ದರು.

ಅರ್ಧಗಂಟೆ ಕಾದು ಒಳಗೆ ಬಂದರೆ ಅದ್ಭುತ ಒಳಾಂಗಣ ವಿನ್ಯಾಸ. ತಿಳಿ ಹಸಿರು (snowy mint), ಗುಲಾಬಿ ಮತ್ತು ಬಂಗಾರದ ವರ್ಣಗಳ ಸಂಯೋಜನೆಯಲ್ಲಿ ತೂಗುದೀಪಗಳು, ಪರದೆ ಗಳು, ಸೋಫಾ ಸೆಟ್ ಗಳು, ಪಿಂಗಾಣಿಯ ಟೀ ಸೆಟ್ ಗಳು, ಕಟ್ಲೆರಿಗಳು ಮತ್ತು ಅತ್ಯದ್ಭುತ ಕೈಚಳ ಕದ, ಅತಿಸುಂದರ ಕಲಾಕೃತಿಯಂತೇ ಕಾಣುವ ವಿಧ ವಿಧವಾದ ಕೇಕುಗಳು, ಮ್ಯಾಕರೊನ್ ಗಳು, ಸಿಹಿ ತಿನಿಸುಗಳ ಅಲಂಕಾರಿಕ ಜೋಡಣೆ. ನಿಜ ಹೇಳುತ್ತೇನೆ.. ಯಾವುದೇ ಪ್ರಕಾರದ ಕಲೆಯ ಶ್ರೀಮಂತಿಕೆಯಲ್ಲಿ ಫ್ರೆಂಚರಿಗೆ ಫ್ರೆಂಚರೇ ಸಾಟಿ. ಅವರಷ್ಟು ಅತಿ ಸೂಕ್ಷ್ಮವಾಗಿ, ಎಲ್ಲಾ ವಿಷಯದ ಲ್ಲೂ ಅತಿ ಹೆಚ್ಚು ಗಮನವಿಟ್ಟು ವ್ಯವಹರಿಸುವ ವರು ಇಲ್ಲವೇ ಇಲ್ಲ ಅಂದರೂ ತಪ್ಪಿಲ್ಲ.

ಒಳಗಡಿಯಿಟ್ಟ ಕ್ಷಣದಿಂದ ನಿಮಗೆ ರಾಜಾತಿಥ್ಯ. ನಯ ವಿನಯದ ಸತ್ಕಾರ.ನಮಗೆ ಮೀಸಲಾಗಿದ್ದ ಸ್ಥಳಕ್ಕೆ ಕರೆದೊಯ್ದು ಕೂರಿಸಿ, iconic ಹಸಿರು ಬಣ್ಣದ ಮೆನ್ಯೂ ಕೊಟ್ಟರು. ಅಲ್ಲಿಯವರೆಗೂ ನಾವು ಭಾರತದಿಂದ ಬಂದ ಮಹಾರಾಜಾ ವಂಶ ಸ್ಥರೇ ಎಂದು ಬೀಗುತ್ತಿದ್ದ ನಾವು ಅಲ್ಲಿಯ ಐಶಾ ರಾಮಿಗೆ ತೆರಬೇಕಾದ ದರ ನೋಡಿ ಒಂದು ಕ್ಷಣ ಹೌಹಾರಿದ್ದು ಸುಳ್ಳಲ್ಲ.ಅಲ್ಲಿಯ ಪ್ರಸಿದ್ಧ ಇಸ್ಪಾಹಾ ನ್ (Ispahan) ಎನ್ನುವ ರೋಸ್ ಮ್ಯಾಕರೊನ್ ಕೇಕ್ ಅನ್ನು ಒಂದಕ್ಕೆ 13 ಯುರೋಗಳಂತೆ ತೆತ್ತು ತಿಂದೆವು. ಆ ಫ್ರೆಂಚ್ ವೈಭೋಗದಲ್ಲಿ,ಅಷ್ಟೊಂದು ದುಡ್ಡು ಕೊಟ್ಟು ತಿನ್ನುವಾಗ ಸಹಜವಾಗಿಯೇ ನಮಗೆ ಅದು ಅದ್ಭುತ ರುಚಿ ಎನಿಸಿತು. ಅದೆಷ್ಟು ಸಾವಕಾಶವಾಗಿ ತಿಂದರೂ ಆ ಚಿಕ್ಕ ಮ್ಯಾಕರೊನ್ ಮತ್ತು ರಾಸ್ಬೆರಿ ಕೇಕ್ ಕಣ್ಣು ಮಿಟುಕಿಸುವಷ್ಟರಲ್ಲಿ ಮುಗಿದೇಹೋಯಿತು. ಬರುವಾಗ ಅತಿ ಕಡಿಮೆ ಬೆಲೆ ಹುಡುಕಿ 18 ಯುರೋಗಳಿಗೆ ಚಿಕ್ಕದಾದ ಆರೇ ಆರು ಮ್ಯಾಕರೊನ್ ಗಳ ಒಂದು ಟೇಕ್ ಅವೇ ಬಾಕ್ಸ್ ತಂದೆವು.

