ಒಲುಮೆಗೆ ಕರಗಿದ ಗಂಡುಡುಗೆ ಒಲುಮೆ ಯೆಂಬುದು ಎದೆಯ ಅರಗಿಳಿ.ಒಲುಮೆಯು ಮರಭೂಮಿಯಲ್ಲೂ ಓಯಾಸಿಸ್ನ ಊಟೆ ಯನು ಚಿಮ್ಮಿಸಬಲ್ಲುದು. ಪ್ರಕೃತಿಯುಒಲು ಮೆಯ ಗಾಯನ ಹಾಡುತ್ತಲೇ ಜೀವ ಸಂಕು ಲಕ್ಕೆ ಚೈತನ್ಯದ ರಸಧಾರೆಯೆರೆಯುತ್ತದೆ. ಮುಂಗೋಳಿ ಕೂಗುತ್ತಲೇ ರವಿ ಕಿರಣಗಳು ಮುತ್ತಿಕ್ಕಿದ್ದಾಗ, ಪುಷ್ಪಸಂಕುಲದಲ್ಲಿ ಸಂಚಲ ನ, ಪಕ್ಷಿ ಕುಲದಲ್ಲಿ ಕಲರವ, ಚರಾಚರಗಳಲ್ಲಿ ಜೀವಚೇತನದ ಅಂಕುರವಾಗುತ್ತದೆ. ಪ್ರಕೃತಿ ಪುರುಷ ಒಲುಮೆಯ ಬಂಧನದಲಿ ಬಂಧಿ ಯಾದಾಗ,ಇಬ್ಬರಲೂ ಅನುರಾಗ ಏರ್ಪ ಡುತ್ತದೆ. ಪ್ರೇಮಿಗಳೆದೆಯಲಿ ಒಲುಮೆಯು ಬತ್ತದ ಉತ್ಸಾಹದ ಬುಗ್ಗೆಯನ್ನು ಚಿಮ್ಮಿಸು ತ್ತದೆ. ಒಲುಮೆ ಎಂಬುದು ಜೀವನ ಸಾಕ್ಷಾತ್ಕಾರದ ಮೂಲ ಬಿಂದು. ಒಲುಮೆಯಿದ್ದಲ್ಲಿ ಮುಪ್ಪಿಗೆ ಜಾಗವೇ ಇರಲಾರದು. ನವಿರು ಭಾವಗಳ ಹೊಮ್ಮಿಸುವ ಒಲುಮೆಯ ಗಂಡು-ಹೆಣ್ಣೆಂ ದೆನಿಸದೇ ಇಬ್ಬರಲೂ ಭಾವ ಪುಳಕಗೊಳಿ ಸುವ ಪಾಕ. ಒಲುಮೆಯಿಂದ ಒಂದಾಗುವ ಹೆಣ್ಣು-ಗಂಡುಗಳ ಮಿಲನದಿಂದಾಗಿ ಜೀವ ರಾಶಿಯ ಉಗಮವೂ ಆಗಿದೆ. ಒಟ್ಟಿನಲ್ಲಿ ಒಲುಮೆಯೆಂಬುದು ಜೀವಸಂಕುಲದ ಸಂಜೀವಿನಿ ಬಿಂದು. ಒಲವಿನ ಬಿಸುಪಿಗೆ ಕರ ಗದವರಿಲ್ಲ. ಭಾವಜೀವಿಗಳೆಲ್ಲರೆದೆಯಲ್ಲಿ ಒಲವೆಂಬ ದೀಪ ಸದಾ ಬೆಳಕನ್ನೀಯುತ್ತಿರು ತ್ತದೆ.ಗಂಡುಡುಗೆಯಟ್ಟು ಗಂಡಿನಂತೆಯೇಬೆಳೆದ ‘ಚಿತ್ರಾಂಗದೆ’ಯ ಎದೆಯಲ್ಲಿ ‘ಅರ್ಜುನ’ನ ಸ್ಪರ್ಶದಿಂದ ಒಲುಮೆಯರಾಗ ಹೊಮ್ಮಿದ್ದು, ಹೆಣ್ಣುಭಾವ ಜಾಗೃತಗೊಂಡಿದ್ದು ಪ್ರಕೃತಿ ಸಹಜವಾಗಿಯೇ ಕಂಡು ಬಂದರೂ,‘ಚಿತ್ರಾಂ ಗದೆ’ ತನ್ನದೆಲ್ಲವನ್ನೂ ‘ಅರ್ಜುನ’ನಿಗೆ ಸಮ ರ್ಪಿಸಿ ಕೃತಾರ್ಥಳಾಗುವ ಭಾವ ನಿಜಕ್ಕೂ ಆಶ್ಚರ್ಯವನ್ನು ಮೂಡಿಸುವಂತಹದ್ದು. ‘ಸಮರ್ಪಣೆ’ಯೆಂಬುದು ಒಲುಮೆಯ ಮುಂದಿನ ಹಂತ. ಆ ಸಮರ್ಪಣೆ ಭೌತಿಕವಾ ದುದಾಗಿರಬಹುದು, ಅಭೌತಿಕವಾದುದೂ ಆಗಿರಬಹುದು. ಚಿತ್ರಾಂಗದೆ ಭೌತಿಕ,ಅಭೌತಿ ಕ ನೆಲೆಯಲ್ಲಿ ಸಮರ್ಪಣೆಗೆಒಳಗಾಗುತ್ತಾಳೆ. ಅರ್ಜುನನ ಮೇಲಿನ ಮೋಹ, ಅನುರಾಗ ವಾಗಿ, ಒಲುಮೆಯಾಗಿ,ಪ್ರೇಮವಾಗಿ, ವಿರಹ ವಾಗಿ ಮುಂದೆ ಗಾಂಧರ್ವ ವಿವಾಹವಾಗುವ ಮೂಲಕ ಪರ್ಯಾವಸಾನವಾಗುತ್ತದೆ. ಚಿತ್ರಾಂಗದೆಯು ಮಹಾಭಾರತದಲ್ಲಿ ಕಾಣಿಸಿ ಕೊಳ್ಳುವ ಪುಟ್ಟಪಾತ್ರವಾದರೂ ಸೆಳೆಮಿಂಚಿ ನಂತೆ ಬೆಳಕಿನ ಸೆಳಕೊಂದನ್ನು ಮೂಡಿಸುವ ಪಾತ್ರ.
ಮಹಾಭಾರತದುದ್ದಕ್ಕೂ ಕುಂತಿ, ಮಾದ್ರಿ, ಗಾಂಧಾರಿ, ದ್ರೌಪದಿ, ಸುಭದ್ರೆ, ದುಶ್ಯಲೆ ಮುಂತಾದ ಮಹಿಳಾ ಪಾತ್ರಗಳು ಪ್ರಧಾನ ವಾಗಿ ಕಾಣಿಸಿಕೊಂಡು ತಮ್ಮ ತಮ್ಮ ನೆಲೆ ಯಲ್ಲಿ ಗುರುತಿಸಿಕೊಂಡಿವೆ. ಪಾಂಡವರು, ಕೌರವರ ಬದುಕಿನಲ್ಲಿ, ರಾಜಗದ್ದುಗೆಯ ಹೋರಾಟದಲ್ಲಿ ಮಹಿಳೆಯರ ಸಂಕಟಗಳು ಅವರಾಡಿದ ಜೂಜಿನ ದಾಳಗಳಂತೆ ಎಸೆಯ ಲ್ಪಟ್ಟವು. ಪುರುಷನ ಪ್ರತಿಜ್ಞೆ, ಪ್ರತಿಷ್ಠೆ, ಅಹಂ ಕಾರಗಳಿಗೆ ಅವರ ಆಸೆ-ಕನಸುಗಳೆಲ್ಲಾ ಪುರುಷನ ಪಾದದಡಿಯಲ್ಲಿ ಹೊಸಕಿ ಹಾಕ ಲ್ಪಟ್ಟ ಕುಸುಮಗಳಾದವು. ಅಂಬೆ, ಅಂಬಾ ಲಿಕೆ, ಅಂಬಿಕೆ ಕಾಶಿ ರಾಜನ ಪುತ್ರಿಯರಾದ ರೂ ಭೀಷ್ಮನ ಪ್ರತಿಜ್ಞೆ ಮತ್ತು ಹಸ್ತಿನಾಪುರದ ಪ್ರತಿಷ್ಠಿತ ರಾಜಮನೆತನಕ್ಕೆ ತಮ್ಮನ್ನು ಸಮ ರ್ಪಣೆ ಮಾಡಿಕೊಳ್ಳುತ್ತಾರೆ. ಅಂಬೆ ಮಾತ್ರ ಭೀಷ್ಮನ ಕಾರ್ಯಕ್ಕೆ ಸಮ್ಮತಿ ನೀಡದೇ ಪ್ರತಿ ಭಟಿಸುತ್ತಾಳೆ.