ದೇವಾಲಯದ ಇತಿಹಾಸ ಪುಟದಲ್ಲಿ ಕಲ್ಯಾಣ ಚಾಲುಕ್ಯರ ಕೊಡುಗೆ ಪ್ರಮುಖ ವಾದದ್ದು. ಅವರ ದೇವಾಲಯಗಳು ಉತ್ತರ ಕರ್ನಾಟದಲ್ಲಿ ಹಾಸು ಹೊಕ್ಕಿದ್ದು ಗದಗ ಜಿಲ್ಲೆಯಲ್ಲಿ ಹಲವು ಸುಂದರ ದೇವಾಲಯ ಗಳಿವೆ. ಇವುಗಳಲ್ಲಿ ಪ್ರಮುಖವಾದ ದೇವಾ ಲಯವೆಂದರೆ ರೋಣ ತಾಲ್ಲೂಕಿನಲ್ಲಿರುವ ಸೂಡಿಯಲ್ಲಿನ ಜೋಡಿ ದೇವಾಲಯಗಳು.

ಇತಿಹಾಸ ಪುಟದಲ್ಲಿ ಸೂಡಿ ಪ್ರಮುಖ ಪಟ್ಟಣವಾಗಿತ್ತು. ಇಲ್ಲಿನ ಶಾಸನಗಳಲ್ಲಿ ಸೂಂಡಿ ಎಂದೇ ಉಲ್ಲೇಖವಾಗಿದೆ. ಇಲ್ಲಿ ಸುಮಾರು 18 ಕ್ಕೂ ಅಧಿಕ ಶಾಸನಗಳ ಲಭ್ಯವಾಗಿದ್ದು ಕಿಸಕಾಡು – 70 ರ ಭಾಗವಾ ಗಿತ್ತು. ಇಲ್ಲಿನ 1010, 1050 ರ ಶಾಸನದಲ್ಲಿ ಗ್ರಾಮಕ್ಕೆ ದತ್ತಿ ನೀಡಿದ ಉಲ್ಲೇಖವಿದ್ದರೆ ಇನ್ನು 1089,1103,1113 ಹಾಗು1160ರ ಶಾಸನಗಳಲ್ಲಿ ಇಲ್ಲಿನ ವಿವಿಧ ದೇವಾಲ ಯಗಳಿಗೆ ದತ್ತಿ ನೀಡಿದ ಉಲ್ಲೇಖ ನೋಡ ಬಹುದು.

  (ಜೋಡಿ ಕಳಶದೇವರ ದೇವಾಲಯ)

ಇಲ್ಲಿನ ಪ್ರಮುಖ ದೇವಾಲಯ ಜೋಡಿ ಕಳಶದೇವರ ದೇವಾಲಯ. ದೇವಾಲಯಕ್ಕೆ ಇರುವ ಎರಡು ಕಳಸಗಳಿಂದ ಈ ಹೆಸರು ಬಂದಿದೆ. ಸುಮಾರು 1061 ರಲ್ಲಿ ಕಲ್ಯಾಣ ಚಾಲುಕ್ಯ ಅರಸ ಒಂದನೇಯ ಸೋಮೇಶ್ವ ರನ ಕಾಲದಲ್ಲಿ ನಿರ್ಮಾಣವಾದ ಈ ದೇವಾ ಲಯ ದ್ವಿಕೂಟಾಚಲ ಮಾದರಿಯದ್ದು. ಶಾಸನಗಳಲ್ಲಿ ನಾಗೇಶ್ವರ ಎಂದು ಕರೆಯ ಲಾಗಿದ್ದು ದೇವಾಲಯ ಎರಡು ಗರ್ಭಗುಡಿ, ಸುಖನಾಸಿ ಹಾಗು ಒಂದೇ ನವರಂಗವನ್ನು ಹೊಂದಿದೆ.

ಪ್ರಧಾನ ಗರ್ಭಗುಡಿ ಪೂರ್ವಾಭಿಮುಖ ವಾಗಿದ್ದು ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಗರ್ಭಗುಡಿಯಲ್ಲಿನ ಮಕರ ತೋರಣಗಳಲ್ಲಿ ಬ್ರಹ್ಮ, ಮಹೇಶ್ವರ ಹಾಗು ವಿಷ್ಣುವಿನ ಶಿಲ್ಪ ನೋಡಬಹುದು.ಇನ್ನು ಮತ್ತೊಂದು ಗರ್ಭ ಗುಡಿಯುಲ್ಲಿ ಯಾವುದೇ ಶಿಲ್ಪವಿಲ್ಲ. ಇನ್ನು ನವರಂಗದಲ್ಲಿ ನಂದಿ ಇದ್ದು ಹನ್ನೆರಡು ಕಂಭ ಗಳಿವೆ.ಇನ್ನು ದೇವಾಲಯದ ಎರಡೂ ಗರ್ಭ ಗುಡಿಯ ಮೇಲೆ ಶಿಖರವಿದ್ದು ಹೊರ ಭಿತ್ತಿ ಯಲ್ಲಿ ಶಿಲ್ಪಗಳು, ಕಿರು ಶಿಕರಗಳು ಹಾಗೂ ಅರೆಗಂಬಗಳ ಕೆತ್ತೆನೆ ನೋಡಬಹುದು.


