ಕೆಲವು ಸಂದರ್ಭಗಳೇ ಹಾಗೆ ‘ವರದಾನವ ವೂ’ ‘ಶಾಪವಾಗುವ’ಸಮಯವನ್ನು ಹೊತ್ತು ತರುತ್ತವೆ.
ನಿಸ್ವಾರ್ಥದಿಂದ ಮಾಡಿದ ಕಾರ್ಯವಾಗಲಿ, ಸೇವೆಯಾಗಲಿ ಯಾರದೋ ಮನಸ್ಸನ್ನು ಪ್ರಸನ್ನಗೊಳಿಸಿದಾಗ, ಉಡುಗೊರೆ, ಕಾಣಿಕೆ, ಬಹುಮಾನ,ಪ್ರಶಸ್ತಿ-ಫಲಕ,ದಾನ-ದತ್ತಿ ಮುಂತಾದ ರೂಪಗಳಿಂದ ಪ್ರಶಂಸಿಸಲ್ಪಡು ತ್ತದೆ.
ಹಿಂದಿನ ಕಾಲದಲ್ಲೆಲ್ಲಾ ರಾಜ-ಮಹಾರಾಜರು ಗಳನ್ನು ಹೊರತುಪಡಿಸಿ ಋಷಿ-ಮುನಿಗಳು ಸಹ ಏಕಾಗ್ರತೆ, ಸಂಯಮತೆ,ಕಠೋರ ವ್ರತ ಪಾಲನೆ, ಸುಧೀರ್ಘ ತಪಸ್ಸುಗಳ ಫಲಶ್ರುತಿ ಯಾಗಿ ವರವನ್ನು ಅನುಗ್ರಹಿಸುವ ಜೊತೆಗೆ ಶಾಪವನ್ನು ಅನುಗ್ರಹಿಸುವ (ಶಾಪಾನುಗ್ರಹ) ಸಾಮಥ್ರ್ಯವನ್ನು ಹೊಂದಿದವರಾಗಿದ್ದರು. ಜೀವಿತಾವಧಿಯವರೆಗೆ ಅವರು ಸಾಧಿಸಿದ ಸಾಧನೆ-ಸಿದ್ಧಿಯ ಫಲವಾಗಿ ಅವರ ಮುಖ ದಲ್ಲಿ ಪ್ರಖರವಾದ ಕಾಂತಿ ತೇಜಸ್ಸುಗಳು ಕಂಗೊಳಿಸುತ್ತಿದ್ದವು. ಅವರ ಮಾತಿನಲ್ಲಿ ದೃಢತೆ ಇರುತ್ತಿತ್ತು. ನೋಟದಲ್ಲಿ ತೀಕ್ಷಣತೆ ಯೊಂದಿಗೆ ದಿವ್ಯ ದೃಷ್ಟಿಯೂ ನೆಲೆಯೂರಿ ರುತ್ತಿತ್ತು. ಇದರೊಂದಿಗೆ ಪ್ರಸನ್ನಗೊಂಡರೆ ‘ವರದಾನ’ ನೀಡುವ ಕೋಪಗೊಂಡರೆ ‘ಶಾಪ’ ನೀಡುವ ಶಕ್ತಿಗಳು ಸಿದ್ಧಿಸಿದ್ದವು. ಇವೆಲ್ಲ ಕಾರಣಗಳಿಂದಲೇ ಇರಬಹುದು ಅಂದಿನ ಕಾಲದ ರಾಜ-ಮಹಾರಾಜರೆಲ್ಲಾ ಋಷಿ-ಮುನಿಗಳನ್ನು ಭಕ್ತಿ ಗೌರವಾದರಗ ಳಿಂದ ಉಪಚರಿಸುತ್ತಿದ್ದರು. ಅವರನ್ನು ಪ್ರಸನ್ನರನ್ನಾಗಿಸಿ ‘ವರ’ ಪಡೆದುಕೊಂಡ ರಾಜ ರುಗಳಂತೆ,ಅವರ ಕೋಪಕ್ಕೆ ತುತ್ತಾಗಿ ಶಪಿಸಿ ಕೊಂಡವರೂ ಇದ್ದಾರೆ. ಇಂತಹ ಕಥೆಗಳನ್ನು ಪ್ರಾಚೀನ ಮಹಾಕಾವ್ಯ, ಕೃತಿಗಳಿಂದ ತಿಳಿದು ಕೊಂಡಿದ್ದೇವೆ.
