ದುಡಿದು ದುಡಿದು ನೀ ಮೌನಿಯಾದೆ
ಮೌನದಲಿ ಮನೆಯ ಕಟ್ಟಿದೆ
ನಿನ್ನ ಹೆಗಲ ಮೇಲೆ ಅದೆಷ್ಟು ಹೊರೆ!
ಹೊರೆ ಹೊತ್ತು ಬಹು ದೂರ ನಡೆದೆ

ನಿನ್ನ ಅಂತರಂಗ ತಿಳಿಯದಾದೆವು
ಹೊತ್ತ ಹೊರೆಯ ಇಳುಹಿಕೊಳ್ಳುವುದರೊಳಗೆ
ಹೊರೆಯಾಗದಂತೆ ಹೊರಟೇ ಹೋದೆ
ಮೌನದಲಿ ನಡದೇ ಬಿಟ್ಟೆ

ಖಾಕಿಯ ತೊಟ್ಟು ಶ್ರದ್ಧೆಯ ಮೆರೆದೆ
ಹ್ಯಾಟು ಬೂಟುಗಳ ನಡುವೆ
ದರ್ಪವಿಲ್ಲದ ಅಧಿಕಾರಿಯಾದೆ
ಕರುಣೆಯ ತೊರೆಯದೆ ಖೈದಿಗಳ ಕಾದೆ

ಕರ್ತವ್ಯದ ಕಿಚ್ಚಿಗೆ
ಪ್ರಾಮಾಣಿಕತೆಯ ಗಂಧ ಬಳಿದೆ
ಮಡದಿಯ ಕೈ ರುಚಿಗೆ ಸೋತೆ
ಹೆಣ್ಣುಮಕ್ಕಳಲ್ಲೇ ಹೆತ್ತ ತಾಯಿಯ ಕಂಡೆ

ಗೃಹಕ್ಕೆ ಗೃಹಸ್ಥನಾದೆ
ನಮ್ಮ ಮಡಿಲ ಮಕ್ಕಳಿಗೆ ಅಜ್ಜನಾದೆ
ಕಣ್ಣಲ್ಲೇ ಮಾತಾಡಿದೆ ಮೌನವಾಗೇ ಉಳಿದೆ
ನೀನಿತ್ತ ಪಾಠವಿಂದು ಬಾಳಪುಟದ ಮೊದಲಿಗಿದೆ

ಅಪ್ಪ ನೀ ಎಂದರೆ ಆಲದ ಮರವೇ
ನಿನ್ನೆದೆಯ ಮುಗಿಲ ತುಂಬ ನಗುವ ನಕ್ಷತ್ರಗಳೇ

                  🔆🔆🔆
  ✍️ಡಾ.ಪುಷ್ಪಾ ಶಲವಡಿಮಠ,  ಹಾವೇರಿ