ಬೆಳಿಗ್ಗೆಯಿಂದ ಮಗು ತುಂಬಾ ಹಟಮಾಡ್ತಾಯಿದೆ, ಅಳು ನಿಲ್ಲಿಸಿಯೇ ಇಲ್ಲ… ಮಗೂಗೆ ದೃಷ್ಟಿಯಾಗಿದೆಯೇನೋ? ಪೊರಕೆ ಕಡ್ಡಿಯಿಂದ ನಿವಾಳಿಸಿ ತೆಗೆದು, ದೃಷ್ಟಿ ಪರಿಹಾರದ ಮಂತ್ರ ಹೇಳಿ ಬಿಡ್ತೀನಿ”ಎನ್ನುವ ಮಾತನ್ನು ನಮ್ಮ ಅಜ್ಜಿ ಹೇಳುತ್ತಿದ್ದುದನ್ನು ಕೇಳಿದ್ದೇನೆ. ನಮ್ಮ ಹಳ್ಳಿ ಯಲ್ಲಿ ಹಾವು-ಚೇಳಿನಿಂದ ಕಚ್ಚಿಸಿಕೊಂಡವರ ಮೈಯಲ್ಲಿನ ವಿಷವನ್ನು ಮಂತ್ರ ಹಾಕಿ ತೆಗೆಯುವು ದನ್ನು, ಗಿಡಮೂಲಿಕೆಯಿಂದ ತಯಾರಿಸಿದ ಔಷಧಿ ಗಳನ್ನು ಮಂತ್ರಿಸಿಕೊಟ್ಟು ರೋಗಪರಿಹಾರ ಮಾಡುವುದನ್ನೂ ನೋಡಿದ್ದೇನೆ.ಬಾಲ್ಯದಿಂದಲೂ ಆರೋಗ್ಯ ಸುಧಾರಿಸಲು, ಭಯ ಪರಿಹಾರವಾ ಗಲು ಮಂತ್ರಿಸಿದ ತಾಯಿತ ಕಟ್ಟಿಕೊಂಡಿರುವವ ರನ್ನು ನೋಡುತ್ತಬೆಳೆದಿದ್ದೇನೆ. ಮೂರು ದಾರಿ ಸೇರುವ ಕಡೆ ಮಂತ್ರಿಸಿದ ವಸ್ತುಗಳನ್ನು ಇಟ್ಟಿರು ತ್ತಾರೆಂದೂ, ಅದನ್ನು ನೋಡಿದಾಗ ತುಳಿಯದೇ- ದಾಟದೇ ಪಕ್ಕದಿಂದ ನಡೆದುಕೊಂಡು ಹೋಗ ಬೇಕು, ಬಾಚಣಿಕೆಯಲ್ಲಿ ಕೂದಲು ಬಿಡಬಾರದು, ಉಗುರುಗಳನ್ನು ಕತ್ತರಿಸಿಕೊಂಡು ಹಾಗೇ ಬಿಡಬಾರದು ಎಂಬ ಅಜ್ಜಿಯ ಎಚ್ಚರಿಕೆಯ ಮಾತುಗಳು ಇಂದಿಗೂ ನೆನಪಿನಲ್ಲಿವೆ. “ನನ್ನ ಅಮ್ಮನಿಗ್ಯಾರೋ ‘ಭಾನಾಮತಿ’ ಮಾಡಿಸಿದ್ದಾ ರಂತೆ, ಅದರಿಂದಾಗಿ ಆಕೆ ತುಂಬಾಸೊರಗಿಹೋಗಿ ದ್ದಾರೆ” ಎಂದು ನನ್ನ ಗೆಳತಿ ಹೇಳಿದಾಗ ಮಂಕಾಗಿ ಮನೆಯ ಮೂಲೆಯೊಂದರಲ್ಲಿ ಕುಳಿತಿದ್ದ ಅವಳ ತಾಯಿಯನ್ನು ನೋಡಿ,“ಅದೆಷ್ಟು ಉತ್ಸಾಹದಿಂದ ಇದ್ದವರು, ನಮ್ಮನ್ನೆಲ್ಲ ಪ್ರೀತಿಯಿಂದ ಕಂಡವರು, ಹೇಗಾಗಿ ಹೋಗಿದ್ದಾರಲ್ಲ”ಎಂದುಅಚ್ಚರಿಗೊಂಡು ನೊಂದಿದ್ದು ಮರೆತಿಲ್ಲ. ಇವೆಲ್ಲ ಅದೆಷ್ಟೋ ವರ್ಷ ಗಳಿಂದ ನಮ್ಮಲ್ಲಿ ಕಂಡುಬಂದು, ರೂಢಿಯಲ್ಲಿ ರುವ ಮಾಟ-ಮಂತ್ರದ ಆಚರಣೆಗಳ ಬಗೆಗಿನ ಮಾತುಗಳು.

ಮಾಟ-ಮಂತ್ರ:

