ಬದುಕ ಪಯಣದಲಿ ನೆಮ್ಮದಿ ಸಂತೋಷ ಗಮ್ಯ ವಾಗುವದಿಲ್ಲ. ಬರೀ ತಂಗುದಾಣಗಳು ಅಷ್ಟೇ. ಈ ಮರೀಚಿಕೆಗಳ ಅನುಸರಿಸುತ್ತಾ ಬಾಳಿಡೀ ಕಳೆ ದುಬಿಡುತ್ತೇವೆ. ಇನ್ನೇನು ನೆಮ್ಮದಿ ಕಾಣುವೆ ವೆಂದಾಗ ವಾಸ್ತವತೆ ಗಹಗಹಿಸಿ ನಕ್ಕು ಬಿಡುತ್ತದೆ. ಸಂತೋಷದಲೆಗಳ ಮರ್ಮರ ಮೂಕವಾಗಿ ಬಿಟ್ಟಿ ರುತ್ತದೆ. ಜೀವನವಿಡೀ ಕಣ್ಣಮುಚ್ಚಾಲೆಯಾಡುವ ಇವುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದೇ ಜೀವನ ಕಲೆ.

ಮಾನ್ಯ ಡಿ.ವಿ.ಜಿಯವರು ಮಂಕುತಿಮ್ಮನ ಕಗ್ಗ ದಲ್ಲಿ ಹೀಗೆ ಹೇಳುತ್ತಾರೆ:
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ:
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ ॥
ಒಬ್ಬ ಮನುಷ್ಯನ ಜೀವನ ಹೇಗಿರಬೇಕು ಎಂಬು ದನ್ನು ಡಿವಿಜಿಯವರು ಈ ಸರಳ ನುಡಿಗಳಲ್ಲಿ ತಿಳಿಸಿಕೊಟ್ಟಿದ್ದಾರೆನೋಡಿ.”ಉದ್ಯೋಗಂ ಪುರುಷ ಲಕ್ಷಣಂ” ಬೇಕಾದರೆ ಇಂದಿನ ಕಾಲಮಾನಕ್ಕೆ “ಉದ್ಯೋಗಂ ಮನುಜ ಲಕ್ಷಣಂ” ಎಂದು ಕೊಳ್ಳೋಣ.

ಜೀವಿಸಲು ಉದ್ಯೋಗ ಬೇಕು. ಎಲ್ಲರೂ ಮೇಲು ಸ್ತರದ ಉದ್ಯೋಗವನ್ನೇ ಬಯಸಿದರೆ ಕೆಳಸ್ತರದ ಉದ್ಯೋಗ ಮಾಡುವರ್ಯಾರು? ವ್ಯವಸ್ಥೆಯಲ್ಲಿ ಹಿರಿದು ಕಿರಿದು ಅನ್ನುವುದಿಲ್ಲ. ಆದರೆ ದೃಷ್ಟಿಕೋ ನದಲ್ಲಿದೆ. ನಮಗೆ ದೊರೆತಿರುವ ಅವಕಾಶವನ್ನು ಕೆಲಸವನ್ನು ಲಕ್ಷ್ಯಕೊಟ್ಟು ಮಾಡಬೇಕು, ಆಗಲೇ ಪ್ರಗತಿ ಸಾಧ್ಯ. ಮತ್ತೆ ನಮಗೆ ಲಭ್ಯವಾದುದರ ಬಗ್ಗೆ ದೇವರ ಪ್ರಸಾದ ಎಂಬ ಗೌರವ ಭಾವನೆ ಬೆಳೆಸಿಕೊಂಡು ಹಸಾದವೆಂದು ಭಾವಿಸಿ ಸ್ವೀಕರಿಸ ಬೇಕು. ನಮ್ಮನ್ನು ನಾವು ಎಷ್ಟೇ ಹಿರಿದಾಗಿ ಭಾವಿ ಸಿದರೂ ನಾವು ಏನು ಅನ್ನುವುದನ್ನು ಭಗವಂತ ನಿರ್ಧರಿಸುತ್ತಾನೆ. ಅವನ ದೃಷ್ಟಿಯಲ್ಲಿ ನಾವು ಎಷ್ಟು ಯೋಗ್ಯರೋ ಅಷ್ಟನ್ನೇ ದಯಪಾಲಿಸು ತ್ತಾನೆ. ಇದಕ್ಕೆ ಪೂರ್ವ ಜನ್ಮದ ಕರ್ಮ ವಿಶೇಷ ಗಳ ಬಂಧನವೂ ಇರುತ್ತದೆ. ಹಾಗಾಗಿ ಎಲ್ಲಾ ಅವ ನಿಚ್ಛೆ ಎಂದುವ ನಡೆದರೆ ನಿರಾಶೆ ಖಿನ್ನತೆ ಕಾಡದು.
ಇದೇ ಮನೋಭಾವದಿಂದಲೇ ಸಂಸಾರದಲ್ಲಿದ್ದ ರೂ ಸ್ಥಿತಪ್ರಜ್ಞತೆಯನ್ನು ರೂಢಿಸಿಕೊಳ್ಳಬಹುದು, ಪರಮಾರ್ಥದ ಕಡೆ ಗಮನಹರಿಸಬಹುದು. ಈ ಪ್ರಾಪಂಚಿಕ ವ್ಯವಹಾರಗಳ ಲೇಪವನ್ನು ಕಮಲ ಪತ್ರದ ಮೇಲಿನ ನೀರಿನ ಹನಿಯಂತೆ ನಾವು ಮಾಡಿಕೊಂಡಾಗ ಇಹದ ಲೌಕಿಕದ ಭಾರವನ್ನು ಪರಕ್ಕೆ, ಪರಮಾತ್ಮನಿಗೆ ವಹಿಸಿ ನಾವು ನಿರಾಳರಾ ಗಬಹುದು, ನಿಶ್ಚಿಂತರಾಗಬಹುದು. ಗೀತೆ ಹೇಳು ವುದು ಇದನ್ನೇ ತಾನೆ? ಈ ರೀತಿಯ ಸಮಚಿತ್ತ ಬೆಳೆಸಿಕೊಂಡಾಗ ಸಾವಿನ ಭಯ ಕಾಡುವುದಿಲ್ಲ. ಕಾಲನ ಕರೆಗೆ ಓಗೊಡಲೇ ಬೇಕು. ಗೋಳಿಡುತ್ತಾ ಅಳುತ್ತಾ ಹೋಗದೆ ಸದಾಸಿದ್ಧರಾಗಿದ್ದು ಬಾ ಎಂದೊಡನೆ ನಗುನಗುತ್ತಾ ಹೊರಟರೆ ಎಷ್ಟು ಚೆನ್ನ ಅಲ್ಲವೇ?
ಖಂಡಿತ ಇದನ್ನು ಅನುಸರಿಸುವವರ ಜೀವನದಲ್ಲಿ ನೆಮ್ಮದಿ ಸಂತೋಷ ಅವರನ್ನೇ ಅರಸಿಕೊಂಡು ಬರುತ್ತವೆ.
ಸಾಮಾನ್ಯವಾಗಿ ಸಮಾನಾರ್ಥದಲ್ಲಿ ಬಳಸುವ ಈ ಪದಗಳಲ್ಲಿ ಸ್ವಲ್ಪಮಟ್ಟಿನ ಭೇದವನ್ನು ಕಾಣಬಹು ದು. ಮನಸ್ಸಿನ ಸಾಮಾನ್ಯ ಸ್ಥಿತಿ, ಚಿಂತೆ, ನೋವು ಸಮಸ್ಯೆಗಳಿಲ್ಲದಾಗ ನೆಮ್ಮದಿ ಎನ್ನಬಹುದು. ಇನ್ನಷ್ಟು ಪ್ರೌಢ ಮನಸ್ಸುಗಳು ಈ ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿಯೂ ಕೂಡ ನೆಮ್ಮದಿಯಾಗಿರಬಹುದು. ನೆಮ್ಮದಿಯೆಂದರೆ ಅದು ಮಾನಸಿಕ ಸ್ಥಿತಿ. ದೀರ್ಘಕಾಲೀನ ಅನು ಭವಗಳ ಮೇಲೆ ಅವಲಂಬಿತ. “ಏನೋ ಹೊಟ್ಟೆ ಬಟ್ಟೆಗೆ ಕಡಿಮೆ ಇಲ್ಲ ನೆಮ್ಮದಿಯಾಗಿದ್ದೀವಿ” ಎನ್ನುವ ನುಡಿಗಳಲ್ಲಿ ಇದು ವೇದ್ಯ.

