ಬುದ್ಧನೇನೋ ಇದ್ದ
ಮೋಹದ ಬಲೆಯಲ್ಲಿ
ಬಿಡಿಸಿಕೊಂಡನ ಹೇಗೋ
ಬಹು ಚತುರನವನು
       ಧೈರ್ಯನಿಧಿಗೆ ಕಷ್ಟವೇ..?॥೧॥

ಕಾಳಜಿಯ ಖನಿಜ
ಮನೆಯಲ್ಲಿ ಇರುವುದುಂಟೆ
ಹೊರಬಂದ ದು:ಖ ಶಮನಕೆ
ಜ್ಞಾನದ ಗಣಿಗಾರಿಕೆ ಮಾಡಿದ
ಬಂದ ಉತ್ಪನವೇ
          ಧಮ್ಮಂ ಶರಣಂ ಗಚ್ಛಾಮಿ॥೨॥

ಪ್ರೀತಿಯ ಗಾಳ ಹಾಕಿ
ಹೃದಯದಿಂ ಎಳೆದ
ಎಲ್ಲ ಮಾನವಮೀನುಗಳು
ಪ್ರೀತಿಯ ಗಾಳಕೆ ಬಿದ್ದಂದವು
            ಬುದ್ಧಂ ಶರಣಂ ಗಚ್ಛಾಮಿ॥೩॥

ಅಜ್ಞಾನಕ್ಕೆ ಬೆಂಕಿ ಇಡಲು
ಅಲೆದ ಅಲೆದ
ಜ್ಞಾನದ ಬೆಂಕಿ ಪೊಟ್ಟಣ
ಸಿಗಲು ಸುಟ್ಟು ನಲಿದ ನಲಿದ
      ಕಣ್ಣೀರಿನ ಶವಯಾತ್ರೆ ಮುಗಿಸಿದ॥೪॥

ಮೌಢ್ಯದಿ ಬದುಕು ಕಳೆದು
ಅಳೆದು ಹೊಂಟವರ ಎಳೆದ
ಗಾಢ ಮೌನವ ತಾಳಲು ಕಲಿತ
ಬಿಕ್ಕುಗಳು ಜಗವೆಲ್ಲ ಅಲೆದು
          ಬುದ್ಧ ಸಂದೇಶ ಬಿತ್ತಿದರು ॥೫॥

ಬಿಟ್ಟು ಬಿಡಿ ಬುದ್ಧನನು
ಅವನು ಅವನಂತಿರಲಿ
ಅರಮನೆ ಬಿಟ್ಟವನನ್ನು
ಮನೆಗೆ ಎಳೆದು ತಂದು
ಹಿಂಸೆಯಲಿ ಪೂಜಿಸಿ ಶಾಂತಿ
               ಹುಡುಕಲು ಹೋಗದಿರಿ..   ॥೬॥

  ✍🏻ಪರಸಪ್ಪ ತಳವಾರ. 
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ಲೋಕಾಪೂರ