ಮಲ್ಲಿಕಾರ್ಜುನ (ಅಚಲೇಶ್ವರ) ದೇವಾಲಯ :

ಶಾಸನಗಳಲ್ಲಿ ಅಚಲೇಶ್ವರ ಎಂದು ಉಲ್ಲೇಖವಿರುವ ಈ ದೇವಾಲಯಕ್ಕೆ 1089 ರಲ್ಲಿ ಸಿಂಗಣದೇವನು ಈ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. ದೇವಾಲಯ ತ್ರಿಕುಟಾಚಲ ದೇವಾಲಯವಾಗಿದ್ದು ಮೂರು ಗರ್ಭಗುಡಿ, ಸುಖನಾಸಿ ಹಾಗು ಒಂದೇ ನವರಂಗ ಹೊಂದಿದೆ. ಮುಖ್ಯ ಗರ್ಭಗುಡಿಯಲ್ಲಿ ಶಿವಲಿಂಗವಿದ್ದರೆ ದಕ್ಷಿಣದ ಗರ್ಭಗುಡಿಯಲ್ಲಿ ಶೇಷಶಯನ ಪದ್ಮನಾಭ ಹಾಗು ಉತ್ತರದಲ್ಲಿ ಉಮಾಮಹೇಶ್ವರನ ಶಿಲ್ಪವಿದೆ. ಇನ್ನು ಸುಖನಾಸಿಯಲ್ಲಿ ನಂದಿಯ ಶಿಲ್ಪವಿದೆ.

ಗಣಪತಿ ದೇವಾಲಯ :

ಉರಿನ ಆರಂಭದಲ್ಲಿಯೇ ದೊಡ್ಡದಾದ ಗಣಪತಿಯ ದೇವಾಲಯವನ್ನು ನೋಡಬಹುದು. ಗರ್ಭಗುಡಿಯಷ್ಟೇ ಉಳಿದಿದ್ದ ಇದನ್ನು ಈಗ ನವೀಕರಣ ಮಾಡಿದ್ದು ಸುಮಾರು 12 ಅಡಿ ಎತ್ತರದ ಆಸೀನ ಭಂಗಿಯಲ್ಲಿನ ಚತುರ್ಭುಜ ಗಣಪತಿ ಸುಂದರವಾಗಿದೆ. ಇಲ್ಲಿ ಸನಿಹದಲ್ಲಿ ದೊಡ್ಡದಾದ ಶಿವಲಿಂಗಗಳಿದ್ದು ಇಲ್ಲಿನ ಮಂಟಪಗಳನ್ನು ಜೀರ್ಣೋದ್ಡಾರ ಮಾಡಲಾಗಿದೆ, ಇನ್ನು ಸನಿಹದಲ್ಲಿ ರಸ ಭಾವಿ ಎಂದು ಕರೆಯುವ ಸುಂದರ ಕಲ್ಯಾಣಿ ಇದ್ದು ಇದನ್ನು ಸಹ ಈಗ ಜೀರ್ಣೋದ್ಡಾರ ಮಾಡಲಾಗಿದೆ.

ಇನ್ನು ಇಲ್ಲಿ ಪಂಚಲಿಂಗೇಶ್ವರ ದೇವಾಯ ಗಳಿದ್ದು ಎನ್ನಲಾಗಿದೆ. ನಾಗೇಶ್ವರ (ಜೊಡಿ ಕಳಸ ದೇವಾಲಯ), ಮಲ್ಲಿಕಾರ್ಜುನ (ಆಚಲೇಶ್ವರ), ನಗರೇಶ್ವರ, ಕಲ್ಮೇಶ್ವರ ಹಾಗು ಅಕ್ಕೇಶ್ವರ ದೇವಾಲಯಗಳಿದ್ದವು. ಇನ್ನು ಇಲ್ಲಿ ಲಕ್ಶ್ಮೀನರಸಿಂಹ ಹಾಗೂ ನಾರಯಣನ ದೇವಲಯಗಳು ಇದೆ.

ತಲುಪುವ ಬಗ್ಗೆ : ರೋಣದಿಂದ ಸುಮಾರು 16 ಕಿ ಮೀ ದೂರದಲ್ಲಿದ್ದು ಗಜೇಂದ್ರಗಡದಿಂದ ಸುಮಾರು 12 ಕಿ ಮೀ ದೂರದಲ್ಲಿದೆ.

                    🔆🔆🔆

✍️ಶ್ರೀನಿವಾಸಮೂರ್ತಿಎನ್.ಎಸ್.    ಬೆಂಗಳೂರು