ಆಟೋಗಳ ಹಿಂಭಾಗದಲ್ಲಿರುವ ಬರಹಗಳನ್ನು ಗಮನಿಸುವುದು ನನ್ನ ಅಭ್ಯಾಸ. “ತಾಯಿಯೇ ದೇವರು” “ಪ್ರೀತಿ ನೀನಿರದೇ ಹೇಗಿರಲಿ” “ಸ್ವೀಟಿ ನೀಬಲು ಘಾಟಿ” ಇಂಥವುಗಳ ಮಧ್ಯೆ ಜೊತೆ ಜೊತೆಯಲ್ಲೇ ಇರುವ ಘೋಷಣಾ ವಾಕ್ಯ “ನಡುವೆ ಅಂತರ ಇರಲಿ”. ನನ್ನ ಹಿಂದೆಯೇ ಅಂಟಿದ ಹಾಗೇ ನಿಲ್ಲಬೇಡ, ಕೀಪ್ ಡಿಸ್ಟನ್ಸ್ ಎಂದು ಆಟೋ ಹೇಳುತ್ತಿದ್ದರೂ ಮನುಷ್ಯರ ನಡುವಣ ಸಂಬಂಧಗಳಿಗೂ ಅದು ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ ಅಲ್ಲವೆ?

ಮೊದಲಿಗೆ ಈ ಅಂತರ ಎಂದರೇನು? ಎರಡು ಭೌತಿಕ ಚರ ಅಚರ ವಸ್ತುಗಳ ಮಧ್ಯೆದಲ್ಲಿನ ದೂರ. ಅಚರ ವಸ್ತುಗಳ ಮಧ್ಯೆ ಇದು constant. ಆದರೆ ಚರ ವಸ್ತುಗಳ ಕರೋನ ಬಂದ ಮೇಲೆ ಸಾಮಾಜಿಕ ಅಂತರದ ಪರಿಕಲ್ಪನೆ ಯೂ ಬಂದು ಆರೋಗ್ಯದ ಹಿತದೃಷ್ಟಿಯಿಂದ ಮನುಷ್ಯರ ನಡುವಿನ ಭೌತಿಕ ಅಂತರ ಹೆಚ್ಚಾಗು ತ್ತ ನಡೆದಿವೆ. ಮತ್ತೊಂದು ರೀತಿಯಲ್ಲಿ ಹೇಳುವು ದಾದರೆ ವೈಜ್ಞಾನಿಕ ಆಧುನಿಕ ವಿಧಾನಗಳು ಜಗತ್ತ ನ್ನು ಜಾಗತಿಕ ಹಳ್ಳಿ ಮಾಡಿ ಅಂಗೈಯಲ್ಲಿ ಪ್ರಪಂಚ ತೋರಿಸುತ್ತಿದ್ದರೆ, ಬಾಂಧವ್ಯ ಸ್ನೇಹಗಳ ಅಂಟು ಮಾಸಿ ನಂಟು ಕಡಿದು ಮನುಷ್ಯ ಏಕಾಂಗಿ ಆಗಲು ಹುನ್ನಾರ ಹೂಡುತ್ತಿವೆ.

ಅದನ್ನೇ ಡಿವಿಜಿಯವರು ಮರುಳು ಮುನಿಯನ ಕಗ್ಗದಲ್ಲಿ ಹೇಳಿದ್ದು ಹೀಗೆ
ಏನೇನೋ ನಡೆದಿಹವು ಮಾನುಷ್ಯ ಸಿದ್ಧಿಯಲಿ
ಯಾನಗಳು ಯಂತ್ರಗಳು ರಸ ನಿರ್ಮಿತಿಗಳು
ಭಾನುಗೋಲಕ್ಕೇಣಿಡಿ ಕಟ್ಟಲೆಸಳುವ ನರನು ತಾನಿಳಿಯುತಿಹನೇಕೆ _ ಮರುಳ ಮುನಿಯ
ಸೂರ್ಯಮಂಡಲಕ್ಕೆ ಏಣಿ ಹಾಕಲು ಬಯಸುವ ಮನುಷ್ಯನು ತಾನು ಮಾತ್ರ ತನ್ನ ವಿಚಾರ ಬಾಂಧವ್ಯಗಳಲ್ಲಿ ಏಕೆ ಕೆಳಗೆ ಇಳಿಯುತ್ತಿದ್ದಾನೆ ಅರ್ಥವಾಗುತ್ತಿಲ್ಲ.

