ಭಾವಗಂಧಿ-ಪ್ರಭಾವತಿ ದೇಸಾಯಿ- ಗಜಲ್
ಸಂಕಲನದತ್ತ ಒಂದು ಕಿರು ನೋಟ….,

ಗಜಲ್ ” ಒಂದು ಅರಬ್ಬಿ ಪದ. “ಹೃದಯದ ವೃತ್ತಾಂತ ಹೇಳುವ ಪ್ರೇಮ, ಮೋಹ, ಅನು ರಾಗ ವಿದ್ಯಮಾನಗಳನ್ನು ಸಂಭಾಷಿಸುವುದು ಅದೂ ಪಿಸುಮಾತಿನಲ್ಲಿ” ಎಂಬುದು ಇದರ ಪಾರಿಭಾಷಿಕ ಅರ್ಥವಾಗಿದೆ. ಗಜಲ್ ಕಾವ್ಯ ಉರ್ದು ಭಾಷೆಯಲ್ಲಿ ವಿಪುಲವಾಗಿ ಬೆಳೆದು ಅಪಾರ ಜನಮನ್ನಣೆ, ಜನಾನುರಾಗಗಳಿಸಿದ್ದು ಈಗ ಹಲವು ಭಾಷೆಗಳಲ್ಲಿ ಇದರ ಹರವು ವಿಸ್ತಾರ ವಾಗಿ ಬಿತ್ತರಗೊಂಡಿದೆ. ಪ್ರೀತಿ, ಮೋಹ, ವಿರಹ, ಅನುರಾಗ, ವಿಪ್ರಲಂಭ, ಕಳಕಳಿ, ಅಂತಃಕರಣ, ವಾತ್ಸಲ್ಯ, ದಯೆ, ಅನುಕಂಪ, ರೋಷ, ಹತಾಶೆ, ನೋವು, ಕರುಣೆ, ಹೀಗೆ ನವರಸಗಳಲ್ಲಿ ಅದ್ದಿದ, ಏಳು ಬಣ್ಣಗಳಲ್ಲಿ ಮಿಂದ, ಹಲವಾರು ವಿಷ ಮತ್ತು ಅಮೃತಗಳನ್ನು ಮೆದ್ದ ಮನವು ಎದೆಯ ನುಡಿಗಳನ್ನು ಅಕ್ಕರರೂಪದಲ್ಲಿ ಭಾವಲಯದೊಂ ದಿಗೆ ಹಾಡುಗಬ್ಬವಾಗಿ ಗಜಲ್ ನಲ್ಲಿ ಅಭಿವ್ಯಕ್ತ ಗೊಳಿಸುವ ಸುಂದರ ಪ್ರಕಾರದ ಕಾವ್ಯವಾಗಿದೆ.

ಆಧ್ಯಾತ್ಮ, ತಾಧ್ಯಾತ್ಮ, ಸೂಫಿ ತತ್ವ, ದೇಸೀ ಸತ್ವ, ಮೊದಲಾದ ಆತ್ಮಿಕ ನಂಟಿನ ವಿಚಾರಗಳನ್ನೊಳ ಗೊಂಡ ಗಜಲ್ ಕಾವ್ಯ ಪ್ರಕಾರವು ಲೌಕಿಕವಾದ ರಸಾನುಭೂತಿ ಹೇಳುತ್ತ ಅಲೌಕಿಕವಾದ ಅನುಭಾ ವದ ಅನುಭೂತಿಯಲಿ ಮಿಂದು ಸಂತುಷ್ಟಗೊಳ್ಳು ವ,ಸಂತೃಪ್ತಿ ಹೊಂದುವ ಸುಕೂನಿನ ಅನುಸಂಧಾ ನವಾಗಿದೆ. ಮೊದಲ ನೋಟದಲ್ಲೇ ಗಮನ ಸೆಳೆ ಯುತ್ತ ಬಹುಕಾಲ ಅದರ ನಿಶ್ಯಬ್ದತೆ ಕಾಡುತ್ತದೆ. ಮನಸ್ಸನ್ನು ಬಹುವಾದ ಶೂನ್ಯತೆಯೊಂದು ಕಾಡಿ ದೀರ್ಘ ಉಸಿರೆಳೆದು ಬದುಕೆಂದರೆ ಇಷ್ಟೇ ಇಲ್ಲಿ ಎಲ್ಲರೂ ನಿಮಿತ್ಯ ಮಾತ್ರ, ಎಲ್ಲರೂ ಬಂದು ಹೋಗುವವರೆ…ದೇವನ ಮನೆಯಿದು ಈ ಜಗ ವೆಲ್ಲ,ಬಾಡಿಗೆದಾರರು ಜೀವಿಗಳೆಲ್ಲ ಎಂಬ ನೆನಪು ಕೊಡುತ್ತದೆ.

