ಮನೆ ತುಂಬ ಹರಡಿದ ಆಟಿಗೆ ಸಾಮಗ್ರಿಗಳನ್ನು ಕಂಡು ತಲೆ ಕೆಟ್ಟು ಹೋಗಿತ್ತು. ಒಂದ ಕಡೆ ಕೂತು ಆಡಾಕು ಬರಂಗಿಲ್ಲ ಅನ್ನಕೊತ ಎತ್ತಿಡುವಾಗ ಮಗಳು ಆಯ್ದುಕೊಂಡ ವಸ್ತುಗಳನ್ನು ಒಮ್ಮೆ ಕಣ್ಣಾಡಿಸಿದೆ.ಅಲ್ಲಿ ಒಲೆ, ಕುಕ್ಕರ್, ಪಾತ್ರೆ,ಬೆಡ್, ಪ್ರಥಮ ಚಿಕಿತ್ಸೆಯ ಕಿಟ್,ಬಟ್ಟೆ, ಸೂಜಿ- ದಾರ, ಗೊಂಬೆ, ತೊಟ್ಟಿಲು, ನನಗೆ ಗೊತ್ತಿಲ್ಲದಂತೆ ಧಾನ್ಯ ಗಳು. ಅಬ್ಬಾ! ಇಷ್ಟೊಂದು ಆಟಿಕೆಗಳು. ಪುಟ್ಟ ಕೈ ಇಷ್ಟೆಲ್ಲ ಮಾಡಿತಾ? ಎಂಥ ಸೋಜಿಗ. ಮಗಳು ಹುಟ್ಟಿದಳೆಂದು ಕಣ್ಣು ಕೆಂಪಗೆ ಮಾಡಿದವರ ಎದುರು, ಅವಳ‌ ಆಟೋಟಕ್ಕೆ ಧಕ್ಕೆ ತರದಂತೆ ಬೆಂಗಾವಲಾಗಿ ನಿಂತಿದ್ದೆ‌. ಬ್ರಹ್ಮ ದೇವರು ಬಲು ಜಾಣ,ಹೆಣ್ಣು ಎಂಬ ಆತ್ಮಬಲ ಸೃಷ್ಟಿಗೆ ಮಾನಸಿಕ ವಾಗಿ ಎಷ್ಟು ಸಿದ್ಧತೆಯನ್ನು ನಡೆಸಿರಬೇಕು.

ಮಗನೋ ಬ್ಯಾಟು, ಬಾಲು, ಸೈಕಲ್ ಅಂತ ಓಣಿ ಓಣಿ ಹುಡುಗರ ಗುಂಪು ಕಟ್ಟಿಕೊಂಡು ತಿರುಗಿ ಬಂದು ಎಲ್ಲೆಂದರಲ್ಲಿ ಬಿಸಾಡಿದ್ದನ್ನು ಕಂಡು ಕೋಪ ಬಂದರೂ ಅಲ್ಲೆ ಮರೆತು ಜೋಡಿಸಿಟ್ಟು ಬಂದಾಗ ಅಬ್ಬಬ್ಬಾ…! ಮಕ್ಕಳು ಮಕ್ಕಳೇ..ಅವರ ಆಟೋಟಗಳಿಗೆ ಕಡಿವಾಣ ಹಾಕಿಲ್ಲ. ಹಾಗಂತ ಬೇಕಾಬಿಟ್ಟಿ ಬಿಟ್ಟಿಲ್ಲ. ಇಬ್ಬರಿಗೂ ಅವರವರಿಗೆ ಸೂಕ್ತ ಕಾರ್ಯ ಹಂಚಿಕೆ ಮಾಡಿದಾಗ, ಅಮ್ಮಾ ಇದನ್ನೆಲ್ಲ ನಾನು ಮಾಡಬೇಕಾ ಅನ್ನುತ್ತ ಪುಟ್ಟ ಕೈಗಳಿಂದ ಅವರವರ ಆಟಿಕೆಗಳನ್ನು, ವಸ್ತ್ರಗಳನ್ನ ನೋಟ್ ಬುಕ್ ಗಳನ್ನು ಜೋಡಿಸಿಕೊಂಡು ಶಿಸ್ತಿ ನಿಂದ ಓದಲು ಬರೆಯಲು ಹಚ್ಚಿದಾಗ ಕರುಳು ಚುರ್ ಅಂದರೂ ಅನಿವಾರ್ಯ.

