ಫ್ರೆಂಚ್ ಕ್ರಾಂತಿಯ ಬಗ್ಗೆ ಮೊಟ್ಟಮೊದಲು ಓದಿದಾಗ ನನ್ನ ಎಳೆಯ ಮನದಲ್ಲಿ ವಿವರಿಸಲಾಗದ ರೋಮಾಂಚನ. ಅದೇನೋ ಗೊತ್ತಿಲ್ಲ..ನಾನು ಗಮನಿಸಿದಂತೆ ನಮ್ಮಕಾಲದ ಹದಿವಯದ ಮನ ಸಾಮಾನ್ಯವಾಗಿ ಪ್ರೀತಿ ಪ್ರೇಮದ ಹೊರತಾಗಿ, ಆಕರ್ಷಿತವಾಗು ತ್ತಿದ್ದುದು ಈ ಸಮಾನತೆ, ಸಮಾಜವಾದಿ ಮತ್ತು ಕ್ರಾಂತಿಕಾರಿ ವಿಚಾರಗಳ ಬಗ್ಗೆ. ನಮ್ಮ ಶೈಕ್ಷಣಿಕ ಪಠ್ಯಕ್ರಮವೂ ಇದಕ್ಕೆ ಇಂಬು ಕೊಡುವಂತಿದ್ದುದೂ ಇನ್ನೊಂದು ಕಾರಣ.

ಸಾಮಾನ್ಯ ಜನರೆಲ್ಲ ಸೇರಿ ಒಂದು ಬಲಾಢ್ಯವಾದ ರಾಜಸತ್ತೆಯನ್ನು ಬುಡಮೇಲು ಮಾಡಿ ರಾತ್ರಿ ಬೆಳಗಾಗುವವರೆಗೆ ಹೊಸ ಇತಿಹಾಸವೊಂದನ್ನು ಬರೆಯಬಲ್ಲರು ಎಂಬುದು ನನ್ನನ್ನು ಇನ್ನಿಲ್ಲದಷ್ಟು ಕಾಡಿದ ವಿಷಯ. ಲೂಯಿ ರಾಜಮನೆತನದ ದುಂದುಗಾರಿಕೆ, ಕುಪ್ರಸಿದ್ಧ ರಾಣಿ ‘ಮೇರಿ ಆಂಟ್ವೊನೆಟ್’ ಳ ಪರಮ ವಿಲಾಸಿ ಜೀವನ, ಬಡವರ ಮೇಲಿನ ಕಠಿಣವಾದ ತೆರಿಗೆ, ಶೋಷಣೆ, ಅಸಮಾನತೆ, ಅದಕ್ಷ ಆಡಳಿತಗಳಿಗೆ ರೋಸಿಹೋ ಗಿದ್ದ ಮೂರನೆಯ ಎಸ್ಟೇಟ್ ಎನ್ನಿಸಿಕೊಂಡ ಜನಸಾಮಾನ್ಯ ಫ್ರೆಂಚರಿಗೆ ಅದೇ ಸಮಯದಲ್ಲಿ ನಡೆದ ಅಮೇರಿಕಾದ ಕ್ರಾಂತಿಯಿಂದ ಹೊಸ ಹುರುಪು, ಪ್ರೇರಣೆ ಸಿಕ್ಕಿ ಇಡೀ ಯುರೋಪಿನಲ್ಲಿ ಯೇ ಐಷಾರಾಮದ,ವೈಭೋಗದ ಪ್ರತೀಕವಾಗಿದ್ದ ವಸ್ಸಾಯ್ ಅರಮನೆಯನ್ನು ಮುತ್ತಿ ಅದಾಗಲೇ ವರ್ಚಸ್ಸು, ಜನಪ್ರಿಯತೆಯನ್ನು ಕಳೆದುಕೊಂಡ ಹದಿನಾರನೆಯ ಲೂಯಿ, ಅವನ ವಿಲಾಸಪ್ರಿಯ ರಾಣಿ ಮತ್ತು ಅಮಾಯಕ ಮಕ್ಕಳನ್ನು ಸೆರೆ ಹಿಡಿದು ಗಿಲೊಟಿನ್ ಎನ್ನುವ ಮಾನವ ತಲೆ ಕತ್ತರಿಸುವ ಯಂತ್ರಕ್ಕೆ ಒಪ್ಪಿಸಿಬಿಟ್ಟರು. ಇದು ತುಂಬಾ ಸ್ಥೂಲವಾದ ಕ್ರಾಂತಿಗಾಥೆ.

