ಹೆಸರು   ನೋಡಿಯೇ  ಉಪ್ಪಿಟ್ಟು   ದ್ವೇಷಿಗಳು ಮೂಗು ಮುರಿದು ಪುಟ ತಿರುಗಿಸುತ್ತೀರಿ ಅಂತ ನನಗೆ  ಗೊತ್ತು.  ಹಾಗೇ   ನನ್ನಂಥ   ಉಪ್ಪಿಟ್ಟು ಪ್ರಿಯರು   ಮೊದಲು   ಈ ಪೇಜ್   ತೆಗೀತೀರಾ ಅಂತಾನೂ  ಬಲ್ಲೆ.  ಯಾರು  ಏನೇ  ಅಂದರೂ ಅನ್ನದಿದ್ದರೂ ಉಪ್ಪಿಟ್ಟಿನ ಖ್ಯಾತಿಗೆ ಮಾತ್ರ ಭಂಗ ವಿಲ್ಲ ಕಣ್ರೀ. ದಕ್ಷಿಣ ಭಾರತದ ನಮ್ಮ ಉಪ್ಪಿಟ್ಟನ್ನು ಈಗ  ಸ್ಟೈಲ್  ಆಗಿ  ಉಪ್ಮಾ ಅಂತ   ಕರೆದರೂ ರವಾ ಪೋರ್ಟ್ರಿಡ್ಜ್  ಎಂದರೂ ಹೇಗೆ ಕರೆದರೂ ಉಪ್ಪಿಟ್ಟಿನ ಮಹಿಮೆಯೇ ಬೇರೆ. ಅದರ ಖದರ್ರೇ ಬೇರೆ.ಎಲ್ಲರೂ ತಿಂತಾರೆ ಆದ್ರೆ ಅಯ್ಯೋಉಪ್ಪಿಟ್ಟಾ ಅನ್ನೋದಂತೂ  ತಪ್ಪಲ್ಲ.  ಇದು  ನೋಡಿ  ಪಾಪ ನಮ್ಮ ಉಪ್ಪಿಟ್ಟಿನ ಪಾಡು. 

ಮೊದಲ  ಬಾರಿ  ಉಪ್ಪಿಟ್ಟು  ಹೇಗೆ  ತಯಾರಾಗಿರ ಬಹುದು ಅಂತ ನನ್ನ ಕಲ್ಪನೆ/ಊಹೆ ಹೀಗೆ. ಸಜ್ಜಿಗೆ ಸತ್ಯನಾರಾಯಣ ಪ್ರಸಾದ ಎಲ್ಲರೂ ತಯಾರಿಸು ತ್ತಿದ್ದರು. ಬರೀ ಸಿಹಿ ತಿಂದು ತಿಂದು ಬೇಜಾರಾಗಿ ಯಾರೋ  ನನ್ನ  ತರ   ಹೊಸರುಚಿ   ಪ್ರಿಯರು ಒಂದಿನ   ಬೇರೆ  ತರಹ   ಮಾಡೋಣ     ಅಂದು ಕೊಂಡು  ಸಕ್ಕರೆ  ಬದಲು  ಉಪ್ಪು ಹಾಕಿ ಜೊತೆಗೆ ನಾಲ್ಕು  ಮೆಣಸಿನಕಾಯಿ  ಹಾಕಿರಬೇಕು.   ದಂಡಿ ಯಾಗಿ ತುಪ್ಪ ಬಿದ್ದು  ತಿನ್ನೋಕೆ  ಸೊಗಸಾಗಿರುತ್ತೆ. ಆಮೇಲೆ  ಒಂದೊಂದೇ  ಐಟಂಗಳು   ಸಾಸಿವೆ ಕಡಲೆ  ಬೇಳೆ,  ಉದ್ದಿನ  ಬೇಳೆ,  ಕಾಯಿ ತುರಿ ಸೇರುತ್ತಾ  ಹೋಗಿರಬೇಕು,  ಈಗಿನ  ಉಪ್ಪಿಟ್ಟಿನ ರೂಪ ಬಂದಿರಬೇಕು. 

