ನನ್ನವ್ವ ನೀಲಿ ಆಕಾಶದಂತೆ
ಅನಂತ ಹರವು
ಕಂಡುಂಡಷ್ಟೇ ಅಲ್ಲದೇ ಕಾಣದಿರೋ
ಅದೆಷ್ಟೋ ಪ್ರೀತಿ ಅವಳೊಳಗೆ

ನನ್ನವ್ವ ದಟ್ಟಕಪ್ಪು ಮೋಡ
ಧಾರಾಕಾರವಾಗಿ ಸುರಿದು ಸುಮ್ಮನಾಗದೆ
ಜಡಿಮಳೆ ಇಳೆಯ ತಣಿಸುವಂತೆ
ಮನವ ಸಂತೈಸುವಳು

ನನ್ನವ್ವ ಸಿರಿವಂತೆಯಲ್ಲ
ಬಡತನದ ಕೆಂಡವನು
ಸೆರಗೊಳಗೆ ಕಟ್ಟಿಕೊಂಡು
ತನ್ನ ಕರುಳಬಳ್ಳಿಗಾಗಿ
ಕೂಲಿ ಮಾಡಿ
ಬಡತನವ ಮೆಟ್ಟಿ ಬಾಳಿದಾಕೆ

ನನ್ನವ್ವ ಶ್ರಮಜೀವಿ
ಹೆತ್ತವರ ಜೊತೆಯಲಿ ದುಡಿಯುತ್ತಾ ಬೆಳೆದು
ಗಂಡನೊಂದಿಗೆ ಕೂಲಿಮಾಡಿ ಸವೆದು
ಮಕ್ಕಳ ಜೊತೆಯಲೂ ದುಡಿಯುತ್ತಾ
ದುಡಿಮೆಯೇ ದೇವರೆಂದು ನಂಬಿದಾಕೆ

ನನ್ನವ್ವ ಶಾಂತ ಸಾಗರದಂತೆ
ಕಷ್ಟಗಳ ನದಿಗಳೆಷ್ಟೇ ಬಂದು ಸೇರಿದರೂ
ತನ್ನೊಡಲೊಳಗೆ ಅರಗಿಸಿಕೊಂಡು
ಬಾಳಿದವಳು ಬಾಳಿಗೆ ಬೆಳಕಾದವಳು……..

✍🏻 ಶಿವಾನಂದ ಉಳ್ಳಿಗೇರಿ
ಉಡಿಕೇರಿ