ಸಾವಿಲ್ಲದ ಮನೆಯ ಸಾಸಿವೆ
ಹಿಡಿ ಬೇಡಿದ್ದ ಬುದ್ಧ!(ಕಿಸಾ)ಗೌತಮಿ
ಇಡಿ ಇಡಿಯಾಗಿಯೇ ಸಾವು
ಮನೆ ಮನೆಯ ಕದ ತಟ್ಟುತ್ತಿದೆ ಗೌತಮಿ!
ಸಾವು ಸಾರುತಿರುವ ಸತ್ಯವಿಂದು
ಸಾಸಿವೆಯನ್ನು ಮರೆಯಿಸಿದೆ ಗೌತಮಿ!
ಪ್ರಳಯಕಾಲದ ವಿಲಯಾಗ್ನಿ ನಾಲಿಗೆ ಚಾಚಿ
ಬಹು ದಿನದ ತೀರದ ದಾಹ ತೀರಿಸಿಕೊಳ್ಳು ತಿದೆ
ಮಸಣಕಂತೂ ಎಲ್ಲಿಲ್ಲದ ಸಂಭ್ರಮ
ಹದ್ದು ಕಾಗೆ ಗೂಬೆಗಳಿಗಿದು ಶಕುನದ ಕಾಲ
ಕಾಲನೆದುರು ಎಲ್ಲವೂ ಕ್ಷೀಣವೇ ಗೌತಮಿ!
ಕರೆ ಬಂದ ಅರೆಗಳಿಗೆಯಲೇ ಹೊರಟು ಬಿಡ ಬೇಕು
ಎವೆ ಮುಚ್ಚಿ ತೆರೆಯುವ ಮುನ್ನ
ಕನಸುಗಳು ಜಾರುತಿವೆ ಕೊಂಡಿಗಳು ಕಳಚುತಿವೆ ಗೌತಮಿ!
ಭಾವಶೂನ್ಯತೆಗೆ ಜಾರುತಿರುವ ಮನಸು
ವಿಲಕ್ಷಣ ಒಂಟಿತನಕ ಭಯಗೊಂಡಿದೆ ಗೌತಮಿ!
ಮನ್ವಂತರದ ಪಯಣದಲಿ ಮೌನರೋಧನ
ಅಸಹಾಯಕತೆಯ ನೋವು ಪೌರುಷಕೆ ಸೋಲಾಗುತಿದೆ ಗೌತಮಿ!
ಅಸ್ಪೃಶ್ಯತೆಯೆಂಬ ಎದೆ ಹಿಂಡಿದ ನೋವಿಗೆ
ಕರೋನಾ ತಂದಿತ್ತ ಮಹಾ ಅನುಭವವಿದು ಗೌತಮಿ!
ಮುಟ್ಟಿಸಿಕೊಳ್ಳದೇ ಮಣ್ಣಾಗುತಿರುವುದ ನೋಡಿ
ಅಸ್ಪೃಶ್ಯ ಗಹಗಹಿಸಿ ನಗುತ್ತಿದ್ದಾನೆ ನೋಡು ಗೌತಮಿ!
ಸಾವಿಲ್ಲದ ಮನೆಯ ಸಾಸಿವೆ
ಹಿಡಿ ಬೇಡಿದ್ದ ಬುದ್ಧ (ಕಿಸಾ)ಗೌತಮಿ
ಹಿಡಿ ಬೇಡಿದ್ದ…….
✍️ಡಾ.ಪುಷ್ಪಾ ಶಲವಡಿಮಠ, ಹಾವೇರಿ