ಗೃಹಿಣಿಯರಿಗಂತೂ ಇದು ನೆಚ್ಚಿನ ಬಂಟ. ಮಾಡ ಲಿಕ್ಕೆ ಸುಲಭ ಅಂತನೋ ಏನೋ ವಾರಕ್ಕೊಂದು ದಿನ  ಉಪ್ಪಿಟ್ಟು   ಬೆಳಗಿನ  ಉಪಹಾರಕ್ಕೆ   ಇದ್ದೇ ಇರುತ್ತದೆ.  ಇನ್ನು  ಹೇಳದೆ  ಕೇಳದೆ   ಅತಿಥಿಗಳು ಬಂದರಂತೂ ಆಪದ್ಬಾಂಧವ ಈ ಉಪ್ಪಿಟ್ಟೇ. ಸ್ವಲ್ಪ ಮೈ ಸರಿ ಇಲ್ಲದಾಗ ತಡವಾಗಿ ಎದ್ದಾಗ ಸಮಯ ಕ್ಕೊದಗುವುದು   ನಮ್ಮ  ಉಪ್ಪಿಟ್ಟು   ಅಲ್ಲದೇ ಇನ್ಯಾರು? ಸ್ವಿಗ್ಗಿ,ಜೊಮೆಟೊ ಅನ್ನಬೇಡಿ ಅವೆಲ್ಲಾ ನಮಗೆ ಸರಿ ಬರಾಕಿಲ್ಲ.

ವಧು  ಪರೀಕ್ಷೆಯ  ಉಪ್ಪಿಟ್ಟು,  ಕೇಸರಿ  ಬಾತು ಮರೆಯಲಾಗುತ್ತಿದೆಯೇ? ಆಗ ಪ್ರಚಲಿತವಿದ್ದ ಜೋಕ್ ಏನು ಗೊತ್ತಾ? ಯಾರ ಮನೆ ಉಪ್ಪಿಟ್ಟು ತುಂಬಾ ಟೇಸ್ಟಿನೋ ಅವರ ಮನೆ ಹುಡುಗಿ ಓಕೆ ಅಂತ.  ಆದ್ರೆ  ನನ್ನ  ಡೌಟು  ಏನು  ಗೊತ್ತಾ? ಹುಡುಗನಿಗೆ ಹುಡುಗಿ ನೋಡುವ ಸಂಭ್ರಮದಲ್ಲಿ ಉಪ್ಪಿಟ್ಟಿನ ರುಚಿ ಗೊತ್ತಾಗ್ತಿತ್ತಾ ಅಂತಾ? 😁😁 


