ಮಂಡ್ಯ ಜಿಲ್ಲೆಯಂದರೆ ಹೊಯ್ಸಳರ ದೇವಾಲಯಗಳ ಸಂಗಮ.ಹೊಯ್ಸಳರ ದೇವಾಲಯಗಳಲ್ಲದೇ ಚೋಳ ಹಾಗೂ ವಿಜಯನಗರ ಅರಸರ ಕಾಲದಲ್ಲಿಯೂ ನಿರ್ಮಾಣ ವಾದ ಹಲವು ದೇವಾಲಯ ಗಳಿವೆ.  ಆದರೆ ಹಲವು ರಾಜರ ಕಾಲದಲ್ಲಿ ನವೀಕರಣಗೊಂಡು ತನ್ನದೇ ಆದ ವಿಶಿಷ್ಟತೆ ಯಿಂದ ಕೂಡಿರುವ ದೇವಾಲಯ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿದೆ.

ಇತಿಹಾಸ ಪುಟದಲ್ಲಿ ಮದ್ದೂರು ಪ್ರಮುಖ ಸ್ಥಳವಾಗಿ ಗುರುತಿಸಿಕೊಂಡಿತ್ತು, ಗಂಗ – ಚೋಳ – ಹೊಯ್ಸಳ ಹಾಗು ವಿಜಯನಗರ ಅರಸರು ಕಾಲದಲ್ಲಿ ಗುರುತಿಸಿಕೊಂಡಿದ್ದ ಈ ಸ್ಥಳ ಕದಂಬ ಮುನಿಗಳು ಇಲ್ಲಿ ಇದ್ದ ಕಾರಣ ಕದಂಬ ಕ್ಷೇತ್ರ ಎಂದು ಕರೆಯಲ್ಪಟ್ಟಿತು. ಗಂಗರ ಕಾಲದಲ್ಲಿ ಚಿಕ್ಕಗಂಗ ವಾಡಿಯ ಭಾಗವಾಗಿದ್ದ ಈ ಗ್ರಾಮ  ಚೋಳರ ಕಾಲದಲ್ಲಿ ಅನಾದಿ ಅಗ್ರಹಾರ ನಾರಸಿಂಹ ಚತುರ್ವೇದ ಮಂಗಲಂ ಹಾಗೂ ಹೊಯ್ಸಳರ ಕಾಲದಲ್ಲಿ ನರಸಿಂಹ ಚತುರ್ವೇದಿ ಮಂಗಳ ಎಂದು ಕರೆಯಲಾಗುತ್ತಿತ್ತು. ಹೊಯ್ಸಳ ದೊರೆ ವಿಷ್ಣುವಧ೯ನ ಇಲ್ಲಿ ಅಗ್ರಹಾರವನ್ನು ನಿರ್ಮಿಸಿ ತನ್ನ ಮಗನ ಹೆಸರಿನಲ್ಲಿ ನರಸಿಂಹ ಚತುರ್ವೇದಿ ಮಂಗಲ ಎಂದು ಕರೆದನು. ಇಲ್ಲಿನ ತಮಿಳು ಶಾಸನಗಳಲ್ಲಿ ಮರದೂರು ಹಾಗೂ ಕನ್ನಡ ಶಾಸನಗಳಲ್ಲಿ ಮದ್ದೂರು, ಕಳಲೆನಾಡು ಎಂದು ಉಲ್ಲೇಖಗೊಂಡಿದೆ.  ಇನ್ನು ಸ್ಥಳೀಯ ಪುರಾಣದ ಪ್ರಕಾರ ಅರ್ಜುನಾಪುರಿ, ಕದಂಬಕ್ಷೇತ್ರ ಎಂದು ಕರೆಯ ಲಾಗುತಿತ್ತು.  ಇಲ್ಲಿ ಮದ್ದು ಶೇಖರಣೆ ಮಾಡುತ್ತಿದ್ದ ಕಾರಣ ಮದ್ದೂರು ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ.

