ಬಾಲ್ಯದಲ್ಲಿನ ಶಾಲಾದಿನಗಳ ನೆನಪು ಪ್ರತಿ ಯೊಬ್ಬರ ಜೀವನದಲ್ಲಿಯೂ ಸ್ವಾರಸ್ಯಕರವೆ. ಸರಿ-ತಪ್ಪುಗಳ  ಅರಿವಿಲ್ಲದ   ವಯಸ್ಸದು. ಮಕ್ಕಳಿಗೆ ಶಾಲೆಗಳಲ್ಲಿ ಪಾಠಕ್ಕಿಂತ ಆಟವೆಂ ದರೆ ಬಲು ಪ್ರೀತಿ.ನನ್ನ ಬಾಲ್ಯವು ಎಲ್ಲರಂತೆ ಯೇ ಕೇವಲ ಆಟದಲ್ಲಿಯೇ ಮುಳುಗಿತ್ತು. ಇದೇ ರೀತಿ ವದಂತಿಗಳನ್ನು ನಮ್ಮ ಬಾಲ್ಯ ದಲ್ಲಿ ನಾವು ಅತಿಯಾಗಿ ನಂಬಿರುತ್ತಿದ್ದೆವು, ಮರೆಯದೆ ಅದನ್ನು ಇತರರಿಗೆ ಹೇಳುವ ಸಮಯ ಒದಗಿ ಬಂದರೆ ಹೇಳದೇಬಿಡುತ್ತಿರ ಲಿಲ್ಲ.ಪುಸ್ತಕದ  ಮಧ್ಯದಲ್ಲಿ   ಜೋಪಾನವಾಗಿ ತೆಗೆದಿಟ್ಟ ನವಿಲುಗರಿಗಳಿಗೆ ಪ್ರತಿನಿತ್ಯ ತಪ್ಪದೆ ಪೆನ್ಸಿಲನ್ನು  ಚೂಪು ಮಾಡಿ,   ಅದರಿಂದ ಬರುತ್ತಿದ್ದ ಎಸಳುಗಳನ್ನು ಅದಕ್ಕೆ ಉಣಬ ಡಿಸುತ್ತಿದೆ. ಹಾಗೂ ನನ್ನಲ್ಲಿನನವಿಲುಗರಿಯ ಮತ್ತು  ನನ್ನ  ಸ್ನೇಹಿತರ  ನವಿಲುಗರಿಗಳ ಬೆಳವಣಿಗೆಯನ್ನು ದಿನನಿತ್ಯ ಅಳತೆ ಮಾಡಿ ನೋಡುವುದು  ನಮ್ಮೆಲ್ಲರ  ಖಯಾಲಿಯಾ ಗಿತ್ತು. ಯಾರೋ ಹೇಳಿದ್ದರು, ಪುಸ್ತಕದಲ್ಲಿ ನವಿಲುಗಳು ಇಟ್ಟು ಅದಕ್ಕೆ ಪ್ರತಿನಿತ್ಯಊಟ ಹಾಕಿದರೆ ಅದು ಮರಿ ಹಾಕುತ್ತದೆ ಎಂದು.ಪ್ರತಿನಿತ್ಯ  ನಮ್ಮ  ಶಾಲೆಯ  ಗೇಟಿನ ದ್ವಾರ ದಲ್ಲಿ ಅನೇಕ ಬಗೆಯ ತಿಂಡಿ-ತಿನಿಸುಗಳನ್ನು ತಳ್ಳು ಗಾಡಿಗಳಲ್ಲಿ ಮಾರುತ್ತಿದ್ದರು.ಅವುಗ‌ಳ ಲ್ಲಿ   ಬೇಯಿಸಿದ  ಜೋಳ  ಮತ್ತು   ಕತ್ತರಿಸಿ ಉಪ್ಪು- ಖಾರ ಹಾಕಿದ  ಪೇರಳೆ,  ಹಾಗೂ ಕತ್ತರಿಸಿದ ಕಲ್ಲಂಗಡಿ ಹಣ್ಣು ಅತಿಯಾಗಿ ಮಕ್ಕಳು  ಖರೀದಿಸಿ  ತಿನ್ನುವ  ಮೆಚ್ಚಿನವುಗ ಳಾಗಿತ್ತು.