ಭೌತಿಕ ಸಾಮಾಜಿಕ ಅಂತರಗಳಿಂದ ಭಾವನಾ ತ್ಮಕ ಅಂತರದ. ವಿಷಯಕ್ಕೆ ಬಂದರೆ “ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆ ವೇನು ನಾವು ನಮ್ಮ ಅಂತರಾತ್ಮವ” ಎಂಬ ಕವಿವಾಣಿಯಂತೆ ಬರಿಯ ಸಾಹಚರ್ಯದಿಂದ ಬಾಂಧವ್ಯ. ಬೆಸೆಯದು. ಅಂತರ ಕಾಡುತ್ತಲೇ ಇರುತ್ತದೆ. ಅದರಲ್ಲೂ ಸುತ್ತ ಅಹಂನ ಕೋಟೆ ಕಟ್ಟಿಕೊಂಡರಂತೂ ಮುಗಿದೇಹೋಯಿತು.ಅದನ್ನೆ ಅಲ್ಲವೇ ಕವಿ ಶಿವರುದ್ರಪ್ಪನವರು ಹೇಳಿದ್ದು:
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬಾಳಿನಲಿ

ಸ್ನೇಹಸಂಬಂಧ, ರಕ್ತಸಂಬಂಧ, ವೃತ್ತಿ ಬಾಂಧವ್ಯ, ನೆರೆಹೊರೆಯವರ ವಿಶ್ವಾಸ ಕುಟುಂಬದ ಸಾಮ ರಸ್ಯ ಎಲ್ಲದಕ್ಕೂ ಮುಕ್ತಮನಸ್ಸಿನ ನಡವಳಿಕೆ ಬೇಕೆಬೇಕು. ನೀರಿನಂತೆ ಹಾಕಿದ ಪಾತ್ರೆಯ ಆಕಾರ ಪಡೆಯುವ ಮನಸಿರಬೇಕು, ಅದು ನಿಜ. ಸಹಕಾರ ಸಾಮರಸ್ಯ ಇರಬೇಕು, ಒಪ್ಪಿಕೊಳ್ಳುವ. ಆದರೆ ಈಗೀಗ ಈ ಸ್ವಾರ್ಥ ತುಂಬಿದ ಸಮಾಜ ದಲ್ಲಿ ಹೊಂದಾಣಿಕೆಯ ಮನೋಭಾವದವರು ಭಾವನಾತ್ಮಕವಾಗಿ “ಉಪಯೋಗಿಸಿಕೊಳ್ಳಲ್ಪ ಡುತ್ತಿದ್ದಾರೆ”. ಒಳ್ಳೆಯತನ ಅನ್ನುವುದು ದೌರ್ಬ ಲ್ಯ ಸೂಚಕವಾಗಿದೆ. “ಬಗ್ಗಿದವನಿಗೆ ಮತ್ತಷ್ಟು ಗುದ್ದು” ಎಂಬುದು ನಿಜವಾಗುತ್ತಿದೆ.ಇರಲಿ ನಮ್ಮ ಒಳ್ಳೆಯತನವನ್ನು ಬಿಡಬಾರದು. ಆದರದು ದೌರ್ಬಲ್ಯ ಆಗದ ಹಾಗೆ ಎಚ್ಚರಿಕೆಯನ್ನು ವಹಿಸ ಬೇಕು. ಸರ್ಪಕ್ಕೆ ಸನ್ಯಾಸಿ ಕೊಟ್ಟ ಉಪದೇಶದ ಕಥೆ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆ ಮಾಡಲು ಒಂದು ರೀತಿಯ ಆರೋಗ್ಯಕರವಾದ ಅಂತರ ಕಾಪಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಬದುಕು ತೆರೆದ ಪುಸ್ತಕವಾಗಿ ಗೋಚರವಾಗಬಾರದು. ಆಗ ಭಾವನೆಗಳ ಬೆತ್ತಲೆತನ ಅಸಹ್ಯ ಉಂಟು ಮಾಡು ತ್ತದೆ. ಅದಕ್ಕೆ ಸಂಬಂಧಗಳ ಮದ್ಯದ ಅಂತರದ ಬಟ್ಟೆ ತೊಡಿಸಬೇಕು. ಆಗ ಬಾಳೂ ರೋಚಕ, ಬೇರೆಯವರ ಕೈಯಲ್ಲಿನ ಪಗಡೆಯಾಟದ ಕಾಯಿ ಗಳಾಗುವುದೂ ತಪ್ಪುತ್ತದೆ. ನಮ್ಮ ಬಲಹೀನತೆ ಗಳ ಮೇಲೆ ಬೇರೆಯವರ ಆಧಿಪತ್ಯವೂ ತಪ್ಪು ತ್ತದೆ.