ವಸ್ಸಾಯ್ ಅರಮನೆ ಎನ್ನುವ ಯುರೋಪಿನ ಅಮರಾವತಿಯ ಇಂದ್ರ ಹದಿನಾಲ್ಕನೆಯ ಲೂಯಿ. ರಾಜ ಸೂರ್ಯನೆಂದೇ ನಾಮಾಂಕಿತ ನಾಗಿದ್ದ ಈ ರಾಜನ ಕಾಲದಲ್ಲಿ ಫ್ರಾನ್ಸ ತನ್ನ ಉಚ್ಛ್ರಾಯಕಾಲದಲ್ಲಿದ್ದು ಸುವರ್ಣಯುಗವಾಗಿ ತ್ತು. ಪ್ಯಾರಿಸ್ ನಿಂದ ಇಪ್ಪತ್ತು ಮೈಲುಗಳಷ್ಟು ದೂರದಲ್ಲಿ ಎರಡುಸಾವಿರ ಎಕರೆಗಳ ವಿಸ್ತೀರ್ಣ ದಲ್ಲಿ, ಎರಡುಸಾವಿರದ ಮುನ್ನೂರು ಕೋಣೆಗಳ ವೈಭವೋಪೇತ ಅರಮನೆ ಮಯನ ಸಭೆಯಂತೇ ಮನೋಹರ. ಆ ಕಾಲದಲ್ಲಿ ಇಡೀ ವಿಶ್ವದಲ್ಲೇ…ಈ ರಾಜನ ದರ್ಬಾರು, ಇಲ್ಲಿನ ಪಾರ್ಟಿಗಳು, ನೃತ್ಯ-ಗಾನ, ಆಹಾರ-ವಿಹಾರ, ಆಚಾರ-ವಿಚಾರ.. ಎಲ್ಲವೂ ಶ್ರೇಷ್ಠತೆಯ ಮಾನದಂಡ.. ಉಚ್ಛ ಸಂಸ್ಕೃತಿಯ ಪ್ರತೀಕ. ಫ್ಯಾಶನ್ ಟ್ರೆಂಡುಗಳು ಜನ್ಮ ತಳೆದಿದ್ದೇ ಇಲ್ಲಿ. ಎಲ್ಲದರಲ್ಲೂ ಫ್ರೆಂಚ್ ಶೈಲಿಯೇ ಅನುಪಮ.. ಫ್ರೆಂಚ್ ಭಾಷೆಯೇ ಅತ್ಯುನ್ನತ ನಾಗರಿಕ ಭಾಷೆ. ಅಮೇರಿಕದ ಡಾಲರ್ ನೋಟಿನಲ್ಲೂ ಫ್ರೆಂಚ್ ಭಾಷೆಯ ಒನಪು ಅಂದರೆ ಊಹಿಸಿಕೊಳ್ಳಿ.

