“ಹಿಜಾಬ್ “ ಇದು ಗುರುಪ್ರಸಾದ ಕಾಗಿನೆಲೆಯ ವರ ಕಾದಂಬರಿ.

ಗುರುಪ್ರಸಾದ ಕಾಗಿನೆಲೆ ಮೂಲತಃ ಶಿವಮೊಗ್ಗೆ ಯವರು. ಸದ್ಯಕ್ಕೆ ಅಮೇರಿಕಾದ ಮಿನೆಸೊಟಾ ರಾಜ್ಯದ ರಾಚೆಸ್ಟರ್ ಓಮ್ ಸ್ಟೆಡ್ ಆಸ್ಪತ್ರೆಯ ತುರ್ತು ಚಿಕಿತ್ಸ ವಿಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಜನಪರ ಕಾಳಜಿಯ ಸೂಕ್ಷ್ಮ ಸಂವೇದನೆಯ ವ್ಯಕ್ತಿ ಮತ್ತು ಬರಹಗಾರ.

” ಹಿಜಾಬ್ ” ಇದು ಇವರ ಮೂರನೇಯ ಕಾದಂಬರಿ. 310 ಪುಟದ ಈ ಬೃಹತ್ ಹೊತ್ತಿಗೆ ಯನ್ನು ಬೆಂಗಳೂರಿನ ಅಂಕಿತ ಪುಸ್ತಕದವರು ಪ್ರಕಟಿಸಿರುವರು. ‘ಗುರು‘ ಈ ಪುಸ್ತಕವನ್ನು ‘ವಸೂ’ಗೆ ಪ್ರೀತಿಯಿಂದ ಅರ್ಪಿಸಿರುವರು.

ಇದೊಂದು ಕಾಲ್ಪನಿಕ ಕೃತಿ, ಕಟ್ಟುಕತೆ ಎಂದು ಲೇಖಕರು ಹೇಳಿಕೊಂಡರೂ, ವಿದೇಶದಲ್ಲಿಯ ವೈದ್ಯಕೀಯ ಲೋಕದ ಒಳಹೊರಗಿನ ನಿಗೂಢ ಮೌನ ಈ ಕಾದಂಬರಿಯ ಗರ್ಭದಲ್ಲಿ ಅಡಗಿದೆ. ಸೋಮಾಲಿಯಾ ನಿರಾಶ್ರಿತರ ಹೆಣ್ಣು ಮಕ್ಕಳು ಸಿಸೇರಿಯನ್ ಮಾಡಿಕೊಳ್ಳಬಾರದೆಂಬ ಧಾರ್ಮಿ ಕ ನಂಬಿಕೆಯ ಸುತ್ತಲೂ ಹೆಣೆದ ಕಥೆಯೇ ಮುಖ್ಯ ಕಥಾವಸ್ತು. ಇಂತಹ ಸಮಯದಲ್ಲಿ ಇದು ವೈದ್ಯ ಕೀಯ ರಂಗಕ್ಕೇ ಒಂದು ಸವಾಲಾದಾಗ, ವೈದ್ಯರು ಪಡುವ ಬವಣೆ, ಮಾನವೀಯ ಸಂಬಂಧದ ಸೂಕ್ಷ್ಮತೆ, ಕಪ್ಪು ಬಿಳಿಪಿನ ತಾರತಮ್ಯ, ಆಸ್ಪತ್ರೆಯ ಆಡಳಿತ ಮಂಡಳಿಯ ವ್ಯಾಪಾರೀ ಬುದ್ಧಿ, ವೈಚಾ ರಿಕತೆ, ನಂಬಿಕೆ….. ಈ ಎಲ್ಲಾ ವಿವರಣೆಗಳು ಓದುತ್ತಾ ಹೋದಂತೆ, ವಿದೇಶದಲ್ಲಿದ್ದರೂ ಕನ್ನಡ ಸಾಹಿತ್ಯ ಲೋಕಕ್ಕೆ ಇಂತಹ ಒಂದು ಕಾದಂಬರಿ ಕೊಟ್ಟ ಕಾಗಿನೆಲೆಯವರ ಶ್ರಮವನ್ನು ನಿಜವಾಗಿ ಯೂ ಮೆಚ್ಚಲೇಬೇಕು. ಎರಡು ವರ್ಷಗಳ ಹಿಂದೆ ಕಾದಂಬರಿ ವಿಭಾಗದಲ್ಲಿ ಈ ಪುಸ್ತಕ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಕೆ ಭಾಜನರಾದ ಲೇಖಕರನ್ನು ನಾವೆಲ್ಲಾ ಅಭಿನಂದಿಸಲೇಬೇಕು.

