ಬಿಳೀ ಅಂಗಿ ಬಿಳೀ ಧೋತಿ ಬಿಳಿ ಟೊಪ್ಪಿಗೆ ತೊಡುವ ಎತ್ತರದ ನಿಲುವಿನ ಸಾದಗಪ್ಪು ಬಣ್ಣದ ಚೂಪು ಮೂಗಿನ ನನ್ನಪ್ಪ ಮೀಸೆ ಬಿಡುತ್ತಿರಲಿಲ್ಲ. ಕೃಷಿಕನಾಗಿ ಅಪ್ಪಟ ದೇಶೀ ಬದುಕು  ನಡೆಸಿದವರು.  ಸಮಾಜವಾದ ಅನ್ನುವುದು  ಅವರ  ನಿತ್ಯದ  ಬದುಕಿನಲ್ಲೇ ಅವರಿಗೂ ಗೊತ್ತಿಲ್ಲದೇಹಾಸುಹೊಕ್ಕಾಗಿತ್ತು. ಕಾರ್ತಿಕೋತ್ಸವದ ದಿನಗಳಲ್ಲಿ ಅಮ್ಮ ದೇವ ಸ್ಥಾನಕ್ಕೆ ಹೋಗಿ ಬನ್ನಿರೆಂದು ತೆಂಗು ಹಣ್ಣು ಹೂ ಕಡ್ಡಿ ಕರ್ಪೂರದ ಚೀಲವನ್ನು ಅವರಿಗೆ ನೀಡಿದರೆ, ಅವರು ಅದನ್ನು ಅಲ್ಲೇ ಮರೆತು ಸೀದಾ ಗದ್ದೆಯ ಕೆಲಸಕ್ಕೆ  ನಡೆದು ಬಿಡುತ್ತಿ ದ್ದರು. ಆದರೆ ದೇವರನ್ನು ನಂಬುತ್ತಿರಲಿಲ್ಲ ಅಂತಲ್ಲ, ಸ್ನಾನದ  ನಂತರ  ಕೆಲ  ಹೊತ್ತು ದೇವರ  ಎದುರು  ಕಣ್ಣು  ಮುಚ್ಚಿ  ಕೂತು ಧ್ಯಾನ ಮಾಡುವುದನ್ನು ನಾನು ಕಂಡಿದ್ದೆ. ಅದರ ಸುತ್ತಲೂ ಬೆಳೆದಿರುವ ಮೂಢನಂಬಿ ಕೆಗಳನ್ನು  ಅವರು  ವಿರೋಧಿಸುತ್ತಿದ್ದರು ಅಂತ ನನಗೆ ನಂತರ ಅನ್ನಿಸಿದ್ದಿದೆ. ಅಪ್ಪ ಯಾವ ಸಂದರ್ಭದಲ್ಲಿ ಹೇಗೆ‌ ನಡೆದುಕೊಳ್ಳು ತ್ತಿದ್ದರು  ಎಂಬುದನ್ನು  ಹೇಳಿದರೆ   ಅವರ ವ್ಯಕ್ತಿತ್ವದ ಅನಾವರಣ  ನಿಮಗೆ  ದಕ್ಕುತ್ತದೆ  ಅಂತ ನಂಬಿದ್ದೇನೆ.    ನಾನಾಗ    ಏಳನೇ  ಇಯತ್ತೆ    ಓದುತ್ತಿದ್ದೆ. ಮಾರನೇ  ದಿನ   ನಡೆವ     ನಮ್ಮ    ಅರ್ಧ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯವನ್ನು ನಾನು ಓದುತ್ತ ಕೂತಿದ್ದೆ. ಆದರೆ ನನ್ನ ಕಿವಿ ಪೂರಾ ನೇರ ಅಡುಗೆ ಮನೆಯೆಡೆಗೇ ಇತ್ತು. ಯಾಕೆಂದರೆ ನನ್ನಪ್ಪ ತಮ್ಮ ಕೃಷಿ-ಕೆಲಸಗಳು ಮುಗಿದ ನಂತರ, ಗ್ರಂಥಾಲಯದಿಂದತಂದು ಓದುವ ಪುಸ್ತಕವೊಂದರ ಕತೆಯನ್ನು ಅಲ್ಲಿ ಅಮ್ಮನೊಡನೆ ಆಸಕ್ತಿಯಿಂದ ಹಂಚಿಕೊಳ್ಳು ತ್ತಿದ್ದರು. ಅವರು  ಕತೆ  ಹೇಳುವ  ದನಿ ಸ್ವಲ್ಪ ಮೆಲುವಾಗಿತ್ತು.  ಹೊರಕೋಣೆಯಲ್ಲಿ  ಅಜ್ಜಿ ಯ  ಜೊತೆ  ಅವಳ  ಪಕ್ಕದ  ಹಾಸಿಗೆಯಲ್ಲಿ ಮಲಗಲು   ತಯಾರಿ   ನಡೆಸಿದ್ದೆನಾದರೂ, ನನ್ನ  ಕುತೂಹಲ  ಒಳಗೆ  ಕತೆ  ಹೇಳುತ್ತಿದ್ದ ಅಪ್ಪನ  ದನಿಯನ್ನೇ  ಅನುಕರಿಸುತ್ತಿತ್ತು. ಅಪ್ಪ  ಹೇಳುತ್ತಿದ್ದರು, ‘ಉತ್ತರಕರ್ನಾಟಕದ ಲ್ಲಿರುವ ಗದಗ ಬೆಟಗೇರಿ ಕಡೆಯಿಂದ ನಮ್ಮ ಗೋಕರ್ಣ  ಶಿವರಾತ್ರಿಗೆಂದು  ಒಬ್ಬ  ತಾಯಿ ತನ್ನ  ಮೂರು  ವರ್ಷದ  ಮಗುವಿನ ಜೊತೆ ಬಂದಿದ್ದಳು. ಶಿವರಾತ್ರಿಯ ಜನಜಂಗುಳಿಯ ಲ್ಲಿ ಅವಳ ಮೂರು ವರ್ಷದ ಮಗ ಕಳೆದು ಹೋಗಿಬಿಟ್ಟ. ಅಮ್ಮನ  ಕೈತಪ್ಪಿ  ಹೋಗುವ ಮಗುವಿನ  ಕ್ಷಣವನ್ನು  ಅಪ್ಪ. ಅದು  ಹೇಗೆ ವಿವರಿಸುತ್ತಿದ್ದರೆಂದರೆ,    ಇತ್ತ    ಮಗುವಿನ ಅಮ್ಮನೂ ಹಸಿರು ಸೀರೆ ಉಟ್ಟಿದ್ದಳು, ಗದ್ದ ಲದಲ್ಲಿ   ಮಗು  ಅಮ್ಮನ  ಸೆರಗಿನ  ಕೈಬಿಟ್ಟಿ ತು. ಮತ್ತು ಅಂಥದೇ ಹಸಿರು ಸೀರೆಯುಟ್ಟ ಇನ್ನೊಂದು ತಾಯಿಯ ಸೆರಗು ಹಿಡಿದು ಹೊರಟು ಬಿಟ್ಟಿತು. ಜನಜಾತ್ರೆಯಲ್ಲಿ ತಾಯಿ ಕರುಳು ಕಂಗಾಲು..’  

