ಸುಜಾತಾ ಅಂದರೆ ಪುಸ್ತಕದ ಹುಳು ಎಂಬ ಅಡ್ಡ ಹೆಸರು ಬಾಲ್ಯದಿಂದಲೇ. ಬರವಣಿಗೆ ಇತ್ತೀಚಿನ 3 ವರ್ಷದ ಮರುಳಾದರೆ ಓದಿನ ಮೇಲಿನ ಹುಚ್ಚು ಪ್ರಾಯಶಃ ಓದಲು ಕಲಿತ ದಿನದಿಂದಲೇ ಅನಿಸುತ್ತೆ .ಓದಿನ ಹಸಿವನ್ನು ಹುಟ್ಟು ಹಾಕಿದವರು ಹಪಾಹಪಿತನವನ್ನು ಉಂಟುಮಾಡಿದವರು.  ಅಣ್ಣಾ  ಎಂದರೆ ನಮ್ಮ ತಂದೆ   ಎಂಬುದು   ನಿರ್ವಿವೇದ್ಯ.   ಮನೆಯಲ್ಲಿ ಪುಸ್ತಕಗಳಿಲ್ಲದ ಓದದೇ ಇದ್ದ ಒಂದು ದಿನವನ್ನೂ ನಾನು ಬೆರಳು ಮಾಡಿ ನೆನಪಿಸಿಕೊಳ್ಳಲಾರೆ.  


ನನಗೆ   ನೆನಪಿರುವಂತೆ   ಎರಡನೇ    ಕ್ಲಾಸ್ ನಲ್ಲಿದ್ದಾಗ  ನಿಯತಕಾಲಿಕೆಗಳಲ್ಲಿರುತ್ತಿದ್ದ ಮಕ್ಕಳ ಪುಟಗಳನೆಲ್ಲಾ ಓದಿರುತ್ತಿದ್ದೆ. ಮೊದ ಮೊದಲು  ಅಣ್ಣನ  ಎದುರಿಗೆ   ಜೋರಾಗಿ ಓದುತ್ತಿದ್ದುದು  ಕ್ರಮೇಣ  ನನ್ನಷ್ಟಕ್ಕೆ  ನಾನು ಮನಸ್ಸಿನಲ್ಲೇ ಓದಿಕೊಳ್ಳುತ್ತಿದ್ದೆ.ಕರ್ಮವೀರ, ಸುಧಾ,  ಪ್ರಜಾಮತ,  ಮಲ್ಲಿಗೆ,  ಮಯೂರ ನಂತರ ಬಂದದ್ದು. ಮಕ್ಕಳಿಗಾಗಿ  ಚಂದಮಾ ಮ ಮತ್ತು ಬಾಲಮಿತ್ರ! “ಪಾಪಚ್ಚಿ” ಎನ್ನುವ ಪತ್ರಿಕೆ ಇತ್ತಾದರೂ ನಿಯಮಿತವಾಗಿ ಸಿಗುತ್ತಿ ರಲಿಲ್ಲ.

ಆಗ ಭಾರತ ಭಾರತಿ ಪುಸ್ತಕ ಮಾಲಿಕೆಯ ಪುಸ್ತಕಗಳು ಹೊರಬಿದ್ದವು. ಮೊದಲ ಕಂತಿ ನ   ಹತ್ತು ಪುಸ್ತಕಗಳೇ   ನನ್ನ    ಪ್ರಥಮ ಪುಸ್ತಕ ಸಂಪಾದನೆ.  “ಧಿಂಗ್ರಾ” “ನಚಿಕೇತ” ಮುಂತಾದವರ  ಕತೆಗಳು  ಇತ್ತು  ಎಂಬುದು ನೆನಪು.  ಅದೇ   ಸಂದರ್ಭದಲ್ಲಿ   ತರಾಸು ರವರ  ನಾಗರಹಾವುಾ,   1ಗಂಡು 2ಹೆಣ್ಣು ಮತ್ತು  ಸರ್ಪಮತ್ಸರ ಪುಸ್ತಕಗಳನ್ನು ಅಣ್ಣ ತಂದಿದ್ದರು. ಅಮ್ಮ ಅಣ್ಣ ಓದಿ ನನ್ನ ಕೈಲಿ ಸಿಗಬಾರದೆಂದು   ಅಟ್ಟದ   ಮೇಲಿಟ್ಟರೆ ಮಂಚದ ಮೇಲೆ ಸ್ಟೂಲ್ ಹಾಕಿ ನಿಂತು ತೆಗೆದುಕೊಂಡು ಓದುತ್ತಿದ್ದೆ..ಅರ್ಥವಾಗಿದ್ದೆಷ್ಟೋ ಬಿಟ್ಟಿದ್ದೆಷ್ಟೋ. ಇನ್ನು ವೃತ್ತಪತ್ರಿಕೆಗಳ   ಭಾನುವಾರದ   ಸಂಚಿಕೆ.  ನಮ್ಮದು   ಖಾಯಮ್ಮಾಗಿ   ಪ್ರಜಾವಾಣಿ. 
