ನನ್ನ ಪ್ರಕಾರ ನಮ್ಮ ಪ್ರವಾಸಗಳು ಯಾವಾಗಲೂ ನಮ್ಮದೇ  ಆಗಿರಬೇಕು. ಮತ್ತೆ..ನಮ್ಮ ಪ್ರವಾಸಗ ಳೆಲ್ಲ ಇನ್ಯಾರದು..? ಕೇಳುತ್ತಿದ್ದೀರಾ? ಓ ಕೆ..ಓ ಕೆ.. ಅಂದರೆ, ಈ ‘ಮೂರು ದಿನಗಳಲ್ಲಿ ಉತ್ತರಭಾರತ ದರ್ಶನ, ಆರು ದಿನಗಳಲ್ಲಿ ಯುರೋಪ್ ಪ್ರವಾಸ’ ಎಂದು ನಸುಕಿನಿಂದ ತಡರಾತ್ರಿಯವರೆಗೆ ಒಂದೇ ಸಮನೆ ಒಂದಾದ ಮೇಲೆ ಇನ್ನೊಂದು ಸ್ಥಳಗಳಿಗೆ ಹೋಗುತ್ತ   ಉಸಿರಾಡಲೂ     ಆಸ್ಪದವಿಲ್ಲದಂತೆ ಎರಡು  ಮೂರು  ದಿನಗಳಲ್ಲೇ  ಸಾಕಪ್ಪಾ  ಮನೆಗೆ ಹೋದರೆ  ಸಾಕಾಗಿದೆ  ಎನ್ನಿಸಿ  ಬಿಡುವ   ಟೂರ್ ಎಂಡ್ ಟ್ರಾವಲ್ಸ್  ಕಂಪನಿಗಳ ಥರದ ಧಾವಂತದ ಯಾತ್ರೆಗಳಾಗಬಾರದು.  ಹಾಗಂತ  ಅವರ ಮೇಲೆ ನನಗೇನೂ  ಹಿಂದಿನ  ಜನ್ಮದ  ದ್ವೇಷದ  ಸೀನುಗ ಳೆಲ್ಲ  ಇಲ್ಲ. ಅದು  ಅವರ  ಉದ್ಯೋಗ    ಮತ್ತು ಕಾರ್ಯಶೈಲಿ.