ಈ  ಹಂತದಲ್ಲಿ  ನಾನು  ಅಪ್ಪ ಹೇಳುವ ಕತೆ ಯಲ್ಲಿ ಎಷ್ಟು ಮಗ್ನಳಾಗಿದ್ದೆನೆಂದರೆ, ಎಲೆ ಅಡಿಕೆ ಹಾಕುವ ಎಂಬತ್ತರ ಕಣ್ಣು ಮಂದಾದ ನನ್ನಜ್ಜಿ ತನ್ನ ಕವಳದ ಪೆಟ್ಟಿಗೆಯಿಂದ ತಂಬಾ ಕಿನ ಎಲೆಯನ್ನು ತೆಗೆದು, ನನ್ನ ಬದಿ ಮುಖ ಹೊರಳಿಸಿ ‘ನೋಡು ತಂಗೀ,ಇದು ಎಲೆಯೇ ಅಲ್ವೇನೇ?’ ಅಂತ ಕೇಳಿದಳು. ಒಳಗೆ ಅಪ್ಪ ಹೇಳುವ ಕತೆಯಲ್ಲಿ ಕಳೆದು ಹೋದ ನಾನು ‘ಹೌದು’  ಅಂದು  ಬಿಟ್ಟಿದ್ದೆ.  ನನ್ನ ಅನ್ಯಮನ ಸ್ಕತೆಯೇ ಅಜ್ಜಿಗೆ ಆನಂತರದ ಅವಳಪೇಚಾ ಟಕ್ಕೆ   ಕಾರಣವಾಯಿತು.   ಅಜ್ಜಿ   ತಿನ್ನುವ ಎಲೆಯೆಂದು ತಿಳಿದು ತಿಂದ ತಂಬಾಕಿನ ಎಲೆ ನೆತ್ತಿಗೆ ಏರಿ,ತಲೆಸುತ್ತು ವಾಂತಿಗಳೆಲ್ಲ ಬಂದು ಬಚ್ಚಲಿಗೆ ಹೋಗಿ ಬರುವಾಗ ಬಿದ್ದುಬಿಟ್ಟಳು. ಹಣೆಗೆ ಸ್ವಲ್ಪ ಜಾಸ್ತಿಯೇ ಪೆಟ್ಟಾಯಿತು. ಅಜ್ಜಿ ಬಿದ್ದ ಸದ್ದಿಗೆ  ಗಾಬರಿಗೊಂಡ ಅಪ್ಪ, ಆ ಕ್ಷಣ ಕತೆ  ಹೇಳುವುದನ್ನು  ನಿಲ್ಲಿಸಿ  ಹೊರ  ಓಡಿ ಬಂದಿದ್ದರು. ತಕ್ಷಣವೇ ಅಜ್ಜಿಯನ್ನು ಸೈಕಲ್ ಮೇಲೆ ಕೂಡಿಸಿಕೊಂಡು ಅಂಕೋಲೆ ಪಟ್ಟಣ ದ ಸರಕಾರೀ ಆಸ್ಪತ್ರೆಗೆ ಕರೆದೊಯ್ದಿದ್ದರು.

ಆದರೆ  ಅಷ್ಟಕ್ಕೇ  ಕತೆ  ನಿಂತು  ಬಿಟ್ಟಿತ್ತಲ್ಲ! ಅದನ್ನು  ಪೂರ್ತಿ  ಕೇಳುವ  ಹಂಬಲದಲ್ಲಿ ಮೀಯುತ್ತಿದ್ದ  ನನಗೆ  ಕಥನ  ಕುತೂಹಲ ತಾಳಿಕೊಳ್ಳಲಾಗಲಿಲ್ಲ.ಅಪ್ಪ ಓದಿದ ಪುಸ್ತಕ ವನ್ನು   ಹುಡುಕಲು  ಬಿದ್ದೆ.   ಕೊನೆಯಲ್ಲಿ ಮೇಲಕ್ಕೆ ಗೋಡೆಗೆ ನೇತು ಬಿಟ್ಟ ಗಣೇಶನ ಫೋಟೊದ  ಹಿಂದುಗಡೆ  ಪುಸ್ತಕ  ಚೂರೇ ಚೂರು  ಕಾಣಿಸಿಕೊಂಡಿತು.  ನನ್ನ  ಕೈಗೆ ಸಿಗ ದಂತೆ  ಅಪ್ಪ  ಅದನ್ನು  ಹೀಗೆ ಬಚ್ಚಿಟ್ಟಿದ್ದರು. ಅವರು  ಹೇಳುತ್ತಿದ್ದ  ಅದೇ  ಕತೆಯುಳ್ಳ ಆ ಪುಸ್ತಕವನ್ನು ನನಗೂ ಓದುವ ಹುಮ್ಮಸ್ಸು ಹೆಚ್ಚಿತು. ಅಮ್ಮ ದೇವರ ನಾಮ ಹೇಳುತ್ತ ದೇವರ ಕೋಣೆಯಲ್ಲಿದ್ದಾಗ, ನಿಧಾನ ಆ ಪುಸ್ತಕವನ್ನು ಹೇಗೆ ತೆಗೆಯಬಹುದು ಅಂತ ಯೋಚಿಸಿದೆ. ಕೈಯಂತೂ ನಿಲುಕುವ ಹಾಗೇ ಇಲ್ಲ. ಕೋಣೆಯ  ಮೂಲೆಯಲ್ಲಿ   ಒಂದು ಸ್ಟೂಲು ಇತ್ತು. ಅದನ್ನು ಮೆಲ್ಲಗೆ ತಂದಿಟ್ಟು ಹತ್ತಿದೆ. ಆದರೂ ನಿಲುಕಲಿಲ್ಲ. ತುದಿಗಾಲಲ್ಲಿ ನಿಂತು  ಒತ್ತಾಯಪೂರ್ವಕ   ಜಗ್ಗಾಡಿದೆ. ಫೋಟೋ  ಕಟ್ಟಿದ   ದಾರ  ಲಡ್ಡಾಗಿತ್ತೋ ಏನೋ,  ಕಥೆಯ   ಪುಸ್ತಕದ    ಜೊತೆಗೆ ಗಣೇಶನ ಫೋಟೋ ಕೂಡ ನೆಲಕ್ಕೆ ಬಿದ್ದು ಒಡೆದುಹೋಯಿತು.