ಸೊಂಪಾದ ಸಂಜೆಯೊಡನೆ ಕಾಫಿ ಹೀರುವು ದೊಂದು ಸೊಗಸು. ಆ ಸೊಗಸಾದ ಸಂಜೆಗೆ ಒಡನಾಡಿಯೊಬ್ಬರಿದ್ದರೆ ಅದೊಂದುವಿಶೇಷ ಅನುಭವ. ಹೀಗೇ ಒಂದು ಮುಸ್ಸಂಜೆಯ ಹೊತ್ತಿಗೆ ಕಾಫಿ ಹೀರುವ ಚಟ ನನಗೆ. ಕಾಫಿಯ ನಶೆ ಏರಿದೊಡನೆ ಬರವಣಿಗೆಗೆ ಕುಳಿತುಕೊಳ್ಳುವ ಹವ್ಯಾಸ.ಅದೇ ಸಂಜೆಯ ಸವಿ ನೆನಪಲ್ಲಿ ಈ 4 ಸಾಲುಗಳು.
ಅದೊಂದು ಮೋಹಕವಾದ ಸಂಜೆ. ಆಗಸ ದಲ್ಲಿ ಯಾವುದೇ ಪಕ್ಷಿಗಳಿಲ್ಲ.ಕಾರ್ಮೋಡದ ಕಪ್ಪು ಛಾಯೆಯೊಂದು ಭುವಿಯೆಲ್ಲೆಡೆ ಪಸರಿಸಿ ಮಿನುಗುವ ನಕ್ಷತ್ರಗಳಿಗೂ ಸೆಡ್ಡು ಹೊಡೆಯುವ ರೇಂಜಿಗೆ ಬೆಳೆದು ನಿಂತಿತ್ತು. ಸುತ್ತ ತಂಗಾಳಿಗೆ ಮರಗಿಡಗಳೆಲ್ಲ ತಮ್ಮ ಸದ್ದನಡಗಿಸಿ, ಆ ಮೇರುತನದ ಛಾಯೆಗೆ ತಮ್ಮದೇ ಒಂದು ಶೈಲಿಯಲ್ಲಿ ಹಾರಾಡುತ್ತಿ ದ್ದವು. ನನ್ನೊಳಗಿನ ಛಾಯಾಚಿತ್ರಕಾರನನ್ನು ಆಗಾಗಲೇ ಬಡಿದೆಬ್ಬಿಸಿ, ಕಾಫಿಯು ಕಪ್ಪನ್ನು ಮೆಲ್ಲಗೆ ಸಿನಿಮೀಯ ರೀತಿಯಲ್ಲಿ ಇಟ್ಟು ಅದರ ಫೋಟೋ ಸೆರೆಹಿಡಿಯಲು ಕಾತರ ನಾಗಿದ್ದೆ. ದೂರ ದಿಗಂತದಲ್ಲಿ ಸೂರ್ಯನೂ ಕಾರ್ಮೋಡದ ಸೆಳೆತಕ್ಕೆ ಸಿಲುಕದೇ, ತನ್ನ ನೇರಳಾತೀತ ಕಿರಣಗಳನ್ನು ಎಲ್ಲೆಡೆ ಪಸರಿ ಸಲು ಹವಣಿಸುತ್ತಿದ್ದ.ಆ ಸುಂದರ ಸಂಜೆಯ ವರ್ಣಿಸಲು ಪದಗಳು ಸಾಲವು. ಸಂಜೆಯ ಸವಿಗನಸನ್ನು ಪಕ್ಕಕ್ಕಿಟ್ಟು ಕಪ್ ನಲ್ಲಿದ್ದ ಕಾಫಿಯನ್ನು ಹೀರಿ, ನನ್ನ ಮೊಬೈಲ್ ಮೊರೆ ಹೋದೆ.
