ಇಂದಿಗೆ ೨೧ ವರ್ಷಗಳ ಹಿಂದೆ ಅದು ೧೯೯೪ ಅನಿಸುತ್ತದೆ. ಕವಿ ಕತೆಗಾರ  ಪತ್ರಕರ್ತ  ಸ್ನೇಹಿತ ವೆಂಕಟರಮಣಗೌಡ , ನಾನು ಮತ್ತು ಸುನಂದಾ ಕಡಮೆ, ಧಾರವಾಡದ ನಮ್ಮ ಮನೆಯಲ್ಲಿ ಅಂದು ರಾತ್ರಿ ಎರಡು ಗಂಟೆಯ  ತನಕ, ನಮ್ಮೆಲ್ಲರಿಗೂ ಇಷ್ಟವಾದ  ಒಬ್ಬ  ಸುಪ್ರಸಿದ್ಧ   ಬರಹಗಾರನ ವಿಚಾರವಾಗಿ ಮಾತಾಡುತ್ತ ನಿದ್ದೆ ಹೋಗಿದ್ದೆವು.

ಮಾರನೇ ದಿನ ಬೆಳಿಗ್ಗೆ ಪತ್ರಿಕೆಯಲ್ಲಿ ಅದೇ ಸಾಹಿತಿ ಯ ಆಕಸ್ಮಿಕ ನಿಧನದ ಸುದ್ದಿ ಓದಿ ದಂಗಾದೆವು !! ಅವರು ಬೇರೆ ಯಾರೂ ಅಲ್ಲ,ಅವರ ಹೆಸರಿನಷ್ಟೇ ಮೋಹಕವಾಗಿದ್ದ,  ನಮ್ಮ  ಅತ್ಯಂತ  ಪ್ರೀತಿಯ  ಕವಿ, ಕತೆಗಾರ,  ಕಾದಂಬರಿಕಾರರಾದ   ‘ಸುಂದರ ನಾಡಕರ್ಣಿಯವರು’ !!!


೧೯೩೮ ರಲ್ಲಿ    ಉತ್ತರಕನ್ನಡದ    ಬಂಕಿಕೊಡ್ಲ – ಹನೇಹಳ್ಳಿಯಲ್ಲಿ ಹುಟ್ಟಿ, ಅಲ್ಲಿಯ ಆನಂದಾಶ್ರಮ ಹೈಸ್ಕೂಲಿನಲ್ಲೇ ಕಲಿತು, ಮುಂದೆ ಧಾರವಾಡದಲ್ಲಿ ಇಂಗ್ಲೀಷ್ ಎಂ.ಎ ಮುಗಿಸಿ, ಗುಜರಾತಿನ ಆನಂದ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಲೇ, ೧೦ ಕೃತಿಗಳನ್ನು (ಮಂಥನ, ಹಸಿರು ದೀಪ , ಉಸಿರು ಗಳ  ಬೀದಿಯಲ್ಲಿ, ಅಂತರದ  ನೀರು  ನೆಗಸು, ಮೋಹಿತರು,  ಗೋಡೆಗಳು,   ಅವರ ನಡುವೆ, ಸುದ್ದಿ,   ಮಂದಿ ಮನೆ,  ದೆಣಪೆಯಲ್ಲಿ  ನಿಂತು..  ರಚಿಸಿ,  ಕರ್ನಾಟಕ   ಸಾಹಿತ್ಯ   ಅಕಾಡೆಮಿ ಪ್ರಶಸ್ತಿಯನ್ನೂ ಸಹ ಪಡೆದಿದ್ದರು.


ಅತ್ಯಂತ ಸರಳ, ಸಜ್ಜನ, ಮನುಷ್ಯರನ್ನು ಮುಗ್ಧ ವಾಗಿ ಪ್ರೀತಿಸುವ ನನ್ನೂರಿನ ಸುಂದರ ನಾಡಕರ್ಣಿ ಯವರನ್ನು ಕನ್ನಡದ ಸಹೃದಯರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಿದೆ… (“ಅಂತರದ ನೀರು ನೆಗೆಸ” ಕವನ ಸಂಕಲನ ಬಿಡುಗಡೆಯ ಚಿತ್ರದಲ್ಲಿ ನನ್ನೊಡನೆ- ಪ್ರೊ.ವಿಷ್ಣು ನಾಯ್ಕ, ಪ್ರೊ.ಸುಂದರ ನಾಡಕರ್ಣಿ, ಡಾ.ಗೌರೀಶ ಕಾಯ್ಕಿಣಿ, ಪ್ರೊ.ಮೋಹನ ಹಬ್ಬು, ಮತ್ತು ಪ್ರೊ.ಜಿನದೇವ ನಾಯಕರನ್ನು ಕಾಣಬಹುದು.

✍️ಪ್ರಕಾಶ ಕಡಮೆ, ನಾಗಸುಧೆ   ಹುಬ್ಬಳ್ಳಿ