ಉಗ್ರ ನರಸಿಂಹ ದೇವಾಲಯ :

ಇಲ್ಲಿನ 1132 ರ ಶಾಸನದಲ್ಲಿ ಈ ದೇವಾಲ ಯ ಉಲ್ಲೇಖ ನೋಡಬಹುದು.  ದೇವಾಲ ಯದ ನಿರ್ಮಾಣದ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ ಚೋಳರ ಕಾಲದಲ್ಲಿ ನಿರ್ಮಾ ಣವಾಗಿ ಹೊಯ್ಸಳ ಹಾಗೂ ವಿಜಯನಗರ ಕಾಲದಲ್ಲಿ ವಿಸ್ತಾರಗೊಂಡಿದೆ ಎನ್ನಲಾಗಿದೆ.  ಇನ್ನು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿ ಚೋಳರ ಪ್ರಭಾವ ಇದೆ ಎಂಬ ವಾದವೂ ಇದೆ.ದೇವಾಲಯ ಗರ್ಭಗುಡಿ, ಸುಖನಾಸಿ, ನವರಂಗ, ಸಭಾಮಂಟಪ ಹಾಗೂ ತೆರೆದ ಪ್ರದಕ್ಷಿಣಾ ಪಥ ವನ್ನು ಹೊಂದಿದೆ.ದೇವಾಲಯದ ಗರ್ಭಗುಡಿಯಲ್ಲಿ ಸುಮಾರು ಏಳು ಆಡಿ ಎತ್ತರದ ಅರ್ಧಸ್ಥಾನಿಕ ಹಾಗೂ ಅರ್ಧಆಸೀನ ಭಂಗಿಯಲ್ಲಿರುವ ಹಿರಣ್ಯಕಶುಪುವನ್ನ ತನ್ನ ತೊಡೆಯ ಮೇಲೆ ಇರಿಸಿಕೊಂಡ  ಸುಂದರವಾದ ಉಗ್ರ ನರಸಿಂಹನ ಮೂರ್ತಿ ಇದೆ. ಅಷ್ಟಭುಜದ ಶಿಲ್ಪದಲ್ಲಿ ಚಕ್ರ, ಶಂಖ, ದಂತ ಹಾಗೂ ಗಧೆ ಇದ್ದು, ಇನ್ನುಳಿದ ಎರಡು ಕೈಗಳಲ್ಲಿ ಹಿರಣ್ಯಕಶ್ಶುಪುವಿನ ಕರುಳು ಬಗೆಯುವಂತೆ ಹಾಗೂ ಇನ್ನು ಎರಡು ಕೈಗಳಲ್ಲಿ ಕರುಳನ್ನು ಮಾಲೆಯಾಗಿ ಹಾಕಿ ಕೊಳ್ಳುವಂತೆ ಕೆತ್ತಲಾಗಿದ್ದು ಪ್ರಭಾವಳಿಯಲ್ಲಿ ದಶಾವ ತಾರಗಳ ಕೆತ್ತೆನೆ ನೋಡಬಹುದು. ಇನ್ನು ಪಾದದ ಬಳಿ ಪ್ರಹ್ಲಾದ ನಮಿಸುವಂತೆ ಹಾಗು ಎಡ ಭಾಗದಲ್ಲಿ ಗರುಡನ ಕೆತ್ತೆನೆ ನೋಡಬಹುದು. ರಾಜ್ಯದಲ್ಲಿಯೇ ಕಾಣಬ ರುವ ಅಪುರೂಪದ ಉಗ್ರ ನರಸಿಂಹನ ಮೂರ್ತಿ ಇದು.

ಇನ್ನು ನವರಂಗದಲ್ಲಿನ ಬಾಗಿಲುವಾಡದಲ್ಲಿ ನ ಚಕ್ರ ಹಾಗು ಶಂಖದ ಕೆತ್ತೆನೆ ಇದ್ದು ದೇವಾಲಯದ ಪ್ರಾಂಗಣದಲ್ಲಿ ಸೌಮ್ಯನಾಯಕಿ ಹಾಗೂ ನರಸಿಂಹನಾಯಿಕಿ ಯರ ಚಿಕ್ಕ ದೇವಾಲಯಗಳಿವೆ.  ದೇವಾಲ ಯದ ಮಂಟಪ ವಿಜಯ ನಗರ ಕಾಲದಲ್ಲಿ ವಿಸ್ತಾರಗೊಂಡಿದ್ದು ಹೊಸದಾಗಿ ರಾಜ ಗೋಪುರವನ್ನ ನಿರ್ಮಿಸಲಾಗಿದೆ. ದೇವಾಲಯದ ಹೊರ ಭಿತ್ತಿಯಲ್ಲಿ ನರಸಿಂಹ ಹಲವು ಉಬ್ಬು ಶಿಲ್ಪಗಳಿದ್ದು ದೇವಾಲ ಯಕ್ಕೆ ಬಣ್ಣ ಬಳಿದ ಕಾರಣ ಅಧುನಿಕ ಸ್ಪರ್ಶ ಪಡೆದಿದೆ.  ಇನ್ನು ಇಲ್ಲಿ ವರದರಾಜ, ರಾಮ, ಕೃಷ್ಣ, ರಾಮಾನುಜ, ಆಳ್ವಾರ ಶಿಲ್ಪಗಳನ್ನು ನೋಡ ಬಹುದು. ಇನ್ನು ಪ್ರಾಕರದ ಚಿಕ್ಕ ಮಂದಿರ ದಲ್ಲಿ ರಾಮ – ಲಕ್ಷಣ – ಸೀತಾ ಹಾಗೂ ಆಂಜನೇಯರ ಮೂರ್ತಿಗಳು ಇದ್ದು ವಿಜಯನಗರ ಕಾಲದ ಸೇರ್ಪಡೆ.  ಇಲ್ಲಿ ಆಂಜನೇಯ ತನ್ನ ಉಗುಳನ್ನು ರಾಮನಿಗೆ ಬೀಳದಂತೆ ಕೈಯನ್ನು ಬಾಯಿಗೆ ಆಡ್ಡ ಹಿಡಿದಿರುವು ವಿಶೇಷ.