ನಮ್ಮ ಓದಿನ ನಂತರ ಸಂಯುಕ್ತ ಕರ್ನಾಟಕ ಕನ್ನಡಪ್ರಭ  ತರಿಸುವವರ  ಮನೆಗಳಿಂದ ವಿನಿಮಯ.   ಹಾಗೆಯೇ  ಪದಬಂಧಗಳ ಹುಚ್ಚು ಹಿಡಿಸಿದ್ದು  ಸಹ 4  ಅಥವಾ 5ನೇ ತರಗತಿಗಳಿಗೆ ಬಂದಾಗ. ಅಣ್ಣಾ ಕಚೇರಿಯ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳು ನನ್ನ     ಓದಿನ   ಹಸಿವೆಗೆ   ಆಹಾರವಾಗುತ್ತಿ ದ್ದವು.  ಅವುಗಳನ್ನು ಯಾವ ರೀತಿ ಅರ್ಥೈಸಿ ಕೊಳ್ಳುತ್ತಿದ್ದೆನೋ ಗೊತ್ತಿಲ್ಲ ಅಂತೂ ಓದಿದ್ದೆ ಎಸ್.ಎಲ್. ಭೈರಪ್ಪ,  ಅನಕೃ,   ತರಾಸು, ಕಾರಂತರು ಮತ್ತು ಮಾಸ್ತಿಯವರ ಆಗಿನ ಬಹುತೇಕ  ಕಾದಂಬರಿಗಳು  ನನ್ನ  ಓದಿಗೆ ಸಿಕ್ಕಿದ್ದವು.  ಏತನ್ಮಧ್ಯೆ    ಕುವೆಂಪುರವರ ರಾಮಾಯಣದರ್ಶನಂನ  ಕೆಲವು    ಪದ್ಯಗ ಳನ್ನು ನನ್ನ ಬಳಿ ಓದಿಸಿ ನಂತರ ಅವರು ಅರ್ಥ ಹೇಳುತ್ತಿದ್ದರು. ಹಾಗೆಯೇ ಕರ್ಣಾಟ ಭಾರತ ಕಥಾಮಂಜರಿಯನ್ನು ಸಹ .ಇವೆಲ್ಲ ಪ್ರತ್ಯಕ್ಷವಾಗಿಯೋ   ಪರೋಕ್ಷವಾಗಿಯೋ ನಮ್ಮ ಅಂತಃಪ್ರಜ್ಞೆಯಲ್ಲಿದ್ದು ಈಗ ನಮ್ಮ ಬರವಣಿಗೆಯಲ್ಲಿ ಧುತ್ತೆಂದು ಇಳಿಯುತ್ತಿರು ವುದು ನಿಜ.  ಗೆಳೆಯರ   ಬಳಗವೊಂದನ್ನು ಮಾಡಿಕೊಂಡು ಒಬ್ಬೊಬ್ಬರು ಒಂದೊಂದು ನಿಯತಕಾಲಿಕವನ್ನು ತರಿಸುತ್ತಿದ್ದರು. ಹಾಗಾ ಗಿ ನಮ್ಮ ಓದಿಗೆ ಎಂದೂ ಕೊರತೆ ಇರಲಿಲ್ಲ.  ಕೆಲ  ಭಾರತೀಯ  ಇಂಗ್ಲಿಷ್    ಕವಿಗಳನ್ನು ಓದಿಸಲು   ಪ್ರಯತ್ನಿಸಿದ್ದರಾದರೂ  ನನಗ್ಯಾ ಕೋ ರುಚಿಸಿರಲಿಲ್ಲ.  ನಾನು   ಹೈಸ್ಕೂಲಿನ ಮೆಟ್ಟಿಲು ಹತ್ತಿದಾಗ   ಅಪ್ಪನಿಗೆ   ಇಂಗ್ಲಿಷ್ ಕಾದಂಬರಿಗಳ   ಗೀಳು  ಹತ್ತಿತು.   ಹೆಚ್ಚಾಗಿ ಪೆರೀ ಮೇಸನ್  ಮತ್ತು   ಜೇಮ್ಸ್ ಹ್ಯಾಡ್ಲಿ ಚೇಸ್ ನ ಮಾಲಿಕೆಗಳು.