ಈ ಪೂರ್ವ ನಿರ್ಧಾರಿತ  ಟ್ರಿಪ್ ಗಳು  ಸಮಯದ ಉಳಿತಾಯವನ್ನೇನೋ    ಮಾಡುತ್ತವೆ    ಆದರೆ ನಿಜವಾದ ಪ್ರವಾಸದ ಅನುಭವಗಳಿಂದ ವಂಚಿತ ವಾಗಿಸುತ್ತವೆ. ಇನ್ನು ಹಣದ ವಿಷಯಕ್ಕೆಬಂದರೂ ಅಂಥ  ದೊಡ್ಡ  ವ್ಯತ್ಯಾಸ  ಆಗಲಾರದು.  ಅದು ನೀವು ಮಾಡುವ ತಯಾರಿ ಮತ್ತು ಯೋಜನೆಗಳ ಮೇಲೆ ಅವಲಂಭಿಸಿದೆ. ಉದಾಹರಣೆಗೆ, ಸ್ಟಾರ್ ಹೋಟೆಲ್ ಗಳ ಬದಲು ಹೋಮ್ ಸ್ಟೇ ಗೆ, ಓಡಾ ಡಲು  ಸರಕಾರಿ  ಬಸ್ಸು,   ರೈಲು,  ಮೆಟ್ರೊಗಳನ್ನು ಬಳಸುವದು, ಈ ಥರ ಬಜೆಟ್ ಟ್ರಾವಲ್ ಮಾಡು ವವರು   ಮತ್ತು   ಅದರ  ಬಗ್ಗೆ    ಮಾರ್ಗದರ್ಶನ ಮಾಡುವವರ ದಂಡೇ ಅಂತರ್ಜಾಲದಲ್ಲಿದೆ. ಸ್ವಲ್ಪ off beat.  (ಅಷ್ಟೊಂದು   ಜನಪ್ರಿಯವಲ್ಲದ, ಸದ್ದಿರದ  ಪಸುರುಡೆಯ  ಮಲೆನಾಡ ಬನಗಳಲಿ, ಮೊರೆವ ತೊರೆಗಳೆಡೆಯ) ಜಾಗಗಳನ್ನು   ಆಯ್ದು ಕೊಂಡರಂತೂ  ಅತಿ  ಕಡಿಮೆ  ಖರ್ಚಿನಲ್ಲಿ   ಜೀವ ಮಾನದ ಅದ್ಭುತ ಕ್ಷಣಗಳನ್ನು, ಅನುಭವಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಒಳ್ಳೆಯ ಪ್ರವಾಸವೆಂದರೆ ನೀವು ಹೋಗುವ ಸ್ಥಳ ದಲ್ಲಿ ಉಳಿದುಕೊಂಡು ಸ್ಥಳೀಯ ಜನರೊಂದಿಗೆ ಬೆರೆತು,  ಅಲ್ಲಿಯ  ಸಂಸ್ಕೃತಿ,  ಭಾಷೆ,  ಆಚಾರ- ವಿಚಾರ, ಆಹಾರ-ವಿಹಾರಗಳನ್ನು ಅರಿಯುವದು ಮತ್ತು  ಅನುಭವಿಸುವದು. ಹೋಗುವ  ಸ್ಥಳಗಳ ಸುರಕ್ಷತೆ,ನಿಮ್ಮಆಸಕ್ತಿಗನುಗುಣವಾಗಿ ನೋಡುವ ಜಾಗಗಳು  ಮತ್ತು  ಸಂಪರ್ಕ  ವ್ಯವಸ್ಥೆಯ    ಬಗ್ಗೆ ಮೊದಲೇ   ಅರಿತುಕೊಂಡು, ಮೊದಲು   ಹೋದ ಪ್ರವಾಸಿಗರ    ಅನಿಸಿಕೆಗಳನ್ನು   ತಿಳಿದುಕೊಂಡು ಹೋದರೆ ನಿಮ್ಮ ಅರ್ಧ ಸಮಸ್ಯೆ ನಿವಾರಣೆಯಾ ದಂತೆ.  ಇನ್ನುಳಿದಿರುವದು   ನಿಮ್ಮ ಆತ್ಮ ವಿಶ್ವಾಸ ಮತ್ತು    ಧೈರ್ಯ.    ಅದು    ಮದುವೆಯಾಗದೇ ಹುಚ್ಚು ಬಿಡದು ; ಹುಚ್ಚು ಬಿಡದೇ ಮದುವೆಯಾ ಗದು.   ಅಂದಹಾಗೆ,  ಈಗ   ಹೊಸದಾಗಿ  ಬೇಕೇ ಬೇಕಾಗಿರುವದು ಕೋವಿಡ್ ಸುರಕ್ಷತಾ ಕ್ರಮಗಳು ಮತ್ತು   ವ್ಯಾಕ್ಸಿನೇಶನ್. ಯಾರಿಗ್ಗೊತ್ತು..    ಕಲ್ ಹೊ..ನ..ಹೊ.     ಕೈಲಿರುವ   ಕ್ಷಣಗಳು    ಮಾತ್ರ ನಿಮ್ಮದು. ( ಹುಟ್ಟು ಪ್ರವಾಸಿಗರನ್ನು ಕಟ್ಟಿಹಾಕಿದ ಕೋವಿಡ್ ಅವರನ್ನೆಲ್ಲ ತತ್ವಜ್ಞಾನಿಗಳು, ಸಿನಿಕರ ನ್ನಾಗಿಸುವ ಮೊದಲು, ಪ್ಯಾರಿಸ್ ಗೆಮರಳೋಣ.)

ನಮ್ಮ ಬೃಹತ್ ನಗರಗಳಿಗೆ ಹೋಲಿಸಿದರೆ ತುಂಬ ಚಿಕ್ಕದಾದ, ಬಹುತೇಕ  ಕಾಲ್ನಡಿಗೆಯಲ್ಲೇ  ಸುತ್ತಬ ಹುದಾದ ಪ್ಯಾರಿಸ್ ನಲ್ಲೇ ತುಂಬ ಸಮಯದಿಂದ ಸುತ್ತುತ್ತಿದ್ದೇವೆ.  ಅದಕ್ಕೇ  ಈ ಸಲ ಮನಮೋಹಕ ವಾದ    ಪ್ರಾಕೃತಿಕ   ಸೌಂದರ್ಯದಿಂದ     ಮತ್ತು ವಿಸ್ತಾರವಾದ ದ್ರಾಕ್ಷಿತೋಟಗಳಿಂದ ಕಂಗೊಳಿಸು ವ ಫ್ರೆಂಚ್ ಕಂಟ್ರಿ ಸೈಡ್ ಗೆ   (ನಗರದ ಹೊರತಾಗಿ ಹಳ್ಳಿ ಪ್ರದೇಶಗಳಿಗೆಲ್ಲ ಕಂಟ್ರಿ ಸೈಡ್ ಎನ್ನುತ್ತಾರೆ) ಹೋಗೋಣ.