ಇನ್ನು ಇಲ್ಲಿನ ಸ್ಥಳೀಯ ಪುರಾಣದಂತೆ ಪಾಂಡವವರು ಇಲ್ಲಿ ವಾಸ ಮಾಡುತ್ತಿದ್ದಾಗೆ ಅರ್ಜುನ ಶ್ರೀಕೃಷ್ಣನ ಬಳಿ ಉಗ್ರನರ ಸಿಂಹನ ಅವತಾರ ನೋಡಬೇಕೆಂದು ಕೇಳಿದಾಗ ಬ್ರಹ್ಮ ನಿಂದ  ಶಿಲಾರೂಪದಲ್ಲಿ   ಸ್ಥಾಪಿಸಲ್ಪಟ್ಟಿತು ಎಂಬ ನಂಬಿಕೆ ಇದೆ.  ಹಾಗಾಗಿ ಇದಕ್ಕೆ ಅರ್ಜುನಾಪುರಿ ಎನ್ನಾಲಾಗುತ್ತಿತ್ತು ಹಾಗೂ ನಂತರ ಪಾಳೇಗಾರರ ಕಾಲದಲ್ಲಿ ಇಲ್ಲಿ ಮದ್ದು ಗುಂಡು ಶೇಖರಿಸುತ್ತಿದ್ದ ಕಾರಣ ಮದ್ದೂರು ಎಂದಾಯಿತು ಎಂಬ ನಂಬಿಕೆ ಇದೆ.

ವರದರಾಜಸ್ವಾಮಿ (ಅಲ್ಲಾಳನಾಥ ದೇವಾಲಯ )

ನರಸಿಂಹ ದೇವಾಲಯದಿಂದ ಮುಂದೆ ಹೋದಲ್ಲಿ ಎತ್ತರವಾದ ಪ್ರದೇಶದಲ್ಲಿ ಈ ದೇವಾಲಯವಿದ್ದು ಹೊಯ್ಸಳ ರ ಕಾಲದಲ್ಲಿ ನಿರ್ಮಾಣವಾದ ವರದರಾಜಸ್ವಾಮಿ ದೇವಾ ಲಯವಿದೆ. ಹೊಯ್ಸಳರ ರಾಜ ವಿಷ್ಣುವರ್ಧನ ತನ್ನ ತಾಯಿಯು ಕಂಚಿಗೆ ಹೋಗಲು ಕಷ್ಟದ ಕಾರಣ ತಾಯಿಯ ಅಪೇಕ್ಷೆಯಂತೆ ಈ ಶಿಲ್ಪವನ್ನು ನಿರ್ಮಿಸಿದ ಎಂಬ ನಂಬಿಕೆ ಇದೆ.  ಗರ್ಭಗುಡಿಯಲ್ಲಿ ಸುಮಾರು 12 ಆಡಿ ಎತ್ತರದ ಅದ್ಭುತ ವರದರಾಜಸ್ವಾಮಿಯ ಶಿಲ್ಪವಿದ್ದು ಶಂಖ, ಚಕ್ರಾ, ಗಧಾ ಹಾಗು ಪದ್ಮದಾರಿಯಾಗಿದ್ದು ಪ್ರತಿ ಕೆತ್ತೆನೆಯೂ ಸುಂದರ.ಇನ್ನು ಕೈಬೆರಳುಗಳು ಅತ್ಯಂತ ಸೂಕ್ಷ್ಮ ಕೆತ್ತೆನೆ ಹೊಂದಿದ್ದು, ಕೊಳಗದ ಮಾದರಿಯ ಕಿರಿಟ ಹೊಂದಿದ್ದು, ಚೋಳರ ಲಕ್ಷ್ಣಣವನ್ನು ಹೊಂದಿದೆ. ಇನ್ನು ಇಲ್ಲಿ ಸುಮಾರು 10 ನೇ ಶತಮಾನದ ಶಾಸನ ಹಾಗೂ 1278ರಲ್ಲಿ ದತ್ತಿ ನೀಡಿದ ಶಾಸನವೂ ಇದೆ. ಇನ್ನು ಮೂರ್ತಿಯ ಹಿಂಭಾಗದಲ್ಲಿ ಅತ್ಯಂತ ಕಲಾತ್ಮಕ ಕೆತ್ತೆನೆ ಇದ್ದು, ಹಾಗಾಗಿ ಎಲ್ಲ ದೇವರ ಮುಂದೆ ನೋಡು ಹಾಗು ಅಲ್ಲಾಳನಾಥನ ಹಿಂದೆ ನೋಡು ಎಂಬ ನಾಣ್ಣುಡಿ ಇದೆ.

