ಅಲೌಕಿಕತೆಯ ಮುಂದೆ ಲೌಕಿಕತೆಯತುಡಿತ, ಮಿಡಿತ ಮತ್ತು ತಲ್ಲಣಗಳು ಹೇಗೆ ಸೋತು ಗೆಲ್ಲುತ್ತವೆ ಎಂಬುದನ್ನು ಪ್ರಸ್ತುತ, “ಅಲ್ಲಮ ನಾಗುವುದಾದರೆ” ಕವಿತೆ ಅತ್ಯಂತ ಸುಂದರ ಪ್ರತಿಮೆಗಳ ಮೂಲಕ ಓದುಗರನ್ನು ಬೆರಗುಗೊಳಿಸುತ್ತದೆ.
ಸಾತ್ವಿಕತೆ ಎಂಬುದು ದಿವ್ಯವಾದ ಮೇರು ಪರ್ವತ ಹಾಗೆಯೇ ತಾಮಸ ಎಂಬುದು ಭವ್ಯವಾದ ಆಳ ಕಣಿವೆ. ಇವೆರಡೂ ಒಂದಾ ಗುವುದು ಅಸಾಧ್ಯ. ಆದರೂ ಭವ್ಯತೆಯು ದಿವ್ಯತೆಯಲ್ಲಿ ಲೀನವಾದಾಗ ಲೌಕಿಕತೆಯ ನ್ನು ಮೀರಿದ ಜೀವನ ದರ್ಶನವಾಗುತ್ತದೆ.
ಅಲ್ಲಮ ಸಾತ್ವಿಕತೆಯ ಪ್ರತಿರೂಪ, ಮಾಯೆ ತಾಮಸ ಪ್ರತಿರೂಪ.ಮಾಯೆ ತನ್ನಮಾಯಾ ಪ್ರೇಮದ ಮೂಲಕ ಅಲ್ಲಮನನ್ನುಪ್ರಚೋದಿ ಸುವ, ಒಲಿಸಿಕೊಳ್ಳುವ ಪ್ರಯತ್ನ ಮಾಡು ತ್ತಾಳೆ. ಆದರೆ ಕವಿತೆ ಸಾಲಿನಂತೆ, ‘ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ’ ಎನ್ನುವ ಹಾಗೆ ಅಂತರಂಗದ ಕತ್ತಲೆಗೆ ಬೆಳಕಾಗಿರುವ ಅಲ್ಲಮ ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹವನ್ನೆ ತುಂಬುತ್ತಾನೆ. ಅವನ ಮದ್ದಳೆಯ ಧ್ವನಿ ಮಾಯೆಗೆ ಕಾರ್ಮೋಡಿನ ಘರ್ಜನೆಯಂತೆ ಕೇಳಿ ತನುವಿನಲ್ಲಿ ಪುಳಕಗೊಂಡು ತನ್ನ ವಿರಹಕ್ಕೆ ಮತ್ತೆ ಹರೆಯ ತುಂಬಿಕೊಂಡು ಸೋಗೆಯಂತೆ ನಲಿಯುತ್ತಾಳೆ. ಆದರೆ ಕರಗುವ ಹಿಮ ಅಲ್ಲಮನಲ್ಲ. ಅವನು ದರ್ಶನದ ಮೇರು ಪರ್ವತ.
ಆದರೂ ಸೋತು ಶರಣಾಗುವವಳಲ್ಲ ಮಾಯೆ. ಸಾತ್ವಿಕ ಪ್ರೀತಿಯ ಮೇಲೂ ತಾಮಸ ಪ್ರೇಮದ ಜ್ವಾಲೆಯ ಕೆಂಪು ನೆರಳು ಬೀಳುವಂತೆ, ಮಾಯೆಯ ಕೈಬೆರಳ ಬೆರಗು, ಮೋಹನ ಮುರಳಿ ಗಾನ, ಎದೆ ಮೀಟುವ ತಂತಿ ಒಲವ ಸರಕು ಬಿಕರಿಯಾಗಲು ಬಿಡು ವುದಿಲ್ಲ.’ನೀ ಎಷ್ಟೆ ದೂರ ಸರಿದರೂ ನಾನು, ಅರಸಿ ಬಂದ ಅರಸನ ಕನಸು ಕಂಗಳ ಚೆಲುವೆ. ನಾನು ಸುಗಂಧ ರಹಿತ ಪುಷ್ಪವಲ್ಲ. ದುಂಬಿ ಅರಸುವ ಹೂವು ನಾನು, ನಾನು ಬೆಳದಿಂಗಳ ಬಾಲೆ, ನಿತ್ಯ ಮಲ್ಲಿಗೆ ದಂಡೆ ಮುಡಿದುಕೊಳ್ಳುವ ಮದುವಣಗಿತ್ತಿ, ಮಳೆಯಂತೆ ಸುರಿಯುವ ರಸಭಾವಗಳು, ರೋಮಾಂಚನಗೊಳಿಸುವ ಮಧುರ ಚಳಿ. ನಾನು ನಿನ್ನ ಅಲ್ಲಮನಾಗಲು ಬಿಡಲಾರೆ.