ಆ ಸಪ್ಪಳಕ್ಕೆ ಅಮ್ಮ ಹೊರ ಓಡಿ ಬಂದಳು. ಅಷ್ಟರಲ್ಲಿ  ನಾನು  ಸ್ಟೂಲಿನಿಂದ   ಇಳಿದು ಅದನ್ನು    ಸ್ವಸ್ಥಾನಕ್ಕೆ    ಸೇರಿಸಿಯಾಗಿತ್ತು. ‘ಅಯ್ಯೋ ದೇವ್ರೇ, ಗಣೇಶನ  ಫೋಟೋ ಅಕಸ್ಮಾತಾಗಿ ಬಿದ್ದು ಒಡೀತು ಅಂದ್ರೆ, ಅಜ್ಜಿ ವಾಪಸ್ಸು ಬರೋದೇ ಸಂಶಯ’ ನಡುಗುವ ಸ್ವರದಲ್ಲಿ ಅನ್ನುತ್ತ ಅಮ್ಮ, ಗಾಬರಿಯಿಂದ ಫೋಟೋ ಗಾಜು  ಆಯುವ  ಅವಸರಕ್ಕೆ ಬಿದ್ದಳು. ನನಗೆ  ಆ  ಕ್ಷಣ  ಏನು  ಹೇಳಲೂ ತೋಚಲಿಲ್ಲ. ನಾನೇ ಫೋಟೋ ಬೀಳಿಸಿದ್ದು ಅಂತ ಸತ್ಯ  ಹೇಳಿದರೆ  ಅಮ್ಮನಿಂದ   ಬೈಸಿ ಕೊಳ್ಳಬೇಕಾಗುತ್ತಿತ್ತು. ಅದೂ  ಕತೆ   ಪುಸ್ತಕ ತೆಗೆಯಲು ಹೋಗಿ, ಅಂತ ಹೇಳಿದರೆ ಪೆಟ್ಟು ಬೀಳುವುದು ಗ್ಯಾರಂಟಿ.ಅಮ್ಮ ಭಯದಿಂದ ದೇವರ  ನಾಮ  ಹೇಳುತ್ತ    ದೇವರಕೋಣೆ ಯಲ್ಲೇ ಕೂತುಬಿಟ್ಟಿದ್ದಳು. ಫೋಟೋಜೊತೆ ಕೆಳಕ್ಕೆ ಬಿದ್ದ ಪುಸ್ತಕದ ಆ ಕತೆಯನ್ನು ನಾನು ಒಂದು  ತರಹದ ದಿಗಿಲಿನಲ್ಲೇ ಓದಿ ಮುಗಿಸಿ ದೆ. ತಾಯಿಯಿಂದ ತಪ್ಪಿಸಿಕೊಂಡ ಆ ಮಗು, ಗೋಕರ್ಣದಲ್ಲೇ ಮಕ್ಕಳಿಲ್ಲದ ಒಬ್ಬ ವೈದಿಕ ರ ಮನೆಯಲ್ಲಿ ಬೆಳೆದು, ಅವರದೇ ವಂಶದ ಪರಂಪರೆಯಂತೆ ದೇವಸ್ಥಾನದಲ್ಲಿ ಪೂಜಾರಿ ಯಾಗಿ  ಕೆಲಸ ಮಾಡುತ್ತದೆ. ಎಷ್ಟೋ ವರ್ಷ ಗಳ ನಂತರ ಪುನಃ ಗೋಕರ್ಣ ಶಿವರಾತ್ರಿಗೆ ಬಂದ  ಅದೇ ತಾಯಿ, ಅವನ  ಕಿವಿಯಲ್ಲಿರು ವ ವಿಶಿಷ್ಟ ಅರ್ಧಚಂದ್ರಾಕಾರದ ಕತ್ತರಿಸಿದ ಚಹರೆಯ  ಮೂಲಕ ಅವನನ್ನು ಗುರುತಿಸು ತ್ತಾಳೆ. ಇದು ಅಪ್ಪ ಹೇಳ ಬೇಕಿದ್ದ ಮುಂದಿನ ಕತೆ. ಆದರೆ  ನನಗೆ  ಅದನ್ನು   ಅಕ್ಷರಗಳಲ್ಲಿ ಓದುವಾಗ ಅಷ್ಟೇನೂ ಕುತೂಹಲಅನ್ನಿಸಲೆ  ಇಲ್ಲ.ಈ ಲೇಖಕರಿಗಿಂತಲೂ ನಮ್ಮ ಅಪ್ಪನೇ ಚೆನ್ನಾಗಿ ಕತೆ ಹೇಳುತ್ತಾರೆ ಅಂತ ನನಗೆ ಆ ಕ್ಷಣಕ್ಕೆ ಅನ್ನಿಸಿಹೋಯಿತು. ಅಷ್ಟರಮಟ್ಟಿಗೆ ಅಪ್ಪ   ತನ್ನ   ಹಾವಭಾವಗಳಲ್ಲಿ,  ದನಿಯ ಏರಿಳಿತಗಳಲ್ಲಿ   ಕುತೂಹಲದ   ತೀವ್ರತೆಗೆ ನನ್ನನ್ನು ಒಯ್ಯುತ್ತಿದ್ದರು.ಇತ್ತ ಅಮ್ಮ ಅತ್ತಿತ್ತ ಆತಂಕದಿಂದಓಡಾಡುತ್ತ ಆಸ್ಪತ್ರೆಗೆ ಹೋದ ಅಪ್ಪ ಹಾಗೂ ಅಜ್ಜಿಯ ಬರವನ್ನು  ಕಾಯುತ್ತಿದ್ದರೆ,  ನನಗೆ  ‘ದೇವರ ಫೋಟೋ ಏನೂ ಅಕಸ್ಮಾತಾಗಿ ಬಿದ್ದದ್ದಲ್ಲ, ನಾನೇ ಬೀಳಿಸಿದ್ದು, ಅಜ್ಜಿಗೆ ಏನೂ ಆಗದು’ ಅಂತ  ಅಂತರಂಗದ ಒಳಗೆಲ್ಲೋ ಅನಿಸುತ್ತಿ ತ್ತು.  ಅಷ್ಟೇ  ಹೊತ್ತಿಗೆ  ಅಜ್ಜಿಯ   ಹಣೆಗೆ ಬ್ಯಾಂಡೇಜು ಹಾಕಿಸಿಕೊಂಡು ಅಪ್ಪ ಕರೆದು ತಂದರು. ಅವಳನ್ನು  ತಬ್ಬಿಕೊಂಡೇ  ಒಳಗೆ ಒಯ್ದು ಮಲಗಿಸಿದರು.