ಅಪರಿಮಿತ ಅಕ್ಕರೆಯ
ಅಂಗೈಲಿ ಅವಿಸಿಟ್ಟ
ಅದ್ಭುತ ಅಪ್ಪ

ಆಕಾಶವೇ ಆಕರ
ಆರಂಭದ ಶ್ರೀಕಾರ
ಆರಾಧಿಸುವೆ ನನ್ನಪ್ಪನ

ಇಚ್ಛೆಗಳ ಈಡೇರಿಸಿದ
ಇಂದ್ರಚಾಪ ತೋರಿಸಿದ
ಇಳೆಗೊಬ್ಬನೇ ನನ್ನಪ್ಪ

ಉಣಿಸಿದ ಕೈತುತ್ತ
ಉಡುಗೊರೆಗಳ ತಂದಿತ್ತ
ಉತ್ತಾರಕನು ನನ್ನಪ್ಪ

ಊಟವಿತ್ತ ಹೊಟ್ಟೆಗೆ
ಊರುಗೋಲಾದ ಬಾಳಿಗೆ
ಊರ್ಜಸ್ವಿಯವನು ನನ್ನಪ್ಪ

ಋಜು ಮಾರ್ಗದ ನಡಿಗೆ
ಋಣಭಾರದ ಹೊರೆಗೆ
ಋಷಿಯಂತವನು ನನ್ನಪ್ಪ

ಎಚ್ಚರಿಕೆಯ ಕಲಿಸಿದವ
ಎಡವಲು ಎತ್ತಿದವ
ಎದೆಗಾರಿಕೆಯುಳ್ಳವನು ನನ್ನಪ್ಪ

ಏಟೊಂದನ್ನೂ ಹೊಡೆಯದವನು
ಏಕಾಗ್ರತೆಕಲೆಯ ಹೇಳಿಕೊಟ್ಟವನು
ಏಕಮೇವನು ನನ್ನಪ್ಪ

ಐಂದ್ರಜಾಲಿಕ ಬೆರಗಿನವನು
ಐಷಾರಾಮವನು ಕಾಣದವನು
ಐಸಿರಿಯೆನಗಿವನು ನನ್ನಪ್ಪ

ಒಡಕುಂಟಾಗಲು ಬಿಡದವನು
ಒದಗಿಸಿದನೆನಗೆ ಎಲ್ಲವನು
ಒಸಗೆಯನೀವನಿವನು ನನ್ನಪ್ಪ

ಓಲಾಡಿಸಿದನು ತೋಳಿನುಯ್ಯಾಲೆಯಲಿ
ಓದುವಿಕೆಯ ಹುಚ್ಹತ್ತಿಸಿದವನು
ಓಜಸ್ವಿಯಿವನು ನನ್ನಪ್ಪ

ಔತಣವ ಮಾಡಿಸಿದನು
ಔಚಿತ್ಯವ ಕಲಿಸಿದವನು
ಔದಾರ್ಯವುಳ್ಳವನು ನನ್ನಪ್ಪ

ಅಂಜಿಕೆಯ ನೀಗಿದವನು
ಅಂದುಕವ ತೊಡಿಸಿದವನು
ಅಂಬುಧಿಯಂತಹವನು ನನ್ನಪ್ಪ

ಕಕ್ಕುಲಾತಿಯ ಕರುಣಾಮಯಿ
ಕಲ್ಪವೃಕ್ಷ ಕಾಮಧೇನುಯಿವನು
ಕೋಮಲಮನದ ನನ್ನಪ್ಪ

ಖಚಿತಪ್ರೇಮದ ಖಂಡಿತವಾದಿ
ಬಾಳಖಾತೆಗೆ ಖಜಾಂಚಿಯಾದವನು
ಖುಷಿತರುವನಿವನು ನನ್ನಪ್ಪ

ಗದರಿಸಿಯೇಯಿಲ್ಲ ಎಂದೆಂದೂ
ಗಣಿತವನ್ನು ಕಲಿಸಿಕೊಟ್ಟನಂದು
ಗುರುವಿವನೆನಗೆ ನನ್ನಪ್ಪ

ಘಾಸಿಮಾಡನು ಎಂದಿಗೂ
ಘರ್ಷಣೆಯಿಲ್ಲ ಯಾರೊಂದಿಗೂ
ಘೋಷಿಸುವೆನೊಲವಿನಲಿ ನನ್ನಪ್ಪನೆಂದು

ಚದುರಂಗದಾಟ ಹೇಳಿಕೊಟ್ಟವನು
ಚಪ್ಪಾಳೆಯಿಂದ ಪ್ರೋತ್ಸಾಹಿಸಿದವನು
ಚೇತನಧಾಯಿಯಿವನು ನನ್ನಪ್ಪ

ಛಲಗಾರಿಕೆಗೆ ಹೆಸರಿವನು
ಛಾನಸವನೆಂದು ಒಪ್ಪದವನು
ಛಾಪೊತ್ತಿದವನಿವನು ನನ್ನಪ್ಪ

ಜೊತೆ ನಿಂತು ಬೆಂಬಲವಾದವನು
ಜ್ಯೋತಿಯಂತೆ ಬೆಳಕಾದವನು
ಜಗತ್ತೆಂದರೆ ನನ್ನಪ್ಪನಂತೆ

ತವರೂರ ತೇರ ಕಳಸದಂತವನು
ತಾಳ್ಮೆಪಾಠ ತಿಳಿಹೇಳಿದವನು
ತೇಜಸ್ವಿಯಿವನು ನನ್ನಪ್ಪನು

ಥಳುಕಿನಿಂದ ದೂರವುಳಿದವನು
