ಮಂಕು ಕವಿದ ಮನಕೆ
ಬೆಳಕಿನ ಹಾಡು ನೀಡಿ
ಅರಿವಿನ ದೀಪ ಬೆಳಗಿದವನೆ
ಪದಗಳನಿಟ್ಟು ತೂಗಲಾರೆ ನಿನ್ನ
ಜಗದ ನೋವು ಎದೆಯ ಕಾಡಿದಾಗ
ಹೊದ್ದ ಹೊದಿಕೆ ಒದ್ದು
ಬಿಡುಗಡೆಯ ಬೆಳಕಿಗೆ ನಡೆದವನೆ
ಪದಗಳನಿಟ್ಟು ತೂಗಲಾರೆ ನಿನ್ನ
ಸಮತೆಗಾಗಿ ಹಂಬಲಿಸಿ
ಮತಿಹೀನರನುದ್ಧರಿಸಿ
ಕರುಣೆಯ ಕಂದೀಲು ಹಿಡಿದು ಹೊರಟವನೆ
ಪದಗಳನಿಟ್ಟು ತೂಗಲಾರೆ ನಿನ್ನ
ಬೋಧಿವೃಕ್ಷವದು ನಿನಗೆ ನೆಪ
ಸತ್ಯ ಕಾಣುವುದೊಂದೇ ಹಟ
ದೀನ ದಲಿತರ ಎದೆಯಲಿ ಕರಗುತ ಸಾಗಿದವನೆ
ಪದಗಳನಿಟ್ಟು ತೂಗಲಾರೆ ನಿನ್ನ
ಬುದ್ಧ-ಸಂಬುದ್ಧ ಎಂಬುದೆಲ್ಲ ಬರೀ ಪದಗಳು
ಸನ್ಮತಿಯನಿತ್ತ ಜಗದ ಗುರು ನೀನು
ತಮವ ಕಳೆದ ಶಾಂತ ನಿಶ್ಚಿಂತನು
ಪದಗಳನಿಟ್ಟು ತೂಗಲಾರೆ ನೀನು
ಹರಿದುಕೊಳ್ಳಬೇಕಿದೆ ನನ್ನೊಳಗಿನ
ಆಶೆ ಪಾಶಗಳ ಮೂರ್ಖತನವ
ನಿನ್ನ ಹಾಡಿದ ಹಡದಿಯಲಿ ನಡೆಯಬೇಕಿದೆ
ಪದಗಳನಿಟ್ಟು ತೂಗಲಾರೆ ನಿನ್ನ
✍️ಡಾ.ಪುಷ್ಪಾವತಿ ಶಲವಡಿಮಠ
ಹಾವೇರಿ