ಪ್ರಕೃತಿಯನ್ನು, ಭೂತಪ್ರೇತಾದಿಗಳನ್ನು ರಹಸ್ಯ ರೀತಿಯಲ್ಲಿ ಅಧೀನ ದಲ್ಲಿಟ್ಟುಕೊಂಡು ಘಟನೆಗಳ ಗತಿಯನ್ನು ಮಾರ್ಪಡಿಸಲಾಗುವುದೆಂಬ ಅಭಿ ಪ್ರಾಯವುಳ್ಳ. ವಿದ್ಯೆಯನ್ನು ಮಾಟಮಂತ್ರವೆಂದು ಅರ್ಥೈಸಲಾಗಿದೆ. ಅನೈಸರ್ಗಿಕ ಅಥವಾ ಅಮಾ ನುಷ ವಿಧಾನಗಳಲ್ಲಿ ನೈಸರ್ಗಿಕ ವ್ಯಾಪಾರ ಗಳನ್ನು ನಿಯಂತ್ರಿಸುವ ಕ್ರಿಯೆಗೆ ಮಾಟವೆಂಬ ಅರ್ಥವೆಂದು ವಿಶ್ವಕೋಶವೊಂದರಲ್ಲಿ ತಿಳಿಸ ಲಾಗಿದೆ. ಕೆಲವೊಂದು ವಿಧಿವಿಧಾನನಗಳ ಮೂಲಕ ಪ್ರಕೃತಿಯ ಶಕ್ತಿಯನ್ನು ವಶಮಾಡಿ ಕೊಂಡು, ತಮ್ಮ ಅಥವಾ ತಮ್ಮವರ ಒಳಿತಿಗಾಗಿ ಇಲ್ಲವೇ ತಮಗಾಗದವರ ನಾಶಕ್ಕಾಗಿ ಬಳಸಿಕೊ ಳ್ಳುವ ತತ್ವ ಮಾಟದಲ್ಲಿ ಕಾಣಿಸಿಕೊಳ್ಳುತ್ತದೆ. ಮಾಟ – ಮಂತ್ರವಿಲ್ಲದ ಜಾಗವಿಲ್ಲ. ಇದು ವಿಶ್ವದ ಎಲ್ಲ ಕಡೆ ಕಂಡುಬರುವ ಪದ್ಧತಿಯಾಗಿದ್ದು,ಬೇರೆ- ಬೇರೆ ರೀತಿಯಲ್ಲಿ ಈ ಮಾಟ-ಮಂತ್ರದ ಆಚರಣೆ ಗಳನ್ನು ಕಾಣಬಹುದಾಗಿದೆ. ಕೆಲವು ಕಡೆ ಇಂಥ ಆಚರಣೆಗಳು ಹೆಚ್ಚಿನ ಮಹತ್ವವನ್ನು ಪಡೆದಿವೆ ಯಾದರೂ, ಕೆಲವು ಕಡೆ ಈ ಎಲ್ಲ ಆಚರಣೆಗ ಳನ್ನು ಕಡೆಗಣಿಸಿದ್ದನ್ನೂ ನೋಡಬಹುದು. ಆದರೆ ಮನುಷ್ಯನ ಬದುಕಿಗೆ ಆಧಾರವಾಗಿರುವ ನಂಬಿಕೆ ಯೇ ಮಾಟ-ಮಂತ್ರದ ಪದ್ಧತಿಗಳಿಗೂ ಮೂಲ ಆಧಾರವಾಗಿದೆ. ಒಬ್ಬ ವ್ಯಕ್ತಿ ತನ್ನ ಮನಸ್ಸಿನ ಇಂಗಿತವನ್ನು ಮತ್ತು ತನ್ನ ಪರಿಸ್ಥಿತಿಯನ್ನು ಮಂತ್ರ ವಾದಿಗೆ ವಿವರಿಸಿ ಅದಕ್ಕೆ ಪರಿಹಾರ ಬೇಡುವುದ ರೊಂದಿಗೆ, ಮಂತ್ರವಾದಿ ನೀಡುವ ಭರವಸೆಯ ಮಾತುಗಳನ್ನು ನಂಬುತ್ತಾನೆ. ಅದರಂತೆ ಕೆಲವು ಮಂತ್ರವಾದಿಗಳು ತಾವು ರೂಢಿಸಿಕೊಂಡಿರುವ ಮಂತ್ರ ಶಕ್ತಿಯಿಂದ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ನಿವಾರಿಸಲು ಪ್ರಯತ್ನಪಡುತ್ತಾರೆ. ಇದರಿಂದ ಜನರ ಪ್ರೀತ್ಯಾದರಗಳನ್ನು ಗಳಿಸಿ ಗೌರವವನ್ನೂ ಪಡೆಯುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಸಂಕುಚಿತ ಮನಸ್ಸಿನ, ದ್ವೇಷ- ಅಸೂಯೆ ತುಂಬಿದ, ಕೀಳರಿಮೆಯನ್ನು ಬೆಳಿಸಿ ಕೊಂಡ, ಸೇಡಿನ ಮನೋಭಾವದ ಜನರು ತಮ್ಮ ಸ್ವಾರ್ಥಕ್ಕಾಗಿ, ಇನ್ನೊಬ್ಬರ ಮೇಲೆ ಸೇಡು ತೀರಿಸಿ ಕೊಳ್ಳಬೇಕೆಂಬ ಉದ್ದೇಶದಿಂದ ಮಾಟ-ಮಂತ್ರ, ವಾಮಾಚಾರದ ಮಾಂತ್ರಿಕರನ್ನು ಸಂಪರ್ಕಿಸು ತ್ತಾರೆ. ಇಂತಹ ಮಾಟ-ಮಂತ್ರಗಳು ರಹಸ್ಯವಾಗಿ ನಡೆಯುವುದಲ್ಲದೇ ಕೆಡುಕನ್ನು ಉಂಟುಮಾಡಿ, ಹಿಂಸಾತ್ಮಕವಾಗಿಯೂ ನಡೆಯುತ್ತವೆ. ಮಂತ್ರ ವಾದಿ, ಅಲೌಕಿಕ ಶಕ್ತಿಯೊಂದನ್ನು ವಶೀಕರಿಸಿ ಕೊಂಡಿದ್ದು, ಆ ಶಕ್ತಿ ಮಂತ್ರವಾದಿಯ ಮಾತು ಕೇಳುತ್ತದೆ ಎಂಬ ನಂಬಿಕೆ ಅವರಲ್ಲಿ ಕಂಡುಬರು ತ್ತದೆ. ಮಾಂತ್ರಿಕರೂ ಕಡಿಮೆ ಸಮಯದಲ್ಲಿ ಸೇಡಿನ ಮನೋಭಾವದವರ ಇಚ್ಛೆಯನ್ನು ನಡೆಸಿಕೊಡುವುದಾಗಿ ಭರವಸೆಯನ್ನು ನೀಡಿ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ. ಮಾಂತ್ರಿಕ ನುಡಿಗಳು, ಅವುಗಳಲ್ಲಿನ ಮಾಂತ್ರಿಕ ಶಕ್ತಿ, ಕೆಲವು ವ್ಯಕ್ತಿಗಳು ಅಂತಹ ನುಡಿಗಳನ್ನು ನುಡಿದಾಗ ಆಗುವ ಪರಿಣಾಮ ಇವೆಲ್ಲವೂ ಮಾಟ-ಮಂತ್ರದಲ್ಲಿನ ನಂಬಿಕೆಯನ್ನು ಗಟ್ಟಿಗೊಳಿ ಸುತ್ತ ಬಂದಿವೆ. ಧರ್ಮದಂತೆಯೇ ವಿಶ್ವದಾದ್ಯಂತ ವೂ ಕಂಡು ಬರುವ ಮಾಟ-ಮಂತ್ರ, ಒಂದೊಂದು ಜನಾಂಗದಲ್ಲಿ ಒಂದೊಂದು ಬಗೆಯಲ್ಲಿ ಕಂಡು ಬರುತ್ತದೆ. ಧರ್ಮದ ರೂಪದಲ್ಲಿರುವ ಜಾನಪದ ಮಾಟ-ಮಂತ್ರದ ಪದ್ಧತಿ, ’ವೂಡೂ’ ಎಂಬ ಸಂಸ್ಕೃತಿಯಾಗಿ ಆಫ್ರಿಕಾದ ಮೂಲ ನಿವಾಸಿಗ ಳಲ್ಲಿ ರೂಢಿಯಲ್ಲಿದ್ದು, ಇಂದಿಗೂ ಅಮೆರಿಕಾದ  ಕೆಲವು ರಾಜ್ಯಗಳಲ್ಲಿ  ಆಚರಣೆಯಲ್ಲಿದೆ. ‘ವೂಡೂ’ ಎಂದಾಕ್ಷಣ ಮಾಟ-ಮಂತ್ರ, ಸ್ಮಶಾನ, ಆತ್ಮಗಳ ಆರಾಧನೆ, ರೌದ್ರ ನರ್ತನ, ಪ್ರಾಣಿಬಲಿ, ಸೂಜಿ ಚುಚ್ಚಿದ ಗೊಂಬೆಗಳು… ಹೀಗೆ ಭಯ ಹುಟ್ಟಿಸುವ ಆಚರಣೆಯಷ್ಟೇ ಆಗಿರದೆ, ಜವಾಬ್ದಾ ರಿಯುತ, ನೋವು ನಿವಾರಕ, ಬದುಕಿಗೆ ವಿಶ್ವಾಸ ನೀಡುವ ಧಾರ್ಮಿಕ ಆಚರಣೆಯಾಗಿ, ಸಕಾರಾ ತ್ಮಕ ನಂಬಿಕೆಗಳನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಹೋಗುವಲ್ಲಿ ಯಶಸ್ವಿ ಯಾಗಿದೆ.

