ಹತ್ತಿರದಿಂದ ಮಾತಾಡುವಾಗ ಹಲವರ ಬಾಯಿ ಕೆಟ್ಟ ವಾಸನೆ ಬೀರುವುದು ನಮ್ಮ ಅನುಭವಕ್ಕೆ ಬರುತ್ತದೆ. ಶಿಷ್ಟಚಾರದ ಕಾರಣ ಏನೇ ಸಹಿಸಿಕೊಂಡರೂ ನಮ್ಮ ದೇಹವು ಅಂತವರಿಂದ ನಿಯಂತ್ರಣ ಮೀರಿ ದೂರ ಸರಿಯಲು ತವಕಿಸುವುದು ನಿಜ. ಪಾರ್ಟಿ ಗಳಲ್ಲಿ, ಹೋಟಲುಗಳಲ್ಲಿ, ಮನೆಯಲ್ಲಿ ಕೆಲವೊಮ್ಮೆ ಭರ್ಜರಿ ಔತಣ ಮುಗಿಸಿ ಹಲ್ಲುಜ್ಜದೆ ಮಲಗಿದರೆ ಮರುದಿನ ನಮ್ಮ ಬಾಯಿಯೇ ಕೆಟ್ಟ ವಾಸನೆ ಬೀರುವುದನ್ನೂ ಗಮನಿಸಬಹುದು.
ಬಾಯಿ ಕೆಟ್ಟವಾಸನೆ ಬೀರುವುದು ಎಲ್ಲರ ಅನುಭವಕ್ಕೆ ಆಗಾಗ್ಗೆ ಬರುತ್ತದೆ ಮತ್ತು ಇದೊಂದು ಸಾಮಾನ್ಯ ಅನುಭವ. ಆದರೆ 25% ರಷ್ಟು ಮಂದಿಯಲ್ಲಿ ಇದು ಖಾಯಿಲೆ ಯ ರೂಪತಾಳಿ ಬಾಯಿ ಸದಾಕಾಲ ದುರ್ನಾತ ಬೀರುತ್ತದೆ. ವಯಕ್ತಿಕವಾಗಿ ಇದು ಮನುಷ್ಯನಲ್ಲಿ ಸಂಕೋಚಗಳನ್ನು ಹುಟ್ಟಿಸು ತ್ತದೆ. ಆತ್ಮವಿಶ್ವಾಸ ಕುಸಿಯುವಂತೆ ಮಾಡು ತ್ತದೆ. ಎಷ್ಟು ಬಾರಿ ಹಲ್ಲುಜ್ಜಿದರೂ, ನಾಲಿಗೆ ತಿಕ್ಕಿದರೂ, ಘಮ ಘಮಿಸುವ ಚ್ಯೂಯಿಂಗ್ ಗಮ್ ಜಗಿದರೂ, ಜಗ್ಗದ ಈ ಬಾಯಿಯ ದುರ್ವಾಸನೆ ನಿಧಾನವಾಗಿ ಇವರಲ್ಲಿ ಸಾಮಾಜಿಕ ಹಿಂಜರಿಕೆಯನ್ನು ಹುಟ್ಟುಹಾಕು ತ್ತದೆ.
ಬಾಯಿಯ ದುರ್ನಾತದ ಈ ವ್ಯಾಧಿಗೆ ಇಂಗ್ಲೀಷಿನಲ್ಲಿ ‘ಹ್ಯಾಲೈಟೋಸಿಸ್’ ಎನ್ನು ತ್ತಾರೆ. ಈ ವಾಸನೆಗೆ ಕಾರಣವಾದ 90% ಕಾರಣಗಳು ಬಾಯಿಯಲ್ಲೇ ಕಂಡುಬರುವು ದರಿಂದ ಇದು ದಂತ ವೈದ್ಯಕೀಯಕ್ಕೆ ಸಂಭಂದಪಟ್ಟ ತೊಂದರೆ ಎಂದು ಗುರುತಿ ಸುತ್ತಾರೆ. ಹಲ್ಲಿನ ನಡುವೆ, ಬಾಯಿಯಸಂಧಿ ಗೊಂದಿಗಳಲ್ಲಿ ಉಳಿದುಬಿಡುವ ಆಹಾರದ ಸಣ್ಣ ತುಣುಕುಗಳನ್ನು ಬ್ಯಾಕ್ಟೀರಿಯಾಗಳು ಪಚನಗೊಳಿಸಿದಾಗ ಅಸ್ಥಿರ ಸಂಯುಕ್ತ ಗಂಧಕಾಮ್ಲದ (volatile sulphur compound) ಉತ್ಪದನೆಯಾಗುತ್ತದೆ. ಇದಕ್ಕೆ ಕೊಳೆತ ಮೊಟ್ಟೆಯ ವಾಸನೆಯಿರುವ ಕಾರಣ ಇದು ನಮ್ಮ ಉಸಿರಿನ ಜೊತೆಗೆ ಬೆರೆತು ಕೆಟ್ಟ ವಾಸನೆಯನ್ನು ಬೀರುತ್ತದೆ.