ಅವುಗಳನ್ನು ತಾವು ಓದಿ   ಓದಬಹುದಾದಂಥವನ್ನು   ನನಗೆ ಕೊಟ್ಟು  ಓದಲು ಹೇಳುತ್ತಿದ್ದರು. ಎಂದಿಗೂ ಕಾದಂಬರಿ, ಕಥೆ  ಪುಸ್ತಕ  ಓದುವುದು ಸಮ ಯ ಹಾಳು ಎಂದು ಭಾವಿಸಿರಲಿಲ್ಲ . ನಿಮ್ಮ ಶಾಲೆಯ ಓದು  ಮಾತ್ರ  ಅಪ್ ಟು ಡೇಟ್ ಆಗಿರಬೇಕು  ಎನ್ನುವುದನ್ನು  ಮಾತ್ರ ಹೇಳು ತ್ತಿದ್ದರು.  ನಮ್ಮ ತಂದೆಯೇ ಕಥೆ ಪುಸ್ತಕ ಓದಲು ಹೇಳುತ್ತಾರೆ ತಂದು ಕೊಡುತ್ತಾರೆ  ಎಂದರೆ  ನನ್ನ  ಸ್ನೇಹಿತೆಯರು ನಂಬುತ್ತಲೇ ಇರಲಿಲ್ಲ. 

ಓದಿದ ವಿಷಯಗಳನ್ನು  ರಾಜಕೀಯ   ವಿದ್ಯ ಮಾನಗಳನ್ನು  ನಮ್ಮೊಡನೆ   ದೊಡ್ಡವರಂತೆ ಯೇ  ಚರ್ಚಿಸುತ್ತಿದ್ದುದು  ವಿಶೇಷ.  ತುರ್ತು ಪರಿಸ್ಥಿತಿಯ  ಕಾಲದ  ನಿಷೇಧಿತ   ಭುಗಿಲು ಪುಸ್ತಕ ತಂದು ತಾವು ಓದಿ,ನನ್ನನ್ನು ಓದಿಲು ಹೇಳಿದರು.  ಆಗ  ನನಗೆ ಹನ್ನೊಂದು ವರ್ಷ ಅಷ್ಟೇ. ಎಷ್ಟೇ  ಹಣಕಾಸಿನ  ತೊಂದರೆಯಿದ್ದ ರೂ  ಪ್ರತಿ ತಿಂಗಳು  ನಿಯತಕಾಲಿಕ     ವೃತ್ತ ಪತ್ರಿಕೆ ತಪ್ಪಿಸುತ್ತಿರಲಿಲ್ಲ. ಪುಸ್ತಕಗಳ ಕೊಳ್ಳು ವಿಕೆ ಮಾತ್ರ ಎಲ್ಲ ಜವಾಬ್ದಾರಿ ತೀರಿ ನಿವೃತ್ತಿ ಯ ನಂತರ ಆರಂಭಿಸಿದ್ದು. ಅಲ್ಲಿಯವರೆಗೆ ಆಗೊಂದು   ಈಗೊಂದು    ಖರೀದಿಯಷ್ಟೇ. ಅದರಲ್ಲಿ ನಿರಂಜನರು ಸಂಪಾದಿಸಿದ ವಿಶ್ವ ಕಥಾಕೋಶ ಹಾಗೂ ಮೈಸೂರಿನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ ಪ್ರಯುಕ್ತದ ಪುಸ್ತಕ ಗಳು ಮುಖ್ಯವಾದುವು. ಮತ್ತೊಂದು ನನ್ನ ನೆನಪಿನಲ್ಲಿರುವುದೆಂದರೆ ಗೆಳೆಯರ ಮತ್ತು ಅವರುಗಳ   ಕಡೆಯ   ಮದುವೆಗಳಿಗೆಲ್ಲ ಅವರು  ಮೈಸೂರು  ಮಲ್ಲಿಗೆ  ಪುಸ್ತಕವನ್ನೇ ಉಡುಗೊರೆ   ಕೊಡುತ್ತಿದ್ದುದು.  ಹಾಗಾಗಿ ಮೈಸೂರು ಮಲ್ಲಿಗೆ ಕವನ ಸಂಕಲನ ನಮ್ಮ ಮನೆಯಲ್ಲಿ  ಸದಾ  ಸ್ಟಾಕ್ ಇರುತ್ತಿತ್ತು. ಈ ಮಧ್ಯೆ ಕೆಲಕಾಲ ಸೋವಿಯತ್ ಪತ್ರಿಕೆಮತ್ತು ಪ್ರಬುದ್ಧ ಕರ್ನಾಟಕ ಪುಸ್ತಕರೂಪದ ನಿಯ ತಕಾಲಿಕೆ ಇವೆಲ್ಲವುಗಳ ಪರಿಚಯ ಮಾಡಿಸಿ ದ್ದು ನನ್ನಣ್ಣನೇ. 


