ಗ್ಯಾಜೆಟ್ ಗಳ ಬಳಕೆ ಆರೋಗ್ಯಕ್ಕೆ ಹಿತಕಾರಿಯಲ್ಲ ಎಂದು ಯಾರು ಎಷ್ಟೇ ಬೊಂಬಡ ಬಜಾಯಿಸಿದ ರೂ ಮತ್ತೆ ನಮ್ಮ ಕಣ್ಣುಗಳು ಮೊಬೈಲು ಪರದೆ ಗಾಗಿ ಹಪಹಪಿಸುತ್ತವೆ! ನಿಜ.. ಇದು ತಂತ್ರಜ್ಞಾನದ
ಸುವರ್ಣಯುಗ. ಗ್ಯಾಜೆಟ್ಗಳೂ ದೇಹದ ಭಾಗವಾ ದಷ್ಟು ಆಪ್ತವಾಗಿ ಬಿಟ್ಟಿವೆ.. ಅನಿವಾರ್ಯವೂ ಆಗಿವೆ..
ಕೋವಿಡ್ ಜಾಗತಿಕ ಪಿಡುಗಿನಿಂದ ಮನೆಯಲ್ಲೇ ಇರಬೇಕಾದಾಗ ಹೊತ್ತು ಹೋಗದೇ ಮೊಬೈಲು ಅಡಚುವುದೊಂದೆಡೆ.. ಮನೆಯಿಂದಲೇ ಕಛೇರಿ ಕೆಲಸ ನಿರ್ವಹಿಸುವವರ ಒತ್ತಡ ಇನ್ನೊಂದೆಡೆ.. ಶಾಲೆಗಳು ಇಲ್ಲದಕ್ಕೆ ಆನ್ ಲೈನ್ ಶಿಕ್ಷಣ ಪಡೆಯು ತ್ತಿರುವ ಎಳೆ ಕಂದಮ್ಮಗಳಿನ್ನೊಂದೆಡೆ. ಅಧ್ಯಯ ನಗಳ ಪ್ರಕಾರ ಹತ್ತರಲ್ಲಿ ಮೂವರು ವಯಸ್ಕರು ದಿನಕ್ಕೆ 8-10 ಗಂಟೆ ಗ್ಯಾಜೆಟ್ ಗಳನ್ನು ಬಳಸುತ್ತ ಲೇ ಇರುತ್ತಾರೆ. ನಾಲ್ಕರಲ್ಲಿ ಒಂದು ಮಗು ದಿನಕ್ಕೆ ಮೂರಕ್ಕಿಂತ ಹೆಚ್ಚು ಗಂಟೆಗಳ ಕಾಲ ಮೊಬೈಲ್/ ಕಂಪ್ಯೂಟರ್ ನ ಮುಂದಿರುತ್ತದೆ.. ವಾಸ್ತವದಲ್ಲಿ ಈ ಅಂಕಿ-ಅಂಶಗಳಿಗಿಂತ ಹೆಚ್ಚೇ ನಮ್ಮ ಮಕ್ಕಳು ಗ್ಯಾಜೆಟ್ ದಾಸರಾಗುತ್ತಿದ್ದಾರೆ..
ಆಘಾತಕಾರಿ ಅಂಶವೆಂದರೆ ಮಕ್ಕಳಲ್ಲಿ ಬೊಜ್ಜು, ಇತರ ಚಟುವಟಿಕೆಗಳಲ್ಲಿ ನಿರಾಸಕ್ತಿ, ಏಕಾಗ್ರತೆಯ ಕೊರತೆ, ಕಲಿಕೆಯ ಸಮಸ್ಯೆಗಳು, ಸೃಜನಶೀಲತೆ ನಶಿಸುವುದು, ಅಸಂತೃಪ್ತ ಮನೋಭಾವದಂತಹ ಪರೋಕ್ಷ ಬದಲಾವಣೆಗಳಾಗಬಹುದು. ಅಲ್ಲದೇ ಕಣ್ಣಿನ ತೊಂದರೆಗಳು, ತೀವ್ರ ದೃಷ್ಟಿದೋಷದ ಸಮಸ್ಯೆಗಳು ಹೆಚ್ಚಬಹುದು. ಒಂದು ಅಂದಾಜಿನ ಪ್ರಕಾರ 2050 ರ ಹೊತ್ತಿಗೆ ಅರ್ಧಕ್ಕಿಂತ ಹೆಚ್ಚಿನ ಮಕ್ಕಳಲ್ಲಿ ಗಣನೀಯವಾದ ಮಯೋಪಿಯಾ ಸಮಸ್ಯೆಯು ತಲೆದೋರಲಿಕ್ಕಿದೆ.
