‘ಆಧ್ಯಾತ್ಮ’ ಎಂದರೇನು? ಜೀವನದ ಒಂದಲ್ಲ ಒಂದು ಹಂತದಲ್ಲಿ ಎಲ್ಲರಲ್ಲಿಯೂ ಮೂಡುವ, ಕಾಡುವ ಪ್ರಶ್ನೆ ಇದು. ಕೆಲವರಿಗೆ ಇದು ಬೇರೆಯ ದೇ ಒಂದು ಲೋಕ, ಕೆಲವರಿಗೆ ಅದ್ಭುತ ವಿಚಿತ್ರ ಅನುಭವ, ಹಲವರಿಗೆ ಇದೇ ಜೀವನ, ಹಲಕೆಲವ ರಿಗೆ ಇದು ಉದ್ಯೋಗ. ಉತ್ತರ ಕಂಡುಹಿಡಿಯಲು ಕಷ್ಟ ಸಾಧ್ಯವಾದ ಪ್ರಶ್ನೆ. ಬಾಳೆಲ್ಲ ಇದರ ಹುಡುಕಾ ಟದಲ್ಲಿ ಕಳೆದಿದ್ದಾರೆ ಎಷ್ಟೋ ಋಷಿ ಮುನಿಗಳು, ಯೋಗಿಗಳು. ಧರ್ಮವೆಂದರೆ ಆಧ್ಯಾತ್ಮವೇ ಎಂದರೆ ಖಂಡಿತಾ ಅಲ್ಲ. 

ಸಂಸ್ಕೃತಿ ಪರಂಪರೆಗಳಾಗಲಿ, ರೂಢಿಗತ ಮೂಲ ಗತ ನಂಬಿಕೆಗಳು ಆಧ್ಯಾತ್ಮವಾಗಲು ಸಾಧ್ಯವಿಲ್ಲ. ಅವರವರ ಮಿತಿಯಲ್ಲಿನ ಪರಿಭಾವಿಸುವಿಕೆಯಲ್ಲಿ ಇದರ ವ್ಯಾಖ್ಯಾನ ಮಾಡುವವರಿದ್ದಾರೆ.

ಹಾಗಾದರೆ ಆಧ್ಯಾತ್ಮ ಎಂದರೇನು? ಸ್ಥೂಲವಾಗಿ ಹೇಳಬಹುದಾದರೆ ಅಂತರಂಗದ ಅನುಭವ, ಅಂತರ್ಮುಖೀ ಶೋಧನೆ ಹಾಗೂ ಹುಡುಕಾಟ. ಉಪನಿಷತ್ ಗಳ‌‌ ಉದ್ದೃತದಂತೆ “ಆತ್ಮಾನಂ ವಿದ್ದಿ” ನಿನ್ನನ್ನು ನೀನು ಅರಿ. ಆತ್ಮದ ಹಾಗೂ ಪ್ರಪಂಚದ ಪರಸ್ಪರ ಸಂಬಂಧ ಅವಲಂಬನೆ ಅರಿಯುವಿಕೆಯ ನಿರಂತರ ಕ್ರಿಯೆಯೇ ಆಧ್ಯಾತ್ಮ. ಇದು ಆದಿಯೂ ಅಲ್ಲ, ಗಮ್ಯವೂ ಅಲ್ಲ. ಇವೆರಡರ ನಡುವಿನ ಸತತ ಗ್ರಹಿಸುವಿಕೆಯ ಪಯಣ. 

ಆಧ್ಯಾತ್ಮಿಕ ಕೋಶಗಳು: 