ಗೆಳೆಯ ವಿವೇಕ ಶಾನಭಾಗ ಈ ಪುಸ್ತಕದ ಹಿಂದಿನ ಪುಟದಲ್ಲಿ……..

ವಲಸೆಯೆನ್ನುವದು ಇಂದು ಜಗತ್ತಿನಾದ್ಯಂತ ಮನುಷ್ಯರನ್ನು ಕಾಡುವ ಮುಖ್ಯವಾದ ಅನುಭವ ವಾಗಿದೆ. ಹಳ್ಳಿಗಳಿಂದ ನಗರಕ್ಕೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ಪ್ರತಿನಿತ್ಯ ಲಕ್ಷಾಂತರ ಜನ ಬಗೆಬಗೆಯ ಕಾರಣಗಳಿಗಾಗಿ ವಲಸೆ ಹೋಗುತ್ತಿದ್ದಾರೆ. ಒಂದೆಡೆಯಿಂದ ಕಿತ್ತು, ಇನ್ನೊಂದೆಡೆ ಊರಿಕೊಳ್ಳುವ ಈ. ಪ್ರಕ್ರಿಯೆ ಲೋಕದೆಲ್ಲೆಡೆ ಸಂಕಟವನ್ನೂ ಸಂಘರ್ಷವನ್ನೂ ಹುಟ್ಟು ಹಾಕಿದೆ. ಜಗತ್ತಿನ ಹಲವಾರು ಮುಖ್ಯ ಲೇಖಕರನ್ನು ಕೆಣಕಿದೆ. ಅತ್ಯಂತ. ಪ್ರಸ್ತುತವಾದ ಈ ವಸ್ತುವನ್ನೆತ್ತಿಕೊಂಡು ಅದನ್ನು ಹಲವು ಕೋನ ಗಳಿಂದ ಶೋಧಿಸುವ ಮಹತ್ವದ ಕಾದಂಬರಿ ‘ಹಿಜಾಬ್ ‘…… ಎಂದಿರುವರು.

ಕಾದಂಬರಿಯ ಕುರಿತು ಲೇಖಕ ಕಾಗಿನೆಲೆ

ಏಳು ವರ್ಷಗಳ ಹಿಂದೆ ಮನಸ್ಸಿನಲ್ಲಿ ಮೂಡಿದ ಈ ಕಥನವನ್ನು ಬರಹ ರೂಪಕ್ಕಿಳಿಸುವ ಈ ದೀರ್ಘ ಕ್ರಿಯೆ ದೈಹಿಕವಾಗಿ ಹಾಗೂ ಮಾನಸಿಕ ವಾಗಿ ಬಹಳಷ್ಟು ನನ್ನನ್ನು ಹೀರಿದೆ, ಬಳಲಿಸಿದೆ, ಕೆಲವೊಮ್ಮೆ ಹೈರಾಣಾಗಿಸಿದೆ, ಅಷ್ಟೇ ಬೆರಗು ಮಾಡಿದೆ, ಬೆಚ್ಚುಬೀಳಿಸಿದೆ ಮತ್ತು ಆನಂದವನ್ನೂ ಕೊಟ್ಟಿದೆ.ಅದಕ್ಕಾಗಿ ನಾನು ಈ ಕಾದಂಬರಿಯೆಂಬ ಸಾಹಿತ್ಯ ಪ್ರಕಾರಕ್ಕೆ ಆಭಾರಿ. ಇದರೊಳಗೆ ಹೆಚ್ಚು ಹೆಚ್ಚು ತೊಡಗಿಕೊಂಡಿದ್ದಷ್ಟೂ ಬದುಕು ಒಂದು ಹಿಡಿ ಹೆಚ್ಚು ಪ್ರಿಯವಾಗಿದೆ, ಅರ್ಥವಾಗಿದೆ ಎಂದು ನನಗೆ ಅನಿಸಿದೆ…….. ಎಂದಿರುವರು.