ವಯಸ್ಕರಲ್ಲಿಯೂ ಇತ್ತೀಚೆಗೆ ಕಣ್ಣುರಿ, ನೀರು ಬರುವುದು, ತುರಿಕೆ, ಮಂಜಾಗಿ ಕಾಣುವುದು, ತಲೆನೋವು, ನಿದ್ರಾ ಸಮಸ್ಯೆಗಳು,ಕುತ್ತಿಗೆನೋವು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಪುಸ್ತಕಗಳನ್ನು ಓದುವಾಗಲಿಗಿಂತಲೂ ತಂತ್ರಜ್ಞಾನದ ಪರದೆಯ ಮೇಲೆ ಓದುವಾಗ ಅಥವಾ ಚಿತ್ರಗಳನ್ನ ನೋಡು ವಾಗ ನಮ್ಮ ಕಣ್ಣುಗಳಿಗೆ ಹೆಚ್ಚು ಆಯಾಸವಾದ ಅನುಭವವಾಗುತ್ತದೆ. ಏಕೆಂದರೆ ಪರದೆಯ ಮೇಲಿನ ಪಿಕ್ಸೆಲಗಳೆಂಬ ಸೂಕ್ಷ್ಮ ಬೆಳಕಿನ ಬಿಂದುಗಳು ಕೇಂದ್ರಭಾಗದಲ್ಲಿ ಹೆಚ್ಚು ಪ್ರಖರವೂ, ಬದಿಗೆ ಸರಿದಂತೆಲ್ಲ ಮಂದವೂ ಆಗಿರುವಂತೆ ರೂಪಿತವಾಗಿದ್ದು ದೀರ್ಘಕಾಲದವರೆಗೆ ದೃಷ್ಟಿಯ ನ್ನು ಏಕಾಗ್ರಗೊಳಿಸುವುದು ದಣಿವನ್ನುಂಟುಮಾ ಡುತ್ತದೆ. ದಿನವಿಡೀ ಕಂಪ್ಯೂಟರ್ ಕಾರ್ಯನಿರ್ವ ಹಿಸುವವರು ಕಣ್ಣು ಸೋತಂತೆ ಆಗುತ್ತದೆ ಎಂದು ಸಾಮಾನ್ಯವಾಗಿ ಹೇಳುವುದು ಇದಕ್ಕೇ. ಕಣ್ರೆಪ್ಪೆ ಬಡಿಯುವ ಪ್ರಮಾಣವೂ ಗ್ಯಾಜೆಟ್ ಗಳಮುಂದೆ ನಮಗರಿವಿಲ್ಲದಯೇ ಕಡಿಮೆಯಾಗುವುದರಿಂದ ಕಣ್ಣಲ್ಲಿ ನೀರಿನಂಶ ಕಡಿಮೆಯಾಗಿ ಒಣಕಣ್ಣಿನ ಸಮಸ್ಯೆ ತಲೆದೋರುತ್ತದೆ. “ಕಣ್ಣನ್ನು ಕಿತ್ತಿಟ್ಟು ಬಿಡೋಣ ಎನ್ನಿಸತ್ತೆ ಡಾಕ್ಟ್ರೇ” ಎಂದು ಬಹಳಷ್ಟು ರೋಗಿಗಳು ಅಲವತ್ತುಕೊಳ್ಳುತ್ತಾರೆ.
