ನಾಡಿನ ದೇವಾಲಯದ ವಾಸ್ತು ಲೋಕದಲ್ಲಿ ಹಲವು ಕಡೆ ದೇವಾಲಯಗಳು ನಿರ್ಮಾಣವಾಗಿ ದ್ದು ಅವುಗಳಲ್ಲಿ ಬೆಂಗಳೂರಿನಲ್ಲಿಯೂ ಪುರಾತನ ದೇವಾಲಯವಿದ್ದರೂ ಅದರ ಹಿನ್ನೆಲೆ ಹಾಗೂ ಪ್ರಮುಖತೆಯಲ್ಲಿ  ಜನರ ಗಮನ ಸೆಳೆಯದೇ ಇರುವುದು ದುರಂತ.

ಬೆಂಗಳೂರಿನಲ್ಲಿ ಬೇಗೂರಿನಲ್ಲಿ  ಇರುವ ಹಾಗೂ ವಾಸ್ತು ಅಧ್ಯಯನ ಹಿನ್ನೆಲೆಯಲ್ಲಿ ಪ್ರಮುಖವಾ ದದ್ದು ಇಲ್ಲಿನ ಪುರಾತನ ಪಂಚಲಿಂಗೇಶ್ವರ ದೇವಾಲಯಗಳು.  ಸುಮಾರು ಒಂಬತ್ತೆನಯ ಶತಮಾನದಲ್ಲಿ ಗಂಗರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯಗಳ ಸಂಕೀರ್ಣದಲ್ಲಿ ಐದು ದೇವಾಲಯಗಳಾದ ನಾಗೇಶ್ವರ, ಚೋಳೇಶ್ವರ, ನಗರೇಶ್ವರ, ಕಮಠೇಶ್ವರ ಹಾಗು ಕರ್ಣೇಶ್ವರ ಇದ್ದು “ಪಂಚಲಿಂಗೇಶ್ವರ” ಎಂದೇ ಪ್ರಸಿದ್ದಿ ಪಡೆದಿದೆ.

ನಾಡಿನ ವಾಸ್ತು ಇತಿಹಾಸದಲ್ಲಿ ಗಂಗರ ಕೊಡುಗೆ ಪ್ರಮುಖವಾದದ್ದು. ಲಭ್ಯವಿರುವ ಮೂಲಗಳನ್ನೇ ಬಳಸಿಕೊಂಡು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ನಿರ್ಮಿಸಿದ ಇವರ ದೇವಾಲಯಗಳು ಬೆಂಗಳೂರಿನ ಸುತ್ತಮುತ್ತಲೂ ಅವರ ದೇವಾಲ ಯಗಳಿದ್ದು, ಬಹುತೇಕ ದೇವಾಲಯಗಳು ವಿನಾಶದ ಹಂತ ತಲುಪಿದೆ ಅಥವಾ ನವೀಕರಣ ಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ದೇವಾಲಯ ಸಂಕೀರ್ಣ ಪ್ರಮುಖವಾದದ್ದು. ಅವರಲ್ಲಿನ ದೇವಾಲಯಗಳಲ್ಲಿನ ಅಷ್ಟದಿಕ್ಪಾಲಕರ ಹಾಗೂ ಉಮಾ ಮಹೇಶ್ವರ ಕೆತ್ತೆನೆಗಳು ಗಮನ ಸೆಳೆ ಯುತ್ತವೆ.

ನಾಗೇಶ್ವರ ದೇವಾಲಯ :

ಗಂಗರ ಕಾಲದ ಅಧಿಕಾರಿಯಾಗಿದ್ದ ನಾಗತ್ತರನ ಕಾಲದಲ್ಲಿ ಸ್ಥಾಪಿತವಾದ ನಾಗೇಶ್ವರ ದೇವಾಲಯ ಇಲ್ಲಿನ ಸಂಕೀರ್ಣದ ಪುರಾತನ ದೇವಾಲಯ. ನಾಗೇಶ್ವರ ಹಾಗೂ ಚೋಳೇಶ್ವರ ಎರಡೂ ದೇವಾಲಯಗಳು ಅಕ್ಕಪಕ್ಕದಲ್ಲಿವೆ. ನಾಗೇಶ್ವರ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹಾಗು ಮುಖ ಮಂಟಪ ಹೊಂದಿದೆ. ಗರ್ಭಗುಡಿ ಯಲ್ಲಿ ಶಿವಲಿಂಗ ಇದ್ದು ಇಲ್ಲಿನ ಕಂಭಗಳು ಶಿಖರ ದಭಾಗಕ್ಕೆ ಪೂರಕವಾಗಿದೆ.

