ಸೋತವರ ಸೋಲಿನ, ಗೆದ್ದವರ ಗೆಲುವಿನ ಕಾರಣ, ತಿಳಿಯುತ್ತಿಲ್ಲ
ಯಾವ ದಿಕ್ಕಿನತ್ತ ಸಾಗುತ್ತಿದೆ ರಾಜಕಾರಣ, ತಿಳಿಯುತ್ತಿಲ್ಲ

ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲ ಸರಿ ಎಲ್ಲವೂ ನೈತಿಕವಲ್ಲ
ನೀತಿವಂತರು ಆತ್ಮ ಹರಾಜಿಗೆ ಇಟ್ಟ ಕಾರಣ, ತಿಳಿಯುತ್ತಿಲ್ಲ

ಸಾಗರದ ಮಧ್ಯದಲಿ ಹಾಯಿ ಹರಿದಿದೆ, ಹರಿಗೋಲು ಮುರಿದಿದೆ ಸಾಕಿ
ಇನ್ನು ಮುಳುಗಿ ತೇಲುವ ಮುಳುಗುವ ದೋಣಿಯ ಚಾರಣ, ತಿಳಿಯುತ್ತಿಲ್ಲ

ಹೆಣ್ಣು, ಹೊನ್ನು, ಮಣ್ಣು ಹೆಸರು ಬೇರೆಯಾದರೂ ಎಲ್ಲವೂ ಒಂದೇ
ಇದರಲಿ ಯಾವುದು ಉತ್ತಮ, ಮಧ್ಯಮ, ಸಾಧಾರಣ, ತಿಳಿಯುತ್ತಿಲ್ಲ

ಅವಳ ಮನವ ಎಂದೂ ನೋಯಿಸಿಲ್ಲ, ಗಂಟೆಗಟ್ಟಲೆ ಕಾಯಿಸಿಲ್ಲ
ಇನ್ನೇನಿರಬಹುದು ಬಿಟ್ಟು ಹೋಗುವಂತ ಕಾರಣ, ತಿಳಿಯುತ್ತಿಲ್ಲ

ಹುಲಿಯ ಹೊತ್ತಿನ ಹಸಿವಿನ ಆಟ, ಜಿಂಕೆಗೆ ಜೀವ-ಪ್ರಾಣದ ಓಟ
ಒಬ್ಬರ ಕೊಂದು ಒಬ್ಬ ಬದುಕುವ ಸಮಾಜಕಾರಣ, ತಿಳಿಯುತ್ತಿಲ್ಲ

ಅನ್ನ ನೀರಿರದೆ ಸಾಯುವವರ ಸಂಖ್ಯೆಯೇನು ಕಡಿಮೆಯಿಲ್ಲ ಇಲ್ಲಿ
ಪ್ರಗತಿಯ ಪಥದಲ್ಲಿರುವ ದೇಶದ ಅರ್ಥಕಾರಣ, ತಿಳಿಯುತ್ತಿಲ್ಲ

ಗೆಲುವು ಶಾಶ್ವತವಲ್ಲ ಇಲ್ಲಿ, ಯಾವ ಸೋಲೂ ಚಿರವಲ್ಲ ‘ಅಲ್ಲಮ’
ಏಕೆ ಜನ ತಲೆಕೆಡಿಸಿಕೊಂಡಿಹರು ವಿನಾಕಾರಣ, ತಿಳಿಯುತ್ತಿಲ್ಲ

🔆🔆🔆

✍️ಗಿರೀಶ್ ಜಕಾಪೂರ,ಸೊಲ್ಲಾಪೂರ