ಮಕ್ಕಳಲ್ಲಿ ಭೇದಭಾವ ಹುಟ್ಟಿಸಿ, ನೀ ಮಗಳು ಮುಂದೆ ಹೀಗೆ ಬಾಳಬೇಕೆಂದು ಕಟ್ಟಪ್ಪಣೆಯ “ಪರಮಾನ್” ಹೊರಡಿಸಿದರೆ ಗತಿಯೇನು? ಪಾಪ ಅವಕ್ಕೆನು ತಿಳಿತದ, ಕೂಡಿ ಆಡತಾವ, ಖುಷಿಯಿಂದ ನಿರ್ಮಲ ಮನಸ್ಸಿಂದ ಇರುವಲ್ಲಿ ಬಾಂಧವ್ಯ ಬಿರುಕು ಬಿಟ್ಟರೇ ಉಳಿಗಾಲವೆಲ್ಲಿ? ದೈಹಿಕವಾಗಿ ಆಕಾರಗಳು ಭಿನ್ನವಾದರೂ,ಚೈತನ್ಯ ಒಂದೆ. ಮಕ್ಕಳು ದೇವರ ಸಮಾನ. ಅವರ ಬಾಲ್ಯದ ಚಟುವಟಿಕೆಗಳು ಮುಂದಿನ ಜೀವನ ನಿರ್ವಹಣೆಯ ಕೌಶಲ್ಯ ನಿರ್ಧರಿಸುತ್ತವೆ.ಸಹನೆ ಹೊಂದಾಣಿಕೆ, ಧೈರ್ಯ, ನಂಬಿಕೆ ಎಲ್ಲವೂ ಅವರೊಟ್ಟಿಗೆ ಬೋನಸ್ ಆಗಿ ಬೆಳೆದು ಬರಲು ಸಹಕಾರಿ. ಅಜ್ಜ, ಅಜ್ಜಿ ಇದ್ದರಂತೂ ಮುಗಿತು. ಅವರಿಂದ ಸಂಸ್ಕತಿ ಸಂಪ್ರದಾಯಗಳ ಹೊಳೆಯೇ ಹರಿಯುತ್ತದೆ.

ಅದೆಷ್ಟೋ ಮಕ್ಕಳು ಮೊದಲಿಗರಾಗಿ ಹುಟ್ಟಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಸರಿಸಮನಾಗಿ ಹೊರುವಲ್ಲಿ ಕೈಜೋಡಿಸಿ ತಮ್ಮೆಲ್ಲ ಬಾಲ್ಯವನ್ನು ಕುಟುಂಬ ಕಟ್ಟುವಲ್ಲಿ ಕರಗಿಹೋಗುವುದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ತ್ಯಾಗ ಪರಿ ಶ್ರಮಗಳು ಪುನಃ ಬಾರದ ಲೋಕಕ್ಕೆ ಸೇರಿ ಮೌನ ವಾಗುತ್ತದೆ. ನಿಸ್ಸಹಾಯಕ ತಂದೆ ತಾಯಿ ಪರಿಸ್ಥಿತಿ ಗಳು,ಅನಾಥರನ್ನಾಗಿಸಿ ಬೀದಿಗೆ ಬಂದು ನಿಲ್ಲುವಂ ತೆ ಮಾಡಿದ್ದನ್ನು ಕಂಡಾಗ ಮಕ್ಕಳು ಮುಖ್ಯವೋ ಅಥವಾ ನಮ್ಮ ಸ್ವಾರ್ಥ ಮುಖ್ಯವೋ ಎಂಬು ದನ್ನು ಮನಗಾಣಬೇಕು. ಒಂದು ಮಂಗ ತನಗೆ ಆಪತ್ತು ಎದುರಾದಾಗ ತನ್ನ ಮರಿಯನ್ನು ಬಲಿಕೊಟ್ಟ ಕಥೆ ನಮಗೆಲ್ಲ ತಿಳಿದಿದೆ. ಅದು ಕಥೆ, ಅನಿವಾರ್ಯವಲ್ಲ. ಸಂಬಂಧಗಳು ಬೆಸೆಯುವು ದು ಯಾವಾಗ? ಅದರ ಮಹತ್ವ ಸಂಪೂರ್ಣ ವಾಗಿ ಅರಿವಾದಾಗ ಮಾತ್ರ.

