ಸೋತಿದೆ ಮನಸು
ನಮ್ಮವರಿಲ್ಲದೆ
ಬದುಕು ಮುರುಟಿದೆ ಬಲವಿಲ್ಲದೆ /
ಪ್ರಾರಬ್ಧವಂತೆ
ಕರ್ಮ ಫಲವಂತೆ
ದೇವನ ಅಣತಿಯೆ ಹೀಗಂತೆ //೧
ಹುಸಿತನದ ಯೂಹ
ಹಸಿವಿನ ದಾಹವು
ಸಮರಕೆ ನಾಂದಿಯು ಜೊತೆ ಜೊತೆಗೆ /
ಮೊದಲೆಂಬುದಿಲ್ಲ
ಕೊನೆಯಾಗಲಿಲ್ಲ
ಜಾತಿಯ ಅಂಟು ಬಿಡಲೊಲ್ಲದು //೨
ಜೀವಂತ ಇನ್ನು
ಶ್ರಮಿಕರ ಬದುಕು
ಮೂಢತೆ ದಾಸ್ಯತೆಯೆ ಶಾಪವು /
ಭದ್ರತೆ ಇಲ್ಲದೆ
ಸುಭಿಕ್ಕೆ ಕಾಣದೆ
ನರಳುತ್ತಿದೆ ಒಳಹೊರಗೆ ಜಗ //೩
ಕಾಣದು ಕಣ್ಣಿಗೆ
ಕೇಳದು ಕಿವಿಗೆ
ಅರಿಯಲು ಹೃದಯವೆ ಇಲ್ಲವಾಗಿ /
ಉಸಿರಾಡುತ್ತಿದೆ
ಬಿರಿಯ ನಡುವಿನಲಿ
ಆಸರೆಯಿರದೆ ಅನಾಥ ನರ //೪
ಅನಂತ ಅದ್ವರ
ಪರಿಹಾರ ಕೊಡದೆ
ಅನವರತ ಶೋಷಣೆ ತೋರಿದೆ /
ಶುಭತನವು ಪುಂಗಿ
ಉಪದೇಶ ನನ್ನಿ
ಯಾತನೆಯು ಶಾಶ್ವತವು ನಮಗೆ //೫
(ಈ ಪದ್ಯವು ಶರ ಷಟ್ಪದಿಯಲ್ಲಿ ರಚಿಸಲಾಗಿದೆ)
✍️ಡಾ.ನವೀನ್ ಕುಮಾರ್ ಎ.ಜಿ
ಶಿಕ್ಷಕರು,ಯಲ್ಲಾಪುರ
ನಿಜ ನೈಜತೆಗೆ ಹಿಡಿದ ಕನ್ನಡಿ ಸರ್
LikeLike