ಹದಿಹರೆಯ ಕಾಲಿಟ್ಟಿತೆಂದರೆ ಬದುಕೆಲ್ಲಾ ವರ್ಣ ರಂಜಿತ. ಅದು ಜೀವನದ ವಸಂತ. ಪ್ರತಿ ಷೋಡಷ ಮನದಲ್ಲೂ ಸಂಗಾತಿಯ ಬಗ್ಗೆ ಆಸೆ ಕನಸು ಸಹಜ.ನೂರೆಂಟು ಸ್ವಪ್ನಗಳು ಕಾಮನ ಬಿಲ್ಲಿನ ತೋರಣದಲ್ಲಿ ಅಣಿಗೊಂಡಿರು ತ್ತದೆ. ತನ್ನ ಪ್ರೇಮಿ/ಪ್ರೇಮಿಕೆಯ ಅಸ್ಪಷ್ಟ ಚಿತ್ರಣ ಬಾಳ ಬಾನ ಪಟಲದಲ್ಲಿ ರೂಪುಗೊಂಡಿರುತ್ತದೆ. ನನ್ನ ಗೆಣೆಕಾರ ಹೀಗಿರಬೇಕೆಂದು ಯೋಚಿಸದೇ ಇರುವ ಯುವ ಮನವೇ ಇರದು. ಮನ್ಮಥನ ಹೂಬಾಣ ನಾಟುವ ಮೊದಲೇ ಅದಕ್ಕೆ ತಕ್ಕ ರಂಗಸಜ್ಜಿಕೆ ತಯಾರಾಗಿ ಬಿಟ್ಟಿರುತ್ತದೆ. ಅದನ್ನೇ ರವಿಚಂದ್ರನ್ ಅವರು ತಮ್ಮ ಹಳ್ಳಿಮೇಷ್ಟ್ರು ಚಿತ್ರದ “ಅಕ್ಕ ನಿನ್ನ ಗಂಡ ಹ್ಯಾಂಗಿರಬೇಕು” ಎಂಬ ಹಾಡಿನಲ್ಲಿ ವಿವರಿಸ ಹೊರಟಿದ್ದು.

ಇನ್ನು ಈ ಅಂತರಂಗದ ಅನಿರ್ವಚನೀಯ ಸೆಳೆತದ ತೆಕ್ಕೆಗೆ ಸಿಲುಕುವ ಮೊದಲಿನ ಕೋಮಲ ಮನದ ಕಲ್ಪನೆಯ ತೆರೆಯಲೆಯ ಬಗ್ಗೆ ಹೇಳ ಹೊರಟರೆ ………
ಹದಿಹರೆಯದ ಮುಗ್ಧ ಮನ ಬಯಸುವುದು ಅಡೆತಡೆ ಇರದ ಪ್ರೀತಿ ಮಳೆಯನ್ನು. ಈ ವಯ ಸ್ಸಿನಲ್ಲಿ possessiveness ಸಹ ಜಾಸ್ತಿ. ನನ್ನ ಕಡೆಗೆ ತನ್ನ ಪೂರ್ತಿ ಲಕ್ಷ್ಯಕೊಟ್ಟು ‘ನಾನಡಿ ಇಡು ವೆಡೆಗೆ ಹೂವ ಹಾಸ್ಲಿ’ ಎಂದು ಆಶಿಸುವ ಮನಸ್ಸು. ಆರಡಿ ಎತ್ತರದ ಮೋಹಕ ವ್ಯಕ್ತಿತ್ವದ ಮನ್ಮಥರೂಪಿ ರಾಜಕುಮಾರ ಕುದುರೆಯ ಮೇಲೆ ತನ್ನನ್ನು ವಿಹಾರಕ್ಕೆ ಕರೆದೊಯ್ಯಲಿ ಎನ್ನು ವುದು ಪ್ರತಿ ರಾಜಕುಮಾರಿಯ ಬಯಕೆ. ತನ್ನ ಬಿಟ್ಟು ಅನ್ಯ ಹುಡುಗಿಯ ಕಡೆ ಕಣ್ಣು ಹಾಯಿಸದ ನಿಜ ಪ್ರೇಮಿ ತನಗಾಗಿ ಜೀವ ಕೊಡಲೂ ತಯಾರಿ ರುವ ಅಮರ ಪ್ರೇಮಿ ಆಗಿರಲಿ ಎಂಬ ಆಸೆ. ಒಟ್ಟಿನಲ್ಲಿ ತಾನೊಬ್ಬಳೇ ತನ್ನ ಪ್ರಪಂಚ ಎಂದು ತಿಳಿದು ತನ್ನ ಹುಡುಗಾಟಗಳಲ್ಲಿ ಅರ್ಥ ಹುಡುಕಿ ಬಾಳೇ ತನಗಾಗಿ ಮುಡಿಪಿಡುವ. ಹುಡುಗ ತನ್ನ ಚೆಲುವನಾಗಿ ಇರಬೇಕೆಂದು ಒಲವ ಮಯಕದಲ್ಲಿ ಬಿದ್ದ ಪ್ರತಿ ಷೋಡಶಿಯ ಕನಸು. ಜೀವನದ ಅನುಭವದ ಮೂಸೆಯಲ್ಲಿ ಹೆಚ್ಚು ಬೇಯದ ಕಾರಣ ಜೀವನವೆಂದರೆ ಬರೀ ಹೂವಿನ ಹಾಸಿಗೆ ಎಂದುಕೊಳ್ಳುವ ಆ ರಮಣೀಯ ಮನಃಸ್ಥಿತಿ ಆಳವಾಗಿ ಯೋಚಿಸಲು ಬಿಡುವುದಿಲ್ಲ .
ವಯ ಸ್ವಲ್ಪ ಪಕ್ವವಾದಾಗ ಪ್ರೀತಿ ವಿವಾಹ ಬಂಧನ ಕ್ಕೆ ತಿರುಗುವ ಸ್ವಲ್ಪ ಪ್ರಬುದ್ಧ ವಯಸ್ಸಿನಲ್ಲಿ ಹೆಚ್ಚು ಹುಚ್ಚು ಬಯಕೆಗಳಿಗೆ ಸ್ಥಳವಿರುವುದಿಲ್ಲ. ಬೌದ್ಧಿಕ ನಡವಳಿಕೆಯ ಪ್ರಬುದ್ಧ ಮನಸ್ಥಿತಿಯವ ತನ್ನ ಅನಿಸಿಕೆ ಗೌರವಿಸುವ ವ್ಯಕ್ತಿತ್ವ ತನ್ನಿನಿಯನದಾಗಿರ ಬೇಕೆನಿಸುತ್ತದೆ. ಕೆಲವೊಂದು ಹುಚ್ಚು ಕಲ್ಪನೆಗಳಿ ಗೂ ತನಗೆ ಜೊತೆ ಕೊಡಬೇಕೆನಿಸಿದರೊ ಬದು ಕೆಂದರೆ mills & boon ಕಾದಂಬರಿಗಳಲ್ಲ ಎಂಬ ಅರಿವು ಮೂಡಿರುವಾಗ ಜೊತೆಗಾರನಲ್ಲಿ ವಾಸ್ತವಕ್ಕೆ ಹತ್ತಿರದ ನಿರೀಕ್ಷೆಗಳಿರುತ್ತವೆ, ನನಸಾಗ ಬಹುದು ಎಂಬ ಭರವಸೆ ಇರುವ ಕನಸು ಕಾಣ ಬೇಕೆಂಬ ಪರಿಜ್ಞಾನ ಬಂದಿರುತ್ತದೆ. ನಂತರ ವಿವಾಹವಾದ ಬಳಿಕ ತನ್ನ ಪತಿ ತನಗೆ ಸಹಕಾರ ಕೊಡುವ ಗೌರವಿಸುವ ಮನದವರಾದರೆ ಸಾಕೆನಿ ಸುತ್ತದೆ. ಸಂಸಾರದ ನೊಗದೆಳೆದಾಟದಲ್ಲಿ ಹುಚ್ಚು ಕಲ್ಪನೆಗಳಿರಲಿ ಸ್ವಲ್ಪ ಅಪರೂಪದ ಬಯಕೆಗಳು ಈಡೇರುವುದು ಕಷ್ಟವೇ. ಆಗ ತನ್ನ ಇನಿಯನ ಅಂತರಾಳ ತನ್ನವಳಿಗೆ, ಮಕ್ಕಳಿಗೆ ಪೂರ್ಣ ಭದ್ರತೆ ಕೊಟ್ಟು ಅಕ್ಕರೆಯಲ್ಲಿ ಕಾಪಾಡುವುದಷ್ಟೇಸಾಕಪ್ಪಾ ಎನಿಸುತ್ತದೆ.