ವೂಡೂ:

’ವೂಡೂ’ ಸಂಸ್ಕೃತಿಯನ್ನು ಪಶ್ಚಿಮ ಆಫ್ರಿಕಾದ ದಾಹೋಮಿಯನ್ ವೊಡನ್ ನಲ್ಲಿ ಬೇರೂರಿರುವ ಆಫ್ರಿಕನ್ ಮೂಲದ ಆಧ್ಯಾತ್ಮಿಕ ಜಾನಪದ ಪದ್ಧತಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ವೂಡೂವಿನ ಮೂಲವನ್ನು ನೂರಾರು ವರ್ಷಗಳ ಹಿಂದಿನಿಂದ ಆಫ್ರಿಕಾದಲ್ಲಿ ಕಾಣಬಹುದಾಗಿದ್ದು ಅಲ್ಲಿನ ಬುಡಕಟ್ಟು ಜನಾಂಗದ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಂದ ’ವೂಡೂ’ ಬೆಳೆದು ಬಂದಿದೆ. ಅಮೆರಿಕಾದಲ್ಲಿ ಲೂಯಿಸಿಯಾನಾ ರಾಜ್ಯ ದಲ್ಲಿ ಹೆಚ್ಚಾಗಿ ಆಚರಣೆಯಲ್ಲಿ ಕಂಡುಬರುವ ಇದು ’ನ್ಯೂ ಆರಲೆನ್ಸ್ ವೂಡೂ’,ಲೂಯಿಸಿಯಾನ ವೂಡೂ’ ಎಂದು ಕರೆಸಿಕೊಂಡು ಇಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ನಿವಾಸಿಗಳಿಂದ ಅಭಿವೃದ್ಧಿಪಡಿಸಿದ ಆಫ್ರೋ-ಅಮೆರಿಕನ್ ಧರ್ಮಗಳ ಸಾಂಸ್ಕೃತಿಕ ರೂಪವಾಗಿದೆ. ಮಿಸ್ಸಿಸ್ಸಿಪ್ಪಿ ಕಣಿವೆಯಲ್ಲಿ ಕಂಡುಬಂದ ಈ ಪದ್ಧತಿಯನ್ನು ’ಮಿಸ್ಸಿಸ್ಸಿಪ್ಪಿ ವೂಡೂ’ ಎಂದೂ ಕರೆಯಲಾಗುತ್ತದೆ. ಆಫ್ರಿಕಾ ದೇಶದ ಜಾನಪದ ಸಂಪ್ರದಾಯವೊಂದು ಅಮೆರಿಕೆಯಲ್ಲಿನೂರಾರು ವರ್ಷಗಳಿಂದ ರೂಢಿಯಲ್ಲಿರುವುದನ್ನು ಈ ದೇಶದ ಇತಿಹಾಸದ ಪುಟಗಳಿಂದ ತಿಳಿದುಕೊಳ್ಳ ಬಹುದು. ಮಿಸ್ಸಿಸ್ಸಿಪ್ಪಿ ಕಣಿವೆಯ ಪ್ರಾಂತ್ಯವು ಫ್ರೆಂಚ್ ವಸಾಹತುಶಾಹಿ ಆಡಳಿತದ ಅಧೀನದಲ್ಲಿ ದ್ದಾಗ ಪಶ್ಚಿಮ ಆಫ್ರಿಕಾದ ನಿವಾಸಿಗಳನ್ನು ಗುಲಾಮರಾಗಿ, ಸೆರೆಯಾಳುಗಳಾಗಿ ಕ್ರಿ.ಶ. ೧೭೧೭ ರಿಂದ ೧೭೨೧ (1717 to 1721) ರವರೆಗೆ ಲೂಯಿಸಿಯಾನಕ್ಕೆ ಕರೆತರಲಾಯಿತೆಂಬ ಮಾಹಿತಿ ದೊರಕುತ್ತದೆ. ಹೀಗೆ ಆಫ್ರಿಕಾದ ಬೇರೆ-ಬೇರೆ ಭಾಗಗಳಿಂದ ಬಂದು ನೆಲೆಸಿದ ಜನರಲ್ಲಿದ್ದ ಸಾಂಸ್ಕೃತಿಕ ಆಚರಣೆಗಳು, ಭಾಷೆಗಳು, ಧಾರ್ಮಿಕ ಆಚರಣೆಗಳು, ಆತ್ಮ ಮತ್ತು ಪೂರ್ವಜರ ಆರಾಧನೆಯಲ್ಲಿ ಬೇರೂರಿದ್ದ ನಂಬಿಕೆಗಳೆಲ್ಲವೂ ಮುಂದುವರೆದು ವೂಡೂ ಸಂಪ್ರದಾಯ ಬೆಳೆದು ಬಂದ ಮಾಹಿತಿಯನ್ನು ನೀಡುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳವುದರೊಂದಿಗೆ ಇತರರಿಗೆ ಹಾನಿ ಮಾಡುವ ಉದ್ದೇಶದಿಂದ ಗಿಡಮೂಲಿಕೆಗಳು, ವಿಷಗಳು, ಮಾಟ-ಮಂತ್ರ, ಮೋಡಿ ಮತ್ತು ತಾಯಿತಗಳ ಬಗ್ಗೆ ತಿಳಿವು ಈ ಜಾನಪದ ಸಂಪ್ರದಾಯದ ಪ್ರಮುಖ ಅಂಶಗಳಾಗಿರುವುದು ತಿಳಿದುಬರುತ್ತದೆ.