ಹೊರ ಬಂದಅಪ್ಪನ ಬಳಿ   ಅಮ್ಮ,  ಗುಟ್ಟಾಗಿ  ಪಿಸುದನಿಯಲ್ಲಿ, ಫೋಟೋ  ಬಿದ್ದು  ಒಡೆದ  ಸಂಗತಿಯನ್ನು ಹೀಗೆ.. ಹೀಗೆ.. ಅಂತ  ಹೇಳುತ್ತ  ಅಲವತ್ತು ಕೊಳ್ಳುತ್ತಿದ್ದಳು. ಇತ್ತ ನನಗೋ ಸತ್ಯವನ್ನು ಹೇಳಿಬಿಡಲೇ ಬೇಡವೇ ಎಂಬ ಎರಡೊಂದು ಮನಸ್ಸು  ಹೊಯ್ದಾಡುತ್ತಿತ್ತು.  ಅಮ್ಮನ ಮಾತನ್ನು  ಆಲಿಸಿದ  ಅಪ್ಪ ‘ಏನೂ ಆಗೂದಿ ಲ್ಲ, ಹಲ್ಲಿಗಿಲ್ಲಿ ದೂಡಿ ಹಾಕಿ ಫೋಟೋ ಬಿದ್ದಿ ರಬೇಕು, ಅವಳು ಕವಳದ ಪೇಳಿಯಲ್ಲಿಯ ತಿನ್ನುವ  ಎಲೆ  ಅಂತ  ಭ್ರಮಿಸಿ  ತಂಬಾಕಿನ ಎಲೆ ಹಾಕಿ ಕವಳ ತಿಂದು ಬಿದ್ದಿದ್ದಾಳೆ’ ಅಂತ ಅಮ್ಮನನ್ನು  ಸಮಾಧಾನಪಡಿಸುತ್ತಿದ್ದರು. ‘ಅವೆಲ್ಲ ಮೂಢನಂಬಿಕೆ,ನೀನು ಮನಸ್ಸಿನಲ್ಲಿ ಅಂಥದನ್ನೆಲ್ಲ ಇಟ್ಟುಕೊಂಡು ನೆಮ್ಮದಿಕೆಡಿಸಿ ಕೊಳ್ಳಬೇಡ’  ಅಂತ  ಜೋರು  ಮಾಡಿದ್ದನ್ನು ನಾನು  ಒಳಗೆ  ಅಜ್ಜಿಯ  ಹೊದಿಕೆ  ಸರಿಪಡಿ ಸುತ್ತ ಆಲಿಸಿದೆ.ಮಾರನೇ ದಿನ ಶಾಲೆಯಲ್ಲಿ ನಮ್ಮ ಕನ್ನಡ ಪರೀಕ್ಷೆ ಆರಂಭಗೊಂಡಿತು. ಪ್ರಶ್ನೆ ಪತ್ರಿಕೆಯ ಲ್ಲಿ  ಪಠ್ಯದ  ಎಲ್ಲ  ಪ್ರಶ್ನೋತ್ತರ ವ್ಯಾಕರಣಗ ಳೂ ಮುಗಿದ ನಂತರ ಕೊನೆಯಲ್ಲಿ ನಿಬಂಧ ಬರೆಯುವ ಪ್ರಶ್ನೆಯಿತ್ತು. ಮೂರು  ವಿಷಯ ಗಳನ್ನು  ಕೊಟ್ಟು,  ಅದರಲ್ಲಿ    ಒಂದನ್ನು ಆಯ್ದು, ಅದರ ಕುರಿತು ನಿಬಂಧ ಬರೆಯಿರಿ ಅಂತನ್ನುವ ಪ್ರಶ್ನೆ ಅದು. ಮೊದಲನೆಯದು ಗ್ರಂಥಾಲಯ, ಎರಡನೇಯದು  ಮೂಢನಂ ಬಿಕೆ   ಮತ್ತು   ಮೂರನೇಯದು   ಒಂದು ಸಾಮಾಜಿಕ  ಪಿಡುಗು.  ನಾನು   ಮೂರೂ ವಿಷಯಗಳನ್ನು ಪದೇ ಪದೇ ಓದಿಕೊಂಡೆ. ಅಪ್ಪ  ಹೇಳಿದ  ಆ  ಮೂಢನಂಬಿಕೆ  ಎಂಬ ವಿಷಯದ ಕುರಿತು  ಬರೆಯಬಹುದು ಅಂತೆ ನ್ನಿಸಿತು. ಅಮ್ಮ ಗಣೇಶನ ಫೋಟೋ ಬಿದ್ದ ತಕ್ಷಣ ತಳೆದ ಆತಂಕ ನೆನಪಾಯಿತು. ಮೇಲೆ ಹೇಳಿದ ಘಟನೆಯನ್ನೇ ಯಥಾವತ್ತಾಗಿ ಬರೆ ಯುತ್ತ ಹೋದೆ..  ಪರೀಕ್ಷೆಗಳೆಲ್ಲ    ಮುಗಿದ ಮಾರನೇ ದಿನ, ನಮ್ಮ  ಕನ್ನಡ  ಅಕ್ಕೋರು, ಆ ನಿಬಂಧಕ್ಕೆ ಹತ್ತಕ್ಕೆ ಹತ್ತು ಅಂಕ ಕೊಟ್ಟಿದ್ದ ರಲ್ಲದೇ  ಉತ್ತರ  ಪತ್ರಿಕೆಯನ್ನು   ಕ್ಲಾಸಿನಲ್ಲಿ ಎಲ್ಲರೆದುರೂ   ಓದಿ   ಹೇಳಿದ್ದರು.   ನನ್ನ    ನಿಬಂಧ  ಒಂದು  ಕತೆಯ  ರೂಪ  ತಾಳಿದ ಕುರಿತು  ಸಂತೋಷ ವ್ಯಕ್ತಪಡಿಸುತ್ತ  ಅಂದು ಅಕ್ಕೋರು ನನ್ನನ್ನು ಎದ್ದು ನಿಲ್ಲಿಸಿ ಎಲ್ಲರೊ ಡನೆ ಚಪ್ಪಾಳೆ ತಟ್ಟಿಸಿ ಪ್ರಶಂಸಿಸಿದರು. ಅಪ್ಪ ನನ್ನೊಳಗಿನ ಮೂಢನಂಬಿಕೆಗಳನ್ನು ಹೊಡೆ ದೋಡಿಸುತ್ತಲೇ ಬರವಣಿಗೆಗೂ ಹಚ್ಚಿದ್ದು ಹೀಗೆ..