ಕಳೆದೆರಡು ವರ್ಷಗಳ ಹಿಂದೆ ಬೆಂಗಳೂರಿನ
ಕ.ಸಾ.ಪ.ದತ್ತಿನಿಧಿ ಕಾರ್ಯಕ್ರಮದಲ್ಲಿ ನಮ್ಮಿಬ್ಬರಿಗೂ ಜಿ.ಕೆ.ರವೀಂದ್ರಕುಮಾರ ಸಿಕ್ಕಿದ್ದರು.ಬಹುಶಃ ಅದೇ ನಮ್ಮ ಕೊನೆಯ ಭೇಟಿಯಾಗಬಹುದು ಎಂದು ಯಾರಿಂದಲೂ ಊಹಿಸಲೂ ಅಸಾಧ್ಯವಾದ ಸಂಗತಿಯದು.

ಕಾಲು ಶತಕದ ಪ್ರೀತಿ ನಮ್ಮದು ; ಎಂದೆಂದಿಗೂ.
ಅದೇ ನೇರ ನುಡಿ, ನಿರ್ಭಿಡೆ, ಸರಳ, ಸೌಮ್ಯ, ಪ್ರಬುದ್ಧ, ಮಂದಸ್ಮಿತ. ವೃತ್ತಿ – ಪ್ರವೃತ್ತಿ; ಬದುಕು – ಬರಹಗಳಲ್ಲಿ ಘನತೆಯ ವ್ಯಕ್ತಿತ್ವ.

ತಮ್ಮ ಲಲಿತಪ್ರಬಂಧಗಳು “ತಾರಸಿ ಮಲ್ಹಾರ್” ನ್ನು ಅದೇ ಸಂಕೋಚದಿಂದ ” ನಾಗಸುಧೆ ” ಯ ಕೈಗಿತ್ತರು.ಇಪ್ಪತ್ತು ವರ್ಷಗಳ ಹಿಂದೆ ಗೆಳೆಯ ಕೃಷ್ಣ ಹಿಚ್ಕಡನೊಡನೆ “ನಾಗಸುಧೆ” ಯ ಪ್ರವೇಶದ ಸಂಭ್ರಮದಲಿ ಪಾಲ್ಗೊಂಡದ್ದನ್ನು ಮೆಲಕು ಹಾಕಿದೆವು.

” ತಾರಸಿ ಮಲ್ಹಾರ್ ” ಕುರಿತಾಗಿ ಅವರದೇ ಮಾತಿನಲಿ ಹೇಳುವದಾದರೆ…………

ಈ ಪ್ರಬಂಧಗಳು ಕನ್ನಡ ಪ್ರಭ, ಮಯೂರ, ವಿಶ್ವವಾಣಿ, ವಿಜಯವಾಣಿ, ತುಷಾರ, ತಿಂಗಳು ಮುಂತಾದೆಡೆ ಪ್ರಕಟಗೊಂಡಿದೆ. ‘ಟೀಂ ಗುಂಜಿಗ ನೂರು’ ಪ್ರಬಂಧವು ‘ಕನ್ನಡ ಪ್ರಭ – ಅಂಕಿತ ಪುಸ್ತಕ ‘ ಜಂಟಿಯಾಗಿ ನಡೆಸಿದ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮಬಹುಮಾನ ಪಡೆ ದಿದೆ. ಜಿ.ಪಿ.ಬಸವರಾಜು, ಅಪಾರ, ಡಾವೆಂಕಿ ಸೇರಿದಂತೆ ಈ ಎಲ್ಲಾ ಪತ್ರಿಕೆಗಳ ಸಂಪಾದಕರಿಗೆ
ನಾನು ಕೃತಜ್ಞ. ನನ್ನ ಸಹೋದ್ಯೋಗಿ ಮತ್ತು ಮಿತ್ರ ರಾದ ಅಬ್ದುಲ್ ರಶೀದ್ ತಮ್ಮ ‘ಕೆಂಡ ಸಂಪಿಗೆ’ ಯಲ್ಲಿ ನನ್ನ ಬರಹಗಳಿಗೆ ವಿಶೇಷ ಅವಕಾಶ ಕಲ್ಪಿಸಿದ್ದರಲ್ಲದೇ ಪ್ರಬಂಧಗಳನ್ನೂ ಅಪೇಕ್ಷಿಸಿ ದ್ದರು. ಸ್ವತಃ ಒಳ್ಳೆಯ. ಲೇಖಕರಾಗಿ ಸದಾ ತಮ್ಮ ಕಥನದ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಅವರು ನನ್ನ ಬಯಕೆಯಂತೆ ಈ ಸಂಕಲನಕ್ಕೆ
ಮುನ್ನುಡಿ ಬರೆದು ಸಂತೋಷ ಹೆಚ್ಚಿಸಿದ್ದಾರೆ. ಇನ್ನು ನನ್ನಿಂದ ‘ತಾರಸಿ ಮಲ್ಹಾರ್’ ಪ್ರಬಂಧ ತಾಳಲು ಕಾರಣರಾದ ಚ.ಹ.ರಘುನಾಥ ಸ್ವತಃ ಒಳ್ಳೆಯ ಪ್ರಬಂಧಕಾರರು ಮತ್ತು ಕಥೆಗಾರರು. ಅವರು ನನ್ನ ಅಪೇಕ್ಷೆಯಂತೆ ಬೆನ್ನುಡಿನೀಡಿದ್ದಾರೆ. ಈ ಇಬ್ಬರಿಗೂ ನಾನು ಕೃತಜ್ಞ……ಎಂದಿರುವರು.