ಪೂರ್ವಜರಿಗೆ ಪೂಜೆ ಸಲ್ಲಿಸುವುದನ್ನು ಮತ್ತು ಹಿರಿಯರಿಗೆ ಗೌರವ ನೀಡುವುದನ್ನು ವೂಡೂ ಆಚರಣೆಯಲ್ಲಿ ಕಾಣಬಹುದು. ಗೋಚರ ಮತ್ತು ಅಗೋಚರ ಜಗತ್ತುಗಳು ಒಂದಕ್ಕೊಂದು ಬೆಸೆದು ಕೊಂಡಿರುವ ಬಗ್ಗೆ ನಂಬಿಕೆ ಹೊಂದಿರುವ ವೂಡೂ ವಾದಿಗಳು, ತಮ್ಮ ಪೂರ್ವಜರು ಮರಣ ಹೊಂದಿ ದ ನಂತರ ಗುಪ್ತ ಜಗತ್ತಿನಲ್ಲಿ ಪರಿವರ್ತನೆಗೊಂಡು ತಮ್ಮೊಂದಿಗೆ ಉತ್ಸಾಹ ದಿಂದ ಬೆರೆಯುತ್ತಾರೆ ಎಂದೇ ಪರಿಗಣಿಸುತ್ತಾರೆ. ಪೂರ್ವಜರನ್ನು ಪೂಜಿ ಸುವುದರೊಂದಿಗೆ ವೂಡೂವಾದಿಗಳು’ಲೋವಾ’ ಎಂಬ ಅತಿಮಾನಷ ಚೇತನ(ಆತ್ಮ)ವನ್ನು ಆರಾಧಿಸುತ್ತಾರೆ. ಗೋಚರ ಜಗತ್ತಿನಲ್ಲಿ ತಾವು ಇಚ್ಛಿಸುವ ಕಾರ್ಯಗಳಿಗಾಗಿ ‘ಲೋವಾ’ ಆತ್ಮ ದೊಂದಿಗೆ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತಾರೆ. ಲೂಯಿಸಿಯಾನಾ ವೂಡೂವಿನಲ್ಲಿ ಕ್ಯಾಥೋಲಿಕ್ ಸಂಪ್ರದಾಯದ ಸಂತರನ್ನು ಮತ್ತು ಸೈತಾನರನ್ನು ಪೂಜಿಸುವ ಪದ್ಧತಿ ಕಂಡುಬರುತ್ತದೆ. ಗುಲಾಮ ರಾಗಿ ಅಮೆರಿಕಾಗೆ ಬಂದ ಆಫ್ರಿಕಾ ನಿವಾಸಿಗಳು ಲೂಯಿಸಿಯಾನಾ ರಾಜ್ಯದಲ್ಲಿ ಫ್ರೆಂಚರ ಮಾಲೀ ಕತ್ವದಲ್ಲಿದ್ದ ಕಬ್ಬಿನ ಗದ್ದೆಗಳಲ್ಲಿ ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸಗಾರರಾಗಿದ್ದರು. ಆಫ್ರಿಕಾ ದ ಮೂಲ ನಿವಾಸಿಗಳ ಧರ್ಮ ಮತ್ತು ಮಾಟ- ಮಂತ್ರ ಆಚರಣೆಯ ಬಗ್ಗೆ ತಿಳುವಳಿಕೆಯಿಲ್ಲದ ಫ್ರೆಂಚ್ ಮಾಲೀಕರು,ಅವರಮೇಲೆ ಕ್ಯಾಥೋಲಿಕ್ ನಂಬಿಕೆಗಳನ್ನು ಹೇರಿದ್ದಲ್ಲದೇ ಬಲವಂತದ ಧರ್ಮ ಪರಿವರ್ತನೆಯನ್ನೂ ಮಾಡುತ್ತಿದ್ದರು ಎಂಬ ಮಾಹಿತಿಯಿದೆ. ಇದರಿಂದಾಗಿ ಲೂಯಿಸಿ ಯಾನಾ ವೂಡೂವಿನಲ್ಲಿ ಪಶ್ಚಿಮ ಆಫ್ರಿಕಾದ ಜಾನಪದ ಸಂಪ್ರದಾಯದೊಂದಿಗೆ ಕ್ಯಾಥೋಲಿಕ್ ಧರ್ಮದ ನಂಬಿಕೆಗಳೂ ಬೆಸೆದುಕೊಂಡಿವೆ. ವೂಡೂ ಮತ್ತು ಕ್ಯಾಥೋಲಿಕ್ ನಂಬಿಕೆಗಳನ್ನು ಸಂಯೋಜಿಸಿ ನವೀಕರಿಸಿದ ವೂಡು ಸಂಪ್ರದಾ ಯವನ್ನು ಲೂಯಿಸಿಯಾನಾ ವೂಡೂ ಆಚರಣೆ ಯಲ್ಲಿ ನೋಡಬಹುದು. ಈ ಆಧ್ಯಾತ್ಮಿಕ ಜಾನ ಪದ ಪದ್ಧತಿಯಲ್ಲಿ ಪ್ರಾರ್ಥನಾ ಭಾಷೆಯಾಗಿ ‘ಲೂಯಿಸಿಯಾನ ಕ್ರಿಯೋಲ್’ ಮತ್ತು ‘ಲೂಯಿಸಿಯಾನ ಫ್ರೆಂಚ್’ ಭಾಷೆಗಳನ್ನು ಬಳಸುತ್ತಾರೆ. ವೂಡೂ ನಾಯಕರು ಮತ್ತು ವೂಡೂ ರಾಣಿಯರು ತಮ್ಮ ಸಮುದಾಯಗಳಲ್ಲಿ ಪ್ರಭಾವಿ ಪಾತ್ರವನ್ನು ಪಡೆದು, ಅನೇಕ ಧಾರ್ಮಿಕ ಸಭೆಗಳನ್ನು ಏರ್ಪಡಿಸಿ ಈ ಆಚರಣೆಯನ್ನು ಪ್ರಚಲಿತಗೊಳಿಸಿದ್ದಾರೆ. ಲೂಯಿಸಿಯಾನಾದ ನಿವಾಸಿಗಳು ತಮ್ಮ ದೈನಂದಿನ ಜೀವನದಲ್ಲಿ ತಾಯಿತಗಳ ಬಳಕೆ, ಮಾಂತ್ರಿಕ ಪುಡಿಗಳಿಂದ ಚಿಕಿತ್ಸೆ, ರಕ್ಷಣೆ, ಮಾರ್ಗದರ್ಶನ, ಶತ್ರುಗಳನ್ನು ನೋಯಿಸಲು ಮೋಡಿಯ ಬಳಕೆ ಮತ್ತು ತಮ್ಮ ಪ್ರೀತಿಪಾತ್ರದ ಜೊತೆಗೆ ಸಂಪರ್ಕವನ್ನು ಉಳಿಸಿ ಕೊಳ್ಳುವ ಪ್ರಯತ್ನ, ಹೀಗೆ ಅನೇಕ ಕಾರಣಗಳಿಂದ ವೂಡೂ ಅನುಯಾಯಿಗಳಾಗಿ ಮುಂದುವರೆದ ದ್ದನ್ನು ಕಾಣಬಹುದು.