ಶ್ರೇಷ್ಠ ಮನೆತನದಲ್ಲೇ ಜನಿಸಿ,ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿದ್ದ ‘ಕುಂತಿ’ ಶ್ರೇಷ್ಠ ಮುನಿಗಳಿಂದ ಅಂತಹ ಅನುಪಮವಾದ ವರದಾನ ಪಡೆದುಕೊಂಡರೂ ಸಮಯ ಸಂದರ್ಭ,ಅಸಹಾಯಕತೆ,ಭಯಮುಂತಾದ ಕಾರಣಗಳಿಂದ ಬದುಕಿನುದ್ದಕ್ಕೂ ‘ಶಾಪಗ್ರ ಸ್ಥಳಂತೆ’ ತಾಯ್ತತನವನ್ನೇ ಕೊಂದು – ಕೊಂಡು ಬದುಕಿದ ದುರಂತ ತಾಯಿಯಾಗಿ ಕಾಣಿಸಿಕೊಳ್ಳುತ್ತಾಳೆ.
ಹೌದು ಕುಂತಿಯ ಬದುಕಿನಲ್ಲಿ ದುರ್ವಾಸ ಮುನಿಗಳಿಂದ ದೊರೆತ ‘ವರ’ವೂ ಶಾಪವಾಗಿ ಪರಿವರ್ತನೆಯಾದದ್ದು ದುರಂತ. ಹೆಣ್ತನದ ಅಪಾರವಾದ ನೋವು,ವೇದನೆಗಳನ್ನು ಕುಂತಿ ಅನುಭವಿಸುತ್ತಲೇ ದಿವ್ಯ ತೇಜಸ್ಸಿನಿಂದ ಕಂಗೊಳಿಸುವ ಅಪರೂಪದಲ್ಲೇ ಅಪರೂ- ಪವಾದ ಗರ್ಭಸಂಜಾತ ಶಿಶುವನ್ನು ಗಂಗೆಯ ಪಾಲು ಮಾಡುತ್ತಾಳೆ.ಮಾತೃತ್ವ ಕಲ್ಲೆದೆಯಾ ಗುವಂತೆ ರೂಪಿಸಿದ್ದು ಕೂಡಾ ಆ ಕಾಲದ ಸಾಮಾಜಿಕವ್ಯವಸ್ಥೆಯೇ, ವಿವಾಹಪೂರ್ವ- ದಲ್ಲಿ ಗರ್ಭ ಧರಿಸುವುದು, ಮಗುವನ್ನು ಪಡೆ ಯುವುದು ಆ ಕಾಲದಲ್ಲೂ ಘನಘೋರ ಅಪರಾಧವಾಗಿತ್ತು. ಮನೆತನದ ಮರ್ಯಾದೆ, ಸಾಮಾಜಿಕ ನಿಂದನೆ, ಅಪವಾದ, ನೈತಿಕತೆಯ ಪ್ರಶ್ನೆ ಇವೆಲ್ಲವುಗಳಿಂದ ವಿಹಲ್ವವಾಗುವ ಕುಂತಿ ತನ್ನ ತಾಯ್ತತನವನ್ನೇ ಕೊಂದುಕೊಳ್ಳು ವಷ್ಟರ ಮಟ್ಟಿಗೆ ಕಠೋರವಾಗುತ್ತಾಳೆ.
ದುರ್ವಾಸರ ಸೇವೆಯನ್ನು ನಿಸ್ಪೃಹವಾಗಿ ಮಾಡಿದ್ದಕ್ಕಾಗಿ ಅವರು‚’ಅಥರ್ವಣವೇದ’ದ ಶಿರೋಭಾಗದ ವರವನ್ನು ನೀಡಿರುತ್ತಾರೆ. ಅವರು 5ಮಂತ್ರಗಳ ವರ ನೀಡಿದಾಗ, ಕುಂತಿಗೆ ಮುಂದೊದಗುವ ಭವಿಷ್ಯದ ಕಲ್ಪನೆ ಇರಲಿಲ್ಲ. ಮಂತ್ರ ಜಪಿಸಿ ಯಾವದೇವತೆ ಯನ್ನು ಸ್ಮರಿಸಿಕೊಳ್ಳುವಳೋ ಆ ದೇವತೆ- ಯಿಂದ ಸಂತಾನಭಾಗ್ಯ ಒದಗುವಂತಹ ಮಂತ್ರವದು. ಪರಿಕ್ಷೀಸಲೋ, ಕುತುಹಲಕ್ಕೋ ಒಟ್ಟಿನಲ್ಲಿ ಕುಂತಿ ಕನ್ಯೆಯಾಗಿರುವಾಗಲೇ ಮಂತ್ರಪಠಿಸಿ, ಸೂರ್ಯದೇವನನ್ನು ಆಹ್ವಾನಿಸಿ ಕೊಂಡು ಅನಿರೀಕ್ಷಿತವಾಗಿ ಮಗುವನ್ನು ಪಡೆದಾಗ ಗಡಗಡನೆ ನಡುಗಿ ಹೋಗುತ್ತಾಳೆ. ಮಗುವನ್ನು ಲೋಕಾಪವಾದಕ್ಕೆ ಹೆದರಿಗಂಗೆ ಯಲ್ಲಿ ತೇಲಿಬಿಡುತ್ತಾಳೆ.ಮಗುವಿನ ಭವಿಷ್ಯ ವನ್ನೇ ಬಲಿ ಕೊಟ್ಟುಬಿಡುತ್ತಾಳೆ.ಇದು ತಾಯ್ತ ನಕ್ಕೆ ಎಸಗಿದ ದ್ರೋಹ ಎಂದು ವ್ಯಾಖ್ಯಾನಿಸ ಬಹುದೇ? ತಾಯ್ತನಕ್ಕೆ ಅಷ್ಟೇ ಅಲ್ಲಾ ಇಡೀ ಆ ಮಗುವಿನ ಭವ್ಯಭವಿಷ್ಯಕ್ಕೆ ಕುಂತಿ ಮಾರಕ ವಾಗುತ್ತಾಳೆ. ಈ ಕಾರಣದಿಂದ ಮಾತೃದ್ರೋಹಿ ಯೂ ಆಗುತ್ತಾಳೆ.