ಕೆಸರಲಿ ಜನಿಸಿದ ಕಮಲ ಕೆಸರಿಗಂಟದೆ ಬಾಳುವುದು ತಿಳಿ ಸ್ವಾತಿ ಹನಿ ಮುತ್ತಾದರೂ ಕಡಲಲಿ ನೀರಾಗದು ತಿಳಿ

ಅದ್ಭುತ ಮತ್ಲಾದಿಂದ ಪ್ರಾರಂಭವಾಗುವ ಭಾವ ಗಂಧಿ ಗಜಲ್ ಪಯಣ ಲೋಕನೀತಿ ಬದುಕುವ ನೀತಿಯೊಂದನ್ನು ಹೇಳುತ್ತಾ ಜೀವನದ ಸತ್ಯ ಲೋಕವೊಂದನ್ನು ಅನಾವರಣಗೊಳಿಸುತ್ತದೆ.

ರವಿಯ ಕಿರಣ ಬಯಲ ಆಲಯಕೆ ಬೆಳಕು ಚೆಲ್ಲುವುದು ತಿಳಿ
ಬಯಲೆಂಬ ಆಲಯವೇ ಅದ್ಭುತವಾದ ಅಧ್ಯಾತ್ಮ.. ಜಗತ್ತನ್ನು ತೆರೆದಿರಿಸುವ ಅನುಭಾವದ ಮಾತು
ಪಂಚಭೂತಗಳಲಿ ಬೆಳೆದ ಜೀವ ಮಣ್ಣಾಗುವುದು ತಿಳಿ

ಪಂಚಭೂತಗಳಿಂದ ಬಂದ ದೇಹ ಮರಳಿ ಸೇರು ವುದು ಪಂಚಭೂತಕ್ಕೇನೆ..!ಜೀವಾತ್ಮ, ಪರಮಾತ್ಮ ಕಲ್ಪನೆ, ಜೀವನ, ಸಾವು, ಶರೀರ, ಆತ್ಮಗಳ ಪರಿಕಲ್ಪನೆ, ಅಧ್ಯಾತ್ಮದ ಸಾರವನ್ನು ಈ ಗಜಲ್ ನಲ್ಲಿ ಕಾಣುತ್ತೇವೆ. ಅದ್ಭುತ! ಅನ್ನುವ ಒಂದು ಉದ್ಘಾರ ಬರದೆ ಇರದು. ಹೀಗೆ ಪ್ರತಿಯೊಂದು ಗಜಲ್ ಗಳು ಬದುಕಿನ ತಿರುಳೊಂದನ್ನು ಹೇಳುತ್ತ ಜಗದ ಮಾಯೆಯನ್ನು ತಿಳಿಸಿ,  ಬದುಕಿನ   ಅರ್ಥ ವನ್ನು ಸಾಕಾರಗೊಳಿಸುತ್ತಾ  ಅರುಹುತ್ತದೆ.

ಹಾಗೆಯೇ ೫೦ ನೇಯ ಗಜಲ್ ಕೊನೆಗೆ ಮುಕ್ತಾ ದಲ್ಲಿ:

ನಾಲ್ಕು ದಿನದ ಬದುಕು ಒಲವು ನೀಡಿ ನಲಿವು ಪಡೆಯೋಣ ಜೀವಕೆ
ಬದುಕೆಂಬುದು ನಾಲ್ಕು ದಿನದ ಪಯಣ..

ಎಂಬುದನ್ನು ತಿಳಿಸುತ್ತಾ ಜೀವನದ ನಶ್ವರತೆಯನ್ನ ಗಜಲ್ ಮತ್ತೊಮ್ಮೆ ನೆನಪು ಮಾಡುತ್ತದೆ.

