ಅವಳು ಬಂದಿದ್ದಾಳೆ …..ಮತ್ತೆ ಬಂದಿದ್ದಾಳೆ ಮೊನ್ನೆ…. ನಿನ್ನೆ……. ಮತ್ತೆ ಇಂದು ನಾಳೆಯೂ   ಬರುವವಳಂತೆ

ಊರ ಅಗಸೆಯ ಎದುರು ಕೆನೆಯುತ್ತಾಳೆ
ನಿನ್ನವರನ್ನೆಲ್ಲ  ಈಗಷ್ಟೇ ಮುಗಿಸಿ ಬಂದೆ
ನೀನೊಬ್ಬನೇ ಇರುವೆ ಬೇಗ ಬಾ ಎಂದು.

ನಿಲ್ಲಿಸಿದ್ದೇನೆ ನಾನು ಅವಳನ್ನು ಅಲ್ಲೇ
ಮನೋಬಲದ  ನನ್ನ ಬಲಿಷ್ಠ ಹಗ್ಗದಿಂದ
ಆತ್ಮ ನಿರ್ಭರತೆಯ ಗರುಡ ಕಂಬಕ್ಕೆ            

ಗತಿಸಿರಬಹುದು ನನ್ನ ಕೆಲವು ಜೀವಿಗಳು
ಅವರೆಲ್ಲರೂ ಬೆಚ್ಚಗೆ ಅವಿತಿದ್ದಾರೆ ನನ್ನ 
ಹೃದಯದ ಗೂಡಿನಲ್ಲಿ ದಟ್ಟ ನೆನಪುಗಳಾಗಿ    

ನನ್ನೊಂದಿಗಿವೆ ಇದೇಆಕಾಶ,ವಿಶಾಲಭೂಮಿ
ಗಿಡ ಮರ ಪ್ರಾಣಿ ಪಕ್ಷಿಗಳ  ಸುಂದರ ಪ್ರಕೃತಿ ರಾಮ, ಕೃಷ್ಣ, ಬುದ್ಧ, ಬಸವ, ಗಾಂಧಿ ಸೇರಿ     

ತುಂಬಿಸಿ ಹೋದ ಅಪ್ರತಿಮ ಧೀ ಶಕ್ತಿ
ಬದುಕಬೇಕು ನಾನು ಅವಳನ್ನು ಜಯಿಸಿ
ಈ ಪುಣ್ಯ ನೆಲದ ತುಂಬಾ ಶಾಂತಿ ಮಂತ್ರ ಜಪಿಸಿ

                      🔆🔆🔆
✍️ಸುರೇಶ ಹೆಗಡೆ,ಹುಬ್ಬಳ್ಳಿ