ಅಮ್ಮನ ಕಂಬನಿ
ಕಂಡಷ್ಟು ನಮಗೆ
ಅಪ್ಪನ ಬೆವರಹನಿ
ಕಾಣುವುದೇ ಇಲ್ಲ..!

ಅಪ್ಪನೆಂದರೆ ನಮ್ಮ
ಮನೆಯ ಕಾಮಧೇನು !
ಬೇಡಿದ್ದೆಲ್ಲ ನೀಡಲೇ
ಬೇಕಾದ ಕಲ್ಪವೃಕ್ಷ !

ಅಪ್ಪ ಅತ್ತಿದ್ದು..
ಕಂಡವರು ಕಡಿಮೆ !
ಅಪ್ಪ ನೋವುಗಳಿಲ್ಲದ
ಸಮಚಿತ್ತ ಸರದಾರ !

ಹಬ್ಬ ಸಂತಸಗಳಲಿ
ರೇಷ್ಮೆಸೀರೆ ಹೊಸಬಟ್ಟೆ
ತೊಡಿಸಿ ಸಂಭ್ರಮಿಸುವ
ಅಪ್ಪನುಡುಗೆ ಗಮನಿಸಿದವರಾರು?!

ಧರೆಯ ನಿತ್ಯ ಪೊರೆವ
ಅಂಬರದಂತೆ ತಂದೆ
ಸತಿಸುತರ ಹಗಲಿರುಳು
ಕಾಯ್ವ ವಾತ್ಸಲ್ಯಧಾರೆ !

ಅಮ್ಮನ ಮಡಿಲಿಂದ
ಕೈಹಿಡಿದು ನಮ್ಮನ್ನೆಲ್ಲ
ಹೆಗಲಿಗೇರಿಸಿ ಲೋಕ
ತೋರಿಸಿದ ಮಾರ್ಗದರ್ಶಕ !

ನೋವು-ಬೇವು ನಿರಾಸೆ
ಸಂಸಾರದೊತ್ತಡಗಳ..
ಹಾಲಾಹಲವನೆಲ್ಲ ನುಂಗಿ
ನಗುವ ನೀಲಕಂಠ !

ಅಮ್ಮನೆಂದರೆ ಮಮತೆ !
ಅಪ್ಪನೆಂದರೆ ಭದ್ರತೆ !
ಸದಾ ಮಡದಿ-ಮಕ್ಕಳ
ಭವಿಷ್ಯಕಾಗಿ ಬದುಕನೆ
ಮುಡುಪಿಟ್ಟು ಬೆಳಗುವ
ಕರ್ಪೂರದ ಹಣತೆ !

(“I LOVE YOU APPA” ಎಂಬ ನಾಲ್ಕು ಪದಗಳಿಗೆ ನನ್ನ ಪ್ರೀತಿಯಾದರ ಸೀಮಿತಗೊ ಳಿಸಲಾರೆ. ಏಕೆಂದರೆ ಈಗಲೂ ಎಂದೆಂದೂ ಅಪ್ಪನೆಂದರೆ ಗೌರವ, ಭಕ್ತಿ, ಭಯ, ಅರ್ಥ ವಾಗದ ಅದ್ಭುತ”)

                       🔆🔆🔆
✍️ಎ.ಎನ್.ರಮೇಶ್, ಗುಬ್ಬಿ