 ಉಪನಿಷತ್ತಿನಲ್ಲಿ ಪ್ರೋಕ್ತವಾಗಿರುವ ಕೋಶಗಳ ಆಧಾರದ ಮೇಲೆ ಆಧ್ಯಾತ್ಮಿಕತೆಯನ್ನು ಅರಿಯು ವ ಪ್ರಯತ್ನ ಮಾಡಿದರೆ…ಪ್ರತಿ ‌ ಜೀವಿಯೂ ಐದು ಆಧ್ಯಾತ್ಮಿಕ ಕೋಶಗಳನ್ನು ಹೊಂದಿರುತ್ತಾನೆ.  
(೧) ಬೌದ್ಧಿಕ ಆಯಾಮದ ಅನ್ನಮಯ ಕೋಶ (೨) ಮಾನವೀಯ ಬಯಕೆ ಭಾವನೆಗಳ ಜೈವಿಕ ಪ್ರಾಣಮಯ ಕೋಶ 
(೩) ಇಂದ್ರಿಯಗಳ ಗ್ರಹಿಕೆಗೆ ಸಂಬಂಧಿತ ಮನೋಮಯ ಕೋಶ 
(೪) ಅವೆಲ್ಲಕ್ಕಿಂತ ಅತ್ಯುನ್ನತ ಮಟ್ಟದ ಅಂತರಾ ಳದ ಜ್ಞಾನ, ಅಂತರ್ಬೋಧೆ, ಬುದ್ಧಿಶಕ್ತಿ ಹಾಗೂ ಆಧ್ಯಾತ್ಮಿಕ ವಲಯದ ವಿಶ್ವಸಮಾನತೆಯ ವಿಜ್ಞಾನಮಯ ಕೋಶ
(೫) ಎಲ್ಲಕ್ಕಿಂತ ಮುಖ್ಯವಾದ ಸಂಪೂರ್ಣವಾದ  ಆನಂದ(ತುರೀಯತೆ) ಬೆಳಕಿನ ಆನಂದಮಯ ಕೋಶ. ಒಂದೊಂದೇ ಹಂತಗಳನ್ನು ದಾಟುತ್ತಾ ಉತ್ತುಂಗದಲ್ಲಿರುವ‌‌ ಆನಂದಮಯ ಕೋಶದ ಸಮಾಧಿ ಸ್ಥಿತಿಗೆ ತಲುಪಿಸುವ ಸಾಧನವೇ ಆಧ್ಯಾತ್ಮ.

ಮೋಕ್ಷ ಶಾಸ್ತ್ರದಲ್ಲಿ ಮೂರು ರೀತಿಯ ಪ್ರಪಂಚದ ಬಗ್ಗೆ ಹೇಳುತ್ತದೆ ಆದಿ ಭೂತ, ಆದಿ ದೈವ ಮತ್ತು ಆದಿ +ಆತ್ಮ ಆಧ್ಯಾತ್ಮ. ನಮ್ಮ ಕಣ್ಣಿಗೆ ಕಂಡು ಬರುವ ಈ ಜಗತ್ತು ಪಂಚಭೂತಗಳ ಈ ಲೋಕವೇ ಆದಿ ಭೂತ. ತೋರಿಬರುವ ಸಮಾಜ ವೈಜ್ಞಾನಿಕ, ತಾಂತ್ರಿಕ ಬದಲಾವಣೆಗಳು ಇದರ ಅಂಶಗಳು. ಇಂದ್ರಿಯ ಗೋಚರ ಎನ್ನಬಹುದು. ದೇವತೆಗಳು  ಪರಲೋಕ   ಇವುಗಳ    ಬಗೆಗಿನ ಚಿಂತನೆ ಆದಿದೈವ. ಹಿಂದೆ   ಜೀವನದ    ಹಾಸು ಹೊಕ್ಕಾಗಿದ್ಧ ಈ ಅಂಶ ಈಗ ಹೆಚ್ಚಿನ ಪ್ರಾಮುಖ್ಯ ತೆ  ಆದ್ಯತೆ  ಕಳೆದುಕೊಂಡಿದೆ.

ಆಧ್ಯಾತ್ಮ ಎಂದರೆ ‘ಸಾರ್ವಕಾಲಿಕ ಅಂತರ್ಗತ ಆತ್ಮನ ಬಗ್ಗೆ‘ ಇದು ಇಂದ್ರಿಯಾತೀತವಲ್ಲ, ನಂಬಿಕೆಯೂ ಅಲ್ಲ.  ನಿಜವಾದ ಆತ್ಮನ ಸ್ವರೂಪ ದ ಬಗ್ಗೆ ತಿಳಿಯುವುದೇ ಮಾನವ ಜೀವನದ ಗುರಿ.