ಹದಿನಾಲ್ಕನೆಯ ಲೂಯಿಯ ನಂತರದ ರಾಜರು ಅವನ ಚಾಣಾಕ್ಷತನ, ವರ್ಚಸ್ಸು, ಆಡಳಿತ ಶೈಲಿ ಯನ್ನು ಪ್ರದರ್ಶಿಸಲೇ ಇಲ್ಲ. ಎಲ್ಲಕ್ಕೂ ಮಿಗಿಲಾಗಿ ಕೊನೆಯ ರಾಜ, ಹದಿನಾರನೆಯ ಲೂಯಿಯ ಕಾಲಕ್ಕೆ ಫ್ರೆಂಚ್ ಬೊಕ್ಕಸಬಹುತೇಕ ಬರಿದಾಗಿತ್ತು. ಬಡವ ಶ್ರೀಮಂತರ ಅಂತರ, ನಿರುದ್ಯೋಗ ಎಲ್ಲಡೆ ತಾಂಡವವಾಡುತ್ತಿತ್ತು. ದುಡಿಯುವ ವರ್ಗ ಕೊಡುವ ತೆರಿಗೆ ಶ್ರೀಮಂತರ ವಿಲಾಸಕ್ಕೆ ಪೋಲಾ ಗುತ್ತಿತ್ತು. ಈ ಎಲ್ಲವುಗಳ ಪರಿಣಾಮವಾದ ಐತಿಹಾಸಿಕ ಕ್ರಾಂತಿ ಲೋಕಕ್ಕೇ ಒಂದು ಹೊಸ ಪಾಠ ಕಲಿಸಿಬಿಟ್ಟಿತು. ಇದಿಷ್ಟೂ ಅಗಾಧವಾದ ವಸ್ಸಾಯ್ ಅರಮನೆ ಮುಂದೆ ನಿಂತಾಗ ನನ್ನ ಮನದಲ್ಲಿ ಬಿಚ್ಚಿದ ನೆನಪಿನ ರೀಲು. ಇರಲಿ, ನಮ್ಮ ಪ್ರವಾಸದ ಪ್ರವರ ಇತಿಹಾಸದ ಕತೆಯಾ ಗುವ ಮೊದಲು ಅರಮನೆಗೆ ಮರಳೋಣ.

ಅಷ್ಟೊಂದು ಬೃಹತ್ ಅರಮನೆಯನ್ನು ಒಂದೇ ದಿನದಲ್ಲಿ ನೋಡುವದು ಸಾಧ್ಯವಿಲ್ಲದ್ದರಿಂದ ಅದನ್ನು ವಿವಿಧ ಚಿಕ್ಕ ಚಿಕ್ಕ ಟೂರ್ ಗಳಾಗಿ ವಿಂಗಡಿಸಿ ಪ್ರತ್ಯೇಕ ಟಿಕೆಟ್ ನ ವ್ಯವಸ್ಥೆ ಮಾಡಿದ್ದಾ ರೆ. ಜೊತೆಗೆ ಆಡಿಯೊ ಗೈಡ್ ಕೂಡ ಕೊಡುತ್ತಾರೆ. ‘U’ ಆಕಾರದಲ್ಲಿರುವ ಅರಮನೆಯ ಪ್ರಮುಖ ಭಾಗವಾಗಿರುವ ಹಾಲ್ ಆಫಮಿರರ್ಸ್, ಮೇರಿ ಆಂಟ್ವನೆಟ್ ಳ ಬೆಡ್ ರೂಮುಗಳು, ರಾಜನ ಖಾಸಾ ಕೋಣೆಗಳು, ರಾಜಪರಿವಾರದ ಶಯನ ಗೃಹಗಳು ಸೇರಿದ ಮೊದಲನೆಯ ಟೂರ್. ಎರಡನೆಯದಾಗಿ ಸಂಗೀತ ಕಾರಂಜಿಗಳು, ಸುಂದರ ಶಿಲ್ಪಗಳಿಂದ ಕೂಡಿದ ಅರಮನೆ ಆವರಣದಲ್ಲಿರುವ ವಿಶಾಲವಾದ ಸುಂದರ ಉದ್ಯಾನವನದ ವೀಕ್ಷಣೆ. ಅರಮನೆಯಿಂದ ಅನತಿ ದೂರದಲ್ಲಿರುವ ಗ್ರಾಂಡ್ ಟ್ರಯಾನನ್ ಮತ್ತು ಪೆಟಿಟ್ ಟ್ರಯಾನನ್ ಗಳೆಂಬ ರಾಜ ರಾಣಿಯರ ಐಶಾರಾಮಿ ವಿಲ್ಲಾಗಳ ಟೂರ್ ಪ್ರತ್ಯೇಕವಾಗಿ ಮಾಡಬಹುದು. ಕೊನೆಯದಾಗಿ ಮೇರಿ ಆಂಟ್ವನೆಟ್ ಳ ಹ್ಯಾಮ್ಲೆಟ್ ಅಂದರೆ ಅವಳ ಆಸೆಯಂತೆ ಗ್ರಾಮೀಣ ಸೊಗಡಿನಲ್ಲಿ ಕಟ್ಟಿದ ಚಿಕ್ಕ ಚಿಕ್ಕ ಮಹಲುಗಳು ಮತ್ತು ಕೈದೋಟ.