ಇನ್ನು ಸಂತೋಷ ನೆಮ್ಮದಿಗಿಂತ ಇನ್ನೂಮುಂದಿನ ಸ್ಥಿತಿ. ಹೆಚ್ಚಿನ ಆನಂದದ ಅನುಭವ. ನೆಮ್ಮದಿ ಯಾಗಿ ದಿನಕಳೆಯುವ ಕುಟುಂಬಕ್ಕೆ ಅನಿರೀಕ್ಷಿತ ಧನಾಗಮನ ತರುವ ಸ್ಥಿತಿ ಸಂತೋಷ. ಇದು ಸ್ವಲ್ಪ ತತ್ಕಾಲದ ಮನಸ್ಸಿನ ಅನುಭಾವ. ಹೀಗೆ ಬಂದು ಹೀಗೆ ಮಾಯವಾಗುವ ಕೋಲ್ಮಿಂಚಿನಂತೆ ಅಂತ ರಂಗದ ಅನುಭೂತಿ ಸಂತೋಷವಾದರೆ ನೆಮ್ಮದಿ ಸದಾ ಆಗಸದಲ್ಲಿ ಕಾಣುವ ಬಿಳಿ ಮುಗಿಲಿನಂತೆ. ಸಂತೋಷ ಯಾವುದಾದರೂ ಘಟನೆಯ ಮೇಲೆ ಅವಲಂಬಿಸಿ ಬಹಿರಂಗಕ್ಕೆ ಆತುಕೊಂಡಿದ್ದರೆ ನೆಮ್ಮದಿ ಅಂತರಂಗದಲ್ಲಿ ನಾವಾಗಿ ತಂದುಕೊ ಳ್ಳುವ ಅನುಭೂತಿ, ಕಂಡುಕೊಳ್ಳುವ ಪರಿಸ್ಥಿತಿ. ಬಾಹ್ಯದ ಘಟನೆಗಳು ಅವುಗಳನ್ನು ವಿಚಲಿತಗೊ ಳಿಸವು. “ಸಾಕು ಎನ್ನುವ ಶ್ರೀಮಂತ, ಬೇಕು ಎನ್ನುವ ಬಡವ” ಎಂಬಂತೆ ಇಲ್ಲಿ ಬೇಕು ಬೇಕೆಂದು ಹಪಹಪಿಸಿ ಲೌಕಿಕದ ವಸ್ತುಗಳನ್ನು ಬಯಸಿ ಸಿಕ್ಕಾಗ ಅದು ಸಂತೋಷ, ಸಾಕು ಎನ್ನುವ ತೃಪ್ತಿಯನ್ನು ಮೈಗೂಡಿಸಿಕೊಂಡವನು ಏನಿಲ್ಲದಿದ್ದರೂ ಇರುವುದರಲ್ಲಿ ಕಾಣುವ ಸ್ವಭಾವ ನೆಮ್ಮದಿ.