ಇತ್ತೀಚೆಗೆ ಬಹಳಷ್ಟು ಚರ್ಚೆಯಾಗುತ್ತಿರುವ ವಿಷಯ: ನೀಲಿ ಕಿರಣಗಳ ಬಗ್ಗೆ.. ಟಿವಿ, ಕಂಪ್ಯೂ ಟರ್, ಟ್ಯಾಬ್, ಮೊಬೈಲು, ಎಲ್.ಈ.ಡಿ.ಗಳಿಂದ ಹೊರಸೂಸುವ ನೀಲಿ ಕಿರಣಗಳು ದೀರ್ಘ ಕಾಲ ದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಲ್ಲವು ಎಂದು ಕೆಲವು ತಜ್ಞರ ಅಭಿಪ್ರಾಯ. ಇನ್ನೂ ಈ ಬಗ್ಗೆ ನಿಖರವಾದ ಅಧ್ಯಯನಗಳು ಆಗಬೇಕಿವೆ. ಆದಾಗ್ಯೂ ಲಭ್ಯ ಅಂಕಿ ಅಂಶಗಳ ಮೇರೆಗೆ ನೀಲಿ ಕಿರಣಗಳು ಕಣ್ಣಿನ ರೆಟಿನಾದ ಜೀವಕೋಶಗಳಿಗೆ ಹಾನಿಯ ನ್ನುಂಟು ಮಾಡಬಲ್ಲವು ಹಾಗೂ ದೀರ್ಘ ಕಾಲ ದಲ್ಲಿ ಮೋತಿಬಿಂದು ಹಾಗೂ ಅಕ್ಷಿಪಟಲದ ಮಾಕ್ಯುಲಾರ್ ಕಾಯಿಲೆಗಳಿಗೆ (ಏ.ಆರ್.ಎಮ್. ಡಿ) ಕಾರಣವಾಗಬಲ್ಲವು. ಎಚ್ಚರಾವಸ್ಥೆ ಹಾಗೂ ನಿದ್ದೆಯ ಸಮತೋಲನವನ್ನು, ದೈನಂದಿನ ಜೈವಿಕ ಗಡಿಯಾರವನ್ನು ಈ ಕೃತಕ ನೀಲಿ ಕಿರಣಗಳು ವೈಪರೀತ್ಯಕ್ಕೆ ಗುರಿಮಾಡಬಲ್ಲವು. ರಾತ್ರಿ ನಿದ್ದೆ ಬಾರದೇ ಬಹಳಷ್ಟು ಕಾಲ ಮೊಬೈಲ್ ನೋಡುವ ವರು ಮತ್ತಷ್ಟು ನಿದ್ರಾಹೀನತೆಗೆ ಗುರಿಯಾಗುವು ದನ್ನು ಗಮನಿಸಿರಬಹುದು.ಇಂದು ತಂತ್ರಜ್ಞಾನವಿಲ್ಲದೇ ಬದುಕಿಲ್ಲ. ಆದರೆ ಅತಿಯಾದರೆ ಅಮೃತವೂ ವಿಷವೆಂಬಂತೆ ಹಿತ ಮಿತವಾದ ಬಳಕೆ ಆರೋಗ್ಯಕ್ಕೆ ಪೂರಕ. ವಿಶೇಷ ವಾಗಿ ಮಕ್ಕಳು ಎಷ್ಟು ಕಾಲ ದಿನಕ್ಕೆ ಗ್ಯಾಜೆಟ್ ಗ ಳನ್ನು ಬಳಸಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ:
*2 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ – ಗ್ಯಾಜೆಟ್ ಬಳಕೆ ಬೇಡ.
*2-5 ವರ್ಷ ದವರಿಗೆ- ದಿನಕ್ಕೆ ಒಂದು ಗಂಟೆ.
*5-18 ವರ್ಷ ದವರಿಗೆ – ದಿನಕ್ಕೆ 2-3 ಗಂಟೆ.
ಕಣ್ಣಿನ ತಪಾಸಣೆಗೆ ಕೆಲವು ದಿನಗಳಹಿಂದೆ ಐದನೆ ತರಗತಿಯ ಬಾಲಕನೊಬ್ಬನನ್ನು ಪಾಲಕರು ಕರೆ ತಂದಿದ್ದರು. ‘ಮೊಬೈಲು ಜಾಸ್ತಿ ನೋಡ್ತೀಯಾ ಪುಟ್ಟ.. ಆನ್ ಲೈನ್ ಕ್ಲಾಸು ಇದೆಯಾ?’ ಎಂದು ಕೇಳಿದಾಗ ಅವನ ಉತ್ತರ ಹೀಗಿತ್ತು.. ‘ಕಣ್ಣು ನೋವಾಗುತ್ತದೆ ಅಂತ ನಾನು ಆನ್ ಲೈನ್ ಕ್ಲಾಸು ಅಟೆಂಡ್ ಮಾಡುವದಿಲ್ಲ.. ಮೊಬೈಲಲ್ಲಿ ಗೇಮಷ್ಟೇ ಆಡ್ತೇನೆ!’ ಮಕ್ಕಳಿಗೆ ಯಾವುದಕ್ಕೆ ತಂತ್ರಜ್ಞಾನದ ಬಳಕೆ ಮಾಡಲು ಅವಕಾಶ ಕೊಡ ಬೇಕು ಎಂದು ಪಾಲಕರು ಸೂಕ್ತವಾಗಿನಿರ್ಣಯ ಕೈಗೊಳ್ಳಬೇಕು.