ಮದ್ದೂರಮ್ಮ ದೇವಾಲಯ

ಇನ್ನು ಊರ ದೇವತೆಯಾದ ಮದ್ದೂರಮ್ಮನ ದೇವಾಲಯ ವಿದ್ದು ವ್ಯಾಪಾರಿಗಳು ಪೂಜಿಸುತಿದ್ದ ಉಲ್ಲೇಖವಿದೆ. ಇಲ್ಲಿ ತಗ್ಗಿನ ಪ್ರದೇಶದಲ್ಲಿ ಸಪ್ತಮಾತೃಕೆ ಹಾಗೂ ತ್ರಿಶೂಲವಿದ್ದು ಹಿಂಭಾಗದಲ್ಲಿ ಬನಿಯಮ್ಮ ಎಂದು ಕರೆಯುವ ಶಿಲೆಗಳಿವೆ. ಇಲ್ಲಿಈಗ ನೂತನವಾಗಿ ದೇವಾಲಯ ನಿರ್ಮಾಣಗೊಂಡಿದೆ. ಇನ್ನು ಇಲ್ಲಿ ಚೈತ್ರ ಶುಕ್ಲ ಪಕ್ಷದಲ್ಲಿ ಐದುದಿನ ಜಾತ್ರೆ ನಡೆಯ ಲಿದ್ದು ಆ ಸಮಯದಲ್ಲಿ ಸಿಡಿಯಾಟ, ಓಕಳಿ ಹಾಗೂ ಮೆರವ ಣಿಗೆಗಳು ನಡೆಯುತ್ತದೆ. ಈ ಸಮಯದಲ್ಲಿ ಜಾತ್ರೆ ನಡೆಯುತ್ತದೆ.

ಕೈಲಾಸೇಶ್ವರ ದೇವಾಲಯ

ಇನ್ನು ವರದರಾಜಸ್ವಾಮಿ ದೇವಾಲಯ ಹತ್ತಿರ ಇದ್ದ ಹೊಯ್ಸಳರ ಕಾಲದ ಪುರಾತನವಾದ ದೇವಾಲಯವನ್ನು ನವೀಕರಿಸಲಾಗಿದ್ದು ಈಗ ರಾಮನಮೂರ್ತಿಯನ್ನು ಸ್ಥಾಪಿಸಲಾಗಿದೆ.ಇನ್ನು ಇಲ್ಲಿ ಗಂಗರ ಕಾಲದ ವಿಶ್ವೇಶ್ವರ ದೇವಾಲಯವೂ ಇದೆ.

ವೈಧ್ಯನಾಥೇಶ್ವರ ದೇವಾಲಯ :

ಮದ್ದೂರಿನ ಭಾಗವಾಗಿಯೇ ಇದ್ದ ಈ ಭಾಗ ಮದ್ದೂರಿನಿಂದ ಸುಮಾರು 3 ಕಿ ಮೀ ದೂರದಲ್ಲಿ ಶಿಂಷಾನದಿಯ ದಂಡೆಯ ಮೇಲೆ ಇದೆ. ಇಲ್ಲಿಯೇ ಕದಂಬ ಮುನಿಗಳ ಆಶ್ರಮವಿತ್ತು ಎನ್ನಲಾಗಿದೆ. ಇನ್ನು ವೈಜನಾಥಪುರ – ಶಿವಪುರ ಎಂದೇ ಶಾಸನಗಳಲ್ಲಿ ಕರೆಯಲಾಗಿದೆ. ಈ ದೇವಾಲ ಯಕ್ಕೆ ಗಂಗ – ಚೋಳ – ಹೊಯ್ಸಳ ಹಾಗು ವಿಜಯನಗರದ ಅರಸರು ದತ್ತಿ ನೀಡಿದ ಉಲ್ಲೇಖ ನೋಡಬಹುದು.

