ಉಡುಪಿ ಜಿಲ್ಲೆಯ ಕೋಟದ ನಾಗಪ್ಪಯ್ಯ ತಮ್ಮ 37ನೇಯ ವಯಸ್ಸಿನಲ್ಲಿ ಅಮೇರಿಕಾ ದೇಶಕ್ಕೆ ಬಂದು“ನಾಗ ಐತಾಳ” ಆಗಿ ಸಪ್ತ ಸಾಗರದಾಚೆಯ  ಆ ನಾಡಲ್ಲಿ ಕನ್ನಡದ ಕಹಳೆಯೂದುತ್ತಿರುವದು ನಿಜವಾಗಿಯೂ ಬೆರಗಿನ ವಿಷಯವೇ!ತಮ್ಮ ೮೮ನೇಯ ಈ ವಯಸ್ಸಿನಲ್ಲಿಯೂ ಅದೇ ಹರೆಯದ ಲವಲವಿಕೆ; ಜೀವನ ಪ್ರೀತಿ.

1932ರಲ್ಲಿ ಹುಟ್ಟಿದ ನಾಗಪ್ಪಯ್ಯ ಭಾರತ ದಲ್ಲಿ ಪಿಎಚ್ಡಿ ಪಡೆದು ನಂತರ ಬಯೋಕೆಮೆಸ್ಟ್ರಿಯಲ್ಲಿ ಹೆಚ್ಚಿನ ತರಬೇತಿ ಪಡೆಯಲು ಅಮೇರಿಕಾ, ಕೆನಡಾಕೆ  ಬಂದು  27ವರ್ಷ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿ, ಇಂದು  ಮಡದಿ, ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ತುಂಬು ಸಂಸಾರದಲ್ಲಿ ಆ ನೆಲದಲ್ಲಿ ನೆಲೆಸಿ ಎಷ್ಟೆಲ್ಲಾ ಕೆಲಸಕಾರ್ಯ ಗಳ ನಡುವೆ ಹವ್ಯಾಸ ಕ್ಕೆ ಕನ್ನಡದ ಬರಹ ದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ತಾವೂ ಬೆಳೆದು, ಕಿರಿಯರಿಗೂ ಬೆನ್ನೆಲು ಬಾಗಿ ಈ ಉತ್ಸಾಹೀ ಯುವಕ ತಾಯ್ನೆಲ ಬಿಟ್ಟು ಕಡಲಾಚೆ ನೆಲೆಸಿ ಇಂದಿಗೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದರೂ, ಇವರ ಎದೆಯಲ್ಲಿ  ಊರ ನೆನಪು ಸದಾ ಹಚ್ಚ ಹಸಿರು.

ನಾಗ  ಐತಾಳರ “ಸ್ಮರಣೆ ಸಾಲದೆ… “ಎಂಬ  ಅವರ  ಬದುಕಿನ  ಪುಸ್ತಕ  ಓದು ತ್ತಿದ್ದಂತೆಯೇ ಅವರಿಗೆ ಎರಡು ಜಗತ್ತುಗ ಳಿವೆ. ಒಂದು ಬಾಲ್ಯದ ಕೋಟದ ಜಗತ್ತು. ಇದು ಅವರ ವ್ಯಕ್ತಿತ್ವವನ್ನು ರೂಪಿ ಸಿದ್ದು ಎಳೆಯ ಮನಸ್ಸು ತನ್ನ ಸುತ್ತಲಿನ ಪರಿಸರಕ್ಕೆ ಸ್ಪಂದಿಸುತ್ತಲೇ ತನ್ನ ಗುರಿ ದಾರಿಗಳನ್ನು ಗುರುತಿಸಿಕೊಳ್ಳಲು ಇದು ನೆರವು ನೀಡಿದೆ. ಚಿಕ್ಕಂದಿನಲ್ಲಿ ಎದುರಿಸಿದ ಅನೇಕ ಬಿಕ್ಕಟ್ಟುಗಳನ್ನು ಇದರಲ್ಲಿ ಒಳಗೊಂಡಿದೆ. ಮತ್ತೊಂದು ಅವರ ವೃತ್ತಿಬದುಕನ್ನು ರೂಪಿಸಿದ ಅಮೇರಿಕೆಯ ಜಗತ್ತು.ಕನ್ನಡ ಕರಾವಳಿಯ ಹುಡುಗನೊಬ್ಬ ಕಡಲದಾಟಿ ಅಪರಿಚಿತ ಖಂಡ ಪ್ರವೇಶಿಸಿ ತನ್ನ  ಬದುಕನ್ನು ಕಟ್ಟಿಕೊಂಡ ಅನೇಕ ಸಂದರ್ಭಗಳಲ್ಲಿ ಇವರ ಕೆಲಸ ಕಾರ್ಯಗಳನ್ನು ಕಂಡು ಇಲ್ಲಿಯ ಜನರಿಂದ ಲೂ ಭೇಷ್ ಎನಿಸಿಕೊಂಡ ರೋಮಾಂಚಕ ಸಂಗತಿಗಳಿಗೆ ನಿಜವಾಗಿಯೂ ಐತಾಳರು ಅಭಿನಂದನಾರ್ಹರು. 2001ರಲ್ಲಿ ನಿವೃತ್ತರಾದ ಇವರು ಅಂದಿನಿಂದ  ಇಂದಿನ ತನಕವೂ ಆನೆಲದಲ್ಲಿ ಕನ್ನಡಕಟ್ಟುವಿಕೆಯ ಕಾರ್ಯ  ಅಪೂರ್ವವಾದುದು.