ಪ್ರಾನ್ಸ್ ತನ್ನ ಉತ್ಕೃಷ್ಟ ವೈನ್ ಮತ್ತು ಶಾಂಪೇನ್ ಗಾಗಿ ವಿಶ್ವ ವಿಖ್ಯಾತವಾಗಿದೆ. ಅಷ್ಟೇ ಅಲ್ಲ..ಅದರ ಜೊತೆಗೆ  ವೈನ್ ಟೂರಿಸಂ  ಅನ್ನೂ   ಜನಪ್ರಿಯ ಗೊಳಿಸಿದೆ.ಬೋರ್ಡೊ, ಬರ್ಗಂಡಿ, ಶಾಂಪೇನ್ ಮೊದಲಾದ ಅದ್ಭುತವಾದ ವೈನ್ ತಯಾರಿಸುವ ದ್ರಾಕ್ಷಿ  ಬೆಳೆಯುವ  ಸ್ಥಳಗಳಿಗೆ ಪ್ಯಾರಿಸ್ ನಿಂದ ಟೂರ್ ಗಳಿವೆ.  ನಾವು   ಹೋಗಿದ್ದು   ಫ್ರಾನ್ಸ್ ನ ದಕ್ಷಿಣಭಾಗದಲ್ಲಿರುವ ಪ್ಯಾರಿಸ್ ನಿಂದ ಸುಮಾರು ಆರುನೂರು ಕಿಲೋಮೀಟರಗಳ ದೂರದಲ್ಲಿರುವ ಬೋರ್ಡೊ(Boudreaux) ಎಂಬ ಫ್ರೆಂಚ್ ವೈನ್ ಕ್ಯಾಪಿಟಲ್ ಗೆ.

ಇಳಿಸಂಜೆಯ ಹೊತ್ತಲ್ಲಿ, ನಮ್ಮನ್ನು ಹೊತ್ತು ಏರ್ ಫ್ರಾನ್ಸ್ ನ ವಿಮಾನವೊಂದು, ಒಂದೂವರೆ ಗಂಟೆ ಯೊಳಗೆ ಯಾವುದೋ ಮಧ್ಯಯುಗ   ಕಾಲದ    ಪುರಾತನವಾದ  ಸುಂದರ ಪಟ್ಟಣದಂತೆ ಕಾಣುವ ಬೋರ್ಡೊ ನಲ್ಲಿ ಇಳಿಸಿತು.  ಅಲ್ಲಿಂದ  ನಮ್ಮನ್ನು ಕರೆದುಕೊಂಡು,  ಹೋಟೆಲ್ ಆಗಿ ಮಾರ್ಪಡಿಸಿದ ಒಂದು  ಅತಿ  ಸುಂದರ  ಶಾಟೋ (chateau) ನಲ್ಲಿ ತಂಗಲು ಒಂದು ರಾಯಲ್ ಸ್ವೀಟ್ (ಮತ್ತೆ ಇದು ಯಾವ ಸಿಹಿ ತಿಂಡಿಯೂ ಅಲ್ಲ, (suite.. ಅಂದರೆ  1 bhk room in hotel) ಕೊಟ್ಟರು. ಅಂದಹಾಗೆ  ನಮ್ಮಲ್ಲಿನ   ಐಶಾರಾಮಿ   ಮಹಲು ಗಳು   ಇಂಗ್ಲೆಂಡಿನಲ್ಲಿ   ಕ್ಯಾಸೆಲ್    (castle) ಆದರೆ ಫ್ರಾನ್ಸನಲ್ಲಿ  ಶಾಟೋ ಆಗುತ್ತದೆ.ಇಂಥಹ ಸುಮಾರು  40,000  ಶಾಟೊಗಳು  ಫ್ರಾನ್ಸನೆಲ್ಲೆಡೆ ಇವೆ.  ಕೆಲವು ಸುಂದರ ಮಹಲುಗಳು ಹೋಟೆಲ್ ಗಳಾಗಿ, ಐಶಾರಾಮಿ ವಸತಿಗೃಹಗಳಾಗಿ ಬದಲಾಗಿ ವೆ.  ಬಹಳಷ್ಟು  ಮನೆಗಳು  ಸಂಪರ್ಕದ   ಕೊರತೆ ಮತ್ತು  ಹಣಕಾಸಿನ  ಸಮಸ್ಯೆಯಿಂದಾಗಿ   ಪಾಳು ಬಿದ್ದವೆ.  ಇತ್ತೀಚೆಗೆ   ಹಳೆಯ     ವಾಸ್ತುಶಿಲ್ಪದಲ್ಲಿ ಆಸಕ್ತಿಯಿರುವ  ಸಾಹಸೀ  ಯುವಕ/ಯುವತಿಯ ರು ಅವುಗಳನ್ನು ಕೊಂಡು ಪುನರುಜ್ಜೀವನಗೊಳಿ ಸಿ ಅಲ್ಲಿ ತಮ್ಮ ಕನಸಿನ ಜೀವನ ನಡೆಸುತ್ತಿದ್ದಾರೆ.