ಪ್ರಸ್ತುತ ಕವಿತೆ ವರ್ತಮಾನದ ಸ್ತ್ರೀ ಸಂವೇದ ನೆಯ ಮೇಲೆ ಬೆಳಕು ಚಲ್ಲುತ್ತದೆ. ಅಲ್ಲಮ ನಾಗುವುದಾದರೆ, ಕಳೆಗುಂದಿದ. ಬೆಳದಿಂಗ ಳಂತಾಗದೆ ಮಧುರ ಪ್ರೇಮದ ಬೆಳದಿಂಗ ಳಾಗು. ಮಾಯೆಯ (ಸ್ತ್ರೀ) ಒಲವಿಗೂ ಸಾತ್ವಿಕತೆ ಇದೆ. ಮಾಯೆಯ ಮಧುರ ಒಲವಿನಲ್ಲಿಯೂ ಜೀವನ ದರ್ಶನವಿದೆ. ಆದ್ದರಿಂದ ಅಲ್ಲಮನಾಗುವುದಾದರೆ, ಮಧುರ ಪ್ರೇಮದ ಅಲ್ಲಮನಾಗು ಘನ ಪ್ರೇಮದ ಮಾಯೆಗೆ ಮರಿಚಿಕೆಯಾಗಲು ನಾನು ಬಿಡುವುದಿಲ್ಲ.
ಹೆಣ್ಣು ಮಾಯೆಯಂಬ ಭ್ರಮೆಯಲ್ಲಿ ನೋಡದೆ, ಅದರಾಚೆಗೂ ದೃಷ್ಟಿ ಬೀರುವ ಅಲ್ಲಮ ಬೇಕು. ಎಂಬ ವರ್ತಮಾನದ ಸ್ತ್ರೀ ಭಾವ ಇಲ್ಲಿದೆ. ಕವಿತೆ ಅಲ್ಲಮನ ಮೇರು ವ್ಯಕ್ತಿತ್ವವನ್ನು ಅತ್ಯಂತ ಘನವಾಗಿ ಚಿತ್ರಿಸಿ ದಂತೆ, ಮಾಯೆಯ ಮಧುರ ಪ್ರೇಮದ ಅಗಾಧತೆಯನ್ನು ಅಷ್ಟೆ ಮಾಧುರ್ಯವಾಗಿ ಅನೇಕ ಸುಂದರವಾದ ವಿಶಿಷ್ಟ ಪ್ರತಿಮೆಗ ಳೊಂದಿಗೆ ಚಿತ್ರಿಸಿದ್ದಾರೆ. ಈ ಕವಿತೆಯನ್ನು ಓದುವಾಗ ಭಾಷೆ ಹಿಂದೆ ಸರಿದು ಭಾವ ಮುಂದೆ ಬರುವ ಅನುಭವವಾಗುತ್ತದೆ. ಒಟ್ಟಾರೆಯಾಗಿ ಡಾ.ಮೈತ್ರಾಯಿಣಿ ಗದಿಗೆಪ್ಪ ಗೌಡರ ಅವರ “ಅಲ್ಲಮನಾಗುವುದಾದರೆ” ಕವಿತೆ ಪ್ರಸ್ತುತ ಸ್ತ್ರೀಪರ ನಿಲುವಿನ ಒಳ ನೋಟಗಳ ಭಾವಪೂರ್ಣ ಕವಿತೆಯಾಗಿದೆ.
🔆🔆🔆
✍️ ಸುರೇಶ.ಮುದ್ದಾರ ಪ್ರಾಚಾರ್ಯರು ಶ್ರೀಮಹಾಂತ ಶಿವಯೋಗಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಜಗದ್ಗುರುಶ್ರೀದುರದುಂಡೀಶ್ವರಮಠ ಅರಭಾವಿ
ಅಲ್ಲಮನಾಗುವುದಾದರೆ……(ಸುರೇಶ ಮುದ್ದಾರ)