ಇದೇನು ಹೊಸ ಖಾಯಿಲೆಯೇ?
ಈಜಿಪ್ಟಿನ 1550 ರ ಪ್ಯಾಪಿರಸ್ ಹಾಳೆಗಳ ಮೇಲೆ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವ ತಂತ್ರಗಳ ಉಲ್ಲೇಖವಿದೆ. ಗ್ರೀಕರು-ರೋಮನ್ನರ ಕಾಲದ ಹಿಪ್ಪೋಕ್ರೇಟ ಸ್ ಕೆಂಪುವೈನು ಮತ್ತು ಮಸಾಲೆಗಳ ಮಿಶ್ರಣಗಳಲ್ಲಿ ಬಾಯ್ತೊಳೆದಲ್ಲಿ, ಬಾಯಿಯ ದುರ್ಗಂಧವನ್ನು ಹೋಗಲಾಡಿಸಬಹುದು ಎಂದಿದ್ದಾನೆ. ಹೆಂಗಸರಿಗೆ ಮಾರ್ಬಲ್ಲಿನ ಪುಡಿಯ ಮಿಷ್ರಣವನ್ನು ಹೇಳುತ್ತಾನೆ. ಪ್ರಾಚ್ಯ ಇಸ್ಲಾಮರ ಉಲ್ಲೇಖಗಳಲ್ಲಿ ಬೇವಿನ ಮರದ ಕಡ್ಡಿಗಳಲ್ಲಿ ಹಲ್ಲನ್ನು ಮತ್ತು ನಾಲಗೆ ಯನ್ನು ತಿಕ್ಕಲು ಉಪದೇಶಿಸಲಾಗಿದೆ. ಹಿಬ್ರೂಗಳು ಬಾಯಿಯ ತಡೆಯಲಾಗದ ದುರ್ನಾತ ವಿವಾಹ ವಿಚ್ಚೇದನಕ್ಕೆ ತಕ್ಕ ಕಾರಣ ಎಂಬ ಶಾಸನವನ್ನೇ ಜಾರಿಯಲ್ಲಿಟ್ಟಿ ದ್ದರು!! ಚೈನೀಸ್ ಚಕ್ರವರ್ತಿಗಳು ಕೆಲವರು ತಮ್ಮ ಭೇಟಿಗೆ ಬರುವವರು ಲವಂಗ ಜಗಿದು ನಂತರ ಮಾತುಕತೆಗೆ ಬರಬೇಕೆಂಬ ನಿಯಮವನ್ನು ಜಡಿದಿದ್ದರು!