ಮರುದಿನ ಬೆಳಿಗ್ಗೆ ಯಾವ ನಿಗದಿತ ಕಾರ್ಯಕ್ರಮ ವೂ  cಇಲ್ಲದ್ದರಿಂದ  ಸಿಟಿ   ಸೆಂಟರ್   ನೋಡಲು ಟ್ರಾಮ್  ಹಿಡಿದು   ಹೊರಟೆವು.  ನಿಜವಾಗಿಯೂ ಈಪಟ್ಟಣದಲ್ಲಿ ಕಾಲಸ್ಥಗಿತಗೊಂಡಿದೆ. ಟ್ರಾಮ್ ನ ಟಿಕೆಟ್  ಮಶಿನ್ ನೋಟು ತೆಗೆದುಕೊಳ್ಳುವದೇ  ಇಲ್ಲ.  ಮೂಕಿ-ಟಾಕಿಯಲ್ಲೇ   ಡ್ರೈವರ್ ನಿಂದ ಈ ವಿಷಯ ತಿಳಿದು ನಾಣ್ಯ ಹಾಕಿ ಟಿಕೆಟ್ ತೆಗೆದುಕೊ ಳ್ಳುವಷ್ಟರಲ್ಲಿ     ಟ್ರಾಮ್    ನಿಂತಿತು.  ಎಲ್ಲರೂ    ಇಳಿಯುತ್ತಿದ್ದಾರೆ.  ಆಸುಪಾಸು   ಸಿಟಿ ಸೆಂಟರೂ   ಕಾಣುತ್ತಿಲ್ಲ.   ಇಳಿಯುವವರೆಲ್ಲ   ಕುಳಿತೇ    ಇದ್ದ   ನಮ್ಮನ್ನು ನೋಡಿ ಫ್ರೆಂಚ್ ನಲ್ಲಿ  ಏನೋ   ಹೇಳು ತ್ತಿದ್ದಾರೆ.   ನಮಗೋ ..  ಈ    ಹಳ್ಳಿ       ಕಡೆಯ ಫ್ರೆಂಚ್ ರು   ಎಷ್ಟೊಂದು   ಸ್ನೇಹಿಗಳು   ಪ್ಯಾರಿಸ್ ನಂತಲ್ಲ ಎಂದು ಖುಷಿಯೋ ಖುಷಿ.

ಎಷ್ಟೋ ಹೊತ್ತಿನ ಮೇಲೆ ಒಬ್ಬ ಪುಣ್ಯಾತ್ಮನಿಂದ ಟ್ರಾಮ್   ಹಾಳಾಗಿದೆ..  ಮುಂದೆ  ಹೋಗಿ   ಬೇರೆ ಟ್ರಾಮ್  ಹತ್ತಬೇಕೆಂದು   ಗೊತ್ತಾಯ್ತು! ಅದನ್ನೇ ಎಲ್ಲರೂ ಹೇಳುತ್ತಿದ್ದಿದ್ದು! ಅಂತೂ ಸಿಟಿ ಸೆಂಟರ್ ತಲುಪಿ  ಸುಂದರವಾದ  ಬೀದಿಗಳಲ್ಲೆಲ್ಲ  ಓಡಾಡಿ, ಒಂದು ಚಿಕ್ಕ ಬುಟ್ಟೀಕ್ ಒಂದರಲ್ಲಿ ಕಂಡ ಸುಂದರ ಓವರ್ ಕೋಟ್ ಒಂದನ್ನು ಕಂಡು ಆಸೆಯಿಂದ ನಮ್ಮ    ಬಡ್ಜೆಟ್ ನಲ್ಲಿ    ಬಂದರೆ     ಖರೀದಿ ಮಾಡೋಣ   ಎಂದು   ಒಳನುಗ್ಗಿ ದರ ಕೇಳಿದೆ.. ಮಾಲಿಕ ವಯಸ್ಸಾದ ಫ್ರೆಂಚ್ ಜೆಂಟಲ್ ಮ್ಯಾನ್. ಹಸನ್ಮುಖನಾಗಿ 40 ಯುರೋಗಳು ಅಂದ. ನಾನು ಒಂದು ಕ್ಷಣವೂ ವಿಳಂಬಿಸದೇ 25 ಯುರೋಗೆ ಕೊಟ್ಟರೆ ತಗೋತೀನಿ ಅಂದು ಬಿಟ್ಟೆ. (ಇದೆಲ್ಲವೂ ಮುಕ್ಕಾಲುಪಾಲು ಸನ್ನೆಯಲ್ಲಿಯೇ ನಡೆದದ್ದು) ಈ ತರದ್ದೊಂದು ಚೌಕಾಶಿಯನ್ನು ಜನ್ಮದಲ್ಲೇ ನೋಡಿರದಿದ್ದ ಅವನ ಮುಖದ ಆ ಗಲಿಬಿಲಿಗೊಂಡ ಅದ್ಭುತ ಭಾವವನ್ನು ಇಂದಿಗೂ ಮರೆಯಲಾರೆ.    ಈಗೀಗ    ಸುಮಾರಾಗಿ   ಎಲ್ಲ ಯುರೋಪಿಯನ್ನರೂ   ಈ   ಚೌಕಾಶಿಯನ್ನು ಗುರುತಿಸಿ    ಇದಕ್ಕೆ    ಇಂಡಿಯನ್ ಬಾರ್ಗೇನ್ ಎಂದು ಕರೆಯುತ್ತಾರೆ ಮತ್ತು ಅದಕ್ಕೆ ತಯಾರಾಗಿ ದ್ದಾರೆ.   ಅದಕ್ಕೆ   ಕಾರಣ  ನಾವು ಮತ್ತು ಚೈನಾದ ವರೇ ಹೆಚ್ಚಾಗಿ ಎಲ್ಲಕಡೆ ಪ್ರವಾಸಿಗಳಾಗಿರುವದು.