ಅಪ್ಪನ ಆದರ್ಶಕ್ಕೆ ನೀರೆರೆಯುಂತೆ ಇನ್ನೊಂ ದು ಸಂಗತಿ ನೆನಪಿಸಿಕೊಳ್ಳಬಹುದು ಅನಿಸು ತ್ತದೆ. ನಮ್ಮೂರಿನ ಸುತ್ತಲೂ ಹಲವು ವಿಧದ ಗಿಡ-ಗಂಟೆಗಳಿಂದ  ಕೂಡಿದ  ದಟ್ಟ  ಕಾಡು. ಅದರ ನಡೂ  ಮಧ್ಯದಲ್ಲಿ  ಜುಳು-ಜುಳು ಹರಿವ  ಸಣ್ಣ  ತೊರೆ. ಆ ತೊರೆಯ ನೀರು ಯಾವ  ಬೆಟ್ಟದ  ತೊಪ್ಪಲಿನಿಂದ  ಇಳಿದು ಬಂತು?  ಮತ್ತೆ  ಮುಂದೆ ಯಾವ ಕಣಿವೆಯ ಲ್ಲಿ ಹರಿದು ಹೋಗುತ್ತದೆ? ಅಂತ ಯಾರಿಗೂ ಕಾಣುತ್ತಿರಲಿಲ್ಲ. ಆ ತೊರೆಯ ದಂಡೆ ಗುಂಟ ಒಂದು  ವಿಶಾಲ  ದಿಬ್ಬವಿತ್ತು.  ಅದು   ದನ ಮೇಯಿಸುವವರು  ಮತ್ತು  ಸುತ್ತಲಿನ  ಹಳ್ಳಿ ಗಳ  ಕೆಲ ಜನರು  ಬಟ್ಟೆ  ತೊಳೆದು  ಒಣಗು ಹಾಕುವ  ಸ್ಥಳವಾಗಿತ್ತು. ಆದರೆ  ಪ್ರತಿವರ್ಷ ತುಳಸೀ  ಮದುವೆ  ನಡೆದ  ಮಾರನೇ  ದಿನ ಅಲ್ಲಿ ಊರ ಜನರೆಲ್ಲ ಸೇರಿ ವನಭೋಜನ ಏರ್ಪಡಿಸುತ್ತಿದ್ದರು. ಆ ಸಲವೂ ಎಂದಿನಂತೆ ಅಂಥದೊಂದು   ವನಭೋಜನದ    ಸಿದ್ಧತೆ ಗಳು ಭರದಿಂದಲೇ ನಡೆದಿದ್ದವು.ಆ ವನಭೋಜನಕ್ಕೆ ಅಪ್ಪ ಅಮ್ಮನ ಜೊತೆ ಅಲ್ಲಿಗೆ ಹೋಗಿದ್ದೆ. ಅಲ್ಲಿ ಹಾಕಿದ ಮಡಲಿನ ಚಪ್ಪರದ   ಒಂದು   ಬದಿಯಲ್ಲಿ      ಭೂಮಿ ತಾಯಿಯ     ಪೂಜೆಗೆಂದು    ಉತ್ಸಾಹದ ತಯಾರಿ   ನಡೆದಿತ್ತು. ಇನ್ನೊಂದು  ಬದಿಯ ಚಪ್ಪರದಲ್ಲಿ  ಊರ  ಜನರಿಗೆಲ್ಲ ಸಾಕಾಗುವ ಷ್ಟು ಸಿಹಿ ಅಡುಗೆ, ತರಕಾರಿ ಅನ್ನಸಾಂಬಾರು ಪದಾರ್ಥಗಳು   ದೊಡ್ಡ  ಪಾತ್ರೆಯಲ್ಲಿ  ಕುದಿ ಯುತ್ತಿದ್ದವು. ನಾನು ನನ್ನ ಸ್ನೇಹಿತೆಯರೊಂ ದಿಗೆ   ಒಂದು ಬಾರಿ  ಪೂಜೆ   ನಡೆಯುವಲ್ಲಿ ಯೂ, ಇನ್ನೊಂದು  ಬಾರಿ  ಒಳಗೆ   ಅಡುಗೆ ಬೇಯುವಲ್ಲಿಯೂ ಒಟ್ಟಿಗೇ ಓಡಾಡುತ್ತಿದ್ದೆ. ಯಾಕೆಂದರೆ  ಪೂಜೆ  ನಡೆಯುವಲ್ಲಿ   ನನ್ನ ಅಮ್ಮನೂ; ಅಡುಗೆ  ನಡೆಯುವಲ್ಲಿ  ನನ್ನ ಅಪ್ಪನೂ ಊರ ಇತರರೊಂದಿಗೆ ಕೆಲಸದಲ್ಲಿ ತೊಡಗಿಕೊಂಡಿದ್ದರು. ಹಾಗಿದ್ದಾಗ   ಅತ್ತಿತ್ತ ಓಡಾಡುತ್ತಿದ್ದ ನನಗೆ ಒಮ್ಮೆಲೇ ಬಾಯಾರಿಕೆ ಶುರುವಾಯ್ತು. ನಾನು  ಅಡುಗೆ   ಚಪ್ಪರದ ಒಂದುಮೂಲೆಯಲ್ಲಿ ತುಂಬಿಟ್ಟ ಕುಡಿಯುವ ನೀರಿನ ಎರಡು ಡ್ರಮ್ಮುಗಳ ಹತ್ತಿರ ಓಡಿದೆ. ಎರಡೂ ಡ್ರಮ್ಮಿನ ಸಂದಿಯಲ್ಲಿ ಬೆಕ್ಕಿನಂತಹ ದೊಡ್ಡ   ಪ್ರಾಣಿಯೊಂದು   ಬೆದರಿಕೊಂಡು ಕೂತಿರುವಂತೆ  ಕಂಡಿತು. ನೀರು   ಕುಡಿದ ತಂಬಿಗೆಯನ್ನು    ಡ್ರಮ್ಮಿನ    ಮುಚ್ಚಳದ ಮೇಲಿಟ್ಟು, ಹಾಗೇ  ತುಸು  ಬಗ್ಗಿ  ಅದರತ್ತ ನೋಡಿದೆ. ಅದು ಇನ್ನಷ್ಟು ಹೆದರಿಕೊಂಡು ಕೂತಲ್ಲೇ ಒಂದಂಗುಲ ಹಿಂದಕ್ಕೆ ಸರಿಯಿತು.