ಆರೋಗ್ಯಕ್ಕೆ ಆದಷ್ಟು ಹಾನಿಕರವಾಗದ ರೀತಿಯ ಲ್ಲಿ ಈ ಸಲಹೆಗಳನ್ನು ಅಳವಡಿಸಿಕೊಳ್ಳಬಹುದು.
* ಗ್ಯಾಜೆಟ್ ಬಳಕೆ ಮಾಡುವಾಗ ಕಣ್ರೆಪ್ಪೆ ಬಡಿ ಯುವದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
*ನೇತ್ರವೈದ್ಯರ ಸಲಹೆ ಪಡೆದು ಸೂಕ್ತ ಆ್ಯಂಟಿ ಗ್ಲೇರ್ ಕನ್ನಡಕ ಬಳಸುವುದು.
*20-20-20-20 ನಿಯಮ ಪಾಲನೆ: ಅಂದರೆ ಪ್ರತೀ 20 ನಿಮಿಷಗಳಿಗೊಮ್ಮೆ 20 ಫೂಟ್ ದೂರದ (ಉದಾಹರಣೆಗೆ ಕಿಟಕಿಯಿಂದ ಹೊರಗೆ) 20 ಸೆಕೆಂಡುಗಳವರೆಗೆ ನೋಡುವುದು. ಹಾಗೂ 20 ಸಲ ಕಣ್ರೆಪ್ಪೆ ಬಡಿಯುವುದು.
*ವೈದ್ಯರ ಸಲಹೆಯಮೇರೆಗೆ ಕಣ್ಣಿನಲ್ಲಿ ನೀರಿನಂಶ ಸಮರ್ಪಕವಾಗುವ ಹನಿ ಔಷಧಗಳನ್ನು ಬಳಸು ವುದು.
*ಮಕ್ಕಳ ಆನ್ ಲೈನ್ ತರಗತಿಗೆ ಆದಷ್ಟು ದೊಡ್ಡ ಪರದೆಯನ್ನು ಒದಗಿಸುವುದು. (ಅಂದರೆ ಟಿವಿ ಪರದೆಗೆಸಂಪರ್ಕ ಅಥವಾ ಕಂಪ್ಯೂಟರ್/ ಟ್ಯಾಬ್ ಲಭ್ಯವಿದ್ದಲ್ಲಿ.. ಸಣ್ಣ ಪರದೆಯ ಮೊಬೈಲುಗಳಿ ಗಿಂತ ಉತ್ತಮ)
*ಕಂಪ್ಯೂಟರ್ ಸ್ಕ್ರೀನಿನ ಕೇಂದ್ರವು ಕಣ್ಣುಗಳ ಮಟ್ಟಕ್ಕಿಂತ ತುಸು ಕೆಳಗಿರಲಿ.
*ಪರದೆಯ ಪ್ರಖರತೆ ಕೋಣೆಯ ಬೆಳಕಿಗೆ ಹೊಂದುವಂತಿರಲಿ.
*ಪರದೆಯು (ಸ್ಕ್ರೀನ್) ಧೂಳಿನಿಂದ ಮುಕ್ತವಾಗಿ ರಲಿ ಹಾಗೂ ನೇರ ಬೆಳಕು ಅದರ ಮೇಲೆ ಬೀಳ ದಂತಿರಲಿ.
*ಗ್ಯಾಜೆಟ್ 30-35 ಸೆಂ.ಮೀ ಆದರೂ ದೂರದಲ್ಲಿ ರಲಿ.
* ಸ್ಕ್ರೀನ್ ಫಿಲ್ಟರ್ ಹಾಗೂ ಬ್ಲೂ ಬ್ಲಾಕ್ ಕನ್ನಡಕ ಗಳನ್ನು ಉಪಯೋಗಿಸಬಹುದು.