ನ್ಯೂ ಆರಲೆನ್ಸಿನ ವೂಡೂ ಆಧ್ಯಾತ್ಮಿಕ ದೇವಾಲಯ:

ಈ ದೇವಾಲಯವನ್ನು ಕ್ರಿ.ಶ. ೧೯೯೦(1990) ರಲ್ಲಿ ಉಪಾಸಕ ಓಸ್ವಾನ್ ಚಮಾನಿ ಮತ್ತು ಮಿರಿಯಮ್ ಚಮಾನಿ ಸ್ಥಾಪಿಸಿದರು. ಇದು ನ್ಯೂ ಆರಲೆನ್ಸಿನಲ್ಲಿ ಕಾಂಗೋ ಸ್ಕ್ವೇರ್‌ನ ಪಕ್ಕದ ಲ್ಲಿರುವ ‘ಫ್ರೆಂಚ್ ಕ್ವಾಟರ್’ ಎಂಬ ನಗರದಲ್ಲಿದೆ. ಹಿಂದಿನ ದಿನಗಳಲ್ಲಿ ವೂಡೂ ರಾಣಿ ಮೇರಿ ಲಾವೋ ಮತ್ತು ಇತ್ತೀಚಿನ ವರ್ಷಗಳಲ್ಲಿ ಡಾಕ್ಟರ್ ಜಾನ್ ಅವರು ಕಾಂಗೋ ಸ್ಕ್ವೇರ್‌ನಲ್ಲಿಯೇ ವೂಡೂ ಆಚರಣೆಗಳನ್ನು ನಡೆಸುತ್ತಿದ್ದರು. ವೂಡೂ ಆಚರಣೆಗಳಿಗೆಂದೇ ಸ್ಥಾಪಿಸಿದ ಏಕೈಕ ಆಧ್ಯಾತ್ಮಿಕ ದೇವಾಲಯ ಇದಾಗಿದ್ದು, ನ್ಯೂ ಆರಲೆನ್ಸಿನಲ್ಲಿ ಪ್ರಸ್ತುತ ಸಾಂಪ್ರದಾಯಿಕ ಪಶ್ಚಿಮ ಆಫ್ರಿಕಾದ ಆಧ್ಯಾತ್ಮಿಕ ಮತ್ತು ಗಿಡಮೂಲಿಕೆಗಳ ಚಿಕಿತ್ಸಾ ಪದ್ಧತಿಗಳನ್ನು ಮುಂದುವರೆಸುತ್ತಿದೆ.  

ನ್ಯೂ ಆರಲೆನ್ಸಿನ ಐತಿಹಾಸಿಕ ವೂಡೂ ವಸ್ತುಸಂಗ್ರಹಾಲಯ:

ಲೂಯಿಸಿಯಾನಾ ರಾಜ್ಯದ ನ್ಯೂ ಆರಲೆನ್ಸಿನ ಲ್ಲಿನ. ಐತಿಹಾಸಿಕ ವೂಡೂ ವಸ್ತುಸಂಗ್ರಹಾಲಯ (ಸ್ಥಾಪನೆ:೧೯೭೨), ಸಂಪೂರ್ಣವಾಗಿ ವೂಡೂ ಕಲೆಗೆ ಮೀಸಲಾಗಿರುವ ವಿಶ್ವದ ಕೆಲವೇ ಕೆಲವು ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಇದು ನ್ಯೂ ಆರಲೆನ್ಸಿನ ಪ್ರವಾಸಿ ಆಕರ್ಷಣೆಗಳ ಭಾಗ ವಾಗಿದೆ. ಧರ್ಮದಲ್ಲಿನ ಜನಪ್ರಿಯ ಆಸಕ್ತಿಗಳನ್ನು ಉಳಿಸಿಕೊಂಡು, ಮುಂದುವರೆಸಿಕೊಂಡು ಹೋಗುವುದರೊಂದಿಗೆ ವ್ಯಾಪಾರಿ ಮನೋಭಾವ ವೂ ಸೇರಿಕೊಂಡಿದ್ದನ್ನು ಇಲ್ಲಿ ಕಾಣಬಹುದು. ಮೋಡಿ, ಗ್ರಿಸ್-ಗ್ರಿಸ್ ಚೀಲಗಳು, ಮೇಣದ ಬತ್ತಿ ಗಳು, ವೂಡೂ ಗೊಂಬೆಗಳು ಮತ್ತು ಪುಡಿಗಳನ್ನು ಮಾರಾಟ ಮಾಡುವ ಅಂಗಡಿಗಳು ಪ್ರವಾಸಿಗರು ತಮ್ಮತ್ತ ಆಕರ್ಷಿಸುತ್ತವೆ. ಇಲ್ಲಿನ ವೂಡೂ ಉಪಾ ಸಕ, ವೂಡೂ ಆಚರಣೆಯ ಮಾಹಿತಿಯನ್ನ ಕೊಡುತ್ತಾನೆ.

ಸ್ಮಶಾನ ಪ್ರವಾಸಗಳು:

ವೂಡೂ ವಸ್ತುಸಂಗ್ರಹಾಲಯದ ಹತ್ತಿರದ ಸೇಂಟ್ ಲೂಯಿಸ್ ಸ್ಮಶಾನಕ್ಕೆ ಮತ್ತು  ವೂಡೂ ರಾಣಿ ಮೇರಿ ಲಾವೋ ಸಮಾಧಿಗೆ  ಪ್ರವಾಸವನ್ನು ಒದಗಿಸಲಾಗುತ್ತದೆ. ಈ ಪ್ರವಾಸದಲ್ಲಿ ವೂಡೂ ಆಚರಣೆ ನಡೆಯುತ್ತಿದ್ದ ಕಾಂಗೋ ಸ್ಕ್ವೇರ್ ಮತ್ತು ಇತರ ವೈಶಿಷ್ಟ್ಯಗಳನ್ನು ನೋಡಬಹುದು. ಪ್ರತಿದಿನದ ಪ್ರವಾಸಗಳನ್ನು ನಿಗದಿಮಾಡಲಾಗಿದೆ.

ವೂಡೂ ಮಾಹಿತಿ:

ಈ ವೂಡೂ ವಸ್ತುಸಂಗ್ರಹಾಲಯವು  ವೂಡೂ ಸೇವೆಗಳನ್ನು ನೇರವಾಗಿ ಒದಗಿಸದಿದ್ದರೂ,ಆಸಕ್ತ ರಿಗೆ ಮನೋವೈಜ್ಞಾನಿಕ ವಾಚನ,ಸಮಾಲೋಚನೆ, ವಿಶೇಷ ಗ್ರಿಸ್-ಗಿಸ್ ಮೋಡಿ ಮತ್ತು ಆಚರಣೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ವೂಡೂ ವಾಣಿಜ್ಯೀಕರಣ:

ಜಾನಪದ ಧಾರ್ಮಿಕ ಪದ್ಧತಿಯಾದ ವೂಡೂ ಇಂದಿನ ದಿನಗಳಲ್ಲಿ  ವಾಣಿಜ್ಯೀಕರಣಗೊಂಡಿದೆ. ಮೋಡಿ, ಗ್ರಿಸ್-ಗ್ರಿಸ್ ಚೀಲಗಳು, ಮೇಣದ ಬತ್ತಿ ಗಳು, ವೂಡೂ ಗೊಂಬೆಗಳು ಮತ್ತು ಗಿಡ ಮೂಲಿ ಕೆಗಳ ಪುಡಿಗಳನ್ನು ಮಾರಾಟ ಮಾಡಲಾಗುತ್ತದೆ. ವೂಡೂ ಗೊಂಬೆಗಳನ್ನು ಆಟದ ಗೊಂಬೆಗಳಂತೆ ಮಾರಾಟ ಮಾಡುವುದನ್ನು ನೋಡಬಹುದು. ವಿವಿಧ ಉದ್ದೇಶಗಳನ್ನು ಈಡೇರಿಸಿಕೊಳ್ಳುಲು ಇಚ್ಛಿಸಿ, ಅದಕ್ಕೆಂದೇ ತಯಾರಿಸಿದ ಸಾಮಗ್ರಿಗ ಳನ್ನು(ವೂಡೂ ಕಿಟ್), ವೂಡೂ ಗೊಂಬೆಗಳನ್ನು ಅಂತರ್ಜಾಲದ ಮೂಲಕ ಖರೀದಿಸಬಹುದು. ಮನೆಯಲ್ಲಿಯೇ ವೂಡೂ ಆಚರಣೆ ಕೈಗೊಳ್ಳಲು ಮೇರಿ ಲಾವೋ ಆತ್ಮವನ್ನು ಆಹ್ವಾನಿಸಿ, ಪೂಜಿ ಸುವ ಮಾಹಿತಿಯನ್ನು ನೀಡುವ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ. ವೂಡೂ ಆಚರಣೆಯ ಕೈಪಿಡಿಯನ್ನು ಪೂಜಾ ಸಾಮಗ್ರಿಗಳೊಂದಿಗೆ ಒದ ಗಿಸಲಾಗುತ್ತದೆ. ನ್ಯೂ ಆರಲೆನ್ಸಿನ ಬೇಕರಿ ಮತ್ತು ಉಪಹಾರ ಕೇಂದ್ರಗಳಲ್ಲಿ ವಿವಿಧ ಬಗೆಯ ವೂಡೂ ಸಿಹಿತಿನಿಸುಗಳನ್ನು ಮತ್ತು ವೂಡೂ ಕಾಫಿಯನ್ನೂ ಮಾರಾಟ ಮಾಡಲಾಗುತ್ತದೆ.