ಈ “ತಾರಸಿ ಮಲ್ಹಾರ್ ” ಕೃತಿಯೇ ಅವರ ಬದುಕಿನ ಕೊನೆಯ ಪುಸ್ತಕವಾಗಿರುವದು ಕನ್ನಡ ಸಾಹಿತ್ಯಕ್ಕೆ ಭರಿಸಲಾರದ ನಷ್ಟವಾಗಿರುತ್ತದೆ.

ಕನ್ನಡ ಸಾಹಿತ್ಯದ ಪ್ರಭುದ್ಧ ಬರಹಗಾರರಾದ ರವೀಂದ್ರಕುಮಾರ ಮೂಲತಃ ಚಿತ್ರದುರ್ಗ ಜಿಲ್ಲೆ ಯವರಾದರೂ ಇವರು ಆಕಾಶವಾಣಿಯಲ್ಲಿ ಹಿರಿಯ ಅಧಿಕಾರಿಯಾದ್ದರಿಂದ ಇಡೀ ಕನ್ನಡ ನಾಡೇ ಇವರ ಮನೆಯಾಗಿತ್ತು.

ಸಿಕಾಡ, ಪ್ಯಾಂಜಿಯಾ, ಕದವಿಲ್ಲದ ಊರಲ್ಲಿ, ಒಂದು ನೂಲಿನ ಜಾಡು, ಮತ್ತು ಮರವ ನಪ್ಪಿದ ಬಳ್ಳಿ ಇವರು ಕನ್ನಡ ಕಾವ್ಯಕ್ಕೆ ಕೊಟ್ಟ ಬಹುದೊಡ್ಡ ಕಾಣಿಕೆಗಳು.

1994 ರಲ್ಲಿ ಪ್ರಕಟಿಸಿದ “ಸಿಕಾಡ “ ಇದು ಜಿ.ಕೆ.ರವೀಂದ್ರ ಕುಮಾರರ ಮೊದಲನೆಯ ಕವನ ಸಂಕಲನ. ಜಿ.ಕೆ.ರವೀಂದ್ರರು”ನಾವೆಲ್ಲಾ ಮನುಷ್ಯ ರಾಗಿ ಬಾಳುತ್ತಿದ್ದರೆ ಈ ಕವಿತೆಗಳು ಮೂಡುತ್ತಿರ ಲಿಲ್ಲವೇನೋ. ಹಾಗೆ ಬಾಳಲು ಸಾಧ್ಯವಾಗದ ತಲ್ಲಣಗಳು ಬಹಳ ದಿನಗಳಿಂದ ಕಾಡುತ್ತಿದ್ದರೂ   ಅವು  ಸಾಂದ್ರಗೊಂಡು  ಮೈದಾಳಿದ್ದು ಕಳೆದ ವರ್ಷದಿಂದೀಚೆಗೆ. ಆರಂಭದ ಬೆರಳೆಣಿಕೆಯಷ್ಟು ಕವಿತೆಗಳೊಡನೆ ಇವು ಕೂಡಿಕೊಂಡು ಈಗ ಹೊರ ಬರುತ್ತಿದೆ. ಎಲ್ಲ ಅವ್ಯವಸ್ಥೆಗಳ ನಡುವೆ ಹುಟ್ಟಿ ಕೊಂಡ ಈ ಪದ್ಯಗಳನ್ನು ಇಡಿಯಾಗಿ ಹಿಡಿದು ಕೊಡುವ ನನ್ನ ಮೊದಲ ಯತ್ನ ಸಂಕೋಚ ಮತ್ತು ಕುತೂಹಲದ ಬೊಗಸೆಗಳಲ್ಲಿದೆ” ಎಂದಿ ರುವರು.