ವೈದ್ಯಶಾಸ್ತ್ರ ಈ ಬಾಯಿಯ ವಾಸನೆಯ ಬಗ್ಗೆ ಸಂಶೋಧನೆ ನಡೆಸಲು ಶುರುಮಾ ಡಿದ್ದು 1777-1783 ರಲ್ಲಿ. ಗಿನಿ ಪಿಗ್ ಗಳ ಬಾಯಲ್ಲಿ ಕಾರ್ಬನ್ ಡೈ ಆಕ್ಸ್ ಯಿಡ್ ಇರು ವುದನ್ನು ಕಂಡುಹಿಡಿದ. ಆದರೆ ಮನುಷ್ಯರ ಲ್ಲಿ ಇದನ್ನು ತೋರಿಸಲಾಗಲಿಲ್ಲ. ನಂತರ ಬಂದ ಸಂಶೋಧಕರು 1857 ಮತ್ತು 1898ರಲ್ಲಿ ಮನುಷ್ಯರ ಬಾಯಲ್ಲಿ ‘ಅಸಿಟೋನ್’ ಉತ್ಪಾದನೆಯಾಗುವುದನ್ನ ದೃಢಪಡಿಸಿ ಬಾಯಿಯ ದುರ್ಗಂಧದಲ್ಲಿ ಅದರ ಪಾತ್ರವನ್ನು ಜಾಹೀರಾತುಗೊಳಿಸಿ ದರು. 1971ರಲ್ಲಿನೋಬೆಲ್ ಪಾರಿತೋಷಕ ವನ್ನು ಪಡೆದ ಲೈನ್ಸ್ ಪಾಲಿಂಗ್ಮನುಷ್ಯನ ಉಸಿರಿನಲ್ಲಿ 250 ತರದ ಸಂಯುಕ್ತ ಅನಿಲ ಗಳಿರುವುದನ್ನು ಪ್ರತಿಪಾದಿಸಿದ. ಆದರೆ ಡಾ.ಜೋಸೆಫ್ ಟಾನ್ಜೆಯ್ ಈ ಅನಿಲಗ ಳಲ್ಲಿ ಗಂಧಕಾಮ್ಲದ ಸಂಯುಕ್ತ ಅನಿಲಗಳು ಬಾಯಿಯ ದುರ್ನಾತಕ್ಕೆ ಮುಖ್ಯ ಕಾರಣ ಎಂದು 1964 ರಲ್ಲಿ ದೃಢಪಡಿಸಿದ. ನಂತರ ವೂ ಈ ನಿಟ್ಟಿನಲ್ಲಿ ಕೆಲಸ ಮುಂದುವರೆಸಿದ. ಈತ ಕಟ್ಟಿದ 16 ದೇಶಗಳ 140 ಸಂಶೋಧ ಕರನ್ನು ಒಳಗೊಂಡ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಬ್ರೆತ್ ಓಡರ್ ರಿಸರ್ಚ್ ಸಂಸ್ಥೆ 2000ದಲ್ಲಿ ಆತನ ಮರಣದ ನಂತ ರವೂ ಈ ಬಗ್ಗೆ ಕೆಲಸವನ್ನು ಮುಂದುವರೆ ಸಿದೆ.
ಬಾಯಿ ವಾಸನೆ ಬರುವುದೇಕೆ?
ಆರೋಗ್ಯಕರವಾದ ಬಾಯಲ್ಲಿ ಕೂಡ ಸಂಯುಕ್ತ ಸಲ್ಫರ್ ಅನಿಲ ಇದ್ದರೂ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ಯಾಕೆಂದರೆ ಇದನ್ನು ಉತ್ಪಾದಿಸುವ ಬ್ಯಾಕ್ಟೀರಿಯಗಳ ಸಂಖ್ಯೆ ಬಹಳ ಕಡಿಮೆಯಿರುತ್ತದೆ.
ಬಾಯಿಯ ದುರ್ವಾಸನೆ ಎರಡು ತರಹದ್ದು. ಒಂದು ನಾವೇ ದುರ್ವಾಸನೆ ಬರುವಂತೆ ಮಾಡಿಕೊಳ್ಳುವುದು. ಇನ್ನೊಂದು ಅನಾ ರೋ ಗ್ಯಗಳಿಗೆ ಸಂಬಂಧಪಟ್ಟಂತದ್ದು.
ವಾಸನೆಯ ಪದಾರ್ಥ, ಖಾದ್ಯಗಳನ್ನು ಸೇವಿಸುವುದು, ಸಿಗರೇಟು ಸೇವನೆ ಇತ್ಯಾದಿ ಗಳು ಕೆಟ್ಟ ವಾಸನೆಯನ್ನು ನೀಡಿದರೂ ಇದು ತಾತ್ಕಾಲಿಕ. ಹಲ್ಲುಗಳನ್ನು ಸರಿಯಾಗಿ ಉಜ್ಜದಿರುವುದು, ಹುಳುಕು ಹಲ್ಲುಗಳು, ಸೋಂಕು ರೋಗಗಳು, ವಸಡಿನ ಖಾಯಿಲೆ ಗಳು, ವಸಡಿನಲ್ಲಿ ಅಡಗುವ ಕಿಟ್ಟ ಇತ್ಯಾದಿ ಗಳು ಇತರೆ ಸಾಮನ್ಯ ಕಾರಣಗಳು. ಇವನ್ನು ಸರಿಪಡಿಸಬಹುದು.