ಇಲ್ಲಿ   ಮತ್ತೊಂದು   ವಿಷಯ  ನಿಮಗೆ  ಹೇಳಲೇ ಬೇಕು.  ಜನಸಂಖ್ಯಾ  ಬಲವಿಲ್ಲದೇ    ಅದರಲ್ಲೂ ವೃದ್ಧರೇ   ಜಾಸ್ತಿ   ಇರುವ ಮತ್ತು  ನಿಧಾನವಾಗಿ   ಕುಸಿಯುತ್ತಿರುವ   ಬಹುತೇಕ ಯುರೋಪಿಯನ್ ಆರ್ಥಿಕ  ವ್ಯವಸ್ಥೆಗಳ ಬೆನ್ನೆಲುಬೇ ಈ ಪ್ರವಾಸೋ ದ್ಯಮ.  ಈ  ಯುವ  ಜನಸಂಪತ್ತಿನಿಂದ    ತುಂಬಿ ತುಳುಕುವ  ಭಾರತ   ಮತ್ತು  ಚೈನಾಗಳ  ಜನರೇ ಎಲ್ಲ  ಪ್ರವಾಸಿ ಸ್ಥಳಗಳಲ್ಲಿ  ಬಹುತೇಕ ಕಾಣಸಿಗು ತ್ತಾರೆ.  ಕೊಳ್ಳುವ ಶಕ್ತಿ   ಇರುವದೂ   ನಮಗೇ. ಆದ್ದರಿಂದ ನಮ್ಮನ್ನು ನೋಡುವ, ನಮ್ಮ ಬಗೆಗಿನ ಹೀನಾಯ ಭಾವನೆ ಹೋಗಿ ಈಗೀಗ ನಮ್ಮನ್ನು ಆದರದಿಂದ   ಕಾಣುತ್ತಾರೆ.  ಈ  ಎಂಟತ್ತು ವರ್ಷ ಗಳ   ಅದ್ಭುತ   ಬದಲಾವಣೆಯನ್ನು  ನನ್ನ  ಪ್ರತಿ ಸಲದ ಪ್ರವಾಸದಲ್ಲೂ  ಸಂಭ್ರಮದಿಂದ ಗಮನಿಸಿ ದ್ದೇನೆ. ಅಂದಹಾಗೆ ನಾನು ಹೇಳುತ್ತಿರುವದೆಲ್ಲ ಕೋವಿಡ್ ನ ಹಿಂದಿನ ಯುಗ… ನೆನಪಿರಲಿ. ಆದಷ್ಟು ಬೇಗ ನಮ್ಮ ಆ ಹಿರಿಮೆ ಮರುಕಳಿಸಲಿ.
ಆ ದಿನದ ಅಂತ್ಯ ಒಂದು ರಸ್ತೆ ಬದಿಯ ಕೆಫೆಯ ಅತ್ಯಂತ ರುಚಿಯಾದ ಪೀಜ್ಜಾ ಮಾರ್ಗರೀತಾ ದಿಂದ ಮುಕ್ತಾಯವಾಯಿತು.ಮರುದಿನ  ನಮ್ಮನ್ನು   ವಿನ್ಯಾರ್ಡ್     ಮತ್ತು ವೈನರಿಗಳ  (vineyard  ದ್ರಾಕ್ಷಿತೋಟ   ಮತ್ತು winery ವೈನ್ ತಯಾರಿಸುವ ಸ್ಥಳ) ಭೇಟಿಗೆ ಒಂದು ಉದ್ದನೆಯ ಲಿಮಸೀನ್ (limousine) ಕಾರಿನಲ್ಲಿ   ಸೇಂಟ್  ಮಿಲಿಯೋನ್   ಜಗತ್ಪ್ರಸಿದ್ಧ ಮಧ್ಯಯುಗೀನ   ಅತಿಸುಂದರ ಹಳ್ಳಿಗೆ   ಕರೆದೊ ಯ್ದರು.   ಇದು   ಯುನೆಸ್ಕೋದ     ಪಾರಂಪರಿಕ ತಾಣ.  ಹಳ್ಳಿಯ ಹೆಬ್ಬಾಗಿಲಲ್ಲಿ ನಮಗೆ ಅಲ್ಲಿಯ ಸಾಂಪ್ರದಾಯಿಕ   ವಾದ್ಯದವರಿಂದ    ಭರ್ಜರಿ ಸ್ವಾಗತವಾಯಿತು.