     
ನನ್ನ ಕುತೂಹಲ ಇನ್ನಷ್ಟು ಹೆಚ್ಚಿ ಸುಮಾರು ಹೊತ್ತು  ಅದನ್ನೇ  ನೋಡುತ್ತ  ಕೂತುಬಿಟ್ಟೆ. ಆ  ಪ್ರಾಣಿಯೂ  ಸಹ. ತನಗೆ   ಇವಳೇನು ಮಾಡುತ್ತಾಳೋ ಎಂಬ ಭೀತಿಯಿಂದ ಬಿಟ್ಟ ಕಣ್ಣುಗಳಿಂದ ನನ್ನನ್ನೇ ದಿಟ್ಟಿಸುತ್ತಿತ್ತು. ಇಷ್ಟು ಸುಂದರ  ಪ್ರಾಣಿಯನ್ನು  ನಾನು  ಇಲ್ಲಿಯವ ರೆಗೆ ಎಲ್ಲಿಯೂ ಕಂಡಿರಲಿಲ್ಲ. ಒಂದು ದೊಡ್ಡ ಬೆಕ್ಕಿನ   ಗಾತ್ರದಲ್ಲಿರುವ   ಆ ಪ್ರಾಣಿಯು ಗೋದಿ ಬಣ್ಣದ್ದಾಗಿತ್ತು. ಅದರ ಮೈಮೇಲೆ ಕಪ್ಪು  ಚುಕ್ಕೆಗಳ  ಸುಂದರ  ಚಿತ್ತಾರವಿತ್ತು. ಕುತೂಹಲದಿಂದ ನಾನು ಅಲ್ಲಿಯೇ ಬಿದ್ದ ಮರದ ಎಲೆಯೊಂದನ್ನು ಎತ್ತಿ ಅದರಮೇಲೆ ಮೆಲ್ಲಗೆ ಎಸೆದೆ. ಅದು ಇನ್ನಷ್ಟು ಭಯದಿಂದ ಕುಳಿತಲ್ಲಿಂದ  ಮತ್ತೂ  ಹಿಂದಕ್ಕೆ ಸರಿಯಿತು. ನನ್ನ  ಈ ಆಟ  ನೋಡಿ  ಅಲ್ಲೇ  ಹತ್ತಿರದಲ್ಲಿ ಅಡುಗೆ ಮಾಡುತ್ತಿದ್ದ ನನ್ನ ಅಪ್ಪ’ಏಅಲ್ಲೇನ್ ನೋಡ್ತಿ? ನಡೀ ನಡಿ ಹೊರಗೆ’ ಅಂತ ಹೊರ ಗಟ್ಟಲು  ನೋಡಿದರು.  ಮತ್ತು   ತಕ್ಷಣಕ್ಕೆ ಡ್ರಮ್ಮಿನ  ಬದಿ  ಬಂದು  ನೀರು   ಕುಡಿದ ಅಪ್ಪನೂ ಅಲ್ಲಿಯೇ ಸಂದಿಯಲ್ಲಿ ಕೂತ ಆ ಪ್ರಾಣಿಯನ್ನು ಕಂಡು ಒಮ್ಮೆಲೇ ಬೆಚ್ಚಿಬಿದ್ದಿ ದ್ದರು. ‘ಅಯ್ಯೋ ಅಯ್ಯೋ ಚಿರತೆ ಮರಿ’ ಅಂತ ಬೊಬ್ಬಿಡುತ್ತ ನನ್ನನ್ನು ತಬ್ಬಿಕೊಂಡು ಹೊರ ಓಡಿ ಬಂದರು.ವನಭೋಜನದ  ಸ್ಥಳದ  ತುಂಬಾ   ‘ಚಿರತೆ ಮರಿಯೊಂದು ಅಡಿಗೆಮನೆ ಹೊಕ್ಕಿದೆ’ ಅಂತ ಸುದ್ದಿಯಾಗಿಬಿಟ್ಟಿತು. ಆ ಕ್ಷಣದಲ್ಲಿ ಅಡುಗೆ ಮಾಡುತ್ತಿದ್ದಎಲ್ಲರೂ ಹೊರ ಓಡಿ ಬಂದರು. ಮುಂದೆ  ಅರ್ಧ ಅಡುಗೆಯನ್ನು ಪೂರ್ತಿಗೊ ಳಿಸಲು  ಯಾರೂ  ಅತ್ತ  ಹೋಗಲು ತಯಾ ರಾಗಲಿಲ್ಲ.ಹಾಗೆ ಎಲ್ಲರೂ ಅತ್ತ ಅಡುಗೆಯ ನ್ನೂ ಇತ್ತ ಪೂಜೆಯನ್ನೂ ಕೈಬಿಟ್ಟು ಸರ್ಕಸ್ಸು ನೋಡುವಂತೆ ಅಡುಗೆ ಚಪ್ಪರದ  ಕಿಂಡಿಯ ಲ್ಲೇ   ಇಣುಕುತ್ತ  ಗದ್ದಲ ಹಾಕತೊಡಗಿದರು. ಅದೇ   ಹೊತ್ತಿಗೆ    ಅವರ   ಹಿಂದುಗಡೆಯ ಮರದ ಕೊಂಪೆಯಲ್ಲಿ ಎಂಥದೋ ಸದ್ದಾಗಿ ಕೆಲವರು  ಕುತೂಹಲದಿಂದ  ಅತ್ತ  ತಿರುಗಿದ ರು.  ನೋಡು   ನೋಡುತ್ತಿದ್ದಂತೆಯೇ   ಗಿಡ ವೊಂದರ  ಪೊದೆಯ  ಮರೆಯಲ್ಲಿ   ಸಿಟ್ಟಿನ ಲ್ಲೋ  ಸಂಕಟದಲ್ಲೋ  ಗುರುಗುಡುತ್ತ  ತನ್ನ ಮುಖವನ್ನಷ್ಟೇ  ಹೊರ  ತೋರುತ್ತ  ದೊಡ್ಡ ಚಿರತೆಯೊಂದು ನಿಂತುಬಿಟ್ಟಿತ್ತು. ಇಲ್ಲಿ ಜನರ ಗುಂಪು ಗದ್ದಲ  ಕಂಡು  ಅದೂ ಹೆದರಿದಂತಿ ತ್ತು. ಅಷ್ಟರಲ್ಲೇ ಕೆಲವರು ವನಭೋಜನವೂ ಬೇಡ, ಪೂಜೆಯೂ ಬೇಡ ಎಂದುಕೊಳ್ಳುತ್ತ ಮನೆಗೆ ಓಟಕಿತ್ತಿದ್ದರು.