ಇದರ ಜೊತೆ,ದೇಹಕ್ಕೆ ಸಂಬಂಧಪಟ್ಟ ಸಕ್ಕರೆ ಖಾಯಿಲೆ, ಆಸಿಡ್ ರಿಫ್ಲೆಕ್ಸ್ ಖಾಯಿಲೆ, ಸೈನಸ್ಸಿನ ತೊಂದರೆಗಳು,ಎದೆಯ ಸೋಂಕು ರೋಗಗಳು, ಜೊಲ್ಲು ರಸದ ಗ್ರಂಥಿಗಳ ಖಾಯಿಲೆಗಳು ಕೂಡ ಬಾಯಿಯ ಕೆಟ್ಟ ವಾಸನೆಗೆ ಕಾರಣಗಳು. ಸಕ್ಕರೆ ಕಾಯಿಲೆ ಯಲ್ಲಿ ಕಾಣುವ ಕೀಟೋಸಿಸ್ ನ ವಾಸನೆ ಯಿಂದಲೇ ಹಲವರ ಸಕ್ಕರೆ ಖಾಯಿಲೆಯ ತಪಾಸಣೆಗೆ ನಡೆದು ರೋಗವಿರುವುದು ದೃಡಪಟ್ಟಿದೆ.
ಬಾಯಿಯ ವಾಸನೆಯನ್ನು ತಡೆಗಟ್ಟು ವುದು ಹೇಗೆ?
ಬಾಯಲ್ಲಿ ಹಲ್ಲುಗಳ ಮೇಲೆ, ವಸಡುಗಳ ಒಳಗಿನ ಬೇರುಗಳ ಮೇಲೆ ಬೆಳೆಯುವ ಕಿಟ್ಟದ ಒಂದು ತೆಳು ಪದರ ಮಿಲಿಯನ್ ಗ ಟ್ಟಳೆ ಬ್ಯಾಕ್ಟೀರಿಯಗಳಿಗೆ ವಾಸಸ್ಥಾನವಾಗಿ ರುತ್ತದೆ. ಯಾವುದೇ ಗುಳಿಗೆಗಳ ಮೂಲಕ ಇದನ್ನು ಹೋಗಲಾಡಿಸಲಾಗುವುದಿಲ್ಲ. ಉತ್ತಮ ಅಭ್ಯಾಸ ಕ್ರಮದ ಹಲ್ಲುಜ್ಜುವಿಕೆ ಯಿಂದ, ಹಲ್ಲುಗಳ ಮಧ್ಯೆ ಉಪಯೋಗಿಸ ಲಿರುವ ಡೆಂಟಲ್ ಫ್ಲಾಸ್ ಮತ್ತು ಸಣ್ಣಬ್ರಷ್ ಗಳ ಬಳಕೆಯಿಂದ ಮತ್ತು ಹಲ್ಲನ್ನು ಶುಚಿಗೊ ಳಿಸುವ ಮೌತ್ ವಾಷ್ ಗಳ ಬಳಕೆಯಿಂದ ಈ ಕಿಟ್ಟದ ಪದರ ಬೆಳೆಯದಂತೆ ಎಚ್ಚರವಹಿ ಸಬಹುದು. ಪ್ರತಿನಿತ್ಯ ನಾಲಿಗೆಯನ್ನು ಬ್ರಷ್ ಅಥವಾ ನಾಲಿಗೆಯನ್ನು ಶುಚಿಗೊಳಿಸುವ ಸಾಧನಗಳನ್ನು ಬಳಸಿ ಶುಚಿಗೊಳಿಸಿಕೊಳ್ಳ ಬೇಕು. ಇದರಿಂದ ಬ್ಯಾಕ್ಟೀರಿಯಗಳ ಸಂಖ್ಯೆ ಯನ್ನು ಸದಾ ಕಾಲ ಹತೋಟಿಯಲ್ಲಿಟ್ಟು ಬಾಯಿ ಕೆಟ್ಟ ವಾಸನೆ ಬಾರದಂತೆ ನೋಡಿ ಕೊಳ್ಳಬಹುದು. ಕ್ಲೋರ್ ಹೆಕ್ಸಿಡಿನ್ ಗ್ಲುಕೊ ನೇಟ್ (Chlorhexidine gluconate) ಅನ್ನುವ ರಾಸಾಯನಿಕವಿರುವ ಬಾಯಿ ತೊಳೆಯುವ ದ್ರಾವಣ ಈ ನಿಟ್ಟಿನಲ್ಲಿ ಬಹಳ ಪರಿಣಾಮಕಾರಿ ಎಂದು ಕಂಡುಬಂದಿದೆ. ಇದರ ಜೊತೆ ಜಿಂಕ್ ಅಸಿಟೇಟ್ (zinc acetate) ಇರುವ ಮೌತ್ ವಾಷ್ ಸಿಕ್ಕಲ್ಲಿ ಇನ್ನೂ ಉತ್ತಮ.ಇವೆರಡೂ ಇದ್ದಲ್ಲಿ ಬ್ಯಾಕ್ಟೀ ರಿಯಗಳನ್ನು ಕಡಿಮೆ ಮಾಡಿ , ಅವುಗಳು ಉತ್ಪಾದಿಸುವ ಅನಿಲಗಳನ್ನುತಟಸ್ಥಗೊಳಿಸ ಬಹುದು.