ಮರುಳು ಮುನಿಯನ ಕಗ್ಗ ಹೀಗೆನ್ನುತ್ತದೆ:
ಮರುಳು ಮುನಿಯನ ಮನಸು ಸರಳ ಬಾಳ್ವೆಯ ಕನಸು
ಸರಸ ಋತ ಸೌಜನ್ಯ ಶಾಂತಿಗಳ ಸೊಗಸು
ಕೆರೆಯಿನೆದ್ದೆಲೆಯಿರದೆ ತಣಿವ ತುಂತುರನಿನಿತು ಮರಳಿ ತೆರೆ ಸೇರ್ಪುದಲ ಮರಳು ಮುನಿಯ
ಮರಳುಮುನಿಯ ಎಂದರೆ ಇಲ್ಲಿ ಜನಸಾಮಾನ್ಯ. ಸರಳಜೀವಿಯಾಗಿದ್ದಷ್ಟು ವಿನೋದ, ಸತ್ಯ, ವಿನಯ,ಶಾಂತಿ ಇರುತ್ತದೆ ಮತ್ತು ಅದೇ ನೆಮ್ಮದಿ. ಜಲಚಕ್ರದ ಆದಿ ಅಂತ್ಯದಂತೆ ತನ್ನಿರುವಿನಿಂದ ಸುತ್ತಣ ಜಗಕ್ಕೆ ತಂಪು ನೀಡುವುದೆ ನೆಮ್ಮದಿ. ಪ್ರಾಮಾಣಿಕತೆಯಿಂದ ಸತ್ಪಥದಲ್ಲಿ ನಡೆಯುವವ ನಿಗೆ ಸದಾ ನೆಮ್ಮದಿ. ಈ ಅಂತರ್ಗತ ನೆಮ್ಮದಿಯ ನ್ನು ಬಹಿರ್ಗತಗೊಳಿಸಿ ಹೂವುಕಂಪು ಹರಡು ವಂತೆ ಅವನು ತಾನು ಸಂತೋಷಪಟ್ಟು ಸುತ್ತಲಿನ ವರಿಗೂ ಸಂತೋಷ ಹಂಚುತ್ತಾನೆ. ಸಕಾರಾತ್ಮಕ ಚಿಂತನೆ ವರ್ತನೆಗಳು ಸದಾನೆಮ್ಮದಿಯನ್ನುಂಟು ಮಾಡುತ್ತದೆ. ರೋಷಾದಿ ಅರಿಷಡ್ವರ್ಗಗಳನ್ನು ದಮನಿಸಿದಾಗ ಸಂತೋಷ ಉಂಟಾಗುತ್ತದೆ. ನೆಮ್ಮದಿ ಭಾವನೆಗಳಲ್ಲಿ ಪ್ರತಿಫಲಿಸಿದಾಗ ಸಂತೋ ಷದ ಸ್ಥಿತಿ ಮೂಡುತ್ತದೆ.
ಮೂರು ದಿನಗಳ ಬಾಳಿನ ಘಮಘಮಿಸಿ ನಗುವ ಹೂ ತಾನು ಅಂದವಾಗಿ ಕಾಣುತ್ತದೆ, ನೋಡುವ ವರಿಗೂ ಆನಂದ ನೀಡುತ್ತಾ ಸೌರಭವನ್ನು ಸುತ್ತ ಮುತ್ತಲಿನವರಿಗೂ ಹಂಚಿ ಆಹ್ಲಾದ ತರುತ್ತದೆ. ಹಾಗೆಯೇ ಸಂತೋಷ ನೆಮ್ಮದಿ ಎರಡೂ ಹಂಚಿದ ಷ್ಟೂಹೆಚ್ಚಾಗುವ ಆಸ್ತಿ. ಇನ್ನು ಮುಂದಾದರೂ ಅವುಗಳನ್ನು ಉಳಿಸಿ ಬೆಳೆಸಿ ಸಮಾಜಕ್ಕೂ ನೀಡೋಣವಲ್ಲವೇ?
✍️ಸುಜಾತಾ ರವೀಶ್, ಮೈಸೂರು
ನ ನ್ನ ಲೇಖನವನ್ನು ಪ್ರಕಟಿಸಿದ ಬ್ಲಾಗ್ನ ಸಂಪಾದಕರಿಗೆ ಅನಂತ ಧನ್ಯವಾದಗಳು
ಸುಜಾತಾ ರವೀಶ್
LikeLiked by 1 person