ಗಾಂಧಾರಿಯ ಕಥೆಯಾದರೂ ಅಷ್ಟೇ. ಹುಟ್ಟು ಕುರುಡನ ಕೈ ಹಿಡಿದು ಜೀವಿ ತಾವಧಿಯವರೆಗೂ ತನ್ನ ಕನಸುಗಳಿಗೆ ಪಟ್ಟಿ ಕಟ್ಟಿಕೊಂಡು ವಂಶ ಮುಂದುವರಿಕೆಗೆ ಸಂತಾ ನಗಳನ್ನು ಹೆತ್ತು ಕೊಡುವುದರಲ್ಲೇ ಸಾರ್ಥಕ ತೆ ಪಡೆದುಕೊಳ್ಳುತ್ತಾಳೆ. ಕುಂತಿಯಂತೂ ಪಾಂಡು ರೋಗದಿಂದ ನರಳುತ್ತಿದ್ದ ಪಾಂಡು ರಾಜನೊಂದಿಗೆ ಸಂಸಾರ ಸುಖ ಹೊಂದದೇ, ಮಂತ್ರಗಳಿಂದ ಮಕ್ಕಳನ್ನು ಪಡೆಯುತ್ತಾಳೆ. ಕುಂತಿಯಷ್ಟು ಸಂಯಮತೆ ಹೊಂದಲಾರದ ಮಾದ್ರಿ ಪಾಂಡುವಿನೊಂದಿಗೆ ಕಾಮಕೇಳಿಗೆ ಇಳಿದು ಪತಿಯ ಮರಣಕ್ಕೆ ಕಾರಣಳಾಗಿ ತಾನು ಸತಿ ಹೋಗುತ್ತಾಳೆ. ದ್ರೌಪದಿ ಕುಂತಿ ಆಡಿದ ಮಾತಿನ ಒಂದು ತಪ್ಪಿನಿಂದ ಅರ್ಜು ನನ ಮೇಲಿನ ಪ್ರೀತಿಯನ್ನು ಐವರಲ್ಲಿ ಹಂಚಿ ಕೊಳ್ಳುವ ಅಸಹಾಯಕತೆಗೆ ಒಳಗಾಗುತ್ತಾಳೆ ಒಟ್ಟಿನಲ್ಲಿ ಕುರುಕ್ಷೇತ್ರ ಯುದ್ಧಕ್ಕಿಂತ ಮುಂಚಿ ತವಾಗಿಯೇ ಹಸ್ತಿನಾಪುರದ ಅರಮನೆಯ ಲ್ಲಿ ಮಹಿಳೆಯರ ಆಸೆ-ಕನಸು-ಅಸ್ತಿತ್ವ-ಮನ ಸುಗಳ ಮಾರಣ ಹೋಮವೇ ನಡೆದಿತ್ತು. ಇದನ್ನು ಗಮನಿಸದೇ ನಾವುಗಳೆಲ್ಲಾ ಕುರು ಕ್ಷೇತ್ರ ಯುದ್ಧ ಧರ್ಮ-ಅಧರ್ಮಗಳ ನಡುವೆ ನಡೆದ ಯುದ್ಧ ಎಂದು ವ್ಯಾಖ್ಯಾನಿಸಿ ಬಿಡು ತ್ತೇವೆ.ಧರ್ಮ ಸ್ಥಾಪನೆಗಾಗಿ ನಡೆದ ಯುದ್ಧ ದಲ್ಲಿ ಮಹಿಳೆಯರ ಮಧುರ ಕನಸುಗಳೂ ಬಲಿಯಾಗಿದ್ದವು ಎಂಬುದನ್ನು ಮರೆತು ಬಿಡುತ್ತೇವೆ.ಇದಕ್ಕೆ ಚಿತ್ರಾಂಗದೆಯೂ ಹೊರತಿಲ್ಲ.ಇವಳು ಮಣಿಪುರದ ಅರಸನಾರದ ಚಿತ್ರವಾಹನನ ಪುತ್ರಿ. ಗಂಡು ಸಂತಾನವಿಲ್ಲದ ಚಿತ್ರವಾಹನ ನು ಮಗಳನ್ನೇ ಗಂಡು ಮಗನಂತೆ ಬೆಳೆಸು ತ್ತಾನೆ.