ಇವರ ನೇತೃತ್ವ ಮತ್ತು ಸಂಘಟನೆಯಲ್ಲಿ “ಕನ್ನಡ ಸಾಹಿತ್ಯ ರಂಗ” ಅಮೇರಿಕೆಯ ಕನ್ನಡಿಗರ ಜೀವನಾಡಿಯಾಗಿದೆ. ಅಮೇರಿಕೆಯಲ್ಲಿ ಸಾಹಿತ್ಯಕ್ಕೆಂದೇ ಮೀಸಲಾದ ಕನ್ನಡದನಾಡಿ ಮಿಡಿತ ಇದು. ಇದರ ಸ್ಥಾಪಕ ಸದಸ್ಯರು ಮತ್ತು ಈಗಿನ ಆಡಳಿತ ಮಂಡಳಿಯ ಅಧ್ಯಕ್ಷರೂ ಐತಾಳರೇ. ೨೦೦೩ರಲ್ಲಿ ಕನ್ನಡ ಸಾಹಿತ್ಯರಂಗ  ಶುರುವಾಗಿ ಪ್ರತೀ ಎರಡು ವರ್ಷಕ್ಕೊಮ್ಮೆ ಕನ್ನಡದ ಕಂಪು ಅಮೇರಿಕೆಯ ತುಂಬಾಸೊಂಪಾಗಿ ಘಮಘಮಿಸುತ್ತದೆ. ಫಿಲಡೆಲ್ಪಿಯಾ, ಲಾಸ್ಏಂಜಲೀಸ್,ಶಿಕಾಗೊ,ವಾಷಿಂಗ್ಟನ್. ಸ್ಯಾನ್ ಫ್ರಾನ್ಸಿಸ್ಕೊ, ಹ್ಯೂಸ್ಟನ್, ಸೈಂಟ್ ಲೂಯಿಸ್, ಬೋಸ್ಟನ್ ಮತ್ತು 2019 ರಲ್ಲಿ ನ್ಯೂಜೆರ್ಸಿಯಲ್ಲಿ ಅತ್ಯಂತ ಶಿಸ್ತುಬಧ್ಧವಾಗಿ ಸಮರ್ಪಕವಾಗಿ ನಡೆಸಿದ ಕೀರ್ತಿಯಲ್ಲಿ ಇವರ ಪಾಲೂ ಹೆಚ್ಚಿನದೇ.  ಪ್ರಭುಶಂಕರ್, ಬರಗೂರ ರಾಮಚಂದ್ರಪ್ಪ, ಎನ್.ಎಸ್.ಲಕ್ಷ್ಮಿನಾರಾಯಣಭಟ್ಟ, ಅ.ರಾಮಿತ್ರ, ಎಚ್.ಎಸ್. ರಾಘವೇಂದ್ರ ರಾವ್,ವೈದೇಹಿ, ವೀಣಾ ಶಾಂತೇಶ್ವರ, ಸುಮತೀಂದ್ರ ನಾಡಿಗ್,  ಭುವನೇಶ್ವರಿ ಹೆಗಡೆ, ಕೆ.ವಿ.ತಿರುಮಲೇಶ್, ಗುರುದತ್ತ, ಲಕ್ಷ್ಮೀಶ ತೋಳ್ಪಾಡಿ ಹೀಗೆ ಅನೇಕಾನೇಕ ಕನ್ನಡದ ದಿಗ್ಗಜರು ಈ ಕನ್ನಡ ಸಾಹಿತ್ಯ ರಂಗದ ಮೂಲಕ ಕನ್ನಡದ ರಂಗನ್ನು ಕಡಲಾಚೆಯಲಿ ಭಿತ್ತರಿಸಿದರು.