ಫ್ರೆಂಚರ ಇನ್ನೊಂದು ವಿಶೇಷವಾದ ಲಕ್ಷಣವೆಂದರೆ art of doing nothing..ಇದು ಇಟಾಲಿಯ ನ್ ರ dolce far niente (the sweetness of doing nothing) ಮತ್ತು ಡಚ್ಚರ. niksen (to do nothing) ಗೆ ಸಮನಾದುದು.ದಿನದಲ್ಲಿ ಸ್ವಲ್ಪ ಸಮಯ ಏನೂ ಮಾಡದೇ ಇರುವದು…ಇದೇನು ಮಹಾ..ನಾವು ಇಡೀ ದಿನ ಇರುವುದೇ ಹಾಗೇ ಎನ್ನುತ್ತಿದ್ದೀರಾ.. ಇರಿ.. ಅದು ಹಾಗಲ್ಲ. ಏನೂ ಮಾಡದೇ ಇರುವುದು ಅಂದರೆ ಸ್ವಂತಕ್ಕಾ ಗಿ ಸಮಯವನ್ನು ವ್ಯಯಿಸುವದು ಮತ್ತು ಅದ ಕ್ಕಿಂತ ಮುಖ್ಯವಾಗಿ ಏನೂ ಮಾಡದೇ ಇರುವದಕ್ಕೆ ತಪ್ಪಿತಸ್ಥ ಮನೋಭಾವ ಹೊಂದದೇ ಇರುವದು. ನಾವೆಲ್ಲ ಫೇಸ್ ಬುಕ್, ಟ್ವಿಟರ್, ಕ್ಲಬ್ ಹೌಸ್.. ಎಂದು ಗಂಟೆಗಟ್ಟಲೇ ಸಮಯ ಕಳೆಯುವದಕ್ಕೆ Art of doing nothing ಅನ್ನಲಾಗದು.ನಾವು ಸಮಯ ವ್ಯಯ ಮಾಡುವದಲ್ಲದೇ ಅದಕ್ಕಾಗಿ ಸದಾ ಪಶ್ಚಾತ್ತಾಪ ಪಟ್ಟುಕೊಂಡು ಮಾನಸಿಕವಾ ಗಿಯೂ ಕುಗ್ಗಿಹೋಗುತ್ತೇವೆ. ಈ ಸಮಯದಲ್ಲಿ ಸೋಷಿಯಲ್ ಮೀಡಿಯಾ, ಟಿ ವಿ, ಫೋನ್, ಮಾಡಬೇಕಾದ ಮತ್ತು ಮಾಡದೇ ಹಾಗೇ ಇಟ್ಟಿ ರುವ ಕೆಲಸಗಳ ಪಟ್ಟಿ ಯಾವುದನ್ನೂ ಗಮನಿಸು ವಂತಿಲ್ಲ. ಈಸ್ಮಾರ್ಟ್ ಫೋನ್ ಕೈಲಿದ್ದಾಗ ಆರ್ಟ್ ಆಫ್ ಡುಯಿಂಗ್ ನಥಿಂಗ್ ಎನ್ನುವದು ಅದೆಷ್ಟು ಕಷ್ಟ ಎಂದು ಮಾಡಿ ನೋಡಿದರೆ ಗೊತ್ತಾಗುತ್ತದೆ.