*ಪರದೆಯಲ್ಲಿ ಓದುವಾಗ ಅಕ್ಷರಗಳ ಗಾತ್ರ ದೊಡ್ಡದಿರಲಿ. (ಫಾಂಟ್ ಸೈಜ್ 14 ರ ಮೇಲ್ಪಟ್ಟು)
*ಉತ್ತಮ ಕಾಂಟ್ರಾಸ್ಟ್ ಕಣ್ಣುಗಳ ಮೇಲಿನ ಪರಿಶ್ರಮವನ್ನು ಕಡಿಮೆ ಮಾಡಬಲ್ಲದು. (ಉದಾಹರಣೆಗೆ ಬಿಳಿಯ ಪರದೆಯ ಮೇಲೆ ಕಪ್ಪು ಅಕ್ಷರಗಳು)
*ಸಮರ್ಪಕ ಭಂಗಿಯಲ್ಲಿ ಕುಳಿತುಕೊಳ್ಳುವುದು ದಿನವಿಡೀ ಕಂಪ್ಯೂಟರ್ ಕೆಲಸದಲ್ಲಿ ತೊಡಗಿರುವ ವರಿಗೆ ತುಂಬಾ ಅವಶ್ಯಕ. ನಡು ನಡುವೆ ಹತ್ತು ಹೆಜ್ಜೆ ಓಡಾಡಿ ಬರುವುದನ್ನು ಮರೆಯಬಾರದು. ಏಕೆಂದರೆ ಕುಳಿತಲ್ಲೇ ಕೂತು ಕೆಲಸ ಮಾಡುವುದು ಸಿಗರೇಟು ಸೇದಿದಷ್ಟೇ ಅಪಾಯಕಾರಿ ಎಂದು ಅಧ್ಯಯನಗಳು ನಿರೂಪಿಸಿವೆ.
*ದೃಷ್ಟಿದೋಷದ ತಪಾಸಣೆ ಆರು ತಿಂಗಳಿಗೊಮ್ಮೆ ಯಾದರೂ ಮಾಡಿಸಿಕೊಳ್ಳಿ.
*ಕಣ್ಣಿನ ಸ್ನಾಯುಗಳನ್ನು ಮೇಲೆ, ಕೆಳಗೆ, ಎಡಕ್ಕೆ, ಬಲಕ್ಕೆಚಲಿಸುವ ವ್ಯಾಯಾಮ ರೂಢಿಸಿಕೊಳ್ಳಿ.
*ಜೀವಸತ್ವಗಳಿಂದ ಕೂಡಿರುವ ಹಸಿರು ಸೊಪ್ಪು, ಗಜ್ಜರಿ, ತಾಜಾ ಹಣ್ಣು ಸೇವನೆ ಮಾಡಿ. ಕೆಲಸದ ನಡುವೆ ನೀರು ಕುಡಿಯುತ್ತಿರಿ.
*ಮಲಗುವ ಎರಡು ಗಂಟೆಗಳ ಮೊದಲೇ ಗ್ಯಾಜೆಟ್ ಗಳಿಗೆ ಗುಡ್ನೈಟ್ ಹೇಳಿಬಿಡಿ.ಉತ್ತಮ ನಿದ್ದೆ, ವ್ಯಾಯಾಮ, ನಿಯಮಿತ ಜೀವನ ಶೈಲಿ ನಮ್ಮದಾಗಲಿ.. ಗ್ಯಾಜೆಟ್ ಗಳ ಸ್ಥಾನವೇನಿದ್ದರೂ ಆ ಬಳಿಕದ್ದು..
✍️ಡಾ.ಸೌಮ್ಯ ಕೆ.ವಿ. ತಜ್ಞವೈದ್ಯರು,
ತಾಲ್ಲೂಕ ಆಸ್ಪತ್ರೆ,ಯಲ್ಲಾಪೂರ
ಜಿ: ಉತ್ತರ ಕನ್ನಡ
ತುಂಬಾ ಚೆನ್ನಾಗಿದೆ ಹಾಗೂ ಪ್ರಸ್ತುತವಿದೆ ಮೇಡಂ
LikeLiked by 2 people
ಉತ್ತಮವಾದ ಮಾಹಿತಿ.
LikeLike
ಉತ್ತಮವಾದ ಪ್ರಾಸಂಗಿಕ (ಪ್ರಸ್ತುತ ) ಮಾಹಿತಿ
LikeLike