ಅಂದಹಾಗೆ ಫ್ರಾನ್ಸನಲ್ಲಿ ಇಂಗ್ಲೆಂಡಿನಲ್ಲಿ ಇರುವಂತೆ ರಾಣಿಯರಿಗೆ ಸಿಂಹಾಸನವೇರುವ ಅಧಿಕಾರವಿಲ್ಲ. ಆದರೆ ಈ ಮೇರಿ ಆಂಟ್ವನೆಟ್ ಎನ್ನುವ ರಾಣಿಯ ಬಗೆಗಿರುವಷ್ಟು ವರ್ಣರಂಜಿತ ಕಥೆಗಳು ಇನ್ಯಾರ ಬಗ್ಗೆಯೂ ಇಲ್ಲ. ದೊರೆ ನೀರೋನಂತೆ ಇವಳಿಗೂ ಸ್ವಹಿತಾಸಕ್ತಿಯೇ ಪರಮಗುರಿಯಾಗಿತ್ತು. ಐಶಾರಾಮಿ ಬದುಕಿನ ಇನ್ನೊಂದು ಹೆಸರೇ ಈ ಮೇರಿಯಾಗಿದ್ದಳು. ಒಮ್ಮೆ ಜನಸಾಮಾನ್ಯರಿಗೆ ತಿನ್ನಲು ಬ್ರೆಡ್ ಇಲ್ಲ ಎಂದಾಗ ಅವರು ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಲಿ ಎಂದ ಅಸಾಮಾನ್ಯ ಮಹಿಳೆ ಇವಳು. (ಕೆಲವು ಸಲ ಈ ಅತಿರಂಜಿತ ವರದಿಗಳು ರಾಣಿಯ ನಿಜವಾದ ವ್ಯಕ್ತಿತ್ವವನ್ನು ಮರೆಯಾಗಿಸಿರಲೂಬಹುದು ಅನ್ನಿಸಿದೆ) ಏನೇ ಆಗಲಿ.. ಜನಪರವಲ್ಲದ ಆಡಳಿತಕ್ಕೆ ಜನತೆ ಕಲಿಸಿದ ಪಾಠವಂತೂ ಅಸದೃಶ.