ತನ್ನೆಲ್ಲಾ ಆಸೆ-ಕನಸುಗಳನ್ನು ಅವಳಿಗೆ ಧಾರೆಯೆರುತ್ತಾನೆ. ಚಿತ್ರಾಂಗದೆಯೂ ಗಂಡಿ ನಂತೆಯೇ ಬೆಳೆದು ಕತ್ತಿ ವರಸೆ, ಕುದುರೆ ಸವಾರಿ ಎಲ್ಲ ಯುದ್ಧ ಕಲೆಗಳನ್ನು ಕಲಿಯು ತ್ತಾಳೆ.ತೊಡುವುದು ಕೂಡಾ ಗಂಡು ಉಡಿಗೆ ಯನ್ನೇ ಭಾವಿಸುವುದು ಕೂಡಾ ಗಂಡು ಭಾವನೆಯನ್ನೇ,ತೊರುವುದು ಕೂಡಾಗಂಡು ಪರಾಕ್ರಮವನ್ನೇ, ಬೇಟೆಯ ಹವ್ಯಾಸ, ಗುರಿ ಇಡುವುದು, ಬಾಣ ಪ್ರಯೋಗದ ಚಾಕಚಕ್ಯ ತೆ ಎಲ್ಲವೂ ಗಂಡು ರೀತಿಯೇ.ಹೀಗೆಗಂಡಾಗಿ ಯೇ ಬೆಳೆದ ಚಿತ್ರಾಂಗದೆ ಅನಿರೀಕ್ಷಿತವಾಗಿ ಅರ್ಜುನನ್ನು ಭೇಟಿಯಾಗುತ್ತಾಳೆ. ಪರಸ್ಪರ ವಯೋ ಸಹಜ ಬಯಕೆಯಂತೆ ಒಲುಮೆ ಅನುರಾಗಗಳಲ್ಲಿ ಬಂಧಿಯಾಗುತ್ತಾರೆ.ಹೆಣ್ಣು ಗಂಡಿನ ಹೃದಯದಲ್ಲಿ ಅರಳುವ ಈ ಭಾವ ಗಾಢವಾದುದು. ಚಿತ್ರಾಂಗದೆ ಅರ್ಜುನನ ಪ್ರೀತಿ-ಒಲುಮೆಯ ಬೆಂಕಿಯಲಿ ಕರಗಿ ಹೋಗುತ್ತಾಳೆ. ಅವಳಲ್ಲಿರುವ. ಹೆಣ್ತನದ ಭಾವ ಜಾಗೃತವಾಗುತ್ತದೆ. ಇಬ್ಬರೂ ಗಾಂಧ ರ್ವ ವಿವಾಹದ ವಿಧಿಯಿಂದಒಂದಾಗುತ್ತಾರೆ. ಮಣಿಪುರದ ಹೊರ ಉದ್ದಾನವನದ ಶಿವ ದೇವಾಲಯ ಇವರ ಒಲುಮೆಗೆ ಸಾಕ್ಷಿಯಾಗಿ ರುತ್ತದೆ. ಕಾರಣಾಂತರಗಳಿಂದ ಅರ್ಜುನ- ಚಿತ್ರಾಂಗದೆ ದೂರವಾಗಬೇಕಾಗುತ್ತದೆ. ಕ್ಷತ್ರಿ ಯನಾದ ಅರ್ಜುನ ರಾಜಕೀಯದ ಹಲವಾ ರು ಯೋಜನೆ,ಕಾರ್ಯ,ಯುದ್ಧ ಮುಂತಾದ ಕಾರಣಗಳಿಂದ ಚಿತ್ರಾಂಗದೆಯ ನೆನಪು ಅವನ ಸ್ಮೃತಿ ಪಟಲದಿಂದ ಮಸುಕಾಗಿ ಬಿಡುತ್ತದೆ.