ಈ ಸಂಕಲನದ “ಸಾವ ಕಾರಣ ಸಂಬಂಧ “ ಕವಿತೆ ಹೀಗಿದೆ.

ರಸ್ತೆ ಅಗಲವಾಗುವದು
ನಾಲ್ಕಾರು ವಾಹನಗಳೂ
ಉರುಳಿದ ಮೇಲೆ

ವೃತ್ತ ವಿಸ್ತಾರವಾಗುವದು
ಹಲವಾರು ದೇಹಗಳು
ರಕ್ತ ಹರಿಸಿದ ಮೇಲೇ

ಕೊಲೆಗಾರರನ್ನು ಹಿಡಿಯುವದು
ನೂರಾರು ಜೀವೀಗಳ
ಬಲಿಕೊಟ್ಟ ಮೇಲೆ
ಸೇತುವೆ ದುರಸ್ತಿಯಾಗುವದು
ಬಡಪಾಯಿ ಬದುಕು
ನೀರ ಪಾಲಾದ ಮೇಲೆ.

ಸಾವೊಂದು ಪ್ರಗತಿಯ ತಾವಾದಾಗ
ಕಳೇಬರಹ ಕಣ್ಣುಗಳೇ ಕಂದೀಲು
ಹೆಣವೊಂದು ದಿಕ್ಕಿನ ಸೂಚಿಯಾದಾಗ
ಗೋರಿಗಳು ಗುರಿಯ ತಪಶೀಲು

ಗೋರಿಗಳ ದರಬಾರದಲ್ಲಿ ಯಾವುದು ದುಬಾರಿ
ಜೀವ ತಿರುಗುವ ಬುಗುರಿ
ಕ್ಷಣಕ್ಕೊಂದು ಪ್ರೇತದ ನಗಾರಿ

ಸಾವ ಕಾರಣದ ಪಾತಳಿಯ ಮೇಲೆ
ಕಾರ್ಯಗಳು ಘಟಿಸುವಾಗ
ಜೀವ ಧಾರಣೆ ಇಳಿದು
ಪೊರೆಕಟ್ಟಿದ ಕಣ್ಣ ಪಿಸುರಿನ ಮೇಲೆ
ಸಿಂಹಾಸನವು ಕೂತಾಗ
ಸಾವಿನ ಚೀತ್ಕಾರವೂ
ಜೀವಂತಿಕೆಯ ಕುರುಹು

ಸಾವಿನಾಸರೆ ಮೇಲೆ
ಮೆರವಣಿಗೆ ಹೊರಟಾಗ
ಅದಕಿಲ್ಲ ಅಳಿವು
ಬರೆ ನಿಟ್ಟುಸಿರುಗಳ ಕಳುವು.

ಅಕಾಲದಲ್ಲಿ ಬಹುದೊಡ್ಡ ಸಂಬಂಧದ ಕೊಂಡಿ
ಕಳಚಿಕೊಂಡು ಹೋದ ಅಕ್ಷರ ಪ್ರೀತಿಯ ಗೆಳೆಯ ರವೀಂದ್ರಕುಮಾರ ನಳನಳಿಸುವ ಅಕ್ಷರಗಳ ಮೂಲಕ ಸದಾ ನಮ್ಮೆಲ್ಲರ ಎದೆಯಲ್ಲಿ ಹಚ್ಚಹಸಿ ರಾಗಿರುವರು.

   ✍️ ಪ್ರಕಾಶ ಕಡಮೆ. ನಾಗಸುಧೆ, 
ಹುಬ್ಬಳ್ಳಿ