ಅಮೆರಿಕದ ಇತರ ರಾಜ್ಯಗಳಲ್ಲಿ ವೂಡೂ ಆಚರಣೆ :

ವೂಡೂ ಆಚರಣೆ  ಮಿಸ್ಸಿಸ್ಸಿಪ್ಪಿ ಕಣಿವೆಯ. ಪ್ರದೇಶ ಮತ್ತು ಲೂಯಿಸಿಯಾನಾ ರಾಜ್ಯಕ್ಕೆ ಸೀಮಿತವಾಗಿಲ್ಲ. ಪಶ್ಚಿಮ ಆಫ್ರಿಕಾ ಮತ್ತು ಹೈಟಿ ಮೂಲದಿಂದ ಬಂದು ಅಮೆರಿಕಾದ ವಿವಿಧ ರಾಜ್ಯ ಗಳಲ್ಲಿ ನೆಲೆಸಿರುವ ಆಫ್ರಿಕನ್-ಅಮೆರಿಕನ್ ಸುಮುದಾಯಗಳಲ್ಲಿ ವೂಡೂ ಸಂಪ್ರದಾಯ ಮತ್ತು ಆಚರಣೆಯನ್ನು ಕಾಣಬಹುದು.

ದಕ್ಷಿಣ ಕೆರೊಲಿನಾ ರಾಜ್ಯದ ಶೆಲ್ಡನ್ ಸಮೀಪದ ’ಓಯೊಂಟುಜಿ’, ಸಾಂಪ್ರದಾಯಿಕ ಪಶ್ಚಿಮ ಆಫ್ರಿಕಾದ ಹಳ್ಳಿಯಾಗಿದೆ. 1970 ರಲ್ಲಿ ವೂಡೂ ಪುರೋಹಿತರಿಂದ ಸ್ಥಾಪಿಸಲ್ಪಟ್ಟ ಈ ಗ್ರಾಮ, ಆಫ್ರಿಕಾದ ಯೊರುಬಾ ಜನರೊಂದಿಗೆ ಸಂಪರ್ಕ ವನ್ನು ಉಳಿಸಿಕೊಳ್ಳುವ ಕುಟುಂಬಗಳ ಗುಂಪನ್ನು ಹೊಂದಿದೆ. ಇಲ್ಲಿನ ನಿವಾಸಿಗಳ ನೈಜೀರಿಯನ್ ಮತ್ತು ಬೆನಿನ್ ಪ್ರದೇಶಗಳ ವಂಶಸ್ಥರಾಗಿದ್ದು, ವೂಡೂ ಆಚರಣೆನ್ನು ಮುಂದುವರೆಸಿಕೊಂಡು ಬಂದಿರುವುದನ್ನು ಕಾಣಬಹುದು.’ಓಯೊಂಟುಜಿ’ ಸಾಂಪ್ರದಾಯಿಕ ಹಳ್ಳಿಯನ್ನು ವೀಕ್ಷಿಸಿಲು ಪ್ರವಾ ಸಗಳನ್ನು ಏರ್ಪಡಿಸಿ, ಅಲ್ಲಿನ ಸಂಸ್ಕೃತಿಯ ಮಾಹಿತಿಯನ್ನು ನೀಡಲಾಗುತ್ತದೆ.

ನ್ಯೂಯಾರ್ಕಿನ ಬ್ರೂಕ್ಲಿನ್, ಹಾರ್ಲೆಮ್ ಮತ್ತು ಕ್ವೀನ್ಸ್ ನ ಕೆಲವು ಭಾಗಗಳಲ್ಲಿ ನೆಲೆಸಿರುವ ಹೈಟಿ ಮೂಲದ ನಿವಾಸಿಗಳು ವೂಡೂ ಸಂಪ್ರದಾಯ ವನ್ನು ಆಚರಿಸುವುದು ಕಂಡುಬರುತ್ತದೆ.ಬ್ರೂಕ್ಲಿನ್ ನಲ್ಲಿರುವ ಮಾಂಬೋಗಳು (ವೂಡೂ ಉಪಾಸ ಕಿಯರು) ಈ ಆಚರಣೆಗಳನ್ನು ಏರ್ಪಡಿಸುತ್ತಾರೆ. ಇಲ್ಲಿನ ಅನೇಕ ವೂಡೂ ಆಚರಣೆಗಳು ವರ್ಣ ರಂಜಿತ ನೆಲಮಾಳಿಗೆಯ ಸಮಾರಂಭಗಳಲ್ಲಿ ರಹಸ್ಯವಾಗಿ ನಡೆಯುತ್ತವೆ. ರೋಸ್ ಮೇರಿ ಪಿಯರೆ ಎಂಬ ಮಾಂಬೊ(ವೂಡೂ ಉಪಾಸಕಿ) ತನ್ನ ನೆಲಮಾಳಿಗೆಯಲ್ಲಿ ವೂಡೂ ಆಚರಣೆ ಮತ್ತು ಭೂತೋಚ್ಚಾಟನೆಗಳನ್ನು ನೆರವೇರಿಸು ತ್ತಾಳೆ ಎಂಬ ಮಾಹಿತಿಯನ್ನು ಮಾಧ್ಯಮದವರು ಸಂಗ್ರಹಿಸಿದ್ದಾರೆ.

ನ್ಯೂ ಆರಿಲೆನ್ಸಿನ ವೂಡೂ ರಾಣಿ ಮೇರಿ ಲಾವೋ ರವರಿಂದ ವೂಡೂ ಅಧ್ಯಯನ ಮಾಡಿದ ಮೇರಿ ಎಲ್ಲೆನ್ ಪ್ಲೆಸೆಂಟ್, 1852ರಲ್ಲಿ ಕ್ಯಾಲಿಫೋರ್ನಿಯ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದರು. ಅಲ್ಲಿ ವೂಡೂ ಆಚರಣೆಯನ್ನು ಮುಂದುವರೆಸಿದರು ಮತ್ತು ನಾಗರಿಕಹಕ್ಕುಗಳ ಹೋರಾಟದಲ್ಲಿ ತಮ್ಮ ನ್ನು ತೊಡಗಿಸಿಕೊಂಡು, ಭೂಗತ ರೈಲ್ರೋಡ್ ವ್ಯವಸ್ಥೆಯ ಮೂಲಕ. ಗುಲಾಮರನ್ನು ಮುಕ್ತ ಗೊಳಿಸಲು ಹೋರಾಡಿದರು. ಇಂದಿಗೂ ಅಲ್ಲಿ ವೂಡೂ ಸಂಪ್ರದಾಯ ಆಚರಣೆಯಲ್ಲಿ ಕಂಡು ಬರುತ್ತದೆ. ಮೇರಿ ಎಲ್ಲೆನ್ ಪ್ಲೆಸೆಂಟರವರ ಸಮಾ ಧಿಯಿರುವ ಸ್ಮಶಾನಕ್ಕೆ ಪ್ರವಾಸಗಳನ್ನು ಏರ್ಪಡಿ ಸಲಾಗುತ್ತದೆ.