ಕಳೆದ ವರ್ಷ ನಮ್ಮವಿಸ್ಮಯನ “ವಿಸ್ಮಯ” ದಿಂದಾಗಿ  ಆದೇ  ಸಮಯಕ್ಕೆ  ನಾವೂ ಕೂಡ ನ್ಯೂಜೆರ್ಸಿಯಲ್ಲಿಯೇ  ಇದ್ದೆವು.  ಒಂಭತ್ತನೆಯ  ಕನ್ನಡ  ಸಾಹಿತ್ಯರಂಗದ  ವಸಂತ ಸಾಹಿತ್ಯೋತ್ಸವದ ಆಡಳಿತ ಮಂಡಳಿಯ ಅಧ್ಯಕ್ಷರೂ ನಾಗಐತಾಳರೇ ಇದ್ದು ಕನ್ನಡದ ನಾಮಾಂಕಿತ ಬರಹಗಾರರಾದ ವಸುಧೇಂದ್ರ,ವಸುಂಧರಾ ಭೂಪತಿ ಮತ್ತು ಸುನಂದಾರೊಂದಿಗೆನಾನೂ ಅತಿಥಿಯಾದದ್ದು ಬದುಕಿನಲಿ   ಮರೆಯದ  ಕ್ಷಣಗಳಲ್ಲೊಂದು.ಆ ಅದ್ಭುತವೇದಿಕೆಯಲ್ಲಿ ನಾಗ ಐತಾಳರ “ಸ್ಮರಣೆ ಸಾಲದೇ…” ಪುಸ್ತಕ ಪರಿಚಯ ಮಾಡಿದ್ದು ನನ್ನ ಸಾಹಿತ್ಯ  ಬದುಕಿನ ಮೈಲಿಗಲ್ಲೆಂದು ಪರಿಗಣಿಸುವೆನು. ಮೈ.ಶ್ರೀ.ನಟರಾಜ್, ನಳಿನಿ ಮೈಯ, ಗುರುಪ್ರಸಾದ ಕಾಗಿನೆಲೆ, ಶ್ರೀಕಾಂತ ಬಾಬು, ಗುಂಡುಶಂಕರ್,ತ್ರಿವೇಣಿ, ಶ್ರೀನಿವಾಸರಾವ್,ಮೀರಾರಾಜಗೋಪಾಲಶಾಲಿನಿ ಹೆಗಡೆ,  ಪ್ರಕಾಶ ನಾಯಕ,     ಶಂಕರ ಹೆಗಡೆ, ಇವರೆಲ್ಲ ನಾಗ ಐತಾಳರ ನೇತೃತ್ವದಲ್ಲಿ ಹಗಲಿರಳೂ ದುಡಿದು ಈ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದು, ಸಪ್ತಸಾಗರದ ಆ ನಾಡಲ್ಲಿ ನಾಗಐತಾಳರ ಕನ್ನಡದ ಕಹಳೆಗೆ ಸಾಕ್ಷಿಯಾಯಿತು.

ಇವರ ಶಿಕ್ಷಣವೆಲ್ಲಾ ಸಂಪೂರ್ಣ ಇಂಗ್ಲಿಷ್ ಮಯವಾದರೂ, ತಮ್ಮ 37ನೇಯ ವಯಸ್ಸಿಗೆ ವಿದೇಶಕ್ಕೆ ಬಂದು ನೆಲೆಸಿದರೂ ಇವರ ಕನ್ನಡ ಪ್ರೀತಿ ಎಂದಿಗೂ ಕಡಿಮೆಯಾಗಲಿಲ್ಲ. ಬಹುಶಃ  ಡಾ.ಶಿವರಾಮ ಕಾರಂತರ   ಕೋಟದ  ಮಣ್ಣಿನ  ಸೆಳೆತವೇ   ಹೀಗಿತ್ತೋ ಏನೋ!” ಬದುಕಿನಲ್ಲಿ ನಡೆದ, ಕಂಡುಂಡ  ಅನೇಕ  ಸಂಗತಿಗಳು  ನೆನಪಿನಿಂದ  ಜಾರುವುದು ಸ್ವಾಭಾವಿಕವೇ. ಅವುಗಳಲ್ಲಿ ಕೆಲವು  ಮಾಸಿ ದ್ದರೂ, ಅವುಗಳನ್ನು  ನೆನಪಿನಾಳದಿಂದ ಅಗೆದು ದಾಖಲಿಸುವದು ಅತೀಅವಶ್ಯಕ, ಇದಕಾಗಿಯೇ ನಾನು ಬರಹಗಾರನಾದೆ” ಎನ್ನುವ ನಾಗ್ ಕನ್ನಡ ಸಾಹಿತ್ಯ ಕಣಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವರು.

