ಅಪ್ಪನೇ ಹಾಗೆ ಹನುಮಂತನ ಪರಿ ಅವನಾದ್ರು ಬೆಟ್ಟವನ್ನು ಕೆಲಕಾಲ ಹೊತ್ತಿದ್ದ , ಅಪ್ಪ ಜೀವನ ಪೂರ್ತಿ ಸಂಸಾರದ ಬಾರ ಹೊರುತ್ತಾರೆ. ಮಕ್ಕಳು ಏನೇ ಕೇಳಿದರೂ, ತಂದೆಗೆ ಎಷ್ಟೇ ಕಷ್ಟವಾದರೂ ಮಕ್ಕಳ ಆಸೆ ನೆರವೇರಿಸಲು ಪ್ರಯತ್ನಿಸುತ್ತಾರೆ. ಹಾಗೆಯೇ ನಾನು ಏನು ಕೇಳಿದರೂ ಬೇಡವೆನ್ನದ ಅಪ್ಪನ ಬಳಿ ಆಟೋ ಕಲಿಸಿಕೊಡಿ ಎಂದು ದುಂಬಾಲು ಬಿದ್ದಿದೆ. ಅಪ್ಪ ಜೊತೆ ಇದ್ದರೆ ಯಾವ ವಾಹನವನ್ನಾದರೂ ಕಲಿಯಬಹುದು ಎಂಬ ಧೈರ್ಯವಷ್ಟೇ . ಅಪ್ಪನೂ ಹಿಂದೂ ಮುಂದೂ ನೋಡದೆ ನನಗೆ ವಾಹನ ಕಲಿಸಲು ಒಪ್ಪಿದರು.

ಪಕ್ಕದಲ್ಲಿ ಕೂರಿಸಿಕೊಂಡು ಬ್ರೇಕ್, ಕ್ಲಚ್ ಎಕ್ಸಾಲೇಟರ್ ಗಳ ಪರಿಚಯ ಮಾಡಿಸಿದರು. ನಾಲ್ಕೈದು ದಿನ ಗಾಡಿ ಓಡಿಸಿ ಸ್ವಲ್ಪ ದೈರ್ಯ ಕೂಡ ಬಂದಿತ್ತು.”ಅಪ್ಪ ನೀನು ಬೇಡ ನಾನೊಬ್ಬ ಳೇ ಓಡಿಸುತ್ತೇನೆ” ಎಂದು ಹಠಹಿಡಿದು ಅಪ್ಪನನ್ನು ಕೆಳಗಿಳಿಸಿದೆ. ಸ್ವಲ್ಪ ದೂರ ಚನ್ನಾಗಿಯೆ ಓಡಿಸಿದೆ. ಅಪ್ಪ ಜೋರಾಗಿ ಕೂಗಿ ಬ್ರೇಕ್ ಒತ್ತು ಎಂದು ಹೇಳುತ್ತಿದ್ದರು. ವಾಹನ ಕಲಿಯುವ ಖುಷಿಯಲ್ಲಿ ಬ್ರೇಕ್ ಒತ್ತುವ ಬದಲು ರಿವರ್ಸ್ ಗೇರ್ ಹಾಕಿ ಬಿಟ್ಟೆ. ಪಕ್ಕದಲ್ಲೇ ಇದ್ದ ಗೋಡೆಯೊಂದಕ್ಕೆ ಗುದ್ದಿ ಆಟೋ ಪೂರ್ತಿ ನಜ್ಜುಗುಜ್ಜಾಯಿತು. ಗುದ್ದಿದ ರಭಸಕ್ಕೆ ನನ್ನ ಬೆನ್ನು ಮೂಳೆಗೆ ಸ್ವಲ್ಪ ಪೆಟ್ಟಾಗಿತ್ತು. ಇವೆಲ್ಲದರ ನಡುವೆ ಅಪ್ಪ ಎಲ್ಲಿ ಬೈಯುತ್ತಾರೆ ಎಂಬ ಭಯಕ್ಕೆ ಈಗಾಗಲೇ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಗಾಬರಿಯಲ್ಲಿ ಓಡಿಬಂದ ಅಪ್ಪ ಗಾಡಿಯನ್ನು ಸ್ವಲ್ಪವೂ ಗಮನಿಸದೆ ನನ್ನ ಶುಶ್ರೂಷೆ ಮಾಡಿದರು. ಅಪ್ಪನ ಮುಖದಲ್ಲಿ ಒಂದು ಚೂರು ಕೋಪ ಕಾಣಲಿಲ್ಲ. ನಾನು ಅವರ ವಾಹನವನ್ನು ಅಷ್ಟು ಹಾನಿ ಮಾಡಿದರು ಒಂದು ಮಾತು ಕೂಡ ಆಡಲಿಲ್ಲ . ನನ್ನ ತಪ್ಪು ಅವರ ಕಣ್ಣಿಗೆ ಕಾಣಿಸಲೇ ಇಲ್ಲ. ಹಾಗಾದರೆ ಅವರ ಕಣ್ಣಿ ನಲ್ಲಿ ಅದೆಷ್ಟು ಪ್ರೀತಿ ಇರಬಹುದು. ಯಾರೆಂದರು ತಾಯಿ ಮಾತ್ರ ಸಹನಮಯಿ ಎಂದು, ತಂದೆಯು ಕೂಡ ಶಾಂತಿ ಮೂರ್ತಿಯೇ.

   ✍️ವೇದಶ್ರೀ ಜಿ.ಎಂ.ನಾಪೋಕ್ಲು