ಅಯ್ಯೋ
ಸೂರ್ಯ ಹುಟ್ಟುತ್ತಿದ್ದಾನೆ
ಮತ್ತೆ ಮುಳುಗುತ್ತಿದ್ದಾನೆ
ಎನ್ನುವ ಆತಂಕ ಕೆಲವರಿಗೆ

ಕತ್ತರಿಸುವ ತನಕ
ಹೂವು ನಗುತ್ತಲೇ ಇರುತ್ತದೆ
ಚಿವುಟಿದ ಮೇಲೆ
ಮಣ್ಣು ಸೇರುವ ತನಕ
ಅದೇ ಹೂವು
ಘಮಗುಡುತ್ತದೆ

ಕುದ್ದು ಕುದ್ದೂ ಆವಿಯಾಗುವ
ಬೆಂದು ಬೆಂದೂ ಬೂದಿಯಾಗುವ
ಕುಣಿ ಕುಣಿದು ಉದುರಿ ಹೋಗುವ
ಕಿಚ್ಚೆ ರಚ್ಚೆ ಮಾಡಬೇಡ
ಭೂಮಿಯ ಮೇಲೆ,
ಯಾರಿಗೆ ಯಾರೂ ಸ್ಪರ್ಧಿಗಳಲ್ಲ
ಜಗದಲಿ ಯಾವುದೂ
ಒಂದರಂತೆ ಮತ್ತೊಂದಿಲ್ಲ

ಕೊಡದ ಅಡಿಗೆ
ಕಲ್ಲು ಹಾಕುತ್ತಿದೆ ಕಾಗೆ
ಮೇಲೆ ಮೇಲೆ ಬರುತ್ತಿದೆ ನೀರು
ಅಯ್ಯೋ ನೀರು ಮೇಲೆ ಬಂದಿತು
ಕಾಗೆ ಕುಡಿಯಿತು
ಎಂದು ಪರಿತಪಿಸುವ ಖಾಯಿಲೆಗೆ
ಯಾವ ಲೋಕದಲ್ಲೂ ಮದ್ದಿಲ್ಲ

                         🔆🔆🔆
✍️   ಡಾ.ಬೇಲೂರು ರಘುನಂದನ  ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ವಿಜಯನಗರ
     ಬೆಂಗಳೂರು