ಥಳಥಳಿಸುವ ರವಿಯಂತವನು
ಥೈಲಿಯೊದಗಿಸುವವನು ನನ್ನಪ್ಪ

ದಣಿವೆಂದರೇನೆಂದು ಅರಿಯದವನು
ದಕ್ಷತೆಗೆ ಇನ್ನೊಂದು ಹೆಸರಿವನು
ದೇವರಪ್ರಿಯನಾಗಿಹೋದ ನನ್ನಪ್ಪ

ಧನಕನಕಗಳಿಗೆ ಬೆಲೆಕೊಡದವನು
ಧ್ಯಾನದ ಮೌಲ್ಯವನರಿತವನು
ಧವಳಗಿರಿಯಂತಹವನು ನನ್ನಪ್ಪ

ನುಡಿದಂತೆ ನಡೆಯಬೇಕೆಂದವನು
ನಮ್ಮತನವನ್ನು ಉಳಿಸಿಕೊಳ್ಳಬೇಕೆಂದವನು
ನಗೆಯ ಬೆಲೆಯರಿತವನು ನನ್ನಪ್ಪ

ಪರಿವಾರವೆಂದರೇನೆಂದು ತಿಳಿಸಿಕೊಟ್ಟವನು
ಪ್ರತಿಕ್ಷಣವೂ ನೆನೆಯಲೇಬೇಕಾದವನು
ಪ್ರತ್ಯಕ್ಷ ದೈವವಿವನು ನಮ್ಮಪ್ಪ

ಬದುಕಕಲೆಯ ಅರೆಹೊಯ್ದವನು
ಬವಣೆಯನು ದೂರಾಗಿಸಿದವನು
ಬಾಳಬೆಳಕಿವನು ನನ್ನಪ್ಪ

ಭದ್ರಬುನಾದಿಯನು ಕಟ್ಟಿದವನು
ಭಾವುಕ ಮನದ ಹೆಂಗರುಳಿನವನು
ಭಾಗ್ಯವಿಧಾತನಿವನೇ ನನ್ನಪ್ಪ

ಮಮತೆಯ ಮೂರ್ತಿಯಿವನು
ಮಾತೃಹೃದಯದ ಮನಸ್ಸಿನವನು
ಮಾಣಿಕ್ಯನಿವನು ನನ್ನಪ್ಪ

ಯಶಸ್ಸಿನೇಣಿಗೆ ಮೆಟ್ಟಿಲಾದವನು
ಯಾಂತ್ರಿಕತೆಗೆಂದೂ ಈಡಾಗದವನು
ಯಕ್ಷಿಣಿಗಾರನಿವನು ನನ್ನಪ್ಪ

ರಾಜನಿವನು ಸಂಸಾರಸಾಮ್ರಾಜ್ಯಕ್ಕೆ ರಾಜಕುಮಾರಿಯಂತೆನ್ನ ಬೆಳೆಸಿದನು .
ರಕ್ಷಕನನವರತ ನನ್ನಪ್ಪ

ಲವಲವಿಕೆಗಿನ್ನೊಂದು ಹೆಸರು
ಲೇಖನಿಯ ಕೈಯಲ್ಲಿರಿಸಿದವನು
ಲಕ್ಷಕೋಟಿಗಳಲೊಬ್ಬ ನನ್ನಪ್ಪ

ವರ್ಣನೆಗೆ ನಿಲುಕದವನು
ವರ್ಷಧಾರೆಯಂತೆ ವಾತ್ಸಲ್ಯಹರಿಸಿದವನು
ವಿಶಾಲ ಮನಸ್ಸಿನ ನನ್ನಪ್ಪ

ಶರಧಿಯಂತೆ ಗಂಭೀರನಿವನು
ಶಾಂತಿಮಂತ್ರವ ಜಪಿಸುವನು
ಶರಣುಶರಣೆನ್ನುವೆ ನನ್ನಪ್ಪ

ಷರತ್ತಿಲ್ಲದ ಪರೋಪಕಾರಿ
ಷಡ್ಕರ್ಮಗಳ ನಿತ್ಯಾನುಚಾರಿ
ಷಷ್ಟ್ಯಬ್ಧಿಪೂರೈಸಿದ ನನ್ನಪ್ಪ

ಸಂಕಲ್ಪಗಳೆಲ್ಲಾ ಸಿದ್ಧಿಗೊಳಿಸಿದನು
ಸಂಗೀತಾಸಕ್ತಿಯ ಮೂಡಿಸಿದವನು
ಸಾಧನೆಯ ಸ್ಫೂರ್ತಿಯೇ ನನ್ನಪ್ಪ

ಹೊಸಹವ್ಯಾಸಗಳನ್ನು ಹೇಳಿಕೊಟ್ಟವನು
ಹಾಸ್ಯಚಟಾಕಿಗಳ ಹಾರಿಸುತ್ತಿದ್ದವನು
ಹೂಬಿಸಿಲಹಿತದವನು ನನ್ನಪ್ಪ

ಕ್ಷಮೆಯಲ್ಲಿ ಸಾಗರದಂಥವನು
ಕ್ಷಕಿರಣದಷ್ಟು ಸೂಕ್ಷ್ಮ ದೃಷ್ಟಿಯವನು
ಕ್ಷಣಕ್ಷಣಸ್ಮರಿಸಬೇಕಾದವನು ನನ್ನಪ್ಪ

                     🔆🔆🔆

✍️ಸುಜಾತಾ ರವೀಶ್,‌ ಮೈಸೂರು