ಈ ಜಾಗ ತನ್ನ ಉತ್ಕೃಷ್ಟ ರೆಡ್ ವೈನ್ ಗಾಗಿ ತುಂಬಾ   ಜನಪ್ರಿಯ.   ಇಕ್ಕಟ್ಟಾದ  ಗಲ್ಲಿಗಳು, ನುಣುಪುಗಲ್ಲುಗಳ ಹಾಸಿದ ಬೀದಿಗಳು, ರಸ್ತೆಯ ಮಧ್ಯದ ಕಮಾನುಗಳು, ಶತಮಾನಗಳೇ ಕಳೆದ ಕಟ್ಟಡಗಳು.  ಶಿಸ್ತಿನ ದ್ರಾಕ್ಷಿತೋಟಗಳಿಂದ ಸುತ್ತು ವರಿದಿರುವ ಅದು ನಿಸ್ಸಂಶಯವಾಗಿಯೂ ನಾನು ನೋಡಿದ   ಅತ್ಯಾಕರ್ಷಕ  ಹಳ್ಳಿಗಳಲ್ಲಿ   ಒಂದು. ಸ್ವಿಸರ್ಲಾಂಡ್  ಮತ್ತು   ಇಂಗ್ಲೆಂಡಗಳಲ್ಲೂ   ಈ ರೀತಿಯ ಕಾಲ ಸ್ಥಬ್ಧವಾಗಿರುವ ಮನಮೋಹಕ ಹಳ್ಳಿಗಳಿವೆ. ಮುಂದೆ ಯಾವಾಗಲಾದರೂ ಅದರ ಬಗ್ಗೆಯೇ ಬರೆಯುವೆ.


ಆ ದಿನದ ವೈನ್ ಟೂರ್ ಗೆ ಬರೋಣ.. ಒಂದೇ ಒಂದು ದಿನದಲ್ಲಿ ವೈನ್ ನ ಅ ಆ ಗೊತ್ತಿಲ್ಲದ ನಮ್ಮನ್ನು ಅದರ ಬಗ್ಗೆ   ಮತ್ತು ಅದರ ತಯಾರಿಕೆ ಯ ಎಲ್ಲಾ ಹಂತಗಳ ಬಗ್ಗೆ ಸಂಪೂರ್ಣ ವಿವರಣೆ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ಪರಿಣಿತರನ್ನಾಗಿ ಸಿಬಿಟ್ಟರು. ಸುಂದರ ದ್ರಾಕ್ಷಿತೋಟಗಳಲ್ಲಿ ಸುತ್ತಾಡಿ ಸಿದರು.

ವೈಟ್ ವೈನ್, ಕೆಂಪು ವೈನ್, ಶಾಂಪೇನ್ ಎನ್ನುವ ಸ್ಪಾರ್ಕಲಿಂಗ್ ವೈನ್, ಡೆಸರ್ಟ ವೈನ್ ಎನ್ನುವ ಸಿಹಿಯಾದ   ವೈನ್    ಮತ್ತು   ರೋಸೆ ಎನ್ನುವ ಗುಲಾಬಿ  ವೈನ್.. ಅವುಗಳ  ಗುಣ ಲಕ್ಷಣಗಳು, ಭಿನ್ನ ಸ್ವಾದಗಳು, ದ್ರಾಕ್ಷಿ ಹುಳಿ ಬರಿಸುವ, ವೈನ್ ಮಾಡುವ  ಮತ್ತು ಮರದ   ಬ್ಯಾರೆಲ್ ಗಳಲ್ಲಿ ಸಂಗ್ರಹಿಸುವ  ವಿಧಾನಗಳು,   ಅವುಗಳ ಜೊತೆ ಹೊಂದುವ   ತಿನಿಸು    ಮತ್ತು    ಚೀಸ್ ಗಳು.. ಅವುಗಳನ್ನು ಕುಡಿಯುವ ಸೂಕ್ತ ಸಮಯ ಮತ್ತು ಸರಿಯಾದ  ವಿಧಾನ..  ಕುಡಿಯಲು   ಬಳಸುವ ವಿವಿಧ ಗ್ಲಾಸುಗಳು.. ಕೇಳಿದಷ್ಟೂ   ಮುಗಿಯದ ವೈನ್   ಪುರಾಣ.. ನೆಲಮಾಳಿಗೆಯಲ್ಲಿ (ಸೆಲ್ಲರ್) ಸಂಗ್ರಹಿಸಿಟ್ಟ   ನೋಡಿದಷ್ಟೂ ಮುಗಿಯದ ಬಗೆ ಬಗೆಯ ವೈನ್ ಗಳ ಮಾದರಿಗಳು.