 ಚತುರ್ವಿಧ ಪುರುಷಾರ್ಥಗಳು ಮತ್ತು ಆಧ್ಯಾತ್ಮ 

(೧) ಧರ್ಮ:  ಸಮಸ್ತ ಪ್ರಪಂಚವನ್ನು ನೋಡಿ ನಮ್ಮಲ್ಲಿ ಸಂತೋಷ, ಪ್ರೀತಿಯ ಭಾವ ಒಡಮೂ ಡಿದರೆ ಅದುವೇ ಧರ್ಮ. 


(೨) ಅರ್ಥ:  ಅರ್ಥವೆಂದರೆ ಸಮೃದ್ಧಿ, ಸಂಪತ್ತು. ಬದುಕಿಗೆ ಅನ್ನ, ನೀರು, ಗಾಳಿ, ಬೆಳಕು ಎಲ್ಲವೂ ಬೇಕು. ಪಂಚಮಹಾಭೂತಗಳೇ ದೇವರ ಸ್ವರೂ ಪ. ಅಂತರಂಗದಲ್ಲಿ ಧರ್ಮದ ಜ್ಯೋತಿ ಬೆಳಗ ಬೇಕು, ಬಹಿರಂಗದಲ್ಲಿ ಅರ್ಥದ ಹೂವು ಅರಳ ಬೇಕು.

(೩) ಕಾಮ ; ಕಾಮವೆಂದರೆ ಆನಂದ. ಈ ‘ಸತ್ಯಂ ಶಿವಂ ಸುಂದರವಾದ’ ಸೃಷ್ಟಿಯನ್ನು ನೋಡಿ ಆನಂದವಾದರೆ ಅದೇ ಕಾಮ. ಜಗತ್ತಿನ ಒಳಿತನ್ನೆಲ್ಲ ನೋಡಿ ಸಂತಸಪಟ್ಟು ಅದನ್ನು ವ್ಯಕ್ತ ಪಡಿಸುವುದೇ ಮೂರನೇ ಪುರುಷಾರ್ಥ.

(೪)  ಮೋಕ್ಷ : ಮೋಕ್ಷ ಎಂದರೆ ನಿಶ್ಚಿಂತವಾಗಿ ಶಾಂತವಾಗಿ ತಣ್ಣಗಿರುವುದು. ಸುಖ-ದುಃಖ, ಮಾನ- ಅಪಮಾನ, ಸೋಲು-ಗೆಲುವು, ನೋವು- ನಲಿವು, ಕೂಡುವಿಕೆ-ಅಗಲುವಿಕೆ ಈ ಎಲ್ಲಾ ದ್ವಂದ್ವಗಳಿದ್ದರೂ ಕೂಡ ಮನಕ್ಕೆ ತೆಗೆದುಕೊಳ್ಳದೆ ನಿಶ್ಚಿಂತರಾಗಿ ನಗು ನಗುತ್ತಿರುವುದು ಮೋಕ್ಷ. ಇದು ಆನಂದಮಯ ಕೋಶದ ಪ್ರಾಪ್ತಿ, ಆಧ್ಯಾತ್ಮ ದ ಸಿದ್ದಿ.

ಅಧ್ಯಾತ್ಮದ ಅಗತ್ಯತೆ: 