ಪ್ರಣಯದ ಪರಮೋಚ್ಛ ಸ್ಥಿತಿಯ ನ್ನು ಗಂಡು ಮರೆತು ಬಿಡಬಹುದು ಆದರೆ ಹೆಣ್ಣಿಗೆ ಅದು ಅಷ್ಟು ಸುಲಭದ್ದಲ್ಲ. ಪ್ರಣಯ ದ ಪರಮೋಚ್ಛತೆ ಹೆಣ್ಣಿನ ಹೃದಯದಲ್ಲಿ ಹೆಪ್ಪುಗಟ್ಟಿದ್ದರೆ, ಗರ್ಭದಲ್ಲಿ ಮೊಳಕೆಯೊಡೆ ಯುತ್ತದೆ. ಚಿತ್ರಾಂಗದೆಯ ಪಾಲಿಗೂ ಇದೇ ಆಗಿದ್ದು. ಅರ್ಜುನನ ಪ್ರೇಮ ಅವಳ ಗರ್ಭ ದಲ್ಲಿ ಮೊಳಕೆಯೊಡೆದಾಗ ಅವಳಿಗೂಭಯ ಆವರಿಸುತ್ತದೆ. ತಂದೆ-ತಾಯಿ, ರಾಜಪರಿವಾ ರಕ್ಕೆ ಗೊತ್ತಿರದಂತೆ ರಹಸ್ಯವಾಗಿ ನಡೆದ ಗಾಂಧರ್ವ ವಿವಾಹ, ಹೋದ ಪತಿ ಮರಳಿ ಬಾರದೇ ಇರುವಾಗ ಗರ್ಭಧರಿಸುವ ಚಿತ್ರಾಂ ಗದೆ ಮಾತೆ ಕುಂತಿಯಂತೆ ಸಮಾಜದ ಅಪ ವಾದಕ್ಕೆ ತತ್ತರಿಸಿ ಹೋಗುತ್ತಾಳೆ. ಒಂದೇ ವ್ಯತ್ಯಾಸವೆಂದರೆ ಕುಂತಿ ಕನ್ಯೆಯಾಗಿರುವಾಗ ಇಂತಹ ಪ್ರಮಾದಕ್ಕೆ ಒಳಗಾಗಿದ್ದರೆ, ಅದೃಷ್ಟ ವೆನೋ ಎಂಬಂತೆ ಚಿತ್ರಾಂಗದೆ ಗಾಂಧರ್ವ ವಿವಾಹದ ತರುವಾಯ ಗರ್ಭಧರಿಸುವುದು ಸ್ವಲ್ಪಮಟ್ಟಿಗೆ ಸಮಾಧಾನ,ಆದರೂ ದುಷ್ಯಂ ತನ ಮರೆವಿನಿಂದ ಲೋಕದ ನಡುವೆ ಬೆತ್ತ ಲಾಗುವ ಶಕುಂತಲೆಯಂತೆ ಚಿತ್ರಾಂಗದೆಯ ಸ್ಥಿತಿಯೂ ಆಗುತ್ತದೆ. ತಂದೆ-ತಾಯಿ, ರಾಜ ಪರಿವಾರದೆದುರು ಚಿತ್ರಾಂಗದೆ ತಾನು ಪತಿತೆ ಯಲ್ಲ, ಪತಿವ್ರತೆ ತನ್ನ ಪತಿ ವೀರ ಕ್ಷತ್ರೀಯ ಅರ್ಜುನನೆಂದು ಹೇಳಿ,ಪತಿಯಾದಅರ್ಜುನ ತನ್ನ ಬಳಗೆ ಬಂದೇ ಬರುತ್ತಾನೆ, ಅಲ್ಲಿಯವ ರೆಗೆ ನಾನು ಅರಮನೆ ವೈಭೋಗ ತ್ಯಜಿಸಿ, ಊರಹೋರಗೆ ಕುಟೀರವನ್ನು ಕಟ್ಟಿಕೊಂಡು ತಪಸ್ವಿನಿಯಂತೆ ದೇವೊಪಾಸನೆ ಮಾಡುವೆ ಎಂದು ಪ್ರತಿಜ್ಞೆ ಮಾಡುತ್ತಾಳೆ. ಅಂದಿಗೆ ಅವಳ ಗಂಡುಡುಗೆ ಕರಗಿತು.ನಾರು ಬಟ್ಟೆ ತನುವೇರಿತು. ಅವಳ ಕನಸುಗಳಿಗೆ ಪರದೆ ಬಿದ್ದಿತು.