ಅರಮನೆಯ ಹೃದಯ ಭಾಗದಲ್ಲಿರುವ ಹಾಲ್ ಆಫ ಮಿರರ್ಸ ಬಗ್ಗೆ ನಿಮಗೆ ಹೇಳಲೇ ಬೇಕು. ಇನ್ನೂರೈವತ್ತು ಫೀಟುಗಳಷ್ಟು ಉದ್ದ, ಸುತ್ತಲೂ ಹದಿನೇಳು ಆಳೆತ್ತರದ ನಿಲುವುಗನ್ನಡಿಗಳು, ಸುಂದರ ವಿಗ್ರಹಗಳು, ಆಡಂಬರದ ಶ್ಯಾಂಡ್ಲಿಯರ್ ಗಳು, ಕ್ಯಾಂಡಲ್ ಸ್ಟ್ಯಾಂಡ್ ಗಳು, ಅದ್ಭುತ ಕಲೆಯನ್ನು ಸಾರುವ ಗೋಡೆಗಳು ಮತ್ತು ಮೇಲ್ಛಾವಣಿ.. ಈ ಚಿಕ್ಕದಾದ ಬದುಕಿನಲ್ಲಿ ಇಷ್ಟು ಭವ್ಯವಾದದ್ದು ಮತ್ತು ಮನಮೋಹಕವಾದ್ದು ಮತ್ತೆ ಮತ್ತೆ ನೋಡಲು ಸಿಗದು.

ನನ್ನ ಮನದಂಗಳದಲ್ಲಿ ನಮ್ಮ ‘ಮುಗಲ್-ಎ- ಆಜಮ್ ನ ಮಧುಬಾಲಾ, ಅನಾರ್ಕಲಿಯಾಗಿ ಈ ದರ್ಪಣ ದರ್ಬಾರ್ ನಲ್ಲಿ ‘ಪ್ಯಾರ್ ಕಿಯಾತೋ ಡರ್ ನಾ ಕ್ಯಾ..’ ಎಂದು ನರ್ತಿಸುತ್ತಿದ್ದಳು. ನಮ್ಮ ಜೈಪುರದ ಅಮೇರ್ ಅರಮನೆಯಲ್ಲಿ ಬೆೆಲ್ಜಿಯಂ ಗಾಜಿನ ತುಣುಕುಗಳನ್ನು ಬಳಸಿ ನಿರ್ಮಿಸಿದ ಅದ್ಭುತ ಕುಸುರಿ ಕಲೆಯ ‘ಶೀಷ್ಮಹಲ್’ ನೆನಪಿಗೆ ಬಂತು. ಸತ್ಯ ಹೇಳಬೇಕೆಂದರೆ, ಮೊಟ್ಟ ಮೊದಲು ಶೀಷ್ ಮಹಲ್ ನೋಡಿದಾಗಲೂ ಮನಮಯೂರ ಹೀಗೇ ಗರಿಗೆದರಿತ್ತು.

ನೋಡಿದಷ್ಟೂ ಮುಗಿಯದ ಒಂದಕ್ಕಿಂತ ಒಂದು ಸುಂದರವಾದ ಕೋಣೆಗಳು, ವೈಭವೋಪೇತ ಶಯನಗೃಹಗಳು, ಪ್ರಸಾಧನದ ಕೋಣೆಗಳು.. ಒಂದೇ..ಎರಡೇ..ಸುತ್ತಲಿನ ಕೈದೋಟವಂತೂ ಸಂಗೀತ ಕಾರಂಜಿಗಳು, ಸುಂದರ ಪುತ್ಥಳಿಗಳು, ಕೋನ್ ಆಕಾರದ ಪೊದೆಗಳು, ನೀಟಾಗಿ ಕತ್ತರಿಸಿದ ಹುಲ್ಲು ಹಾಸು, ವಿಧ ವಿಧವಾದ ಹೂ ಬಿಡುವ ಗಿಡಗಳು…ನಡೆದಷ್ಟೂ ಮುಗಿಯದ ವಿಸ್ತಾರ.

ನೀವೇನಾದರೂ ಇತಿಹಾಸ ಪ್ರಿಯರಾಗಿದ್ದರೆ ಒಂದಿಡೀ ದಿನ ನೀವು ಓದಿದ, ಕೇಳಿದ ಆ ಫ್ರೆಂಚ್ ಮಹಾಕ್ರಾಂತಿಯನ್ನು ಜೀವಿಸಿಬಿಡುತ್ತೀರಿ. ಫ್ರೆಂಚ್ ರಾಜರ ಎದ್ದೇಳುವಿಕೆ, ಉಡುಪು ಧರಿಸುವಿಕೆ, ಮುಖ ಮಾರ್ಜನ ಮತ್ತು ಉಪಾಹಾರ ಎಲ್ಲವೂ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿತ್ತು. ಅವೆಲ್ಲವುಗಳ ಆ ಆಡಂಬರದ ಆಚರಣೆಗಳು ಕಣ್ಣ ಮುಂದೆ ಸರಿದಾಡುತ್ತವೆ.

