ಅಂದು ರಜಾ ದಿನ. ಗಣಪಿ ಅವಳಮ್ಮ ಗಂಗೆಯ ಜೊತೆಗೆ ಬೇಗನೆ ಎದ್ದಿದ್ದಳು. ಅಮ್ಮ ಮಗಳಿಬ್ಬರು ಒಂದು ಕೈಚೀಲ, ಅದರೊಳಗೊಂದಿಷ್ಟು ಉಪ್ಪು ಹರಡಿಕೊಂಡು ಲಘುಬಗೆಯಿಂದ ಕಾಡಿನೊಳಗೆ ಹೊಕ್ಕರು‌. ಸ್ವಲ್ಪ ದೂರ ಹೋಗುತ್ತಿದ್ದಂತೆ ಗಣಪಿ “ಅಮ್ಮಾ.. ಅಲ್ನೋಡು.. ಆ ಗಿಡದಲ್ಲಿ ದೊಡ್ಡ ‘ಕೊಟ್ಟೆ’ ಇದೆ…” ಎನ್ನುತ್ತಾ ಆ ಕಡೆ ಓಡಿದಳು. ಗಂಗೆಯು ನೋಡಿ ‘ಹೌದಲೇ..! ಎಂದು ಉದ್ಗಾರ ತೆಗೆದಳು. ನಾವು ಹುಡುಕುತ್ತಿದ್ದದ್ದು ಇಷ್ಟು ಬೇಗ ಸಿಕ್ಕಿತಲ್ಲ ಎಂಬ ಖುಷಿ ಅವಳಲ್ಲಿತ್ತು. ಗಂಗೆ ನಿಧಾನವಾಗಿ ಗಿರಿ ಏರಿ, ಆ ಕೊಂಬೆ ಬಾಗಿಸಿ ‘ಕೊಟ್ಟೆ’ ಕೊಯ್ಯುವಾಗ ರಾಶಿ ರಾಶಿ ಚಗಳಿ ಇರುವೆಗಳು ಹೊರಬಂದವು.

ಅರೆಕ್ಷಣದಲ್ಲಿ ಗಂಗೆಯ ಕೈಗಳ ಮೇಲೆ ದಾಳಿ ಮಾಡಲಾರಂಭಿಸಿದವು. ಗಂಗೆಗೆ ಅವುಗಳ ಕಡಿತ ದಿಂದ ಸ್ವಲ್ಪ ನೋವಾದರೂ ಗಮನ ಕೊಡದೇ, ಚಗಳಿ ಇರುವೆಯ ಗೂಡನ್ನು ಚೀಲದೊಳಗೆ ಸುರುವಿದಳು. ರಾಶಿ ರಾಶಿ ಚಗಳಿ ಮೊಟ್ಟೆ ಹಾಗೂ ಇರುವೆಗಳು ಚೀಲದೊಳಗೆ ಇಳಿದವು. ಚೀಲ ದೊಳಗಿನ ಉಪ್ಪಿನ ಶಕ್ತಿಯ ಮುಂದೆ ಸೋತು ಎದ್ದೇಳದೆ ಚೀಲದೊಳಗೆ ಬಿದ್ದವು. ಗಣಪಿ ‘ವ್ಹಾ ಎಷ್ಟೊಂದು ಮೊಟ್ಟೆಗಳಿವೆ’ ಎಂದು ಜಿಗಿದು ಕುಣಿದಾಡಿದಳು. ಬೇಗಬೇಗ ಮನೆಗೆ ವಾಪಾ ಸಾದರು.