ದೇವಾಲಯ ಗರ್ಭಗುಡಿ, ನವರಂಗ, ಸಭಾಮಂಟಪ ಹಾಗು ಮುಖಮಂಟಪ ಹೊಂದಿದ್ದು ಗರ್ಭಗುಡಿಯಲ್ಲಿ ವೈಧ್ಯನಾಥೇಶ್ವರ ಎಂದು ಕರೆಯುವ ಶಿವಲಿಂಗವಿದೆ.  ನವರಂಗದ ಬಾಗಿಲುವಾದ ಅಲಂಕೃತಗೊಂಡಿದ್ದು ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತೆನೆ ಇದೆ. ಇನ್ನು ಇಲ್ಲಿ ಬೈರವಾ, ಮಹಿಷಮರ್ದಿನಿ, ಉಮಾಮಹೇಶ್ವರ ಹಾಗೂ ಬಲ ಮತ್ತು ಎಡಹರಿ ಶಿವಲಿಂಗಗಳಿವೆ. ಈ ದೇವಾಲಯ ಸಾಕಷ್ಟು ನವೀಕರಣಗೊಂಡಿದ್ದು ಗಂಗರ ಕಾಲದ ಪಲ್ಲವ ಶೈಲಿಯ ಕಂಭಗಳು ಗಮನ ಸೆಳೆಯುತ್ತದೆ.

ಇನ್ನು 1132ರಶಾಸನದಲ್ಲಿ ವಿಷ್ಣುವರ್ಧನನ ಕಾಲದಲ್ಲಿ ದತ್ತಿ ನೀಡಿದ ಉಲ್ಲೇಖವಿದೆ. ಇನ್ನು ಇಲ್ಲಿನ ಹುತ್ತದ ಮಣ್ಣು ಚರ್ಮವ್ಯಾ ಧಿಗೆ ಪರಿಹಾರ ಎಂಬ ನಂಬಿಕೆ ಇದೆ. ಇನ್ನು ಮದ್ದು ನೀಡುವ ಊರಿನಿಂದ ಮದ್ದೂರು ಎಂಬ ಹೆಸರು ಬಂದಿದೆ ಎಂದು ಇಲ್ಲಿನ ಸ್ಥಳಿಯ ನಂಬಿಕೆ.

ಹೊಳೆ ಆಂಜನೇಯ ಸ್ವಾಮಿ ದೇವಲಯ

ವೈಧ್ಯಾನಾಧಪುರಕ್ಕೆ ಹೋಗುವ ದಾರಿಯಲ್ಲಿ ಶಿಂಷಾ ನದಿಯ ತೀರದಲ್ಲಿ ಇರುವ ಈ ದೇವಾಲಯ ಈಗ ಪ್ರಸಿದ್ದಿ ಪಡೆದಿದೆ. ಇಲ್ಲಿನ ಆಂಜನೇಯನ ಮೂರ್ತಿಯನ್ನು ಶ್ರೀಪಾದ ರಾಜರು ಪ್ರತಿಷ್ಟಾಪಿಸಿದರು ಎಂಬ ನಂಬಿಕೆ ಇದೆ. ಸಂಪೂರ್ಣವಾಗಿ ನವೀಕರಣ ಗೊಂಡಿ ರುವ ಈ ದೇವಾಲಯದ ಗರ್ಭಗುಡಿಯಲ್ಲಿ ಪಾರ್ಶ್ವಕ್ಕೆ ತಿರುಗಿ ನಿಂತಿರುವ ಆಂಜೇಯ ಮೂರ್ತಿ ಇದೆ.

ತಲುಪುವ ಬಗ್ಗೆ : ಮದ್ದೂರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿದ್ದು ಸುಲಭವಾಗಿ ತಲುಪಬಹುದು.

                         🔆🔆🔆

✍️ಶ್ರೀನಿವಾಸಮೂರ್ತಿ.ಎನ್.ಎಸ್. ಬೆಂಗಳೂರು