ವೀರನಾದ ಮಗನಿಗೆ ಜನ್ಮವನ್ನು ನೀಡಿ ‘ಬಭ್ರುವಾಹನ’ ಎಂದು ಹೆಸರಿಟ್ಟು, ತನ್ನ ಯುದ್ಧ ಕೌಶಲ್ಯಗಳನ್ನು ಕಲಿಸುತ್ತಾತಂದೆಯ ಮರಣಾನಂತರ ಮಗನಿಗೆ ಮಣಿಪುರದ ಅರಸುತನ ನೀಡಿ ತಪಸ್ವಿನಿಯಂತೆ ಜೀವಿ ತಾವಧಿಯವರೆಗೂ ಪತಿಯ ಬರುವಿಕೆಯ ನಿರೀಕ್ಷೆಯಲ್ಲೇ ಜೀವವನ್ನು ಸವೆಸುತ್ತಾಳೆ.ಮುಂದೆ ತಂದೆ-ಮಗನ ಯುದ್ಧವನ್ನು ನೋಡುವ ಸಂದರ್ಭ ಒದಗುತ್ತದೆ. ಸುತನ ಹಿತ ಪತಿಯ ಮತ ಯಾವುದರ ಪಕ್ಷ ವಹಿಸ ಬೇಕೆಂಬ ಸಂದಿಗ್ಧತೆಯಲ್ಲಿ ತೊಳಲುತ್ತಾಳೆ. ಕೊನೆಗೂ ಸತಿತ್ವ ಪ್ರಜ್ಞೆಯೇ ಜಾಗೃತವಾಗಿ ಪತಿಯಿಂದ ‘ಜಾರಿಣಿ’ಯೆಂಬ ಪಟ್ಟ ಪಡೆದಿ ದ್ದರೂ, ಪತಿಯ ಪರವಾಗಿಯೇ ನಿಲ್ಲುತ್ತಾಳೆ. ಸುತನೆಂಬ ಮೋಹತ್ಯಜಿಸುತ್ತಾಳೆ. ಒಟ್ಟಿನಲ್ಲಿ ಯುದ್ಧ ಪರಂಪರೆಗಳು, ಅಧಿಕಾರದ ಗದ್ದು ಗೆಗಳು ಹೆಣ್ಣಿನ ಭಾವನೆಗಳೊಂದಿಗೆ ಆಟವಾ ಡಿವೆ.
“ಚಿತ್ರಾಂಗದೆ”ಯಂತಹ ಪವಿತ್ರಾತ್ಮಳ ಪಾತ್ರ ವನ್ನು, ನಿಷ್ಕಲ್ಮಶ ಪ್ರೇಮ ಮೂರ್ತಿಯನ್ನು ಬಂಗಾಳಿ ಭಾಷೆಯ ಪ್ರಸಿದ್ಧ ಲೇಖಕ ರಸ ಋಷಿ ಮಹರ್ಷಿ ರವೀಂದ್ರನಾಥ ಠಾಕೂರ್, ಕನ್ನಡ ಭಾಷೆಯ ಪ್ರಸಿದ್ಧ ಲೇಖಕ ರಸಋಷಿ ಕುವೆಂಪುರವರು ತಮ್ಮ ಕೃತಿಗಳಲ್ಲಿ ಚಿತ್ರಿಸಿ ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರವೀಂದ್ರನಾಥ ಠಾಕೂರರವರ ಚಿತ್ರಾ ನಾಟ ಕ ಮತ್ತು ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಬಭ್ರುವಾಹನ ಕಥೆಗಳಿಂದ ಪ್ರೇರಿತರಾಗಿ ಕುವೆಂಪು “ಚಿತ್ರಾಂಗದಾ” ಎಂಬ ಖಂಡ ಕಾವ್ಯ ರಚಿಸಿ, ಚಿತ್ರಾಂಗದೆಯ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ತೀರ್ಥಯಾತ್ರೆಗೆ ಬಂದ ಅರ್ಜುನ ಚಿತ್ರಾಂಗದೆಯನ್ನು ವರಿಸಿ ಮದುವೆಯಾಗಿ ತೀರ್ಥಯಾತ್ರೆ ಮುಗಿಸಿ ಬರುವೆನೆಂದು ಹೇಳಿ ಹೋಗುತ್ತಾನೆ. ಅವನ ನಿರೀಕ್ಷೆಯಲ್ಲಿ ಅರಮನೆ ತ್ಯಜಿಸಿ ಯೋಗಿನಿ ಯಂತೆ,ತಪಸ್ವಿಯಂತೆ ಬದುಕುವ ಚಿತ್ರಾಂಗ ದೆಯ ಚೆಲುವು ಕಾಲದ ಜೊತೆ ಮಾಸುವು ದು. ಧರ್ಮರಾಯನು ಮಾಡುವ ಯಜ್ಞದ ಕುದುರೆಯೊಂದಿಗೆ ಅರ್ಜುನ ಎಲ್ಲರನ್ನೂ ಜಯಸಿ ಮಣಿಪುರಿಗೆ ಬರುವುದು, ಬಭ್ರು ವಾಹನ ಕುದುರೆ ಕಟ್ಟಿಹಾಕುವುದು, ಅಲ್ಲಿ ತಂದೆ-ಮಗನ ಭೇಟಿ,ಗುರುವೆಂದು ಬಭ್ರುವಾ ಹನ ಆಶೀರ್ವಾದ ಬೇಡಲು ಅರ್ಜುನನ ಹತ್ತಿರ ಬರುವುದು, ಬಭ್ರುವಾಹನನ್ನು ಅರ್ಜುನ ಹೀಯಾಳಿಸುವ ಘಟನೆ ನಡೆ ಯುವುದು ನಂತರ ತಂದೆ-ಮಗನ ಕಾಳಗ, ಯುದ್ಧ ಭೂಮಿಗೆ ಚಿತ್ರಾಂಗದೆ ಬಂದು ನಡೆದ ಸತ್ಯವನ್ನು ಹೇಳಿ,ತಂದೆ-ಮಗನನ್ನು ಒಂದು ಮಾಡಿ ಯುದ್ಧವೆಂಬ ಯಜ್ಞಕ್ಕೆ ಆಹುತಿಯಾಗುವ ಚಿತ್ರಣ ಕುವೆಂಪುರವರ ಕಾವ್ಯದಲ್ಲಿದೆ.