ಅಮ್ಮ ಅಡುಗೆಯ ತಯಾರಿ ಶುರುಮಾಡಿದಳು. ಮಧ್ಯಾಹ್ನದ ಹೊತ್ತಿಗೆ ಹದವಾದ ಮಸಾಲೆಯೊಂ ದಿಗೆ ಚಗಳಿ ಚಟ್ನಿ ಸಿದ್ದವಾಯಿತು.ಗಣಪಿ ಇನ್ನೇನು ಊಟಕ್ಕೆ ಕುಳಿತು ಚಗಳಿ ಚಟ್ನಿ ಸವಿಯಬೇಕು ಅನ್ನುವಷ್ಟರಲ್ಲಿ ಅವಳ ಗೆಳತಿ ಕವನ ಅಂಗಳದ ಸರಗೋಲು ಸರಿಸುತ್ತ ‘ಗಣಪಿ..’ ಎಂದು ಕರೆಯುತ್ತ ಮನೆಯೊಳಗೆ ಬಂದಳು. ಗಣಪಿಯು ಖುಷಿಯಿಂದ ಗೆಳತಿಯನ್ನುಬರಮಾಡಿಕೊಂಡಳು. ನನ್ನ ಅಪ್ಪ ಅಮ್ಮ ಇಬ್ಬರೂ ಈಗ ಪೇಟೆಗೆ ಹೋದರು. ಅವರು ವಾಪಾಸು ಬರುವವರೆಗೆ ನಾನು ಇಲ್ಲೇ ಉಳಿಯುತ್ತೇನೆ ಎಂದಳು. ಅದನ್ನು ಕೇಳಿ ಗಣಪಿ ಖುಷಿಪಟ್ಟಳಾದರೂ ಅವಳಿಗೊಂದು ಸಮಸ್ಯೆ ಎದುರಾಯಿತು. ಕವನಳ ಮನೆಯವರು ಚಗಳಿ ಇರುವೆಯ ಚಟ್ನಿ ತಿನ್ನುವುದಿಲ್ಲ‌. ನಾನು ತಿನ್ನುವ ವಿಷಯ. ಕವನಳಿಗೂ ತಿಳಿದಿಲ್ಲ‌. ಈಗ ಕವನ ತಾನು ಊಟ ಮಾಡುವುದನ್ನು ನೋಡಿ ದರೆ ಏನು ಮಾಡುವುದು..? ಎಂದು ವಿಚಾರಕ್ಕೆ ಬಿದ್ದಳು. ‘ಗಣಪಿ ಬಾ ಉಂಡು ಹೋಗು ..’ಎಂದು ಗಂಗೆ ಕೂಗಿದಳು. ತಾನು ‌ಒಳಹೋದರೆ ಕವನಳು ಬರುತ್ತಾಳೆ.. ಎಂದುಕೊಂಡು ‘ನಂಗೆ ಈಗ ಊಟ ಬೇಡ’ ಎಂದು ಕೂಗಿದಳು. ಆಗ ಗಂಗೆ ದೊಡ್ಡ ಧ್ವನಿಯಲ್ಲಿ ‘ಅಲ್ವೇ ಗಣಪಿ‌ ನೀನು ಆಸೆ ಪಟ್ಟೆ ಅಂತಾನೇ… ಇವತ್ತು ಚಗಳಿ ಚಟ್ನಿ ಮಾಡಿದ್ದು. ಈಗ ನೀನೆ ಊಟ ಬೇಡ ಅಂದ್ರೆ ಹೆಂಗೆ..!?’ ಎಂದು ಕೇಳುತ್ತಾ ಹೊರಬಂದಳು. ಗಣಪಿ ಕಣ್ಸನ್ನೆ ಮಾಡಿದರೂ ಗಂಗೆಯ ಮಾತು ನಿಲ್ಲಲಿಲ್ಲ.

ಕವನ ಗಂಗೆಯ ಬಳಿ ಚಗಳಿ ಚಟ್ನಿ ಎಂದ್ರೇನು? ಎಂದು ಕೇಳಿದಳು. ನಾವು ಆಗಾಗ ಚಗಳಿ ಇರುವೆಗಳ ಕೊಟ್ಟೆ ತಂದು ಚಟ್ನಿ ಮಾಡುತ್ತೇವೆ ಎಂದಳು. ಕವನಳಿಗೆ ಚಗಳಿ ಇರುವೆ ತಿನ್ನುವುದು ಅಚ್ಚರಿಯ ಸಂಗತಿಯೇನಿಸಿದರೂ ಗಣಪಿಯತ್ತ ತಿರುಗಿ ‘ನಿಮ್ಮ ಆಹಾರ ಪದ್ದತಿ ನಿಮ್ಮದು. ನಮ್ಮ ಆಹಾರ ಪದ್ದತಿ ನಮ್ಮದು. ನಾನೇನು ಅಂದುಕೊಳ್ಳಲ್ಲ ಬಾ.. ಊಟ ಮಾಡು. ನಾನು ಕುಳಿತಿರುತ್ತೇನೆ ..’ ಎಂದು ಕರೆದಳು. ಗಣಪಿ ಸಂತಸದಿಂದ ಅವಳೆಡೆಗೆ ಕೈ ಚಾಚಿದಳು. ಊಟ ವಾದ ಮೇಲೆ ಯಾವ ಆಟ ಆಡುವುದು ಎಂದು ಇಬ್ಬರೂ ಚರ್ಚಿ ಸುತ್ತಾ ಒಳಮನೆಗೆ ತೆರಳಿದರು.

    ✍️ರೇಖಾ ಭಟ್, ಹೊನ್ನಗದ್ದೆ