ನೀನಿಲ್ಲದ ಈ ಕ್ಷಣಗಳಲ್ಲಿ
ನಾನು ಉಸಿಗೋಸ್ಕರ
ಹೋರಾಡುತ್ತಿದ್ದೇನೆ
ತಣ್ಣನೆ ನಿರ್ಜೀವ ಸಾವೊಂದು
ಬೆನ್ನಿಗೆ ಬಿದ್ದಂತೆ ಭಾಸವಾಗುತ್ತಿದೆ..

ಮರಣ ಶಯ್ಯೆಯ ದಿಂಬಿನಲ್ಲಿ
ಅರಳುವ ನಿನ್ನ ಕನಸುಗಳ ಕಾತರಿಸಿ
ಶೂನ್ಯ ನೋಟವೊಂದು
ಮೊಗ್ಗೊಂದರ
ಗುರುತು ಹಿಡಿದು ಮಾತಾಡಿಸುತ್ತಿದೆ..

ಮತ್ತದೇ ಎಳೆತ
ಹಿಡಿದ ಬೊಗಸೆಗಳಲ್ಲಿ ಕನಸ
ಹನಿಯೊಂದು ನಿಲ್ಲದೆ
ಇಂಗಿ ಹೋಗುತಿದೆ
ಬೆರಳ ತುದಿಯ ತೇವದಿ
ದಕ್ಕೀತೆ ಹೊಸ ತೆನೆಯ ಸ್ಪರ್ಶ?

ಒನಪು ಒಯ್ಯಾರಗಳಿಲ್ಲಿ
ಕೋಟೆ ಸೂರೆ ಹೋದ ಊರು
ನೋಡೊಮ್ಮೆನನ್ನ ಈ ಹೃದಯ
ನಿನ್ನ ಬೆರಳಿಗಂಟಿದ ಶಾಹಿ.

ಮುಗಿವ ಮುನ್ನ ಬರೆದುಬಿಡು
ಒಂದು ಕವಿತೆ ಸಾಲು..
ಪ್ರೀತಿ ಹಾಗಾದರು
ಬದುಕಿಕೊಳ್ಳಲಿ..

                      🔆🔆🔆

         ✍️ ದೀಪ್ತಿ ಭದ್ರಾವತಿ                   ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.