ಫ್ರೆಂಚರ ಪ್ರಕಾರ ಈ ವಿಧಾನವನ್ನು ದಿನವೂ ಸ್ವಲ್ಪ ಹೊತ್ತು ಪಾಲಿಸಬೇಕು. ಕಿಡಕಿಯ ಪಕ್ಕ ಕುಳಿತು ಹೊರಗಿನ ಜಗತ್ತನ್ನು ದಿಟ್ಟಿಸಬಹುದು. ಕಾಫಿ/ಟೀ ಗುಟುಕರಿಸುತ್ತಾ ಮೈ ಮರೆಯಬಹುದು. ಪಾರ್ಕ ನಲ್ಲಿ ಕುಳಿತು ಸುತ್ತಲಿನ ವಾತಾವರಣ ಗಮನಿಸ ಬಹುದು. ಇಲ್ಲಿ ಬಹು ಮುಖ್ಯವಾಗಿ ನಾವು ಮಾಡಬೇಕಾಗಿರುವದು ಡಿಜಿಟಲ್ ಡಿಟೊಕ್ಸ್ ಮತ್ತು ಎಷ್ಟೊಂದು ಕೆಲಸಗಳಿವೆ..ಏನೂ ಮಾಡದೆ ಕುಳಿತಿದ್ದೇನೆ ಎನ್ನುವ ಅಪರಾಧೀ ಭಾವನೆಯಿಂದ ಮುಕ್ತವಾಗಿರಬೇಕು.

ಫ್ರೆಂಚರು ಹೇಳುತ್ತಾರೆ.. ಇದರಿಂದ ವ್ಯಕ್ತಿಯ ಕ್ರಿಯಾಶೀಲತೆ ಚುರುಕುಗೊಳ್ಳುತ್ತದೆ ಮತ್ತು ಮನಸ್ಸು ಸದಾ ಆಹ್ಲಾದಕರವಾಗಿರುತ್ತದೆ. ನಿಯ ಮಿತವಾಗಿ ಮತ್ತು ಸರಿಯಾಗಿ ಇದನ್ನು ಪಾಲಿಸಿ ದರೆ ಇದರಷ್ಟು ಒಳ್ಳೆಯ ಒತ್ತಡ ಶಾಮಕ ಇನ್ನೊಂದಿಲ್ಲ. ಅದಕ್ಕೇ ಇರಬೇಕು..ಫ್ರೆಂಚರು ಕೆಫೆ ಗಳಲ್ಲಿ ಒಂದು ಗ್ಲಾಸ್ ವೈನ್ ಹಿಡಿದು ಕುಳಿತು ಕೊಂಡರೆ ಅದು ಕುಡಿದು ಖಾಲಿಯಾಗುವದಕ್ಕಿಂತ ಆವಿಯಾಗೇ ಖರ್ಚಾಗುತ್ತದೆ ಎನ್ನುವದು ನನ್ನ ಗುಮಾನಿ.