ವೂಡೂ ಮಾಟ ಮಂತ್ರವೇ ಅಥವಾ ಧಾರ್ಮಿಕ ಸಂಸ್ಕೃತಿಯೇ?

ಈ ಪ್ರಶ್ನೆಗೆ ಉತ್ತರಿಸುವ ವೂಡೂ ಅನುಯಾಯಿ ಗಳು, ವೂಡೂ ಆಚರಣೆಯನ್ನು ಬರೀ ಮಾಟ- ಮಂತ್ರವೆನ್ನುವುದಿಲ್ಲ.ಗುಲಾಮರಾಗಿ ಅಮೆರಿಕಾಗೆ ಬಂದು ಇಲ್ಲಿ ನೆಲೆಸಿದ ಪಶ್ಚಿಮ ಆಫ್ರಿಕಾದ ಮೂಲ ನಿವಾಸಿಗಳಲ್ಲಿ ರೂಢಿಯಲ್ಲಿದ್ದ ವೂಡೂ,ಆಫ್ರಿಕನ್ ಕ್ಯಾಥೋಲಿಕ್ ಮತ್ತು ಅಮೆರಿಕಾದ ಮೂಲ ನಿವಾಸಿಗಳ ಧಾರ್ಮಿಕ ಸಂಸ್ಕೃತಿಗಳಿಂದ ಮಿಳಿತ ವಾಗಿ ತನ್ನದೇ ಆದ ಆಚರಣೆಗಳನ್ನು ಹೊಂದಿದೆ. ಪಶ್ಚಿಮಆಫ್ರಿಕಾದ ವೂಡೂ,ಲೂಯಿಸಿಯಾನ ವೂಡೂ ಮತ್ತು ಹೈಟಿಯನ್ ವೂಡೂ ಎಂದು ಮೂರುವಿಧಗಳಲ್ಲಿ ಆಚರಿಸಲ್ಪಡುತ್ತಿದೆ. ಆತ್ಮಗಳ ಇರುವಿಕೆಯನ್ನು ನಂಬುವ ಈ ಧಾರ್ಮಿಕ ಸಂಸ್ಕೃ ತಿಯನ್ನು ಪಾಲಿಸುವ  ವೂಡೂ ಅನುಯಾಯಿ ಗಳು, ತಮ್ಮನ್ನು ಆತ್ಮಗಳ ಸೇವಕರೆಂದೇ ನಂಬಿ ದ್ದಾರೆ. ಕ್ಯಾಥೋಲಿಕ್ ಚರ್ಚುಗಳಿಂದ ಸಿಕ್ಕ ಸ್ವೀಕೃ ತಿಯಿಂದ ವೂಡೂ ಆಚರಣೆಯನ್ನು ಧಾರ್ಮಿಕ ಸಂಸ್ಕೃತಿಯೆಂದು ಒಪ್ಪಿಕೊಳ್ಳುವಂತಾಗಿದೆ. ಆದರೂ ‘ವೂಡೂ’ ಎಂದಾಕ್ಷಣ ಮಾಟ-ಮಂತ್ರ, ಸ್ಮಶಾನ, ಆತ್ಮಗಳ ಆರಾಧನೆ, ರೌದ್ರ ನರ್ತನ, ಪ್ರಾಣಿಬಲಿ, ಸೂಜಿ ಚುಚ್ಚಿದ ಗೊಂಬೆಗಳು… ಹೀಗೆ ಭಯ ಹುಟ್ಟಿಸುವ ಆಚರಣೆಯಾಗಿ ಕಂಡು ಬರುತ್ತದೆ. ವೂಡೂ ಅನುಯಾಯಿಗಳು ವೂಡೂ ಗೊಂಬೆಯನ್ನು ಬಳಸಿ ವಾಮಾಚಾರವನ್ನು ಅಭ್ಯ ಸಿಸುತ್ತಾರೆ ಎಂಬ ನಂಬಿಕೆ ಹಲವರಲ್ಲಿದೆ. ಅದಕ್ಕೆ ಪೂರಕ ವಾಗಿ ಹಾಲಿವುಡ್ ನ ಕೆಲವು ಚಿತ್ರಗಳಲ್ಲಿ ವೂಡೂ ಗೊಂಬೆಗಳನ್ನು ಮಾಟಮಂತ್ರಕ್ಕಾಗಿಯೇ ಬಳಸಲಾಗುತ್ತದೆ ಎನ್ನುವಂತೆ ಚಿತ್ರಿಸಲಾಗಿದೆ. ವೂಡೂ ಅನುಯಾಯಿಗಳು ಈ ಅಭಿಪ್ರಾಯ ವನ್ನು ವಿರೋಧಿಸುತ್ತಾರೆ. ಅವರ ನಂಬಿಕೆಯಲ್ಲಿ ವೂಡೂ ಮಾಟ-ಮಂತ್ರವಾಗಿರದೆ, ಜವಾಬ್ದಾರಿ ಯುತ, ನೋವು ನಿವಾರಕ, ಬದುಕಿಗೆ ವಿಶ್ವಾಸ ನೀಡುವ ಧಾರ್ಮಿಕ ಆಚರಣೆಯಾಗಿ, ಸಕಾರಾ ತ್ಮಕ ನಂಬಿಕೆಗಳನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಹೋಗುವಲ್ಲಿ ಯಶಸ್ವಿ ಯಾಗಿದೆ.

   ✍️ಸರಿತಾ ನವಲಿ, ನ್ಯೂಜರ್ಸಿ         
ಅಮೇರಿಕ