ಮಧುಶಾಲೆಯ ಬಾಗಿಲು ತೆರದಿದೆ ಒಳಗೆ ಬಾ
ಸಮಾನತೆಯ ಕೂಗು ಕರೆದಿದೆ ಒಳಗೆ ಬಾ

ಅಲೌಕಿಕ ಸುಖದ ಸ್ವರ್ಗ ಸೋಪಾನ ಇಲ್ಲಿಹದು
ಒಂದು ಗುಟುಕು ಜಗ ಮರೆಸಿದೆ ಒಳಗೆ ಬಾ

ಒಡೆದು  ರೋಧಿಸುವ  ಮನಸುಗಳ  ಭಾವಸಂಗಮ
ಗಿಲಾಸದಲಿ ನೆತ್ತರು ತುಂಬಿ ತುಳುಕಿದೆ ಒಳಗೆ ಬಾ

ಸೀಸೆಗಳು ನೋಡಿದಾಗಲೆಲ್ಲ ನೆನಪಾಗುವ ಮಿತ್ರ
ಅವನ ಸ್ನೇಹದಲಿ ಮಮತೆ ಸೆಳೆದಿದೆ ಒಳಗೆ ಬಾ

ಅಸಮತೆಗೆ ರೋಷ ಅನ್ಯಾಯಕೆ ಸಂಘರ್ಷವಿತ್ತು
ಹೋರಾಟಕೆ ಕ್ರಾಂತಿ ಕಹಳೆ ಮೊಳಗಿದೆ ಒಳಗೆ ಬಾ

ಗಾಲಿಬ್ನಂತೆ ಅಪ್ಪಟ ಮನುಷ್ಯ ಪ್ರೇಮಿ ದೀನ ಬಂಧು
ನಿನ್ನೊಳಗೂ ಅವನ ಗಜಲ್ ಗುನುಗಿದೆ ಒಳಗೆ ಬಾ

ಹೋದ ಮೇಲೆ ಮರುಗಿ ಪ್ರಯೋಜನವಿಲ್ಲ ಪೀರ್ ಕಣ್ಣಾಲೆಯಿಂದ ನೆನಪು  ಸುರಿದಿದೆ ಒಳಗೆ ಬಾ

 ✍️ಅಶ್ಫಾಕ್ ಫೀರಜಾದೆ,ಗೋಕಾಕ