ಹಳೆಯದಾದಷ್ಟೂ ದುಬಾರಿ. ಸುಮಾರು 3000 ಯುರೋಗಳವರೆಗಿನ ವೈನ್ ಬಾಟಲ್ ಕೂಡ ಅಲ್ಲಿದೆ. ಗೈಡ್ ನೋಡಿ ಎಂದು ತೋರಿಸಿದರೂ ನಾವಂತೂ ಮುಟ್ಟಲಿಲ್ಲ.  ಕೊನೆಯದಾಗಿ   ವೈನ್ ಟೇಸ್ಟಿಂಗ್ ನಡೆಯುತ್ತದೆ. ವೈನ್ ಜೊತೆ ತಿನ್ನಲು ಬಗೆಬಗೆಯ ಚೀಸ್, ಒಣ ಹಣ್ಣುಗಳನ್ನು ಕಲಾತ್ಮ ಕವಾಗಿ ಟ್ರೇ ಗಳಲ್ಲಿ ಜೋಡಿಸಿಟ್ಟಿರುತ್ತಾರೆ. ಅಷ್ಟು ಹೊತ್ತಿಗಾಗಲೇ ನನ್ನ ಮನ ನನ್ನದೇ ಭಾವಯಾನ ದಲ್ಲಿ   ವಿಹರಿಸುತ್ತಿತ್ತು. ನನ್ನ.   ಕಲ್ಪನಾಲೋಕ ಸಾಮಾನ್ಯವಾಗಿ ಬಾಲ್ಯದಲ್ಲಿ ಕೇಳಿದ, ಓದಿದ ಮತ್ತು   ನೋಡಿದ   ಯಕ್ಷಗಾನ ಬಯಲಾಟಗಳ ಪೌರಾಣಿಕ ಜಗತ್ತು.

ಫ್ರೆಂಚ್ ಬಾನಂಗಳದಲ್ಲಿ ಕೆಂಪು ಮತ್ತು ರೋಸೆ ವೈನ್ ಚೆಲ್ಲಿದಂತೆ ಸಂಜೆಯಾಗಿತ್ತು. ಅಚ್ಚ ಬಿಳಿಯ ಗರಿಗರಿ ಷರ್ಟು, ಕಂದು ಬಣ್ಣದ ಜಾಕೆಟ್ ಧರಿಸಿ ಬಂದ ವೈನ್ ತಜ್ಞರು ಬೇರೆ ಬೇರೆ ವಾಲ್ಟಗಳಿಂದ ವಿಭಿನ್ನ ಪ್ರಕಾರದ, ರುಚಿಯ,   ಹೊಸ   ಮತ್ತು ಹಳೆಯ ವೈನ್ ಗಳನ್ನು ಅವುಗಳ ದೀರ್ಘವಾದ ವಿವರಣೆಯೊಂದಿಗೆ ಕೊಡತೊಡಗಿದರು.ಮೊದಲ ಹಂತ   ಗ್ಲಾಸ್ ನಲ್ಲಿನ   ವೈನ್  ಅನ್ನು ನಿಧಾನಕ್ಕೆ ತಿರುಗಿಸುವುದು. ನಂತರ ಅದರ ಪರಿಮಳವನ್ನು ಆಘ್ರಾಣಿಸುವುದು..  ಕೊನೆಯಲ್ಲಿ ಬಾಯಲ್ಲಿಟ್ಟು ರುಚಿನೋಡಿ ನಿಧಾನಕ್ಕೆ ನುಂಗುವುದು.. ಇಷ್ಟೆಲ್ಲ ಹೇಳಿ..  ಇದು ನೋಡಿ..   ಬಿಳಿಯ ವೈನ್..   ಡ್ರೈ ರುಚಿ.. ಇದು ನೋಡಿ  ಹಣ್ಣಿನ   ರುಚಿಯ ಕೆಂಪು ವೈನ್.. ಎಂದೆಲ್ಲ   ಅತ್ಯುತ್ಸಾಹದಿಂದ  ಕೊಟ್ಟಾಗ ಹುಟ್ಟಾ ವೈನ್ ರುಚಿ ನೋಡಿರದ ನಾನು ಇದೇ ಇರಬೇಕು ಭೂಲೋಕದ ಅಮೃತ.. ಇದನ್ನು ಹೊತ್ತು ಬರುತ್ತಿ ರುವವನೇ ಆ ‘ವೈನ’ತೇಯ .. ಎಂದು ಭಯ- ಭಕ್ತಿಯಿಂದ  ಒಂದು   ಗುಟುಕು   ಬಾಯಲ್ಲಿಟ್ಟು, ಧನ್ಯಳಾದೆ   ಎಂದುಕೊಳ್ಳುವಷ್ಟ ರಲ್ಲಿ   ಬಾಯಲ್ಲಿ ಏನೋ ಕಹಿ ಕಹಿ ಒಗರು..   ಅಮೃತದ   ಯಾವ ಲಕ್ಷಣವೂ ಇಲ್ಲ….ಬಾಯಿ ಕೆಟ್ಟಿದೆಯೋ    ಲೆಕ್ಕ ತಪ್ಪಿದೆಯೋ ಗೊತ್ತಾಗದೇ ಉಗಿಯುವ ಮನಸ್ಸಾ ಯಿತು. .ಆದರೇನು… ಸುತ್ತಲೂ ಅದೇ ದೈವಿಕ ಭಾವದಿಂದ   ವೈನಾಮೃ ತವನ್ನು   ಆಪೋಷಣೆ   ಮಾಡಲು    ಕುಳಿತ ನೂರಾರು ದೇವ-ದಾನವರ ಸಾಲು..!!

