ಕನ್ನಡದ ಮಹತ್ವದ ಲೇಖಕಿ ಡಾ.ಎಚ್.ಎಲ್. ಪುಷ್ಪಾರವರ 1992 ರಿಂದ 2020 ರ ವರೆಗಿನ ಸಮಗ್ರ ಕಾವ್ಯವೇ “ಮದರಂಗಿ ವೃತ್ತಾಂತ.” ಇದಕಿಂತ. ಹೆಚ್ಚಾಗಿ ನನಗೆ ನನ್ನ ಹಿರಿಯಣ್ಣ ಆರ್. ಜಿ. ಹಳ್ಳಿ ನಾಗರಾಜರ ಮನ – ಮನೆಯ
ಧರ್ಮ ದೇವತೆ ಇವರಾದ್ದರಿಂದ ನಮಗೆಲ್ಲರಿಗೂ ಪುಷ್ಪಾ ಮೆಡಂ ಎಂದರೆ ಸ್ವಲ್ಪ ಹೆಚ್ಚೇನೆ ಪ್ರೀತಿ – ಗೌರವ ಮತ್ತು ಹೆಮ್ಮೆ.

ಸುಮಾರು 325 ಪುಟ ಗಾತ್ರದ ಈ ಪುಸ್ತಕವನ್ನು
ಕಿರಂ ಪ್ರಕಾಶನ, ಬೆಂಗಳೂರು ಇವರು ಪ್ರಕಟಿಸಿ ದ್ದು ಅಮ್ಮ – ಅಪ್ಪರಿಗೆ ಅರ್ಪಿಸಿದ ಈ ಪುಸ್ತಕದ ಮುಖಪುಟವನ್ನು ಚಿ.ಸು.ಕೃಷ್ಣಸೆಟ್ಟಿ ಸೋಮವ ರದ /ಜಿ.ವಿ.ಧನಂಜಯ ಅತ್ಯಂತ ಸುಂದರವಾಗಿ ರಚಿಸಿರುವರು.

ದೆಹಲಿ, ಸಿಕ್ಕಿಂ, ಭುವನೇಶ್ವರಗಳಲ್ಲಿ ನಡೆದ ರಾಷ್ಟ್ರೀಯ ಕವಿಗೋಷ್ಠಿಯಲ್ಲಿ ಪಾಲ್ಗೊಂಡ ಡಾ. ಪುಷ್ಪಾಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ “ಆಧುನಿಕ ಕನ್ನಡ ನಾಟಕಗಳಲ್ಲಿ ಮೈ ಮನ ಸ್ಸುಗಳ ಸಂಬಂಧ” ಕುರಿತು ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಕವಿತೆಯ ಜೊತೆಗೇ ನಾಟಕ, ವಿಮರ್ಶೆ ಇವರಿಗೆ ಅಚ್ಚು ಮೆಚ್ಚು.“ಅನ್ವೇಷಣೆ” ಸಾಹಿತ್ಯ ಪತ್ರಕೆಯ ಗೌರವ ಸಂಪಾದಕಿ ಇವರು. ಪ್ರಶಸ್ತಿ – ಪುರಸ್ಕಾರಗಳ ಲೆಕ್ಕವಿಲ್ಲ.

ಇವರ ಸಂಕಲನಗಳು:
೧) ಅಮೃತಮತಿ ಸ್ವಗತ
೨) ಗಾಜುಗೋಳ
೩) ಲೋಹದ ಕಣ್ಣು
೪) ಸೋಲಾಬರಸ್ ಹುಡುಗರು ಹಾಗೂ ಎಕ್ಕದ ಬೀಜ

ಮದರಂಗಿ ವೃತ್ತಾಂತ ಸಂಕಲನವು ಒಟ್ಟು ೧೨೪ ಕವಿತೆಗಳನ್ನು ಒಳಗೊಂಡಿದೆ. ಕಾವ್ಯಾಭ್ಯಾಸಿಗಳಿಗೆ ನಿಜವಾಗಿಯೂ ಇದೊಂದು ವಿದ್ವತ್ಪೂರ್ಣ ಮಾರ್ಗದರ್ಶಿಯಾಗಿರುತ್ತದೆ.

ಹಿರಿಯರಾದ ಕಿ.ರಂ. ನಾಗರಾಜ : ಪುಷ್ಪಾ ಅವರ ಕವಿತೆಗಳ ಎಲ್ಲ ಕವಿತೆಗಳಲ್ಲಿ ಹರಿಯುತ್ತಿರುವ ಕಾವ್ಯ ದೃವ್ಯ ಒಂದೇ, ಪ್ರೇಮ, ಮೌನ, ಆಸೆ- ಆಕಾಂಕ್ಷೆ, ಭಗ್ನತೆಯ ಮಧ್ಯೆಯೂ ಹುಟ್ಟುವ
ಆಶಾವಾದ,ನೆನಪುಗಳು – ಮತ್ತೆ ಮತ್ತೆ ಆವರ್ತನ
ಗೊಳ್ಳುತ್ತದೆ……. ಎಂದಿರುವರು.