ಆಗ ನಾನು ಒಳಗಡೆಯ ಸಣ್ಣಪ್ರಾಣಿಯನ್ನು ನೋಡದೇ ಬೆದರಿದ ಜನರ ಹತ್ತಿರ’ಇಂಥದೇ ಪ್ರಾಣಿ  ಒಳಗೂ ಉಂಟು ಆದರೆ ಸ್ವಲ್ಪ ಸಣ್ಣ ದಿದೆ’ಅನ್ನುತ್ತ ಅದು ಹೆದರಿಕೊಂಡುಕೂತಿದ್ದ, ನಾನು   ಎಲೆ   ಅದರ   ಮೇಲೆ    ಬಿಸಾಕಿದ ನಂತರ   ಅದು   ಇನ್ನಷ್ಟು    ಭಯಗೊಂಡು ಹಿಂದೆ  ಸರಿದ  ವೀಕ್ಷಕ  ವಿವರಣೆ  ನೀಡಿದೆ.. ಇತ್ತ ದಿಕ್ಕು  ತೋಚದೇ  ನಿಂತಿದ್ದ ನನ್ನ ಅಪ್ಪ ನಿಗೆ ತನ್ನ ಮರಿಯನ್ನು ಅರಸಿ ಬಂದ ತಾಯಿ ಚಿರತೆ ಅದು ಅಂತ ಗೊತ್ತಾಗಿ ಹೋಯಿತು. ನಿಧಾನ ಒಳ ಹೋಗಿ ಡ್ರಮ್ಮಿನ ಸಂದಿಯಲ್ಲಿ ಕೂತ  ಚಿರತೆ  ಮರಿಯನ್ನು  ಹಣಕಿ  ನೋಡಿ ದರು. ಅದು ಇನ್ನಷ್ಟು ಭಯಬಿದ್ದು ಕೂತಲ್ಲೇ ಮಿಸುಕಾಡಿತು.  ಈ  ಮರಿಯನ್ನು  ಹೊರಗೆ ಅದರ   ತಾಯಿಯ  ಬಳಿ  ಬಿಟ್ಟರೆ,   ಅದು ಅಲ್ಲಿಂದ ಹೊರಟು ಹೋಗಬಹುದು ಎಂದು ನನ್ನ  ಅಪ್ಪನಿಗೆ  ಅನ್ನಿಸಿತು.  ಅವರು    ಒಳ ಹೋಗಿ  ಆ ಮರಿಯನ್ನು  ಹೊರ  ಓಡಿಸುವ ಕುರಿತು  ಯೋಚಿಸಿದರು. ಆ  ಮರಿಯನ್ನು ಸಣ್ಣ  ಕೋಲಿನಿಂದ  ಮೆಲ್ಲಗೆ   ತಿವಿದರೂ ಅದು ಹೊರ ಓಡದೇ ಇನ್ನಷ್ಟು ಸಂದಿ ಸೇರಿ ಕೂತುಬಿಟ್ಟಿತು.ಹೊರಗಡೆ ನಿಂತ ಎಲ್ಲರೂ ಹೋ ಹಾಕಿದರು. ‘ಹುಲಿಮರಿಯೇ  ಇರ‍್ಬೇಕು.. ಅಲ್ಲಲ್ಲ  ಚಿರತೆ ಮರಿಯಂತೆ’ಅಂತೆಲ್ಲ ಜನರ ಗದ್ದಲವೆದ್ದಿತು. ಹೆದರಿಕೊಂಡ   ಅದು  ಚೆಂಗನೆ   ನೆಗೆದು ಅಡುಗೆ   ಒಲೆಯೆಡೆಗೆ   ಓಡಿತು.  ಅದನ್ನು ಕಂಡ ನನ್ನಪ್ಪ ಇನ್ನಷ್ಟು ಗಲಿಬಿಲಿಗೆ ಬಿದ್ದರು. ಯಾಕೆಂದರೆ ಅಲ್ಲಿಯ ಒಲೆಯಲ್ಲಿ ನಿಗಿನಿಗಿ ಕೆಂಡದ ಬೆಂಕಿಯೂ ಅಡುಗೆಯ ಬಿಸಿ ಪಾತ್ರೆ ಗಳೂ ಇದ್ದವು.ಇವೆಲ್ಲ ಗಂಡಾಂತರವೇಬೇಡ ವೆಂದು ಅಲ್ಲಿ ಸೇರಿದ ಇನ್ನೂ ಕೆಲವು ಜನರು ಆಗಲೇ  ಮನೆಗೆ  ತೆರಳಿದ್ದರು.  ನನ್ನ  ಅಪ್ಪ ಮೆಲ್ಲಗೆ  ಹೊರ ಹೋಗಿ  ದೇವರನ್ನು  ಕೂಡಿ ಸಲು  ಹಾಸಿಟ್ಟ  ಹೊಸ ಬೆಡ್ ಸೀಟನ್ನು ಎಳೆ ದು ತಂದರು.  ಅಪ್ಪ  ಏನು  ಮಾಡುತ್ತಿದ್ದಾರೆ ಅಂತ  ನಾನು  ನೋಡುತ್ತಿದ್ದೆ. ಕೆಲವರಂತೂ ಪೊದೆಯಲ್ಲಿ ಗುರುಗುಡುತ್ತ ನಿಂತಿದ್ದ ತಾಯಿ ಚಿರತೆಯು ಯಾವಾಗ ತಮ್ಮ ಮೇಲೆ ಎರಗು ತ್ತದೋ ಅಂತ ಹೆದರಿ, ತಂತಮ್ಮರಕ್ಷಣೆಗಾಗಿ, ಪೂಜೆಯ ತೆಂಗಿನಕಾಯಿ ಒಡೆಯಲು ತಂದ ಕತ್ತಿಯನ್ನೂ  ನೆಲಸವರಿ  ಚಪ್ಪರ   ಹಾಕಲು ತಂದ   ಕೊಡಲಿಯನ್ನೂ   ಕೋಲುಗಳನ್ನೂ ಹಿಡಿದುಕೊಂಡು ನಿಂತಿದ್ದರು. ಅದನ್ನು ಕಂಡ ಅಪ್ಪ ‘ಅದಕ್ಕೆ  ತೊಂದರೆ  ಕೊಡ್ಬೇಡಿ, ಅದಕ್ಕೆ ಏನೂ  ತೊಂದರೆ ಕೊಡ್ಬೇಡಿ’  ಅಂತ   ಪದೇ ಪದೇ  ಹೇಳುತ್ತಲೇ  ಇದ್ದರು.’ಯಾವ ವರ್ಷ ವೂ ಹೀಗೆ ಪೂಜೆಯ ನಡುವೆ ಕಾಡು ಪ್ರಾಣಿ ಬಂದು ತ್ರಾಸು ಕೊಟ್ಟಿದ್ದಿಲ್ಲ, ಈ  ವರ್ಷವೇಕೆ ಹೀಗಾಯ್ತು?’ ಅಂತ  ಕೆಲವರು ಒಂದು ರೀತಿ ಯ   ಭಯಮಿಶ್ರಿತ    ರೋಮಾಂಚನವನ್ನೇ ಅನುಭವಿಸಿದರು.ನನ್ನ  ಅಪ್ಪ ಕಳ್ಳ ಹೆಜ್ಜೆ  ಹಾಕುತ್ತ ಚಿರತೆಮರಿ ಕೂತ   ಹಿಂಬದಿಯಿಂದ  ಹೋಗಿ,  ಅದರ ಮೇಲೆ ಬೆಡ್ ಸೀಟು  ಹೊದಿಸಿ  ಗಬಕ್ಕನೆ ಅದನ್ನು  ಹಿಡಿದುಬಿಟ್ಟರು. ಅದು  ಕೊಸರಾ ಡುತ್ತ ಸಣ್ಣಗೆ ಗುರುಗುರು ಸ್ವರ ಹೊರಡಿಸು ತ್ತಿತ್ತು. ಅದನ್ನು  ಹಾಗೇ  ಎತ್ತಿ   ಹೊರತಂದ ಅಪ್ಪ ಅದರ ತಾಯಿ ಕಾಯುತ್ತ ನಿಂತಿರುವ ಕಡೆಗೆ ಸ್ವಲ್ಪದೂರದಲ್ಲಿ ಹೋಗಿ ಬೆಡ್ ಸೀಟು ತೆರೆದು   ಅದನ್ನು   ಬಿಡುಗಡೆಗೊಳಿಸಿದ್ದರು. ಅದೇ ಕ್ಷಣದಲ್ಲಿ ಮರದ ಮರೆಯಿಂದ ಹಾರಿ ಬಂದ ಚಿರತೆ ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹಾರಿ ಹೋಗಿ ಮರದ ಪೊದೆ ಯಲ್ಲಿ  ಮರೆಯಾಗಿ  ಹೋಯಿತು.  ಮತ್ತೆ ನಿಂತ ಅಳಿದುಳಿದ ಕೆಲ ಜನರು ಹೋ ಹಾಕಿ ದರು. ಇತ್ತ ಅಪ್ಪನ ಕೈಯೆಲ್ಲ ಚಿರತೆಮರಿಯ ಉಗುರು  ತಾಗಿ   ಅಲ್ಲಲ್ಲಿ   ಗಾಯವಾಗಿತ್ತು. ಅಲ್ಲಿದ್ದವರೆಲ್ಲ   ಚಿರತೆಗೆ   ಹಿಡಿಶಾಪ   ಹಾಕಿ ದರು. ಅಪ್ಪ ಅವರನ್ನು ತಡೆದು ‘ನಿಜ ಹೇಳ ಬೇಕೆಂದ್ರೆ  ಅವೇ  ನಮಗೆ ಹಿಡಿಶಾಪವನ್ನು ಹಾಕ್ಬೇಕು, ಯಾಕೆಂದ್ರೆ ನಮ್ಮ ಜಾಗೆಗೆ ಅದು ಬರಲಿಲ್ಲ, ಅದರ ಜಾಗೆಯನ್ನೇ ನಾವು ಆಕ್ರ ಮಿಸಿಕೊಂಡು,  ವನಭೋಜನದ  ನೆಪದಲ್ಲಿ ಇಲ್ಲಿ  ವಿಹರಿಸುವ  ಪ್ರಾಣಿಗಳಿಗೆ   ತೊಂದ್ರೆ ಕೊಡ್ತಿದ್ದೇವೆ’ ಅಂದರು. ಊರ  ಹಿರಿಯರು ‘ಯಾಕೆ? ಇದನ್ನು ನಾವು ಸುಮಾರು ಐವತ್ತು ಅರವತ್ತು ವರ್ಷಗಳಿಂದ  ಮಾಡುತ್ತ ಬಂದೇ ವೆ, ಎಂದೂ ಹೀಗೆ ಆಗಿರಲಿಲ್ಲ’ ಅಂತ ವಾದಿ ಸಿದರು. ಆಗ  ಅಪ್ಪ ‘ಮುಂದಿನ  ವರ್ಷದಿಂದ ಹೀಗೆ ಕಾಡಿಗೆ ಬಂದು ವನಭೋಜನ ಮಾಡುವುದ ನ್ನುನಿಲ್ಲಿಸಿಬಿಡೋಣ’ ಅಂದಿದ್ದಕ್ಕೆ ಅಲ್ಲಿರುವ ಕೆಲವು  ಸನಾತನಿಗಳಿಗೆ  ನಿರಾಸೆ  ಕಾಡಿತು. ಕೆಲವರು ‘ನಮ್ಮ ಅಜ್ಜನ ಕಾಲದಿಂದ ನಡೆಸಿ ಕೊಂಡು  ಬಂದದ್ದು,  ಹೇಗೆ  ಬಿಡೋದು?’ ಅಂತ ದೊಡ್ಡ ಬಾಯಿ ಮಾಡಿ ಅಪ್ಪನನ್ನು ತರಾಟೆಗೆ  ತೊಗೊಂಡರು.  ‘ಅಜ್ಜ  ನೆಟ್ಟ ಆಲದ ಮರ ಅಂತ ಅದಕ್ಕೇ ಯಾಕೆಜೋತು ಬೀಳಬೇಕು?  ಊರ  ಮಧ್ಯೆ  ಇರೋ ದೇವಿ ಗುಡಿಯ ಪಕ್ಕವೇ ಚಪ್ಪರ ಹಾಕಿ ಮಾಡುವಾ ಈ ವನಭೋಜನ, ಸಂಪ್ರದಾಯದ ಹೆಸರಿನ ಲ್ಲಿ  ಕಾಡಿಗೆ  ಬಂದು ಇಲ್ಲಿರುವ  ಪ್ರಾಣಿಗಳಿಗೆ ತೊಂದರೆ  ಕೊಡುವುದನ್ನು  ನಿಲ್ಲಿಸಬೇಕು’ ಅಂತ ಅಪ್ಪ ಖಡಾಖಂಡಿತವಾಗಿ ಹೇಳಿದರು. ಕೆಲವು  ಕಿರಿಕಿರಿ  ತೊಂದರೆಗಳು  ನನ್ನಪ್ಪನ ಮೇಲೆ ದಬ್ಬಾಳಿಕೆ ನಡೆಸಿದರೂ ಆ ನಂತರದ ವರ್ಷಗಳಲ್ಲಿ ವನಭೋಜನ ಊರೊಳಗಿನ ದೇವಿಗುಡಿ  ಪಕ್ಕವೇ  ನಡೆಯುತ್ತಿದೆ.  ಇದು ನನ್ನಪ್ಪನ ಶಕ್ತಿ.

                       🔆🔆🔆
✍️ಸುನಂದಾ ಕಡಮೆ, ನಾಗಸುಧೆ, ಹುಬ್ಬಳ್ಳಿ