ಕತ್ತಲೊಡನೆ ಗುದ್ದಾಡಿ ನಜ್ಜುಗುಜ್ಜಾದರೂ
ಗೆದ್ದು ಬೀಗುವ ಬೆಳಕ ಹಗಲ ಹೆಗಲಿಗೊಂದು
ಮಿರಿ,ಮಿರಿ ಮಿಂಚುವ ಬಣ್ಣದ ಶಾಲು
ಹೊದೆಸಿ,ಸಾಂತ್ವನದ ನಾಟಕವಾಡುವ ಈ…ಕಾಲ

ಬಯಲ ಬಂದೀಖಾನೆಯ ಸುತ್ತ ಅಂದದ
ಬಣ್ಣಗಳ ಬಳಿದು,ಒಳಗಿರುವ ಅಣ್ಣಗಳ
ಖುಷಿಪಡಿಸುವ ಕಾಲ.

ಎದೆತೆರೆದು ಮಲಗಿದ ಪುಸ್ತಕದ ಸ್ವಸ್ಛ ಬಿಳಿ
ಹಾಳೆಯ ಪುಟ,ಪುಟಗಳಲ್ಲೂ ನಿರಾತಂಕ
ತನಗಿಷ್ಟದ ಬಣ್ಣಗಳ ಬೇಕಾಬಿಟ್ಟಿ
ಎರಚಾಡುವ ಕಾಲ.

ಉರಿಬಿಸಿಲಿಗೆ ಭಣಗುಡುವ ಮೈದಾನದ
ತುಂಬಾ ಮನಬಂದಂತೆ ಯಾವ್ಯಾವುದೋ
ಬೀಜಗಳ ತೂರಾಡಿ,ಸುರಿವ ಧೋ..ಧೋ
ಮಳೆಗಾಗಿ ಮುಗಿಲ ನೋಡುವ ಕಾಲ.

ಮೇಲೆ ಆಗಸದಲ್ಲಿ ಅಲ್ಲೊಂದು ಇಲ್ಲೊಂದು
ಮೋಡಗಳ ತುಣುಕು,ಬಿಸಿಲಿಗೆ ಬಸವಳಿದು
ಬಾಯಾರಿ,ಒಣತುಟಿಯ ನಾಲಿಗೆಯಿಂದ
ಸವರಿಕೊಳ್ಳುತ್ತಾ,ಬಯಲ ಬಂದೀಖಾನೆಯ
ತುಂಬಾ ಬದುಕಿನ ಕೊನೆಗಳಿಗೆಯೆಣಿಸುತ್ತಾ
ಅಂಗಾತ ಮಲಗಿದವರ ಬಾಯಿಗೆ ಹನಿ
ನೀರ ಸಿಂಪಡಿಸಲು ಸಿದ್ಧಕಾಲ.

ಹಸಿದ ಮನಗಳಲ್ಲಿ ಮ್ರಷ್ಟಾನ್ನದ ಕನಸ
ಚಿಗುರಿಸಿ,ಬಂಧನದಲ್ಲೂ ಸ್ವಸ್ಛಂದತೆಯ
ಬ್ರಮೆ ಸ್ರಷ್ಟಿಸುವ ಕಾಲ.

ಮುಳ್ಳಗಿಡದಮೇಲೆ ಎಂದೋ ಒಣಹಾಕಿದ
ಅಂದದ ತೆಳುವಾದ ಮಕಮಲ್ಲು ಬಟ್ಟೆ
ಹರಿಯದಂತೇ ಜೋಪಾನವಾಗಿ ಬಿಡಿಸಿ
ಎತ್ತಿಟ್ಟುಕೊಳ್ಳಲು ಸಕಾಲ,
ಈ……ಕಾಲ.

ಅಬ್ಳಿ,ಹೆಗಡೆ. ಹೊನ್ನಾವರ