ಅಕ್ಕನ ಭಾವಬಸಿರಿನ ಕೂಸಾದ ಚನ್ನಮಲ್ಲ, ದಿಗಂಬರೆಯಾದರೂ ಅಂಬರವನೇ ಹೊದ್ದ ಮಲ್ಲಿ.
ಸಖನ ಅರಸುವಪರಿ ಕತ್ತಲೆಯಲ್ಲೂ ಕಾಂತಿ, ಬೆತ್ತಲೆ ಜಗದ ಕಣ್ಣುತೆರೆಸುವ ಪರಿ ಹಣ್ಣಾದ ಅರಿವು.
ಹೆಣ್ಣಾದ ರೂಪಕೆ ಬೆಳಂದಿಗಳ ಬೆಳಕು, ಕಾನನದತುಂಬೆಲ್ಲಾ ಪಣತಿಯ ಸಾಲುದೀಪ
ಕಲ್ಯಾಣದ ಬೀದಿಬೀದಿಗಳಲಿ ಅಕ್ಕನೆಂಬ ಮಹತಿ, ಮಹಾದೇವಿ ಉಸಿರಿದ ಮಾತೆಲ್ಲಾ ವಚನ.
ಸಾವಿರದ ರೂಹಿರದ ರೂಪಿರದ ದೈವಕ್ಕೆ, ಅಳವಟ್ಟ ಪರಿಯೊಂದೇ ಪರದೈವವೇ ಪತಿ.
ಶಯನಕ್ಕೆ ಹಾಳು ದೇಗುಲಗಳುಂಟೆಂಬುದು, ಬಯಲಿನಲ್ಲಿ ಬದುಕು ಕಟ್ಟಿಕೊಡುವ ಅಕ್ಕ, ನಮ್ಮೊಳಗೆ ಚೇತನವಾಗಿಹ ನಿತ್ಯ ಚೈತನ್ಯ.

ಹಂಗಿನರಮನೆ ತೊರೆದು ಹೊರಟವಳು. ದಿಗಂಬರೆ, ದಿವ್ಯಾಂಬರೆ, ಕೇಶಾಂಬರೆ.
ತನ್ನೊಳಗೆ ಕಿವಿಗೊಟ್ಟು ಸಾಗಿದವಳು, ಯಾರೂ ನಡೆಯದ ಹಾದಿಗೆ. ಆತ್ಮಸಂಗಾತಿಯನ್ನರಸುತ್ತ ಸವೆಸಿದ್ದು, ಹೆಜ್ಜೆಮೂಡಿರದ ಹಾದಿ.ಅರಮನೆಯ, ಲೋಕದ ಹಂಗುತೊರೆದು ಚಲಿಸಿದ್ದು ಅರುವಿನ ಮಹಾಮನೆಯತ್ತ.
ಒಂಟಿ ನಿರ್ಭಿತೆ ಯಾರೂ ಇಲ್ಲದವಳೆಂಬುದಕೆ ಕಿವಿಗೊಡದೆ ದಾಟಿದ್ದು, ಜಗದ ಕಟ್ಟು ಪಾಡುಗಳ ಚೌಕಟ್ಟು.     ಪತಿತ್ವ ಪ್ರಭುತ್ವವೆರೆಡರ ಸೂತಕದ ಹಂಗು ಹರಿದು, ಕಾಮನ ಚಿನ್ಹೆಗಳಿಗೊಂದು ಅತೀತವಾದ ಅರ್ಥ ನೀಡಿ, ಒಳಗೆ ಸುಳಿವಾತ್ಮದ ಸಾಕ್ಷಾತ್ಕಾರಕ್ಕಾಗಿ.


ತರಗಲೆಯ ಮೇಲಿದು ತಾನಿಹೆನು ಎನ್ನುವ, ಅಸದೃಶ ಮನೋಬಲದ ಯೋಗಾಂಗಿ.
ಸ್ತುತಿ ನಿಂದೆಗಳೆಣಿಸದೆ ಸಮಾಧಾನಿಯಾಗಿರಬೇಕೆಂದು,    ಸಜ್ಜನಳಾಗಿ ಮಜ್ಜನಗೈದ ಲಿಂಗಾಂಗಿ.
ಪಯಣದ ಗಮ್ಯತೆಗೆ ಹೆಣ್ತನದ ಶೃಂಕಲೆ  ಏಕೆ?
ವೇದನೆ ರೋಧನೆಗಳಿಲ್ಲದ ಬೋಧನೆ ಸಾಧನೆಯ ರೂಹಾದ ಅಕ್ಕ.
ಪರದೈವದ ಪತಿಯನ್ನರಸುತ್ತ ಪ್ರೇಮದ ಮೊಗ್ಗು ಅರಳಿನಿಂತ ಪರಿಗೆ, ಲಿಂಗ ಭೇದದಿ ನಿರ್ಮಾಣಗೊಂಡ ಗೋಡೆಯ ಸವಳಿ ಮಣ್ಣು ಉದುರುತಿತ್ತು.
ಆತ್ಮ ಸಾಂಗತ್ಯದ ನಿರ್ಭಯತೆಗೆ ಬಯಲಲ್ಲೆ, ಅಕ್ಕ ಚನ್ನಮಲ್ಲರ ಜ್ಞಾನದ ಭ್ರೂಣ ಅಂಕುರಿಸಿತ್ತು ಲೋಕದ ಅರಿವು ಪಕ್ವಗೊಂಡಿತ್ತು.

                  🔆🔆🔆
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ. ಸಹಾಯಕ ಪ್ರಾಧ್ಯಾಪಕರು ಹಾಗೂ       ಸಹಾಯಕ ನಿರ್ದೇಶಕರು, ಪ್ರಸರಾಂಗ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