೨೨ನೆಯ ಗಜಲ್ ನ ಒಂದು ಮಿಶ್ರಾ:

ಜಗದಲಿ ಕಪ್ಪು ಬಿಳುಪು ಜೀವಿಗಳ ಹೃದಯ ಕೂಡಿಸಲಾಗಲಿಲ್ಲ

ಎಷ್ಟೊಂದು ವ್ಯಾಪಕತೆ ವ್ಯಾಕುಲತೆ ಒಳಗೊಂಡ ಸಾಲು….!!!! ಜಗತ್ತಿನ ಕರಿಯರ ಮೇಲಿನ ಬಿಳಿ ಯರ ದೌರ್ಜನ್ಯ ಈ ಸಾಲು ತಿಳಿಸಿ ತಣ್ಣನೆಯ ಬಂಡಾಯದ ಕಿಚ್ಚನ್ನು ಜೊತೆಗೆ ಚಿಂತನೆಯನ್ನೂ ಮನಕ್ಕೆ ಹಚ್ಚಬಲ್ಲದು. ಒಂದು ಮಹತ್ತರವಾದ ದುರ್ಭರತೆಯನ್ನು ಅರುಹುತ್ತದೆ.

ಮತ್ತೇ ಮಕ್ತಾದ (ಕೊನೆಯ ಶೇರ್ ಅಥವಾ ದ್ವಿಪದಿ) ಮಿಶ್ರಾ (ಸಾಲು)

ಕೆಸರಿಗಂಟದ ಕಮಲವಾಗಿ ಸೆರಮನೆಯಲಿ ಬಾಳಿದೆವು

ಇಲ್ಲಿ ಸೆರಮನೆ ಅನ್ನುವ ಪದ ಗಮನಸೆಳೆದು ಕ್ಷಣ ಹೊತ್ತು ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಸ್ವಾತಂತ್ರ್ಯ ದ ಗಾಳಿ ಸವಿಯುತ್ತಿದ್ದೇವೆ. ಆದರೆ ಇದು ಸ್ವಾತಂತ್ರ್ಯದ ತಂಗಾಳಿಯೇ..?! ವಿಷಗಾಳಿಯೆ..?! ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುವ, ಉತ್ತರ ಸಿಗದೆ ಒದ್ದಾಡುವ ಸೆರಮನೆಯ ನೆನಪನ್ನು ಕವಯಿತ್ರಿ ತಮ್ಮೊಂದಿಗೆ ಎಲ್ಲರಿಗೂ ಈ ಪ್ರಶ್ನೆಯ ಜೊತೆಗೆ ಚಿಂತನ ಮಂಥನಕ್ಕೆ ಹಚ್ಚುತ್ತಾರೆ.

ಒಟ್ಟಾರೆ ಗಜಲ್ ಗಳ ಭಾವ ವಿಭಿನ್ನವಾಗಿದ್ದು ಪ್ರೇಮ, ಸ್ನೇಹ,ಅಧ್ಯಾತ್ಮ,ಜೀವಪ್ರೀತಿ, ಅನುಭಾವ ಲೋಕನೀತಿ, ಬದುಕುವ ರೀತಿ ಇವೆಲ್ಲವನ್ನೂ ಕಿವಿ ಮಾತು ಹೇಳುವಂತೆ ನಯವಾಗಿ ಹೇಳಿ ಎಚ್ಚರಿಸು ತ್ತವೆ. ಹಗುರ ಪದಗಳಿಂದ, ಲಯಗಾರಿಕೆಯಿಂದ ತೂಕಬದ್ಧ ಲಾಲಿತ್ಯದಿಂದ, ಗಂಭೀರತೆಯಿಂದ ಗಜಲ್ ಓದುಗರ, ಸಹೃದಯರ ಗಮನಸೆಳೆಯು ತ್ತವೆ.

‘ಭಾವಗಂಧಿ’ ಸಾಹಿತ್ಯ ಲೋಕದ ಮೈಲುಗಲ್ಲಾಗಿ ಉಳಿಯಲಿ,ಶ್ರೀಮತಿ.ಪ್ರಭಾವತಿ ದೇಸಾಯಿಯವ ರಿಂದ ಇನ್ನೂ ಸಾಹಿತ್ತಿಕ ಕೃತಿಗಳು ಲೋಕಾರ್ಪಣೆ ಗೊಳ್ಳಲಿ, ಅದನ್ನು ಓದುವ ಭಾಗ್ಯ ನಮ್ಮೆಲ್ಲರದಾ ಗಲಿ. ಕನ್ನಡ ಸಾಹಿತ್ಯದ ಆಗಸದಲ್ಲಿ ಉಡುಗುಣ ವಾಗಿ ಅವರ ಕೃತಿಗಳು ಮಿಂಚುತ್ತಿರಲಿ ಎಂಬ ಆಶಯ ನನ್ನದು.

ಅನಸೂಯ ಜಹಗೀರದಾರ.
ಕೊಪ್ಪಳ