ಕೊಂಡ  ಪುಸ್ತಕಗಳ   ಮೇಲೆ   ದಿನಾಂಕ ಹಾಗೂ ಸಂದರ್ಭ ಬರೆದು ಸಹಿ ಹಾಕಿಸಿಕೊ ಳ್ಳುವ ಅವರ ಸಂಪ್ರದಾಯವನ್ನು ಮಾತ್ರ ನಾನು   ಈಗಲೂ    ಅನುಸರಿಸುತ್ತಿದ್ದೇನೆ. ಇಂತಹ   ಬಾಳಿನುದ್ದಕ್ಕೂ   ನೆನಪಿಡುವ ಹವ್ಯಾಸದ   ಬೀಜ ಬಿತ್ತಿದ  ಅಣ್ಣ ನಿಮಗೆ ಯಾವ  ರೀತಿಯಲ್ಲಿ  ನಮನ   ಸಲ್ಲಿಸಲಿ? ಜೀವನವಿಡೀ ಸುಖ ದುಃಖಕ್ಕೆ ಜೊತೆಯಾಗಿ ನೀವಿರುವುದಿಲ್ಲವೆಂದು ಈ ಸಂಗಾತವನ್ನು ಕೊಟ್ಟು ಹೋದಿರಾ?  ಮೊದಲೆಲ್ಲ    ಇದು ಮಹತ್ವದ   ವಿಷಯವಾಗಿರಲಿಲ್ಲ  ನನಗೆ.  ಆದರೆ ನಿಮ್ಮಗಲಿಕೆಯ ಉರಿಯನ್ನುಪುಸ್ತಕ ಸಾಂಗತ್ಯದಲ್ಲೇ    ನಿವಾರಿಸಿಕೊಳ್ಳುವಾಗ     ನೀವು  ಬಿಟ್ಟುಹೋದ,  ಕೊಟ್ಟು  ಹೋದ ಉಡುಗೊರೆಯ  ಪ್ರಾಮುಖ್ಯತೆಯ ಅರಿವಾ ಯಿತು.  ಇದನ್ನೆಲ್ಲ  ನೋಡಿ  ಸಂತೋಷಪಡ ಲು ಅಣ್ಣಾ ನೀವು ಇರಬೇಕಿತ್ತು. ನಮ್ಮನ್ನ ಬಿಟ್ಟು ಹೋಗಬಾರದಿತ್ತು. ಪುಸ್ತಕದ ಮೇಲಿ ನ ನಿಮ್ಮ ಸಹಿಗಳನ್ನು ನೋಡುತ್ತಾ ಕಣ್ಣೀರು ಹಾಕುತ್ತ ಕುಳಿತ ಕ್ಷಣಗಳೆಷ್ಟೋ …ಈಗಲೂ ಅಳು ಬರುತ್ತಿದೆ,  ಅಕ್ಷರ  ಮಸುಕಾಗುತ್ತಿದೆ, ಮುಗಿಸಲೇ?

          ‌‌‌‌‌‌‌‌            🔆🔆🔆
 ✍️ಸುಜಾತಾ ರವೀಶ್, ಮೈಸೂರು