ಸುಳ್ಳಿನ ನಂಜು ನೆತ್ತಿಗೇರಿದೆ ಈಗ
ಗವ್ವೆಂಬ ಕತ್ತಲು ಹೆಗಲಿಗೇರಿದೆ ಈಗ

ಚಿಲಿಪಿಲಿ ಹಕ್ಕಿಗಳು ದಿಕ್ಕೆಟ್ಟು ಹಾರಿವೆ
ಒಂಟಿ ಗೂಬೆ ಮುಗಿಲಿಗ್ಹಾರಿದೆ ಈಗ

ವಿಷಮಗಾಳಿ ಎಲ್ಲಿಂದಲೋ ಬೀಸಿದೆ
ಸ್ಮಶಾನದ ಕೂಗು ಹೆಡೆಯೇರಿದೆ ಈಗ

ಬೆಂಕಿ ಪಟ್ಟಣ ಹಾಸಿಗೆ ಚಾಪೆ ಏನಿಲ್ಲ
ಕಂಪಿಸುವ ಯಾತನೆ ಮಿತಿಮೀರಿದೆ ಈಗ

ಬೇಡವೆ ಬೇಡ ಸುಳ್ಳಿನ ಸಹವಾಸ “ಜಾಲಿ”
ಮನವೆ ಮುಳ್ಳುಗಳಾಗಿ ರಕ್ತಚೀರಿದೆ‌ ಈಗ

✍️ವೇಣು ಜಾಲಿಬೆಂಚಿ, ರಾಯಚೂರು.