ಹನಿಗಳ ಸಿಂಪಡಿಕೆ ಆವಾಗಲೇ ಶುರುವಾಗಿ ಕಪ್ಪು ಛಾಯೆಗೆ ಒಂದು ಶೀರ್ಷಿಕೆಯನ್ನು ಸಿದ್ಧಪಡಿಸಿದ್ದವು. ಇನ್ನೇನು ತುಂತುರು ಹನಿ ಗಳ ಆಗಮನ ಎನ್ನುವಷ್ಟರಲ್ಲಿ ಅವಳು ಬಂದಳು.ತನ್ನ ಮುಂಗುರುಳ ಮಾಲೆಯನ್ನು ಸರಿಪಡಿಸಿ ಮೇಲೆ ಕಾಣುವ ಕಪ್ಪು ಮುಗಿಲ ನ್ನು ಶಪಿಸುತ್ತಾ ಮುನ್ನಡೆಯುತ್ತಿದ್ದಳು. ಅವಳ ನಡೆಗೆಯೇನು ನಾಟ್ಯಮಯವಾಗಿರ ಲಿಲ್ಲ. ಕಾಲಿಗೆ ಸಿಕ್ಕ ಬಳ್ಳಿಯನ್ನು ಕಿತ್ತೆಸೆದು ರಸ್ತೆಯುದ್ದಕ್ಕೂ ಅದೇ ಬಳ್ಳಿಯ ಹಾಗೆ ಬಳುಕುತ್ತಾ ನಡೆಯುತ್ತಿದ್ದಳು.ಕಾಫಿಯೊಡನೆ ನನ್ನ ಒಡನಾಟ ಇಂದು ನಿನ್ನೆಯದಲ್ಲ. ಅದು ಅನಾದಿಕಾಲದಿಂದಲೂ ನಡೆದುಬಂದಿರುವ ಪಯಣ.ಆ ಪಯಣ ಒಂಥರಾ ಸೊಗಸು. ನಮ್ಮ ಊರು ಅತ್ತ ಮಲೆನಾಡಿಗೂಸೇರದೇ ಇತ್ತ ಬಯಲು ಸೀಮೆಯಲ್ಲೂ ಲೆಕ್ಕಕ್ಕೆ ಬಾರದೇ ಇರುವ ಒಂದು ಪ್ರದೇಶ.ಅವಳದು ಯಾವ ಊರು, ಕುಲ-ಗೋತ್ರ ಏನೊಂದೂ ಗೊತ್ತಿಲ್ಲ ನನಗೆ.
ಭಾವನೆಗಳ ಲಹರಿಯೊಂದು ನನ್ನ ಮನದ ತೊಳಲಾಟಕ್ಕೆಲ್ಲ ಬ್ರೇಕ್ ಹಾಕಿ ಕಾಫಿಯ ಕಪ್ಪನ್ನು ಕೆಳಗಿಡುವಂತೆ ಮಾಡಿತು.ಭೂಮ್ಯಾ ಕಾಶಗಳಿಗೆ ಸಂಬಂಧ ಕಲ್ಪಿಸುವ ನಾವುಗಳು, ಇನ್ನು ಒಬ್ಬ ಸುಂದರ ಯುವತಿಗೆ ಆಕಾಶದ ಕಲ್ಪನೆಯನ್ನು ಕೊಡುತ್ತೇವೆ.ಅವಳು ಹಾಕಿದ್ದ ಚೂಡಿದಾರ,ಸೂರ್ಯನ ಕಿರಣಗಳಿಗೆಒಂದು ಕನ್ನಡಿ ಹಿಡಿದ ಹಾಗಿತ್ತು. ಝಗಮಗಿಸುವ ಚೂಡಿದಾರ ಕಣ್ಣಿಗೆ ರಾಚಿ ನನ್ನ ಕಲ್ಪನೆಗಳ ಓಟಕ್ಕೊಂದು ಪುಷ್ಟಿಯನ್ನು ನೀಡಿ,ಮೇಘನ ಸುರಿಮಳೆಗೆ ನಾಂದಿಯಾಯಿತು. ರವಿಯ ಆರ್ಭಟ, ಮಳೆರಾಯನ ಆಗಮನವಾಗು ತ್ತಲೇ ಮರೆಯಾಯಿತು. ಅಂತೆಯೇ ಅವಳ ಝಗಮಗ ಡ್ರೆಸ್ಸೂ ಕೂಡ. ರಸ್ತೆಯ ಸುತ್ತ ಹಸಿರಿನ ತೋರಣವೊಂದು ಅವಳಿಗಾಗಿ ಕಾಯುತ್ತಿತ್ತು. ಅವಳು ನಡೆಯುತ್ತಲೇ ಇದ್ದಳು. ಅವಳ ತೊಳಲಾಟ ಹೇಳತೀರದು. ಸುಂದರ ಸ್ವಪ್ನವೊಂದು ಬರಿಯ ಕನಸಾಗಿ ಉಳಿಯುವ ಎಲ್ಲಲಕ್ಷಣಗಳಿದ್ದವು.ಕೂಡಲೇ ಮನೆಯೊಳಗೆ ಓಡಿ, ಕಪ್ಪಿಗೆ ಇನ್ನೊಂದಷ್ಟು ಕಾಫಿಯನ್ನು ಸುರಿದು ಮನೆಯ ಟೆರೇಸಿಗೆ ಬಂದು ನಿಂತೆ.ತಲೆಯ ಮೇಲಿದ್ದ ಇನ್ನೊಂದು ಟೆರೇಸಿನ ದೆಸೆಯಿಂದ ಮಳೆಯ ಹೊಡೆತಕ್ಕೆ ಸಿಲುಕದೇ ಕನಸಿನ ಕುದುರೆಯನ್ನು ನೋಡು ತ್ತಾ ನಿಂತೆ.