ಅವರ ಮುಂದೆ ದಡ್ಡರಾಗಲು ಮನಸ್ಸು ಬರದೇ ನಾನೂ   ವಿಧವಿಧವಾದ       ಭಾವನೆಗಳನ್ನು ಪ್ರದರ್ಶಿಸುತ್ತ ಸ್ವಲ್ಪ ಸ್ವಲ್ಪವೇ ಗುಟುಕರಿಸಿದಂತೆ ನಟಿಸಿದೆ. ಪಕ್ಕದಲ್ಲಿದ್ದ  ನನ್ನ  ಮಗಳು      ನನ್ನ ಅಭಿನಯಕ್ಕೆ   ಮತ್ತು   ವೈನಿನ  ಕೆಂಪು ಬಣ್ಣಕ್ಕೆ ಮನಸೋತು, ಕಾಡಿ ಬೇಡಿ ಗುಟ್ಟಿನಲ್ಲೇ ಒಂದು ಗುಟುಕು ಕುಡಿದು ಮುಖ ಸಿಂಡರಿಸಿದಳು.


ಆಶ್ಚರ್ಯಕರವಾಗಿ,   ಕಡೆಯಲ್ಲಿ ನಮ್ಮ ಮಸಾಲೆ ಗಳಾದ   ಲವಂಗ,   ದಾಲ್ಚೀನಿಗಳನ್ನೆಲ್ಲ   ಹಾಕಿದ ಬಿಸಿಯಾದ ವೈನ್ ಕಷಾಯವೊಂದನ್ನು mulled wine ಎಂದು ಕೊಟ್ಟರು. ಅದು ಆಲ್ಕೋಹಾಲಿಕ್ ಆದ್ದರಿಂದ ಅದನ್ನೂ ರುಚಿನೋಡಿದಂತೆ ಮಾಡಿ ಆ   ದಿವ್ಯವಾದ    ಅನುಭವವನ್ನು    ಮೆಲುಕು ಹಾಕುತ್ತ  ವೈನಾಡಿನ   ವೈನಾದ  ಪ್ರವಾಸಕ್ಕೆ ಬೈ ಎಂದೆವು.

ತೀರ   ಇತ್ತೀಚೆಗೆ, ಕೋವಿಡ್   ಅಲೆಯ   ತುಸು ಮೊದಲು ನಮ್ಮ ನಾಸಿಕ್ ನ ಸಮೀಪದ ಸೂಲಾ ವಿನ್ಯಾರ್ಡ ಪ್ರವಾಸಕ್ಕೆ ಹೋಗಿ ಅಲ್ಲಿಯ ಅಮೃತ ಮಥನದ ವೈಭವವನ್ನೂ ಮತ್ತು ರುಚಿಯನ್ನೂ ನೋಡಿಕೊಂಡು    ಬಂದಿದ್ದೇನೆ.    ವಸ್ಸಾಯ್ ಅರಮನೆ   ಮತ್ತು   ಫ್ರೆಂಚ್ ಕ್ರಾಂತಿಯ ಸಾಹಸ ಗಾಥೆಯೊಂದಿಗೆ   a plus tard ..see you later!

✍️ ಸುಚಿತ್ರಾ ಹೆಗಡೆ,ಮೈಸೂರು