ಅಂತರಾಳದಲ್ಲಿ ಎರಡೂ ಹಾಗು ನವರಂಗದಲ್ಲಿ ನಾಲ್ಕು ಕಂಭಗಳಿವೆ. ಇಲ್ಲಿ ಉಮಾ ಮಹೇಶ್ವರನ ಕೆತ್ತೆನೆ ಕಾಣಬಹುದು. ನವರಂಗದಲ್ಲಿ ಸಪ್ತಮಾತೃಕೆ ಭೈರವ, ಮಹಿಶಾಮರ್ಧಿನಿ, ಹಾಗೂ ಸೂರ್ಯನ ಶಿಲ್ಪ ಇದೆ.   ಮುಖಮಂಟಪದಲ್ಲಿ ನಾಲ್ಕು ಕಂಭಗಳ ಎರಡು ಸಾಲು ಇದ್ದು ನಂದಿ ಇದೆ. ಜಗತಿಯ ಕೆಳಭಾಗ ನೆಲದಲ್ಲಿ ಮುಚ್ಚಿ ಹೋಗಿದೆ. ದೇವಾಲಯಕ್ಕೆ ದ್ವಿತಲ ಮಾದರಿಯ ವೄತ್ತಾಕಾರದ ಶಿಖರ ಇದೆ.

ಚೋಳೇಶ್ವರ ದೇವಾಲಯ :

ನಾಗೇಶ್ವರ ದೇವಾಲಯದ ಎಡ ಭಾಗದಲ್ಲಿ ಚೋಳೇಶ್ವರ ದೇವಾಲಯವಿದ್ದು, ನಾಗೇಶ್ವರ ದೇವಾಲಯವನ್ನೆ ಹೋಲುತ್ತದೆ. ಇಲ್ಲಿಯೂ ಸಹ ಗರ್ಭಗುಡಿ, ಅಂತರಾಳ ಹಾಗು ನವರಂಗ ಇದ್ದು ಗರ್ಭಗುಡಿಯಲ್ಲಿ ಚೋಳೇಶ್ವರ ಎಂದು ಕರೆಯುವ ಶಿವಲಿಂಗವಿದೆ.  ಆದರೆ ಇಲ್ಲಿನ ಶಿಖರದ ಭಾಗ ಚೌಕಾಕಾರವಾಗಿದ್ದು ದ್ವಿತಲ  ಮಾದರಿಯ ಶಿಖರ  ಹೊಂದಿದೆ. ಎರಡೂ ದೇವಾಲಯದ ಗರ್ಭಗುಡಿಯ ಲಲಾಟದಲ್ಲಿ ಗಜಲಕ್ಶ್ಮೀಯ ಕೆತ್ತೆನೆ ಇದೆ.

ನಗರೇಶ್ವರ ದೇವಾಲಯ :

ಇಲ್ಲಿಯೂ ಸಹ ಗರ್ಭಗುಡಿ, ಅಂತರಾಳ, ಹಾಗೂ ನವರಂಗ ಇದ್ದು, ಗರ್ಭಗುಡಿಯಲ್ಲಿ ನಗರೇಶ್ವರ ಎಂದು ಕರೆಯುವ ಶಿವಲಿಂಗವಿದೆ.   ದೇವಾಲಯ ಈಗ ನವೀಕರಣವಾದ ಕಾರಣ ಇರಬಹುದಾಗಿದ್ದ ಶಿಖರದ ಭಾಗ ಕಾಣುವದಿಲ್ಲ. ಇಲ್ಲಿನ ಮುಖ ಮಂಟಪದಲ್ಲಿನ ಅಷ್ಟ ದಿಕ್ಪಾಲಕರ ಕೆತ್ತೆನೆ ಗಮನ ಸೆಳೆಯುತ್ತದೆ.ಇಲ್ಲಿ ಗಂಗರ ಕಾಲದ ಮಹಿಷಾಸುರ ಮರ್ಧಿನಿ ದ್ವಿಭಾಹು ಗಣಪತಿ ಗಮನ ಸೆಳೆಯುತ್ತದೆ.