 1)ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ (ಅಮೇರಿಕದ ಅನುಭವ ಕಥನ). 2)ಕಾದೇಇರುವಳುರಾಧೆ. (ಕಿರುಕಾದಂಬರಿ).  3)ಒಂದಾನೊಂದುಕಾಲ ದಲ್ಲಿ(ಕಟ್ಟುಕಥೆಗಳ ಸಂಗ್ರಹ).4)ಕಲಬೆರಕೆ (ಪ್ರಬಂಧ ಸಂಕಲನ). 5)ದೂರತೀರದಿಂದ ಹರಿದುಬಂದಕತೆಗಳು(ಕಥಾಸಂಕಲನ). 6)ಜೀವನ ರಹಸ್ಯ (ವೈಜ್ಞಾನಿಕಗ್ರಂಥ), 7)ತಲೆಮಾರಸೆಲೆ (ಕಾದಂಬರಿ). 8)ಅಮೇರಿಕದಲ್ಲಿ ಕಂಡಕನಸು‌ ಕಟ್ಟಿದ ನೆನಪು(ಅನುಭವ ಕಥನ). 9)ಸಾಹಿತ್ಯ ಸ್ಪಂದನ(ವಿಮರ್ಶಾಲೇಖನಗಳು). 10)ಸ್ಮರಣೆಸಾಲದೇ(ಕೆಲವು ನೆನಪುಗಳು). ಇವುಗಳು ಪ್ರಕಟಿತ ಕೃತಿಗಳಾದರೆ  ಸುಮಾರು  ಹತ್ತಕ್ಕೂ ಹೆಚ್ಚು ಸಂಪಾದಿತ  ಪುಸ್ತಕಗಳನ್ನು ಹೊರತಂದಿರುವರು. ಇದಕ್ಕೂ ಹೊರತಾಗಿ ತಮ್ಮ ವೃತ್ತಿ ಜೀವನ ದಲ್ಲಿ 42ಕ್ಕೂಮಿಕ್ಕಿ ಸಂಶೋಧನ ಪ್ರಬಂಧ ಗಳನ್ನು ವಿವಿಧ ಅಂತರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಿರುತ್ತಾರೆ.

ತನ್ನ 28 ನೇಯ ವಯಸ್ಸಿನಲ್ಲಿ ಸಹಧರ್ಮಿಣಿಯಾಗಿ  ಬಂದು  ಇಂದಿಗೂ  ಬದುಕಿನಾಸರೆಯಾಗಿನಿಂತ ತಮ್ಮ ಲಕ್ಷ್ಮಿ ಯನ್ನು ನೆನೆಯುತ್ತಾ”ನನ್ನಬದುಕು ರೂಪು ಗೊಳ್ಳಲು, ಅವಳಸ್ಥಾನ ವಿಶಿಷ್ಟವಾದು” ಎನ್ನುವಾಗ ಭಾವುಕವಾದ ಪ್ರಪಂಚವೇ  ನಮ್ಮೆದಿರು  ನಿಲ್ಲುವದು.ಆ ನೆಲದಲ್ಲೇ  ನೆಲೆಸಿದ  ನಮ್ಮ ಮಗಳು ಕಾವ್ಯಾ, ಈ ಹಿರಿಯ ಜೀವವನ್ನು ಕಂಡಾಗ, ಅವರು  ಮಾತನಾಡಿಸುವ ಪರಿಯನ್ನು ನೆನೆದು ನನ್ನ “ಕಡಮೆಯ ಅಜ್ಜ” ಇನ್ನೂ ಇಲ್ಲೇ ಜೀವಂತವಾಗಿರುವರು ಎಂದಾಗ ನಾನೂ ಕ್ಷಣ ಭಾವುಕನಾದೆ.

ಈಗಲೂ ತಮ್ಮ ತಾಯ್ನೆಲದ ಪ್ರೀತಿಯ ಎಂಬತ್ತೆಂಟರ ನಾಗ ಐತಾಳರಿಗೆ ಬರೆಯುವ ಒಲವಿದೆ; ಛಲವಿದೆ. ಭಾಷೆಯ ಪ್ರೌಢಿಮೆ ಸೊಗಸಾಗಿದೆ.ಅವರ ಬರಹದಲ್ಲಿ ಉಕ್ಕುವ ಹಾಸ್ಯ, ಜೀವನೋತ್ಸಾಹ, ಗ್ರಾಮೀಣ ಶಬ್ಧಭಂಡಾರ, ಅವರ ನೆನಪಿನ ಶಕ್ತಿ, ಮನುಷ್ಯ ಸಂಬಂಧದ ಆ ಹೊಳೆವ ಕಂಗಳು ನಮಗೆ ಬೆರಗು ಹುಟ್ಟಿಸುತ್ತದೆ. ಸರ್, ತಮ್ಮ ಬದುಕು ಬರಹಕೆ ಅಭಿನಂದಿಸುತ್ತಾ ನೂರ್ಕಾಲ ಬಾಳಿ ಎಂದು ಹಾರೈಸುವೆ.

                      🔆🔆🔆
✍️ಪ್ರಕಾಶ ಕಡಮೆ ನಾಗಸುಧೆ,        ಹುಬ್ಬಳ್ಳಿ