ಕುಡಿತದಿಂದ ಇಂದು ಸುಧಾರಿಸಬಹುದು,ನಾಳೆ ಸುಧಾರಿಸಬಹುದೆಂಬ ಮೂಢನಂಬಿಕೆಯಿಂದ ಕೊಡುವ ಮಾನಸಿಕ, ದೈಹಿಕ ಹಿಂಸೆಯನ್ನು ಸಹಿಸುತ್ತ, ಮುಗ್ದ ಮಕ್ಕಳ ಜೀವನಕ್ಕೆ ಕೂಲಿಯ ನ್ನಾಶ್ರಯಿಸಿ ಬದುಕಿದರು ನೆಮ್ಮದಿ ಕಾಣದ ಬದುಕಾದರೆ? ಇರುಳಿಗೆ ಹೆದರಿ ಮೂಲೆ ಸೇರುವ ಮಕ್ಕಳು, ತಂದೆ-ತಾಯಿ ನಡುವೆ ಹೊಂದಾಣಿಕೆ ಕಡಿಮೆಯಾಗಿ, ಹೆಚ್ಚು ಅಸುರಕ್ಷಿತ ಭಾವದಿಂದ ನರಳುವ ಮಕ್ಕಳ ಸಂಖ್ಯೆಗೇನೂ ಕೊರತೆಯಿಲ್ಲ. ಮೊದಲು ಕುಟುಂಬದ ಅಡಿಪಾಯ ಸ್ಥಿರ, ಸುರಕ್ಷಿತವಿರಬೇಕು.

ಮಗುವೆಂಬ ಹಣತೆಗೆ ಸಂಸ್ಕಾರವೆಂಬ ತೈಲ ಹಾಕಿ ಬೆಳೆಸುವುದು, ಉತ್ತಮ, ಉದಾತ್ತ, ಸಂಸ್ಕಾರಗ ಳನ್ನು ವರ್ಗಾಯಿಸುವುದು ನಮ್ಮ ಕರ್ತವ್ಯ. ಮಗ/ಮಗಳು ಇಬ್ಬರು ದೇಶ ಬೆಳಗುವ ಹಣತೆ ಗಳು. ಎರಡಕ್ಕೂ ‌ಸಮಾನ ದೃಷ್ಟಿಕೋನಗಳಿಂದ ಬೆಳೆಯುವಂತ, ಬೆಳೆಸುವಂತ ಮನಸ್ಥಿತಿ ಬೇರೂರ ಬೇಕು. ಮಗು ಜನಿಸಿದಾಗ ಇರುವ ಸಂಭ್ರಮ. ಕೊನೆಯ ತನಕವೂ ಇರುವಂತೆ ಯೋಚಿಸುವ ಮನಸ್ಥಿತಿಗಳು ಎಷ್ಟಿವೆ? ಮಗು ಹುಟ್ಟಿದರಾಗಲಿಲ್ಲ ಅದರ ಮೂಲ‌ಭೂತ ಹಕ್ಕನ್ನು ನೀಡಿ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಇದು ಅಷ್ಟು ಸುಲಭವಲ್ಲ.ಪ್ರತಿ ಮನೆಯ ಪರಿಸ್ಥಿತಿಯೂ ವಿಭಿನ್ನ. ಆಯಾ ಸ್ಥಿತಿಗತಿಗಳಿಗೆ ಅನುಗುಣವಾಗಿ ಮಗುವಿನ ದೈಹಿಕ, ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಯ ಹರಿಕಾರರಾದರೆ ಮಾತ್ರ ಮಗು ಬೆಳೆದು ಸಮಾಜದ ಭಾಗವಾಗಿ ಸಮಾಜದ ಸ್ವಾ ಸ್ಥ್ಯ ಕಾಪಾಡಲು ಸಾಧ್ಯ. ಇಲ್ಲವಾದರೆ ಎಲ್ಲವೂ ನಿರರ್ಥಕ.

   ✍️ಶ್ರೀಮತಿ.ಶಿವಲೀಲಾ ಹುಣಸಗಿ,
ಶಿಕ್ಷಕಿ, ಯಲ್ಲಾಪೂರ