ಇನ್ನು ಬಾಳ ಮುಸ್ಸಂಜೆಯಲ್ಲಿ ಎಲ್ಲ ಜವಾಬ್ದಾರಿ ತೀರಿದ ನಿರಾಳತೆಯಲ್ಲಿ ಸಂಗಾತಿಯ ಅಂತರಾಳ ಹೀಗಿರಬೇಕು ಅನ್ನುವುದಕ್ಕಿಂತ ಅದನ್ನು ನಮಗೆ ಬೇಕಾದಂತೆ ಮಾರ್ಪಡಿಸಿಕೊಂಡು ಬಿಟ್ಟಿರುತ್ತೇವೆ ಅಥವಾ ಅವರ ಅಂತರಾಳಕ್ಕೆ ತಕ್ಕಂತೆ ನಾವೇ ಬದಲಾಗಿಬಿಟ್ಟಿರುತ್ತೇವೆ. ದೇಹ ಎರಡಾದರೂ ಮನಸ್ಥಿತಿ ಒಂದೇ ಆಗಿರುವಂತೆ. ದೀರ್ಘ ಕಾಲದ ಸಾಹಚರ್ಯ ಸಾಂಗತ್ಯ ಆ ತರಹದ ಅವಿನಾಭಾ ವದ ಉಗಮಕ್ಕೆ ಕಾರಣವಾಗಿ ಬಿಟ್ಟಿರುತ್ತದೆ.

ಒಟ್ಟಿನಲ್ಲಿ ಹೇಳಬೇಕೆಂದರೆ ತನ್ನ ಪ್ರೇಮಿಯ ಅಂತ ರಾಳ ಬಾಳಿನ ಪ್ರಯಾಣದ ವಿವಿಧ ಮಜಲುಗ ಳಲ್ಲಿ ವಿವಿಧ ಘಟ್ಟಗಳಲ್ಲಿ ವಿವಿಧ ನಿರೀಕ್ಷೆಗಳನ್ನು ಹೊಂದಲ್ಪಟ್ಟಿರುತ್ತದೆ ಅದೆಂದೂ ನಿಂತ ನೀರಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬೇಕಾದದ್ದು ಸಂಗತಿಯೆ ಡೆಗೆ ನಿಷ್ಕಲ್ಮಶ ಪ್ರೀತಿ. ಅವಳ ಬಲಹೀನತೆಗಳ ಬಗ್ಗೆ ಸಹಿಷ್ಣುತೆ, ಅವಳ. ಪ್ರತಿಭೆಯ ಬಗ್ಗೆ ಹೆಮ್ಮೆ ಅವಳ ಆಸಕ್ತಿಯೆಡೆಗೆ ತನ್ನ ಆಸಕ್ತಿ ಮತ್ತು ಅವಳ ಸಂವೇದನೆಗಳಿಗೆ ಸ್ಪಂದಿಸುವ ಮನಸ್ಸು. ಇಷ್ಟಿದ್ದರೆ ಸಾಕು ಜೀವನ ನದಿ ಹೊಸ ಹೊಸ ಹರಿವುಗಳಲ್ಲಿ ಸಾಗಿ ತಿರುವುಗಳನ್ನು ಪಡೆದು ಸಾಫಲ್ಯತೆಯ ಸಾಗರವನ್ನು ಸೇರುವುದಕ್ಕೆ.
✍️ಸುಜಾತಾ ರವೀಶ್, ಮೈಸೂರು
ನಿರಂತರ ಪ್ರೋತ್ಸಾಹಿಸುತ್ತಿರುವ ಬ್ಲಾಗ್ ನ ಸಂಪಾದಕರಾದ ರವಿ ಶಂಕರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು
ಸುಜಾತಾ ರವೀಶ್
LikeLiked by 1 person
ಉತ್ತಮ ...
LikeLike
ಓದಿ ಸವಿ ಸ್ಪಂದಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅನಸೂಯಾ ಮೇಡಂ
ಸುಜಾತಾ
LikeLike
ಓದಿ ಸವಿ ಸ್ಪಂದಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅನಸೂಯಾ ಮೇಡಂ
ಸುಜಾತಾ
LikeLike