ಹಾಗಾದರೆ ಹೇಗಿರಬೇಕು? ಖಂಡಿತ ಈ ಪದ್ಯದ ಲ್ಲಿ ಉತ್ತರವಿದೆ ನೋಡಿ:
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗಸೂತ್ರವಿದು _ ಮಂಕುತಿಮ್ಮ
ಈ ಲೋಕದಲ್ಲಿ ಹುಟ್ಟಿದ ಬಳಿಕ ಸಮಾಜದಲ್ಲಿ ಕುಟುಂಬದಲ್ಲಿ ವ್ಯವಹರಿಸದೆ ಸಂಪರ್ಕ ಇಟ್ಟು ಕೊಳ್ಳದೆ ಸಾಧ್ಯವಿಲ್ಲ. ಅದು ಸುಳ್ಳಿನ ತೋರಿಕೆಯ ಮುಖವಾಡವಾಗಿಯೂ ಇರಬಾರದು. ಇದೆಲ್ಲಾ ಚಿತ್ತವೃತ್ತಿಯ ಒಂದು ಭಾಗ. ಮತ್ತೊಂದು ಭಾಗ ದಲ್ಲಿ ತತ್ವಚಿಂತನೆಯನ್ನು ನಡೆಸುತ್ತ ನಿರ್ಲಿಪ್ತತೆ ತೋರಬೇಕು.ಪ್ರಕೃತಿಯಮಾಯೆ ತಪ್ಪಿಸಲಾಗದು. ಬಾಂಧವ್ಯ ವಾತ್ಸಲ್ಯಗಳ,ಸ್ನೇಹ,ಪ್ರೀತಿಗಳ ಕರ್ತವ್ಯ ದ ಜವಾಬ್ದಾರಿ ನಿರ್ವಹಿಸಬೇಕು. ದ ವರ್ಲ್ಡ್ಈಸ್ ಟೂ ಮಚ್ ವಿತ್ ಅಸ್, ಬಟ್ ವಿ ಹ್ಯಾವ್ ಟು ಮೆಂಟೇನ್ ಎ ಡಿಸ್ಟೆನ್ಸ್.

ಸ್ನೇಹಿತರಾಗಲಿ ಬಂಧುಗಳಾಗಲೀ ಪತಿ ಸತಿ ಮಕ್ಕಳಾಗಲಿ ಸಂಬಂಧಗಳ ಮಧ್ಯೆ ಒಂದು ಸೂಕ್ಷ್ಮ ಲಕ್ಷ್ಮಣ ರೇಖೆ ಇರುತ್ತದೆ, ಅದನ್ನು ದಾಟಬಾರದು. ಕಟ್ಟಿರುವ ಬಂಧನದ ರೇಖೆಯ ಗಂಟನ್ನು ಬಿಚ್ಚ ಬಾರದು. ಇದು ಪಾಲಿಸಬೇಕಾದ ಅಂತರದ ರೀತಿ Too much familiarity breeds contempt ಎಂಬುದೊಂದು ಆಂಗ್ಲ ನಾಣ್ಣುಡಿ ಹೇಳುವುದು ಇದನ್ನೇ. ಅಂತರ ಸಂಬಂಧಗಳ ಉಸಿರುಗಟ್ಟಿಸದೇ ಮತ್ತಷ್ಟು ಶುಭ್ರ ಹವೆಯಾ ಡಲು ಅನುಕೂಲಿಸುತ್ತದೆ.
“ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವ ನಿಗೆ ಜಗಳವಿಲ್ಲ” ಎಂಬಂತೆ “ಸಂಬಂಧಗಳ ಮಧ್ಯೆ ಅಂತರ ಕಾಯ್ದುಕೊಳ್ಳುವವನಿಗೆ ದುಃಖವಿಲ್ಲ”. ಜೀವನದ ಈ ರೀತಿ ಬೆರೆತು ಬಾಳುವ ಹಸನಾದ ಕ್ರಿಯೆಯಲ್ಲಿದೆ ಕೆಲವರಿಗದು ಜನ್ಮಜಾತ ಮತ್ತೆ ಹಲವರು ಅನುಭವದ ಪಾಠಕಲಿತು ಜಾಣರಾದರೆ ಕೆಲವು ದಡ್ಡರು ಮತ್ತೆ ಮತ್ತೆ ಅದೇ ತಪ್ಪು ಮಾಡು ತ್ತಿರುತ್ತಾರೆ.
ಕಡೆಯಲ್ಲಿ ಮನುಷ್ಯ ಹೇಗಿದ್ದರೆ ಒಳಿತು ಎಂದು ಹೇಳಿರುವ ಡಿವಿಜಿಯವರ ಕಗ್ಗದೊಂದಿಗೆ ಮುಗಿ ಸುವೆ.
ಬೇಕು ಜೀವನ ಯೋಗಕ್ಕೊಂದು ಬಹುಸೂಕ್ಷ್ಮ ನಯ
ಬೇಕೆಂದು ಜಾಗರೂಕತೆ ಬುದ್ಧಿ ಸಮತೆ
ತಾಕನೊಂದನು ಯೋಗಿ ನೂಕನೊಂದನು ಜಗದಿ ಏಕಾಕಿ ಸಹವಾಸಿ _ ಮಂಕುತಿಮ್ಮ

ಎಲ್ಲರೊಳಗೊಂದಾಗು ಮಂಕುತಿಮ್ಮಎಂಬಂತೆ ಎಲ್ಲರಲ್ಲೂ ಬೆರೆತು ಸ್ನೇಹ ಪ್ರೀತಿ ತೋರಿಸುತ್ತಿರ ಬೇಕು. ಆದರೆ ಆಮೆ ಅಪಾಯ ಕಂಡಾಗ ಚಿಪ್ಪೊ ಳಗೆ ತಲೆತೂರಿಸುವಂತೆ ಬುದ್ಧಿ ಸಮತೆಯ ಜಾಗ ರೂಕತೆ ಬೇಕು. ಅದೇ ಅಂತರ ಕಾಪಾಡಿಕೊಳ್ಳುವ ಕಲೆ. The art of maintaining the distance. ಅದನ್ನು ಅರಿತ ಮನುಷ್ಯ ಯಾವು ದನ್ನೂ ತಾಕಿಸಿಕೊಳ್ಳದೆ ಹಾಗೆಂದು ಯಾವುದನ್ನೂ ಬಿಟ್ಟುಕೊಡದೇ ಜಾಣ್ಮೆಯ ಜೀವನ ನಡೆಸಬಲ್ಲ.
ಸುಜಾತಾ ರವೀಶ್, ಮೈಸೂರು
ನನ್ನ ಲೇಖನವನ್ನು ಪ್ರಕಟಿಸಿದ ಸಂಪಾದಕರಿಗೆ ಅನಂತ ಧನ್ಯವಾದಗಳು
ಸುಜಾತಾ
LikeLike