ಹೀಗಿರುವಾಗ ಒಂದು ದಿನ ಮಧ್ಯಾ ಹ್ನ ಶಾಲೆಯಲ್ಲಿ ಊಟ ಮುಗಿಸಿದ ನಾನು ಮತ್ತು ನನ್ನ ಕೆಲವು ಸ್ನೇಹಿತರು ಕಲ್ಲಂಗಡಿ  ಹಣ್ಣನ್ನುಖರೀದಿಸಿ ಅದನ್ನು ತಿನ್ನುತ್ತಿರುವಾಗ ಅಚಾನಕ್ಕಾಗಿ  ನಾನು ಅದರ ಬೀಜಗಳನ್ನು ನುಂಗಿಬಿಟ್ಟೆ. ಅದನ್ನು  ನನ್ನ   ಸ್ನೇಹಿತರಿಗೆ ಹೇಳಿದೆ. ಅದ ಕೇಳಿದೊಡನೆಯೇ  ಅವರ  ಮುಖಗಳೆಲ್ಲ ಭಯ ಹಿಡಿದವರಂತೆ ಆಗಿತ್ತು. ಅಷ್ಟರಲ್ಲಿ  ಗೆಳತಿಯೊಬ್ಬಳು,  ಅಯ್ಯೋ ನೀನು ಕಲ್ಲಂಗಡಿ ಬೀಜ ನುಂಗಿಬಿಟ್ಯಾ? ಇನ್ನು ನಿನ್ನ ಹೊಟ್ಟೆ ಒಳಗೆ ಕಲ್ಲಂಗಡಿಗಿಡ ಬೆಳೆಯುತ್ತದೆ  ಎಂದು  ನನ್ನನ್ನು   ಹೆದರಿಸಿ ಬಿಟ್ಟಳು. ನನಗಂತೂ ಅದನ್ನುಕೇಳಿ ಕೈಕಾಲು ಗಳು  ಓಡಲೇ ಇಲ್ಲ. ಕೈಲಿದ್ದ ಉಳಿದ ಅರ್ಧ ಕಲ್ಲಂಗಡಿ ಹಣ್ಣನ್ನು   ಅಲ್ಲಿಯೇ ಬಿಸಾಡಿ ಬಿಟ್ಟೆ. ಈಗ  ಏನು  ಮಾಡುವುದೆಂದು ಅವರನ್ನೇ ಕೇಳಿದೆ. ಅದಕ್ಕವರ ನೀಡಿದ  ಉತ್ತರ   ಹೇಗಿತ್ತೆಂದರೆ   ಈಗಲೂ  ಅದನ್ನು  ನೆನಪಿಸಿಕೊಂಡು  ನಾನು  ನಗೆಗಡಲಲ್ಲಿ ತೇಲುವುದುಂಟು.  “ಒಂದು   ದಿನಪೂರ್ತಿ ನೀರು ಕುಡಿಯದೆ ಇದ್ದರೆ ಬೀಜ ಬೆಳೆಯು ವುದಿಲ್ಲ,ಹೊಟ್ಟೆಯೊಳಗೆ ಸತ್ತುಹೋಗುತ್ತದೆ” ಎಂದು ಹೇಳಿದರು.ನಾನು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೂ  ಅದನ್ನು ಅವರ ಮುಂದೆ  ತೋರ್ಪಡಿಸದೆ ಶಾಲೆ ಬಿಡುವವ ರೆಗೂ ಸುಮ್ಮನಿದ್ದೆ. ಶಾಲೆ ಬಿಟ್ಟದ್ದೇ ತಡ ಮನೆಗೆ  ಹೋದವಳು  ತುಂಬಾದಣಿದಿದ್ದ ರಿಂದ ನೀರು ಕುಡಿದೆ. ಕುಡಿದ ನಂತರವಷ್ಟೇ