ಹಾಗೂ ನಮ್ಮ ಹತೋಟಿ ಮೀರಿ ಈ ಕಿಟ್ಟದ ಪದರ ನಮ್ಮ ಬಾಯಲ್ಲಿ ಬೆಳೆದರೆ, ಅದನ್ನು ದಂತ ವೈದ್ಯರ ಬಳಿ ಕಾಲ ಕಾಲಕ್ಕೆ ಹೋಗಿ ತೆಗೆಸಿಕೊಳ್ಳಬೇಕು. ರೋಗ ಉಲ್ಬಣವಾದ ನಂತರ ಇದರ ನಿಯಂತ್ರಣ ಬಹಳ ಕಷ್ಟ. ಕಾರಣ ಈ ಕಿಟ್ಟದ ತೆಳು ಪದರ ನಮ್ಮ ವಸಡಿನ ಕೆಳಗಿನ ಹಲ್ಲಿನ ಬೇರುಗಳ ಮೇಲೆ ಬೆಳೆದು ಬಿಡುತ್ತದೆ. ಈ ಕಾರಣ ವಸಡಿನ ಹಲವು ಖಾಯಿಲೆಗೆ ಇದು ನಾಂದಿಯಾಗು ತ್ತದೆ. ಇದನ್ನು ತಲುಪಲು ಸಣ್ಣ ವಸಡಿನ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಹಲವು ಬಾರಿ ಈ ಪದರದ ಬ್ಯಾಕ್ಟೀರಿಯಾ ಗಳು ಗಂಟಲು, ಎದೆ, ಹೃದಯ ಇತ್ಯಾದಿ ಸಂಬಂಧಿ ಖಾಯಿಲೆಗಳಲ್ಲಿ ಇರುವುದು ಕಂಡುಬಂದಿದೆ.
ಈ ಕಿಟ್ಟ ಜನರಿಗೆ ಯಾವುದೇ ನೋವನ್ನು ತರದೆ ಬೆಳೆದುಕೊಳ್ಳುವ ಕಾರಣ ಎಷ್ಟೋ ಮಂದಿಗೆ ಇದರ ಬಗ್ಗೆ ಪರಿವೆ ಹರಿಯುವುದೆ ಇಲ್ಲ. ದಂತ ವೈದ್ಯರಿಗೂ ಇವರಿಗೆ ಮನವ ರಿಕೆ ಮಾಡಿಕೊಡುವುದು ಕಷ್ಟವಾಗುತ್ತದೆ. ಬಾಯಿಯ ಕೆಟ್ಟವಾಸನೆ ಇವರನ್ನು ಜಾಗೃತ ಗೊಳಿಸಬೇಕಷ್ಟೆ.