ಇನ್ನೊಂದು ಸ್ವಾರಸ್ಯಕರ ವಿಷಯ ನಿಮಗೆ ಹೇಳಬೇಕು. ಪ್ಲೀಸ್ ಡೋಂಟ್ ಮೈಂಡ್…ವಸ್ಸಾಯ್ ನ ಸೌಂದರ್ಯದ ಕುರಿತು ಎರಡು ಮಾತಿಲ್ಲ. ಆದರೆ ಹದಿನೇಳನೆಯ ಶತಮಾನದ ಯುರೋಪು ಹಲವು ವಿಚಿತ್ರ ನಂಬಿಕೆಗಳಿಂದ ಕೂಡಿತ್ತು. ವೈಯಕ್ತಿಕ ಸ್ವಚ್ಛತೆ ಎನ್ನುವದು ಇಲ್ಲವೇ ಇಲ್ಲವಾಗಿತ್ತು. ನೀರು ಬಳಸಿ ಸ್ನಾನ ಮಾಡಿದರೆ, ತ್ವಚೆಯ ರಂಧ್ರಗಳೆಲ್ಲ ತೆರೆದುಕೊಂಡು ಅನೇಕ ರೋಗಗಳು ಬರುತ್ತವೆ ಎಂದು ನಂಬಿದ್ದರು. ಅದರಂತೆ ಎಲ್ಲರೂ ಅಪರೂಪಕ್ಕೆ ಮೀಯುತ್ತಿದ್ದರು. ನಮ್ಮ ರಾಜಸೂರ್ಯ ಹದಿನಾಲ್ಕನೆಯ ಲೂಯಿ ತನ್ನ ಜೀವಿತಾವಧಿಯಲ್ಲಿ ಕೇವಲ ಮೂರೇ ಮೂರು ಸಲ ಮಿಂದಿದ್ದ ಅಂದರೆ ಫ್ರಾನ್ಸ ಸುಗಂಧ ದ್ರವ್ಯಗಳ ತಯಾರಕೆಯಲ್ಲಿ ಯಾಕೆ ಮಂಚೂಣಿಯಲ್ಲಿದೆ ಎಂದು ಅರ್ಥವಾಗುತ್ತದೆ. ಆ ಕಾಲಕ್ಕೆ ಸುಮಾರು ಮೂರು ಸಾವಿರ ಜನರು ಅಲ್ಲಿ ವಾಸಿಸುತ್ತಿದ್ದರು. ಅಂದಮೇಲೆ ನೀವೇ ಊಹಿಸಿ. ಆಗ ಭೆಟ್ಟಿ ಕೊಟ್ಟ ಕೆಲವು ಪ್ರವಾಸಿಗರು ವಸ್ಸಾಯ್ ಅಂದರೆ ವಾಸನೆ ಅರಮನೆ ಎಂದು ಮೂಗು ಮುರಿದಿದ್ದಾರೆ ಅಥವಾ ಮುಚ್ಚಿಕೊಂಡಿದ್ದಾರೆ. ನೆನಪಿಡಿ…ಆದರೂ ಅದರ ವೈಭವ ಮತ್ತು ಮಹತ್ವ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ.