ಹೊಟ್ಟೆಯೊಳಗಿದ್ದ  ಕಲ್ಲಂಗಡಿ  ಬೀಜದ ನೆನ ಪಾದದ್ದು. ಇನ್ನೇನು  ಮಾಡುವುದು  ಹೊಟ್ಟೆ ಯಲ್ಲಿ ಗಿಡ ಬೆಳೆಯುತ್ತದೆ ಎಂದು ಹೆದರಿ ಮನೆಯಲ್ಲಿದ್ದ  ನನ್ನ ಅಜ್ಜ ಅಜ್ಜಿಯ ಬಳಿ, ಇಲ್ಲದ ಹೊಟ್ಟೆನೋವನ್ನು ಇದೆ ಎಂದು ಊಹಿಸಿದ ನಾನು ಒಂದೇ ಸಮನೆ ಅಳುತ್ತಾ ಕಲ್ಲಂಗಡಿ  ಹಣ್ಣಿನ ಬೀಜ ನುಂಗಿದ ವಿಷಯ ವನ್ನು ಹಾಗೂ ಅದರಿಂದ ಆಗುವ ಅಪಾಯ ದ  ಮುನ್ಸೂಚನೆಯನ್ನು ಅವರಿಗೆ ತಿಳಿಸಿದೆ. ಅದರಿಂದ ಏನೂ ಆಗದೆಂದು ತಿಳಿದಿದ್ದ ಅವರು ಅದನ್ನು ನಿರ್ಲಕ್ಷಿಸಿ ಸುಮ್ಮನಾದರು. ಅವರು  ಸುಮ್ಮನಾದರೂ ನಾನು ಬಿಡಬೇಕ ಲ್ಲ? ಒಂದೇ ಸಮನೇ,ನಿಂತಲ್ಲಿಯೇ ತಕ ತೈ   ಎಂದು  ಕುಣಿಯುತ್ತ  ಊರಿನವರಿಗೆಲ್ಲಾ ಕೇಳುವಂತೆ   ಅಳುತ್ತಾ  ರಂಪಾಟ   ಮಾಡಿ    ಬಿಟ್ಟಿದ್ದೆ.ನನ್ನ ಅಳುವಿನ ಮುಂದೆ ಅಜ್ಜ-ಅಜ್ಜಿಯ ಸಮಾಧಾನ ಮಾಡುವ ಮಾತುಗಳು ನನ್ನ ಕಿವಿಗೆ  ಬೀಳಲೇ ಇಲ್ಲ.  ಬಹಳ  ಹೊತ್ತಿನ ನಂತರ ಹೊರಗೆ ಹೋಗಿದ್ದ ನನ್ನ ತಾಯಿ ಮನೆಗೆ  ಬಂದು  ನಡೆದ  ವಿಚಾರ  ತಿಳಿದು, ನನಗೆ  ಒಪ್ಪಿಗೆಯಾಗುವ  ರೀತಿಯಲ್ಲಿ ಕಲ್ಲಂ ಗಡಿ ಹಾಗೂ ಹಾಗೂ ಅದರ ಬೀಜ ತಿಂದರೆ ಏನೂ ಆಗದೆಂದು ತೀಕ್ಷ್ಣವಾಗಿ  ತಿಳಿಹೇಳಿ ದಳು. ನನಗೂ ಅಷ್ಟೇ ಶಂಖದಿಂದ ಬಂದರೆ ತೀರ್ಥ ಎಂಬಂತೆ  ಅಜ್ಜ-ಅಜ್ಜಿಯರು   ಹೇಳಿ ದಾಗ ಕೇಳದ ನಾನು ಅಮ್ಮನ ಮಾತು ಕೇಳಿ ಅಳು ನಿಲ್ಲಿಸಿ ಸುಮ್ಮನಾದೆ.


ಇದೇ ರೀತಿ  ಅನೇಕ ವಿಷಯಗಳಲ್ಲಿ ತಪ್ಪಾದ ಕಲ್ಪನೆ  ನನಗೆ ಬಾಲ್ಯದಲ್ಲಿತ್ತು. ಅವುಗಳನ್ನು ಹೇಳುತ್ತಾ ಹೋಗುವುದಾದರೆ  ಬಹುಶಃ ಪುಟಗಳು ಸಾಲದು. ಎಲ್ಲವೂ ಬಾಲ್ಯದಲ್ಲಿನ ನೆನಪಿನ‌     ಪುಸ್ತಕದ    ಮರೆಯಲಾಗದ ಸುಂದರವಾದ  ಅಧ್ಯಾಯಗಳು.

                    🔆🔆🔆

✍️ ಜ್ಯೋತಿ ಭಟ್
ಎಸ್.ಡಿ.ಎಂ.ಕಾಲೇಜು,ಉಜಿರೆ