ಬಾಯಿಯ ದುರ್ವಾಸನೆಗೆ ಪರಿಹಾರ ಗಳು
ಹಲವರಿಗೆ ತಮ್ಮ ಬಾಯಿ ವಾಸನೆ ಹೊಡೆ ಯುತ್ತದೆ ಎನ್ನುವುದೇ ಗೊತ್ತಿರುವುದಿಲ್ಲ!. ಇವರಿಗೆ ತಮ್ಮ ಬಾಯಿಯ ಈ ಕೆಟ್ಟ ಗಂಧದ ಅಭ್ಯಾಸವಾಗಿ ಬಿಟ್ಟಿರುವುದರಿಂದ ವ್ಯತ್ಯಾಸ ವೇ ತಿಳಿಯುವುದಿಲ್ಲ. ಇನ್ನು ಕೆಲವರಿಗೆ ಇದರ ಅರಿವಿರುತ್ತದೆ. ಮನೆ ಮಂದಿಯೋ, ಉತ್ತಮ ಗೆಳೆಯರೋ, ಸಂಗಾತಿಯೋ ಇವರಿಗೆ ಮನವರಿಕೆ ಮಾಡಿಕೊಡುವುದ ರಿಂದ ಇವರಲ್ಲಿ ಈ ತೊಂದರೆಯನ್ನು ನಿವಾರಿಸಿಕೊಳ್ಳುವ ಪ್ರಬಲ ಇಚ್ಚೆಯಿರುತ್ತದೆ
ಮತ್ತೆ ಕೆಲವರಲ್ಲಿ ಯಾವ ಕೆಟ್ಟ ವಾಸನೆಯಿ ಲ್ಲದಿದ್ದರೂ ತಮ್ಮ ಬಾಯಿವಾಸನೆ ಬಂದಂತ ಭಾವವಿರುತ್ತದೆ. ಇವರಲ್ಲಿ ಆಳವಾದ ಮಾನ ಸಿಕ (OCD-obsessive cleaning disorder) ಅಥವಾ ಮತ್ತಿತರ ತೊಂದರೆಗ ಳಿರಬಹುದು.
ಬಾಯಿಯ ಕೆಟ್ಟ ವಾಸನೆಯ ತೊಂದರೆಯಿ ರುವವರು ಮೊದಲು ಅದನ್ನು ಒಪ್ಪಿಕೊಳ್ಳ ಬೇಕು. ಇದುಸಂಕೋಚದ ವಿಚಾರವಾದರೂ ಹಿಂಜರಿಕೆಯನ್ನು ತಂದರೂ, ಬಾಯಿ ಬಿಟ್ಟು ಹಲವರಲ್ಲಿ ತಮಗೆ ಈ ತೊಂದರೆಯಿರುವು ದನ್ನು ಹೇಳಿಕೊಂಡು ಸಹಾಯ ಸಲಹೆಗಳ ನ್ನು ಪಡೆಯಬೇಕು. ಸುಮ್ಮನೆ ಬೇರೆಯವ ರಿಂದ ದೂರವಿರುವುದು, ಕಡಿಮೆ ಮಾತಾ ಡುವುದು, ಸ್ವಾಭಿಮಾನಕ್ಕೆ ಧಕ್ಕೆ ತಂದುಕೊ ಳ್ಳುವುದು ಅನಗತ್ಯ. ಸಂಬಂಧಗಳನ್ನು ಮುರಿದುಕೊಳ್ಳುವುದು ಕೂಡ ಅನಾವಶ್ಯಕ. ವಾಸನೆಯನ್ನು ಕಡಿಮೆ ಮಾಡಲು ಲವಂಗ ತಿನ್ನುವುದು, ಚ್ಯೂಯಿಂಗ್ ಗಮ್ ಅಗಿಯು ವುದು ಇವು ಬಹಳ ತಾತ್ಕಾಲಿಕವಾದ ಪರಿಹಾರಗಳು.
ದಂತವೈದ್ಯರನ್ನು ನೋಡಿ, ಚಿಕಿತ್ಸೆ ಪಡೆದು ಪ್ರತಿದಿನ ಬಾಯಿಯ ಸ್ವಚ್ಚತೆಯ ಬಗ್ಗೆ ನಿಗಾ ವಹಿಸಬೇಕು. ಬಾಯಿಯ ವಾಸನೆಯನ್ನು ತಡೆಗಟ್ಟಲು ವರ್ಷಗಟ್ಟಲೆ ಶ್ರಮವಹಿಸಿ ನಂತರವೂ ಪ್ರತಿದಿನ ಉತ್ತಮ ಕ್ರಮದಲ್ಲಿ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕಾಗುತ್ತದೆ. ಬಾಯಿಯ ದುರ್ವಾಸನೆಯ ತೊಂದರೆ ಬರದಂತೆ ಮುಂಜಾಗ್ರತೆವಹಿಸು ವುದು ಇನ್ನೂ ಉತ್ತಮ. 🔆🔆🔆
✍️ಡಾ.ಪ್ರೇಮಲತ ಬಿ. ದಂತವೈದ್ಯರು, ಲಂಡನ್,
ಇಂಗ್ಲೆಂಡ್
ಬಹಳ ಉಪಯುಕ್ತಕಾರಿ ಬರಹ.
LikeLike