ಇಷ್ಟೆಲ್ಲ ಜಾಗಗಳ ಬಗ್ಗೆ ಬರೆದರೂ, ಫ್ರಾನ್ಸಗೆ ಇನ್ನೊಂದು ಹೆಸರೇ ಆಗಿರುವ, ಪ್ಯಾರಿಸ್ ನ ನಂ ವನ್ ಟೂರಿಸ್ಟ ಅಟ್ರಾಕ್ಷನ್ ಅನಿಸಿಕೊಂಡಿರುವ ಐಫೆಲ್ ಟವರ್ ಬಗ್ಗೆ ಯಾಕೆ ಬರೆಯುತ್ತಿಲ್ಲ ಎಂದು ಹೇಳಿಬಿಡುತ್ತೇನೆ. ಪ್ಯಾರಿಸ್ ನ ಸರಿಸುಮಾರು ಎಲ್ಲಾ ಮೂಲೆಗಳಿಂದಲೂ ಈ ಟವರ್ ಕಾಣುತ್ತಲೇ ಇರುತ್ತದೆ. ಟವರ್ ಮೇಲಿನಿಂದ ನೋಡಿದರೆ ಪ್ಯಾರಿಸ್ ನ ಅತಿ ಸುಂದರ ನೋಟ ನಿಮ್ಮದಾಗುತ್ತದೆ. ರಾತ್ರಿಯಲ್ಲಿ ಹೊಳೆಯುವ ಟವರ್ ಅತ್ಯಾಕರ್ಷಕ.. ಎಲ್ಲ ಸರಿ.. ಯಾಕೋ ಗೊತ್ತಿಲ್ಲ..ನನ್ನ ಮನದಲ್ಲಿ.. ಜೀವಂತಿಕೆಯಿಂದ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ನಳನಳಿಸುವ ಪ್ಯಾರಿಸ್ ಎಂಬ ಸುಂದರಿಗೆ ಆ ಕಬ್ಬಿಣದ ಕಟಕಟೆಯಂತಹ ರಚನೆಯ ಐಫೆಲ್ ಟವರ್ ಹೊಂದಾಣಿಕೆಯೇ ಆಗುವದಿಲ್ಲ ಅನ್ನಿಸುತ್ತದೆ. ಹೀಗೆಂದಾಗ ನಮ್ಮವರು ನೋಡಿದ ರೀತಿ ನೆನಪಾಗಿ..ಇದು ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ ಎಂದು ಸ್ಪಷ್ಟಪಡಿಸುತ್ತಿದ್ದೇನೆ.

ಇನ್ನುಳಿದಂತೆ ನಾನು ನೋಡಿರುವ ಅದ್ಭುತ ಚರ್ಚುಗಳಲ್ಲೊಂದಾದ ನೋಟ್ರ ಡೇಮ್, ಡೋರ್ಸಿ ಮ್ಯೂಸಿಯಂ, ಕ್ಯಾಟಾ ಕೊಂಬ್ ಎನ್ನುವ ಮಾನವ ತಲೆಬುರುಡೆಗಳಿಂದ ತುಂಬಿರುವ ಪಾತಾಳಲೋಕ…ಇನ್ನೂ ಹತ್ತು ಹಲವು ಸ್ಥಳಗಳಿವೆ. ನಾನು ಮೊದಲೇ ಹೇಳಿದಂತೆ ಪ್ಯಾರಿಸ್ ಎನ್ನುವ ಮಾಯಾನಗರಿಯ ಮೋಹಪಾಶದಿಂದ ಅಷ್ಟು ಸುಲಭದಲ್ಲಿ ಮುಕ್ತಿ ಸಿಗದು. ಮತ್ತೆ ಮತ್ತೆ ಈ ಸುಂದರಿ ನಿಮ್ಮನ್ನು ತನ್ನೆಡೆಗೆ ಸೆಳೆಯುತ್ತ, ಕಾಡುತ್ತಲೇ ಇರುತ್ತಾಳೆ. ಮತ್ತೆ ಸಿಗೋಣ..

      ಸುಚಿತ್ರಾ ಹೆಗಡೆ, ಮೈಸೂರು