“ತಪಸ್ಸಿಗೆ ಅಪರಿಮಿತವಾದ ಶಕ್ತಿಯಿದೆ, ಪ್ರೇಮ-ತಪಸ್ಸುಗಳ ನಡುವೆ ನಡೆಯುವ ಘರ್ಷಣೆಯಲ್ಲಿ ಎಂದೆಂದಿಗೂ ಪ್ರೇಮಕ್ಕೆ ವಿಜಯ”
ಎಂಬುದು ಕಾವ್ಯ ಸಾರಿದ ತತ್ವ.
‘ಬಭ್ರುವಾಹನನ ಜನನಿ’ ‘ಮಣಿಪುರದ ರಾಣಿ ಚಿತ್ರಾಂಗದೆ’ ಎಂದು ಉಲ್ಲೇಖಿಸಿರುವ ಕುವೆಂಪು ಚಿತ್ರಾಂಗದೆಯ ಸಾತ್ವಿಕ ರೂಪ ವನ್ನು ಮನೋಜ್ಞವಾಗಿ ಚಿತ್ರಿಸುತ್ತಾರೆ.“ಹೇಳಿದಳು ತನ್ನ ಕಥೆಯಾದ್ಯಂತಮಂ ಬಹುಲ
ಸಂಕ್ಷೀಪದಿಂದೆ. ನರನಾಮಾಂಕಿತದ ಮುದ್ರೆಯಂ
ಶ್ರೀಯುಂಗರವನಿತ್ತಳಾತನ ಕೈಗೆ ಸಾಕ್ಷಿಯಂ
ಕೈಯೊಂದರೊಳ್ ಮಗನ ಮತ್ತೊಂದರೊಳ್ ಪತಿಯ
ಪಾಣಿಯಂ ಪಿಡಿದು ಸಂಧಿಯನೊರೆದು, ಶಾಂತಿಯಂ
ನುಡಿದು, ಶಾಂತಾತ್ಮದಿಂ ಶಿವನಾಮವಂ ಸ್ಮರಿಸಿ
ಕಣ್ಣುಮುಚ್ಚಿದಳಮೃತಮಯ ಚಿರಸಮಾಧಿಯಲಿ!
ಪ್ಲವಿಸಿತ್ತಸೀಮರೋದನಮೆತ್ತಲುಂ! ರಣಂ
ಮಿಂದಿತ್ತು ಕರೆವ ಕಂಬನಿ ಮಳೆಯ ತೀರ್ಥದಲಿ !
–ಕುವೆಂಪು (ಚಿತ್ರಾಂಗದೆ:2490)
ಕೊನೆಗೆ ಚಿತ್ರಾಂಗದಾ ತನ್ನ ಕರ್ತವ್ಯವನ್ನು ಪೂರ್ಣಗೊಳಿಸುತ್ತಾಳೆ. ತನ್ನನ್ನು ಮರೆತ ಪತಿಯ ಒಂದು ಕೈಗೆ ಅವನಿತ್ತ ಉಂಗುರ ನೀಡಿ ತಾನು ಅವನ ಪತ್ನಿ ಎಂಬುದನ್ನು ಸಾಬೀತು ಪಡಿಸಿ, ಹೆತ್ತ ಮಗನ ಕೈಯನ್ನು ಪತಿಯ ಇನ್ನೊಂದು ಕೈಗೆ ಒಪ್ಪಿಸಿ ತಂದೆ- ಮಗನ ಮಿಲನ ನೋಡಿ ಕಣ್ಮುಚ್ಚಿದ ಆ ಮಹಾಸಾಧ್ವಿಯನ್ನು ಕುವೆಂಪು “ಮೂಕ ಶೋಕದ ಶಿಲೆಯ ಸಂಗೀತೆ” ಎಂದು ಕರೆ ಯುತ್ತಾರೆ. ಗಂಡು ಮಗುವಂತೆ ಬೆಳೆದು ಗಂಡಿನಂತೆ ಬದುಕಿದ ಹೆಣ್ಣು ಚಿತ್ರಾಂಗದೆ ಒಲುಮೆಯ ಕುಲುಮೆಗೆ ಆಹುತಿಯಾಗಿ ಇಡೀ ಬದುಕನ್ನೇ ತಪಸ್ವಿನಿಯಂತೆ ಪತಿ ನಿರೀಕ್ಷೆಯಲ್ಲಿ ಸವೆಸುವ ದುರಂತ ನಾಯಕಿ ಯಾಗುತ್ತಾಳೆ.