ಕರ್ಣೇಶ್ವರ ದೇವಾಲಯ :

ಚೋಳೇಶ್ವರ ದೇವಾಲಯದ ಪಕ್ಕದಲ್ಲಿಕರ್ಣೇಶ್ವರ ದೇವಾಲಯ ಇದ್ದು ಇಲ್ಲಿಯೂ ಸಹ ಗರ್ಭಗುಡಿ, ಅಂತರಾಳ ಹಾಗೂ ಮಂಟಪ ಇದ್ದು ಗರ್ಭಗುಡಿ ಯಲ್ಲಿ ಕರ್ಣೇಶ್ವರ ಎಂದು ಕರೆಯುವ ಶಿವಲಿಂಗ ವಿದೆ. ದೇವಾಲಯ ಈಗ ನವೀಕರಣವಾಗಿದೆ. ಇಲ್ಲಿಯೂ ಸಹ ಅಷ್ಟ ದಿಕ್ಪಾಲಕರ ಕೆತ್ತೆನೆ ಹಾಗೂ ಉಮಾ ಮಹೇಶ್ವರ ಗಮನ ಸೆಳೆಯುತ್ತದೆ.

ಕಮಟೇಶ್ವರ ದೇವಾಲಯ :

ನಾಗೇಶ್ವರ ದೇವಾಲಯದ ಮುಂದಿನ ಮಂಟಪದ ಪಕ್ಕದಲ್ಲಿ ಕಮಟೇಶ್ವರ ದೇವಾಲಯ ಇದೆ. ಇಲ್ಲಿಯೂ ಸಹ ಗರ್ಭಗುಡಿ, ಅಂತರಾಳ ಹಾಗೂ ನವರಂಗ ಇದ್ದು, ಗರ್ಭಗುಡಿಯಲ್ಲಿ ಕಮಟೇಶ್ವರ ಎಂದು ಕರೆಯುವ ಶಿವಲಿಂಗವಿದೆ.  ಇಲ್ಲಿ ಚೌಕಾ ಕಾರದ ನಾಗರ ಮಾದರಿಯ ಶಿಖರವಿದ್ದು ನಂತರ ಕಾಲದ ಕಾಳಿಕಾ ಮೂರ್ತಿ ಇದೆ.

ದೇವಾಲಯದ ಆವರಣದಲ್ಲಿ ಗಂಗರ ಕಾಲದಲ್ಲಿ ಸಿಕ್ಕ ವೀರಗಲ್ಲಗಳನ್ನ ಜೋಡಿಸಲಾಗಿದೆ. ಆದರೆ ನಿರ್ವಹಣೆಯ ಕೊರತೆಯ ಕಾರಣ ಅವನತಿಯತ್ತ ಸಾಗಿದೆ.  ಈ ದೇವಾಲಯಗಳಿಗೆ ನಾಲ್ಕು ದಿಕ್ಕಿನಲ್ಲಿ ರಾಜ ಗೋಪುರವನ್ನ ನೂತನವಾಗಿ ನಿರ್ಮಿಸಲಾ ಗಿದೆ.  ಇವು ಸಂಪೂರ್ಣ ಅಧುನಿಕ ನಿರ್ಮಾಣವಾ ಗಿದ್ದು, ಪುರಾತನ ದೇವಾಲಯದ ಸಂಕೀರ್ಣಕ್ಕೆ ಅಧುನಿಕ ಕೊಂಡಿಯಂತಿದೆ.  ಇತಿಹಾಸ ಹಾಗೂ ವಾಸ್ತು ಶಿಲ್ಪ ಆಧ್ಯಯನ ಮಾಡುವವರಿಗೆ ಬೆಂಗಳೂರಿನಲ್ಲಿ ಸಿಕ್ಕ ದೊಡ್ಡ ದೇವಾಲಯದ ಸಂಕೀರ್ಣ ಇದು.

 ✍️ಶ್ರೀನಿವಾಸ ಮೂರ್ತಿ.ಎನ್.ಎಸ್.
ಬೆಂಗಳೂರು