ಸಂಹರಿಸಿದಷ್ಟೂ ಹುಟ್ಟುತ್ತಲೇ ಇರುವ ರಕ್ತ ಬೀಜಾಸುರನ ಸಂತತಿ ಮಾನವ ಮನದ ಬಯಕೆ ಗಳು. “ಅಷ್ಟು ದೊರಕಿದರೆ ಮತ್ತಷ್ಟರಾಸೆ” ಎಂಬ ದಾಸವರೇಣ್ಯರ ನುಡಿಯಂತೆ ಇದು ಅನಂತ .. ಕೊನೆ ಮೊದಲಿಲ್ಲದ ಕಾಮನೆಗಳ ತೃಪ್ತಿಗಾಗಿ ಶರೀರದ ಇಂದ್ರಿಯಗಳನ್ನು ಹಿಂಸಿಸಿ, ದಂಡಿಸಿ, ದುಡಿಸಿ ಮಾನಸಿಕ, ಶಾರೀರಿಕ ವ್ಯಾಧಿ ಗಳಿಗೆ ತುತ್ತಾಗುತ್ತಿರುವ ಈ ಆಧುನಿಕ ಯುಗದಲ್ಲಿ ಆಧ್ಯಾತ್ಮದ ಅರಿವು -ಹರಿವು ಅತ್ಯಂತ ಪ್ರಸ್ತುತ ಪ್ರಮುಖವಾಗುತ್ತದೆ. ಸ್ವಾರ್ಥ ಬಿಟ್ಟು ಆಸೆಗಳನ್ನು ಕಡಿಮೆ ಮಾಡಿಕೊಂಡು ಆತ್ಮತೃಪ್ತಿಯಿಂದ ಪರ ಮಾತ್ಮ ಚಿಂತನೆ, ಸದ್ವಿದ್ಯ ಅಧ್ಯಯನ, ಸದ್ಗ್ರಂಥ ಗಳ ಪಠಣ, ಜ್ಞಾನಿಗಳ. ಸತ್ಸಂಗ, ಪರೋಪಕಾರ ಇವುಗಳಲ್ಲಿ ತೊಡಗಿದರೆ ಅದೇ ಆಧ್ಯಾತ್ಮ ವಿದ್ಯೆ ಯ ಸಂಪಾದನೆ. ಇವೆಲ್ಲವುಗಳ ಅಭ್ಯಾಸ ಆಧ್ಯಾತ್ಮ ವಿದ್ಯೆಗೆ ಮಾತ್ರ ಅಲ್ಲ, ಲೌಕಿಕ ಜಗತ್ತಿನ ನೆಮ್ಮದಿ ಶಾಂತಿಗೂ ಅಷ್ಟೇ ಸಹಾಯಕ.

ಒಟ್ಟಿನಲ್ಲಿ ಆಧ್ಯಾತ್ಮ ಎಂದರೆ ಶಾಶ್ವತ ಸತ್ಯದ ಅನ್ವೇಷಣೆ, ಆತ್ಮದ ಅರಿವು.  ಆತ್ಮ ಅಂದರೆ ಪರಮಾತ್ಮ. ಆತ್ಮದ ಎಡೆಗಿನ ಕೇಂದ್ರೀಕೃತ ಲಕ್ಷ್ಯವೇ ಆಧ್ಯಾತ್ಮ. ಹುಡುಕ ಹೊರಟವರೆಲ್ಲ ಮೊದಲು ಕೇಳಿಕೊಳ್ಳುವುದು ಕೋ ಅಽಹಂ? ಅಂದರೆ ನಾನು ಯಾರು ಎಂದು. ಪ್ರಕೃತಿಯಲ್ಲಿ ಬೆರೆತು ಬಾಳುವುದೇ ಅಧ್ಯಾತ್ಮ. ಇದು ದೇಹ, ಮನಸ್ಸು, ಬುದ್ಧಿ ಶಕ್ತಿಗಳಿಗೂ ಮೀರಿದ ಆಯಾಮ ದ ಅನ್ವೇಷಣೆ ಹಾಗೂ‌ ಸಾಧನೆ. ಇದನ್ನು ಸಾಧಿಸಿ ದವರು ‘ಶಿವೋಽಹಂ’ ಅಂದರೆ ‘ನಾನೇ ಶಿವ’ ಎಂಬ ಅರಿವನ್ನು ಪಡೆಯುತ್ತಾರೆ. ಮಾನವೀಯ ಅರಿವು- ಪ್ರಜ್ಞೆಗಳ ಮೂಲಕ ಕೇಂದ್ರೀಕೃತ ಆತ್ಮದ ಕಡೆಗಿನ ಲಕ್ಷ್ಯವೇ ಆಧ್ಯಾತ್ಮ.

  ✍️ಸುಜಾತಾ ರವೀಶ್, ಮೈಸೂರು