ನಿನ್ನ ಮಧುವನದ ತುಂಬ
ನೂರೆಂಟು ಗೋಪಿಕೆಯರು
ಮನೋಹರ
ನೋಡಲೊಬ್ಬಳು
ಬರಸೆಳೆಯಲೊಬ್ಬಳು..
ಹತ್ತಿರ ಧುಮ್ಮಿಕ್ಕಿ
ಮುತ್ತಿಕ್ಕಲೊಬ್ಬಳು…
ಸಾಲು ಸಾಲು ಸರದಿ
ನಿಂತ ಸುಂದರಿಯರ ನಡುವೆ
ಬೆವೆತ ಹಣೆಯ
ಒರೆಸಿಕೊಳ್ಳುತ್ತ
ನಾನು ನಿಲ್ಲಲಾರೆ
ಮೇಘಶ್ಯಾಮ
ಉಕ್ಕಿದ ಕೊರಳ ಮೋಹಕೆ
ಮದರಂಗಿ ಮೆತ್ತಿ
ಅಲ್ಲಿಯೇ ಆ ಗೋರ್ಕಲ್ಲ
ಬುಡದಲ್ಲಿ ನಿಂತು ಶತಮಾನದ
ತುಂಬೆಲ್ಲ
ಮೈ ಮರೆತು ಹಾಡುತ್ತೇನೆ
ದಣಿವಾದಾಗ
ಕೇಳಿಸಿಕೋ..

✍️ದೀಪ್ತಿ ಭದ್ರಾವತಿ.
ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ,
ಬೆಂಗಳೂರು