ಉಡುಪು ಬದಲಾದ ಮಾತ್ರಕ್ಕೆ ಭಾವಗಳು ಬದಲಾಗುವುದಿಲ್ಲ. ಪ್ರಕೃತಿಯೆದುರು ನಾವೆ ಲ್ಲ ಗೊಂಬೆಗಳು. ಆಧುನಿಕತೆ ಹೆಣ್ಣಿನ ಗಂಡು ಡುಗೆ ನೀಡಿರಬಹುದು.ಆದರೆ ಒಳಗಿ ರುವ ಭಾವ ಹೆಣ್ಣಾಗಿಯೇ ಇರುವುದು, ಒಲುಮೆ ಯ ಬಿಸುಪಿಗೆ ಕರಗುವುದು. ಹೆಣ್ಣು- ಗಂಡಾ ಗುವ, ಗಂಡು-ಹೆಣ್ಣಾಗುವ ಭಾವ ಸಹಜ. ಹೆಣ್ಣಿನಲ್ಲಿ ಗಂಡು ಗುಣಗಳಿವೆ,ಗಂಡಿ ನಲ್ಲಿ ಹೆಣ್ಣಿನ ಗುಣಗಳಿವೆ.ಗಂಡುಬೀರಿ, ಹೆಂಗರು ಳಿನವ ಎಂಬುದು ಇದನ್ನು ಅರ್ಥೈಸುವುದು.
ಭಾರತೀಯ ಪರಂಪರೆಯಲ್ಲಿ ಅರ್ಧನಾರೀ ಶ್ವರ ಪರಿಕಲ್ಪನೆಯು ಗಂಡು-ಹೆಣ್ಣಿನ ಸಮಾ ನತೆಯ ಸಂಕೇತ. ಹೀಗಿರುವಾಗ ಭವಿತವ್ಯ ದಲ್ಲಿ ಗಂಡು-ಹೆಣ್ಣು ಪೂರಕವಾಗಿ ಬದುಕು ವ ಸಮಾನ ಅವಕಾಶಗಳು ಇನ್ನಷ್ಟು ಅರ್ಥ ಪೂರ್ಣವಾಗಬೇಕು. ಹೆಣ್ಣು ಗಂಡಿನ ಗುಲಾ ಮಳಲ್ಲ, ಗಂಡು ಹೆಣ್ಣಿನ ಗುಲಾಮನಲ್ಲ, ಇಬ್ಬರು ಒಬ್ಬರಿಗೊಬ್ಬರು ಪೂರಕ. ಇಬ್ಬರೂ ಗೌರವಾದರಗಳಿಗೆ ಅರ್ಹರು.ಇಂತಹ ಸಮಾ ನತೆಯ ಭಾವ ದಾಂಪತ್ಯದಲ್ಲಿ ಮೂಡಿದರೆ ಹೆಣ್ಣಿನ ಮನಸು-ಕನಸುಗಳು ನಲುಗುವು ದಿಲ್ಲ. ಚಿತ್ರಾಂಗದೆಯಂತೆ ಹಿಡಿ ಪ್ರೀತಿಗೆ ಇಡಿಯಾದ ಬದುಕು ಬಲಿಯಾಗುವುದಿಲ್ಲ, ಅಲ್ಲವೆ?
🔆🔆🔆
✍️ಡಾ.ಪುಷ್ಪಾವತಿ ಶಲವಡಿಮಠ
ಮುಖ್ಯಸ್ಥರು, ಕನ್ನಡ ವಿಭಾಗ,
ಶ್ರೀಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಹುಕ್ಕೇರಿಮಠ, ಹಾವೇರಿ–581110
ಮನಮೋಹಕ 👌🎉
LikeLiked by 1 person