ಇಷ್ಟೆಲ್ಲ ಕೇಳಿದ ಮೇಲೆ ಅವರು ಎಲ್ಲದರಲ್ಲೂ ಪಿಕ್ಚರ್ ಪರ್ಫೆಕ್ಟ್ ಎಂದು ಭಾವಿಸಿಬಿಡಬೇಡಿ. ನಾಣ್ಯದ ಇನ್ನೊಂದು ಮುುಖ ಇಲ್ಲಿದೆ ನೋಡಿ…ಇವರು ಮದುವೆ,ಮಕ್ಕಳು, ಕುಟುಂಬ.. ಇವೆಲ್ಲವು ಗಳ ಜವಾಬ್ದಾರಿಗೆ ಭಯ ಬೀಳುತ್ತಾರೆ. ಅರ್ಧ ಕ್ಕಿಂತ ಹೆಚ್ಚು ಜನರು ಮದುವೆಯಾಗುವದೇ ಇಲ್ಲ. ಅಪ್ಪಿ ತಪ್ಪಿ ಮದುವೆಯಾದರೂ ಮಕ್ಕಳಂತೂ ಬೇಡವೇ ಬೇಡ. ಮೂರೊತ್ತೂ ಲೈಫ ಸ್ಟೈಲ್ ಮೆಂಟೇನ್ ಮಾಡುವ ಬಗ್ಗೆಯೇ ಚಿಂತೆ. ಚಿಕ್ಕ ಫ್ಲಾಟ್ ಗಳಲ್ಲಿ ಒಬ್ಬೊಬ್ಬರೇ ಇರಲು ಬಯಸು ತ್ತಾರೆ. ನಮ್ಮಲ್ಲೂ ನಗರಗಳ ಯುವಜನಾಂಗ ಇದಕ್ಕಿಂತ ತುಂಬ ಭಿನ್ನವಾಗೇನೂ ಇಲ್ಲ ಬಿಡಿ. ನೈತಿಕವಾಗಿ ಅತಿ ದುರ್ಬಲರಾಗಿರುವದರಿಂದ ದಾಂಪತ್ಯ ನಿಷ್ಠೆಯನ್ನು ಗಾಳಿಗೆ ತೂರುವಲ್ಲಿ ಫ್ರೆಂಚರಿಗೆ ಜಗತ್ತಿನಲ್ಲೇ ಮೊದಲ ಸ್ಥಾನ. ಯಾರ ನ್ನು ನೋಡಿದರೂ ಧೂಮ್ರ ಲೀಲಾ ವಿನೋದಿ. ಬಹುತೇಕ ಫ್ರೆಂಚರಿಂದ ವಿಶ್ವ ದರ್ಜೆಯ ಅತ್ತರನ್ನು ಮೀರಿಸುವ ದಟ್ಟ ಸಿಗರೇಟು ವಾಸನೆ.

ಇರಲಿ..sum up ಮಾಡಲು ಹೋದರೆ ಒಂದು ಶ್ರೀಮಂತ ಇತಿಹಾಸದ, ಅದ್ಭುತ ಕಲಾ ವೈಭವದ, ಅಸಾಮಾನ್ಯ ದೇಶಪ್ರೇಮಿಗಳ, ಅನನ್ಯವಾದ ಬೀಡು ಈ ಫ್ರೆಂಚ್ ನಾಡು. ಇವರ ಸಿಹಿಯಾದ ಭಾಷೆ, ಶಿಷ್ಟ ಆಚಾರಗಳು, ವಿಭಿನ್ನ ವಿಚಾರಗಳು, ಅದ್ಭುತ ಕಲಾ ವೈಭವ ಮುಂತಾದ ಮರೆಯ ಲಾರದ ಅನುಭವಗಳ ಬುತ್ತಿ ಹೊತ್ತು, ಅಲ್ಲಿಯ ಸಾಂಸ್ಕೃತಿಕ ಸೀಯೆನ್ ನಲ್ಲಿ ಮುಳುಗೆದ್ದು ಪುನೀ ತರಾಗಿ ಮುಂದಿನ ಗಮ್ಯದತ್ತ ಹೊರಡೋಣ. ಹೇಗಿತ್ತು ನನ್ನ ಜೊತೆ ನಿಮ್ಮ ಫ್ರಾನ್ಸ ಪಯಣ…. ಕೇಳಲು ಉತ್ಸುಕಳಾಗಿರುವೆ.ಹೊಸ ದೇಶ.. ಹೊಸ ಜಾಗದಲ್ಲಿ ನನ್ನ ನಿಮ್ಮ ಮುಂದಿನ ಭೇಟಿ…. ಬೇಗ ಸಿಗೋಣ.

ಸುಚಿತ್ರಾ ಹೆಗಡೆ, ಮೈಸೂರು