ಸುರಿವ ಹನಿಗಳ ಸಂಗೀತವೊಂದು ಮನದ ಕಪಾಟಿನಲ್ಲಿ ಗುನುಗುತ್ತಿತ್ತು. ಮುಸ್ಸಂಜೆಯ ಸದ್ದಡಗಿ,ರವಿಯೂ ಸಹ ತನ್ನಯಾತ್ರೆಯನ್ನು ಕೊನೆಗೊಳಿಸುವ ಹೊತ್ತಿಗೆ ಅವಳು ಬ್ಯಾಗಿನ ಲ್ಲಿದ್ದ ಛತ್ರಿಯೊಂದನ್ನು ತಲೆಗೆ ಹಿಡಿದು ಮೇಘರಾಜನಿಗೆ ಸೆಡ್ಡು ಹೊಡೆದು ನಡೆಯ ತೊಡಗಿದ್ದಳು.ಕಾಫಿಯೂಸಹ ನನ್ನ ಕನಸಿನ ಕುದುರೆಯನ್ನು ನೋಡಲೋಸುಗ ಮಳೆಯ ಹನಿಗಳಿಗೆ ತೊಟ್ಟಿಕ್ಕಿ, ಟೆರೇಸಿನಿಂದ ಜಾರಿ ಹೋಗುವ ಹಾದಿಯಲ್ಲಿ ಅವಳ ನೋಡುತ್ತಾ ಭುವಿಯ ಸೇರಿತು.
ಕತ್ತಲಾಗುತ್ತಾ ಬಂದೊಡನೆ, ಅವಳು ಥಟ್ಟನೆ ಪರ್ಸಿನಿಂದ ತನ್ನ ಮೊಬೈಲನ್ನು ತೆಗೆದು ಯಾರಿಗೋ ಫೋನಾಯಿಸಿದಳು. ಬರಿಯ ಐದೇ ನಿಮಿಗಳಲ್ಲಿ ಕರಿಮೋಡದ ಕಗ್ಗತ್ತಲ ರಾತ್ರಿಯಲಿ ಕಪ್ಪಾದ ಸ್ಯಾಂಟ್ರೋಕಾರೊಂದು ಬಂದು ನಿಂತಿತು.ತನ್ನ ಝಗಮಗ ಚೂಡಿಯ ನ್ನು ಸರಿಮಾಡಿ, ಛತ್ರಿಯನ್ನು ಕಾರಿನೊಳಗೆ ಎಳೆದು ಅವಳು, ನನ್ನ ಕನಸುಗಳ ಸರಮಾ ಲೆಯನ್ನು ಪೋಣಿಸುವ ಸಮಯಕ್ಕೆಕಾರನ್ನು ಹತ್ತಿ ಹೊರಟೇಬಿಟ್ಟಳು.
🔆🔆🔆
✍️ವಿನಯಕುಮಾರ ಪಾಟೀಲ. ಪತ್ರಿಕೋದ್ಯಮ ವಿಭಾಗ ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಜಿರೆ.
Let me know Vinay, her meeting is essential immediately. Hope you will not disappoint us. Keep it up Buddy 😉😉😉😉 happy times
LikeLiked by 1 person
Super Vinay, choice of words superb n lovely article.
LikeLiked by 1 person
Super Vinay, choice of words superb n lovely article.
LikeLiked by 1 person
ಛೇ!… ಅಕಿ ಹೇಳಿ ಹೋಗ್ಬೇಕಿತ್ತು… 😂
ಸೊಗಸಾಗಿದೆ ಕಲ್ಪನೆ 👌
LikeLiked by 1 person