ಓದುಗರ ಮನಸೆಳೆಯುವ ಸಾಲುಗಳು ಇಂತಿವೆ…..

ಏನೆಲ್ಲಾ ಇಟ್ಟುಕೊಂಡಿದೆ ತನ್ನ ಗರ್ಭದಲ್ಲಿ ಈ ಅಮೋಕಾ. ಸಿಟ್ಟು, ಪ್ರೀತಿ, ಹತಾಷೆ, ಬಸಿರು, ಸಾವು,ದ್ವೇಷ, ಅನುಕಂಪ, ಹೋರಾಟ, ಕೊಲೆ, ಆತ್ಮಹತ್ಯೆ, ರಾಜಕೀಯ ಆಡಳಿತ, ಆತಂಕವಾದ, ಪಿಸ್ತೂಲು, ಸೊಮಾಲಿಯಾ,ಇಂಡಿಯಾ. ಇದೇನಾ ನಿಜವಾದ ಅಮೆರಿಕಾ? ಕರಗಿಸುವ ಕರಗಿಸಿಕೊ ಳ್ಳುವ ಕಡಾಯಿ. ನಾವು ಅಟ್ಟಿಕೊಂಡು ಬಂದ ನಿಜವಾದ ಅಮೇರಿಕನ್ ಡ್ರೀಮ್ ಇದೇನಾ? ಅಥವಾ ನನಗೆ ಮಾತ್ರ ದಕ್ಕಿದ ಅಮೇರಿಕಾ ಇದಾ? ನನ್ನ ಎಮೆರ್ಜೆಸ್ಸಿ ಡಿಪಾರ್ಟ್ಮೆಂಟ್ ನ ಈ ಕೆಲಸದಂತೆ.ರೋಗಿಗಳ ಕಾಯಿಲೆ, ಆದಕ್ಕಂಟಿ ಕೊಂಡ ಸಿಟ್ಟು, ಹತಾಶೆ ಇವುಗಳು ಮಾತ್ರ ನನ್ನ ಕಣ್ಣಿಗೆ ಬೀಳುತ್ತದಾ?…..

ಪ್ರೀತಿಯ ಗುರು, ಟೈಮ್ ಇಲ್ಲಾ… ಟೈಮ್ ಇಲ್ಲಾ….. ಎಂದು ಕೇವಲ ದುಡ್ಡು ಎಣಿಸುವರ ನಡುವೆ ನಿಜವಾಗಿಯೂ ನೀವೊಂದು ಅಪರೂಪ ದ ಕನ್ನಡಾಭಿಮಾನಿ. ಕಡಲಾಚೆಯಲೂ ನಿಮ್ಮ ಕನ್ನಡ ಪ್ರೀತಿಗೆ ಸಿಕ್ಕ ಸಮಯ ವಿನಿಯೋಗಿಸಿ ಖುಷಿಪಡುವ ನಿಮ್ಮ ಮನಸ್ಸಿಗೆ ತಲೆದೂಗಿ, ಅಭಿನಂದಿಸಿ ಶುಭಕೋರುವೆನು.

ಪ್ರಕಾಶ ಕಡಮೆ ನಾಗಸುಧೆ, ಹುಬ್ಬಳ್ಳಿ