ಬೀನ್ಸ್, ಕ್ಯಾರೆಟ್, ದಪ್ಪಮೆಣಸಿನಕಾಯಿ ಕೋಸು ಹಾಕಿ  ವಿವಿಧ  ತರಕಾರಿಗಳ  ಉಪ್ಪಿಟ್ಟು,  ಬದನೆ, ದಪ್ಪ ಮೆಣಸು,  ಟೊಮೆಟೊ,  ಆಲೂಗಡ್ಡೆಗಳ ಖಾರಾಬಾತ್   ಅಥವಾ   ಬರೀ    ಉಪ್ಪಿಟ್ಟು ತರಕಾರಿಯ  ಸೇವನೆಯ  ಅಗತ್ಯವನ್ನೂ  ಪೂರೈ ಸುತ್ತದೆ. ಈಗ ಕಾಳುಗಳ ಉಪ್ಪಿಟ್ಟಿನ ವಿಷಯಕ್ಕೆ ಬರ್ತೀನಿ.  ಹಸಿ ಬಟಾಣಿಯ  ಉಪ್ಪಿಟ್ಟು,  ಹಸಿ ತೊಗರಿ ಕಾಳಿನ  ಉಪ್ಪಿಟ್ಟು,   ಹಸಿ   ಅಲಸಂದೆ ಕಾಳಿನ ಉಪ್ಪಿಟ್ಟು ಆಹಾ!  ಆದರೆ ಉಪ್ಪಿಟ್ಟುಗಳ ರಾಜ ಎಂದರೆ ನಮ್ಮ ಅವರೆ ಕಾಳಿನ ಉಪ್ಪಿಟ್ಟು. ಎಳೆ ಅವರೇ ಕಾಳಿಗೆ   ದಂಡಿಕಾಯಿ   ತುರಿ   ಹದ ವಾಗಿ ಮೆಣಸು, ಜೀರಿಗೆ, ಮೆಣಸಿನಕಾಯಿ, ಶುಂಠಿ ಬೆರೆಸಿ ಮಾಡಿದ ಕೊತ್ತಂಬರಿ ಕರಿಬೇವು ಉದುರಿ ಸಿದ  ನಿಂಬೆರಸ. ಬೆರೆಸಿದ  ಕಾಳುಪ್ಪಿಟ್ಟಿನ  ಮೇಲೆ ಎರಡು ಮಿಳ್ಳೆ ತುಪ್ಪ ಬಿದ್ದರಂತೂ……. ಸರ್ವಜ್ಞ ತಿಂದಿದ್ದರೆ ಖಂಡಿತ ಸ್ವರ್ಗಕ್ಕೆ ಕಿಚ್ಚು ಹಚ್ಚು ಅಂತ ಉಪ್ಪಿಟ್ಟಿನ ಬಗ್ಗೇನೇ ಹೇಳ್ತಿದ್ದ.


ಈ ತರಹದ   ಉಪ್ಪಿಟ್ಟನ್ನು  ಬರಿ  ಅದೊಂದನ್ನೇ ತಿಂದರೂ ಚೆಂದ, ಬೇರೆ ಬೇರೆ ಅಲಂಕಾರಗಳನ್ನು ಸೇರಿಸಿ  ಸವಿದರೂ  ಅಂದ.  ಇದರ  ಮೊದಲ ಗೆಳೆಯ ಸಜ್ಜಿಗೆ ಅಥವಾ ಕೇಸರಿ ಬಾತು. ಈಗೀಗ ಜಾಮೂನೂ ಜನಪ್ರಿಯ ಆಗ್ತಿದೆ. ಸಿಹಿ ಪ್ರಿಯರು ಹಾಗೂ ಕೆಲವೊಮ್ಮೆ ಖಾರವಾದ್ರೆ ಸಕ್ಕರೆ ಜತೆಗೆ ಬಾಳೆಹಣ್ಣು  ಉತ್ತಮ  ಕಾಂಬಿನೇಷನ್.  ಇನ್ನು ಮಾವಿನ ಕಾಯಿ,  ಹುಣಸೆ ರಸಗಳು   ಅದ್ಭುತ ಜೊತೆಗಾರರು. ತೊಕ್ಕುಗಳೂ ನಡೆಯುತ್ತವೆ. ಚಟ್ನಿ ಪುಡಿಯಂತೂ ಬೆಸ್ಟ್ ಕಾಂಬಿನೇಷನ್.ಕೊನೆಯಲ್ಲಿ ಉಪ್ಪಿಟ್ಟಿನ ಜೊತೆ ಕೆನೆ ಮೊಸರು ಹಾಕಿ ಸವಿದರೆ ಅದರ  ಮುಂದೆ ಪಂಚತಾರಾ ಭಕ್ಷ್ಯ-ಭೋಜ್ಯಗಳು ಯಾತಕ್ಕೆರೀ?. ಹೀಗೆ  ಸರ್ವ  ಕಾಲಗಳಿಗೂ  ಸರ್ವ ಋತುಗಳಿಗೂ ಹೊಂದುವ ತಿಂಡಿ ಇದು. ಪ್ರವಾಸ ಕ್ಕಾಗಲಿ, ಪ್ರಯಾಣಕ್ಕಾಗಲಿ ಉಪಯುಕ್ತ. ಇನ್ನೂ ಓದಲು ವಿದೇಶಕ್ಕೆ  ಹೋಗುವ  ಮಕ್ಕಳಿಗೆ   ರೆಡಿ ಉಪ್ಪಿಟ್ಟುಮಿಕ್ಸ್ ಮನೆಯಲ್ಲೆ ತಯಾರುಮಾಡೋ ಅಥವಾ   ಸಿದ್ಧ   ಉಪಾಹಾರದ   ಪ್ಯಾಕೆಟ್ಟೂ ಕಳಿಸಿಯೇ ಕಳುಹಿಸುತ್ತಾರೆ.ಎಂಟಿಆರ್ ಮಯ್ಯ ಅವರುಗಳ   ರೆಡಿ ಟು ಈಟ್    ಸರಣಿಯಲ್ಲಿ ಉಪ್ಪಿಟ್ಟಿಗೆ  ಸಿಂಹಪಾಲು.  ಇನ್ನು  ಶ್ರೇಷ್ಠ   ಶಿಕ್ಷಣ ತಜ್ಞ    ದಿವಂಗತ  ನರಸಿಂಹಯ್ಯನವರು  ತಾವೇ ಹೇಳಿಕೊಂಡಂತೆ   ಅವರ   ವಿದೇಶ   ವಾಸ್ತವ್ಯದ ಎರಡು ವರ್ಷ ಪೂರ್ತಿ ಅವರು ದಿನಾ ಉಪ್ಪಿಟ್ಟು ಮಾಡಿ ತಿಂದುಕೊಂಡೇ ಕಳೆದಿದ್ದರಂತೆ.