ಜನಮಾನಸದ ಕವಿ ಡಾ.ಜಯಂತ ಕಾಯ್ಕಿಣಿ :
ನೀವು ಬರೀ ಕಾವ್ಯಗಳ ಕೈ ಹಿಡಿದುಕೊಂಡು ಹೋಗದೇ, ಭಾವದ ಕೈ ಹಿಡಿದು ಹಿಂಬಾಲಿಸಿದಾ ಗೆಲ್ಲಾ ಉತ್ತಮ ಕ್ಷಣಗಳನ್ನು ಗಳಿಸಿಕೊಳ್ಳುತ್ತೀರಿ. ನಿಮ್ಮ ಕವಿತೆಯ ಬೆಳಕು ನಿಮ್ಮ ದಾರಿಯನ್ನು ಬೆಳಗುತ್ತಿರಲಿ, ಒನಕೆಯ ಸದ್ದಿನ. ಭೀತಿಯನ್ನು ಅರಗಿಸಿಕೊಳ್ಳಲು ನಿಮಗೆ ಎದೆಯ. ಹಣತೆಯ ಹಾಡು ಸದಾ ಜತೆಗಿರಲಿ……. ಎಂದಿರುವರು.

ಇವರ ” ಕವಿ ಮತ್ತು ಕಾವ್ಯ” ಕವಿತೆಯ ಕೆಲಸಾಲುಗಳು ಇಂತಿವೆ……

ಎಲ್ಲಾ ಜಾತಿ ಮತ ಭಾಷೆಗಳ
ನಡುವಿನ ಪರವಾನಿಗೆಯೇ ಇಲ್ಲದೆ
ಹಾಡುವ ಹಾಡುಹಕ್ಕಿ ಕವಿಯನ್ನು
ಗಿಳಿಯೆನ್ನಿ, ಕಾಜಾಣವೆನ್ನಿ, ಕೋಗಿಲೆಯೆನ್ನಿ
ಇವನಿಗೆ ಎಲ್ಲಾ ಶರೀರಗಳು
ರಕ್ತಮಾಂಸಗಳಿಂದ
ಸಣ್ಣತನ, ದೊಡ್ಡತನಗಳಿಂದ
ಕೂಡಿದ ರಚನೆಗಳಾಗಿಯೇ ತೋರುತ್ತವೆ
ಅದಕ್ಕೇ ಈ ಹಕ್ಕಿಯಂತ ಕವಿ
ಎಲ್ಲಾ ಸರಹದ್ದುಗಳ ದಾಟಿ
ಮೇರೆಯಿಲ್ಲದ ನಿಸ್ಸೀಮ ಸೀಮೆಗೆ ಸಾಗುತ್ತಾನೆ.

ಎಲ್ಲಿಯವರೆಗೂ ಮಾನವನೆದೆಯಲ್ಲಿ
ಕರುಣೆಯ ಕಡಲು ಕದಲುತ್ತದೋ
ಅಲ್ಲಿಯವರೆಗೆ ಕರುಣೆ, ಸೌಹಾರ್ದತೆ, ಅಂತಃಕರಣ
ಎಂಬ ಪದಗಳಿಗೆ ಜೀವವಿರುತ್ತದೆ
ಆಗ ಕವಿ, ಕಲಾವಿದರೆಲ್ಲಾ
ಕೃತಿಗಳಿಗೆ ಜೀವತುಂಬುತ್ತಾರೆ
ತಮ್ಮ ತಮ್ಮ ತೆವಲನ್ನು ತೊರೆದು
ರಾಮ, ರಹೀಮ, ಕ್ರಿಸ್ತ, ಬುದ್ಧ, ಮಹಾವೀರ –
ಇವರೆಲ್ಲರೂ ಮನುಕುಲದ ವಾರಸುದಾರರಾಗುತ್ತಾರೆ
ಮಾನವೀಯತೆಯ ಬಳ್ಳಿ ಕುಡಿಯೊಡೆಯುತ್ತದೆ
ಬದುಕು ನಂದನವನವಾಗುತ್ತದೆ .

ಇಂತಹ ಸಾಲುಗಳಿಂದ ಒಳಗೊಂಡ ಡಾ. ಪುಷ್ಪಾ ರವರ. ಕವಿತೆಗಳು ಸೀದಾ ಸಾದಾ ಜನರೂ ಅರ್ಥೈಸಿಕೊಳ್ಳಬಹುದಾದ್ದರಿಂದ ಇವರೊಬ್ಬ ಜನ ಪರ ಕವಿ. ಮಾನವೀಯ ಚ ಮನೋಭಾವನೆ, ಮನುಷ್ಯ ಸಂಬಂಧ, ಜನಪರ ನಿಲುವು, ಜಾತಿ ಮತ, ಭಾಷೆಗಳಿಗೂ ಮೀರಿದ ಮಾನವೀಯ ಮೌಲ್ಯ ಇವರ ಕವಿತೆಗಳಲ್ಲಿ ಮಿಂಚುತ್ತಿದ್ದು, ಹೆಣ್ಣಿ ನ ಶೋಷಣೆ, ದಬ್ಬಾಳಿಕೆ, ಬಡತನದ ಬೇಗುದಿ ಗಳ ವಿರುದ್ಧದ ಧ್ವನಿಯೂ ಅಡಗಿದೆ.

ಈ ಒಂದು ಕವನದ ಕಟ್ಟು ಕನ್ನಡದ ಕಾವ್ಯಕ್ಷೇತ್ರ ದಲ್ಲಿ ಮೈಲಿಗಲ್ಲಾಗಲಿ ಎಂದು ಹಾರೈಸುತ್ತಾ, ನಾಗರಾಜಣ್ಣನ ಮನದರಸಿಗೆ ಅಭಿನಂದಿಸಿ “ನಾಗಸುಧೆ” ಯಿಂದ ಶುಭಕೋರುವೆ.

✍️ಪ್ರಕಾಶ ಕಡಮೆ.ನಾಗಸುಧೆ,ಹುಬ್ಬಳ್ಳಿ