ಇಷ್ಟಾದರೂ ಇದರ ಮಹಿಮೆಯನ್ನು  ಅರಿಯದ ಗಾವಿಲರು ಮೂಗು ಮುರಿಯುತ್ತಲೇ ಇದ್ದಾರೆ.  ಉಪ್ಪಿಟ್ಟ ನ್ನು ಮಾತ್ರ ಹಾಸ್ಯಕ್ಕೆ ಬಳಸಿಕೊಳ್ತಾಲೇ ಇರ್ತಾರೆ. ಕನಿಕರ ಉಕ್ಕುತ್ತೆ. ಉಪಕಾರ  ಸ್ಮರಣೆ ಮಾಡದೆ  ಇರೋದು  ನ್ಯಾಯಾನಾ?   ಉಪ್ಪಿಟ್ಟಿ ನಷ್ಟು    ಅಪಹಾಸ್ಯಕ್ಕೆ   ಗುರಿಯಾದ    ತಿಂಡಿ   ಮತ್ತೊಂದಿಲ್ಲ. ವ್ಯಂಗ್ಯಚಿತ್ರ   ಚುಟುಕು   ಎಲ್ಲದ   ರಲ್ಲೂ ಉಪ್ಪಿಟ್ಟಿಗೇ ಕುಟುಕು. ಮುನಿಸಿಕೊಂಡ  ಪತ್ನಿ   ಮಾಡುವ   ಉಪಾಹಾರ   ಕಾಂಕ್ರೀಟು ಎಂಬೆಲ್ಲಾ ಅಭಿದಾನ. ನಿಜಕ್ಕೂ ಕೃತಘ್ನರು ಕಣ್ರೀ ನಾವು.  ನಾನಂತೂ  ಉಪ್ಪಿಟ್ಟು  ಪ್ರಿಯರ   ಸಂಘ ದವಳು.

ನೀವೇನಂತೀರಿ? ಹೂಂ    ಅಂತೀರಾ   ಉಹೂಂ ಅಂತೀರಾ? ಉಪ್ಪಿಟ್ಟು ಬೇಕು ಅಂತೀರಾ ಬೇಡ ಅಂತೀರಾ?ಬೇಕು ಅಂದ್ರೆ ಒಂದ್ ಸಾರಿ ಕೂಗಿಬಿಡಿ ಈ ಘೋಷಣೆ:
             ಬೋಲೋ ಉಪ್ಪಿಟ್ಟು ಕೀ ಜೈ

✍️ಸುಜಾತಾ ರವೀಶ್,ಮೈಸೂರು