ಇಂದು ಎಷ್ಟೋ ಯುವತಿಯರು ತಮ್ಮ ಹೆಣ್ತತನಕ್ಕೆ ಗೌರವ ಕೊಡದೇ ಪ್ರೀತಿ- ಪ್ರೇಮದ ಮೋಸದಬಲೆಗೆ ಒಳಗಾಗಿ ಕ್ಷಣ ಹೊತ್ತಿನ ಆಮಿಷಕ್ಕೊಳಗಾಗಿ ಹೆಣ್ತತನವನ್ನೇ ದುರಂತದ ಅಂಚಿಗೆ ತಳ್ಳುತ್ತಿದ್ದಾರೆ. ಅನೈತಿಕ ಗರ್ಭವನ್ನು ಹೊರಲಾರದೇ ಗರ್ಭಪಾತದ ಮೊರೆಹೋಗಿ ಮಾರಣಾಂತಿಕ ಖಾಯಿಲೆಗಳಿಗೆ ಆಹಾರವಾ ಗುತ್ತಿದ್ದಾರೆ. ಇಲ್ಲವೇ ಅನೈತಿಕ ಸಂತಾನವನ್ನು ಹೆತ್ತು ಯಾವುದೋ ಬೇಲಿಯಂಚಿನಲ್ಲೋ, ತಿಪ್ಪೆ ಗುಂಡಿಯಲ್ಲೋ,ಕಸದ ತೊಟ್ಟಿಯಲ್ಲೋ ಎಸೆದು ತಾಯ್ತತನಕ್ಕೆ ದ್ರೋಹಮಾಡುತ್ತಿದ್ದಾರೆ ಇವರೆಲ್ಲಾ ಆಧುನಿಕ ಕುಂತಿಯರಾಗಿ,ಎಷ್ಟೋ ಸಮರ್ಥರಾದ ಕರ್ಣರನ್ನು ಅನಾಥರನ್ನಾ ಗಿಯೋ, ಸಮಾಜಭ್ರಷ್ಟರನ್ನಾಗಿಯೋ, ಕೀಳರಿ ಮೆಯ ವಾರಸುದಾರರನ್ನಾಗಿಯೋಮಾಡುತ್ತಿ ರುವುದು ಇವತ್ತಿನ ದುರಂತಗಳಲ್ಲಿ ಒಂದಾಗಿದೆ
ವರವನ್ನು ಪರೀಕ್ಷಿಸಲು ಹೋಗಿ ಕುಂತಿ ಒಂದು ಮಗುವಿನ ಭವಿಷ್ಯವನ್ನೇ ವ್ಯವಸ್ಥೆಗೆ ಬಲಿಕೊ ಡುವಂತೆ,ಹುಚ್ಚು ಪ್ರೀತಿ-ಪ್ರೇಮದ ಅಲೆಯಲ್ಲಿ ಕೊಚ್ಚಿ ಹೋಗುತ್ತಿರುವ ಯುವತಿಯರು ಅರೆ ಕ್ಷಣವಾದರೂ ತಮ್ಮಭವಿತವ್ಯವನ್ನು ಯೋಚಿ ಸಿದರೆ ಮುಂಬರುವ ಅಪಾಯವನ್ನು ತಪ್ಪಿಸ ಬಹುದೇನೋ? ಮುಂಬೈನಂತಹ ದೊಡ್ಡ ದೊಡ್ಡ ನಗರಗಳಲ್ಲಿ Single Parent ಮಕ್ಕಳಸಂತತಿ ಹೆಚ್ಚುತ್ತಿವೆ.ತಾಯಿ ಇರುತ್ತಾಳೆ, ತಂದೆ ಯಾರು?ಎಂದು ಗೊತ್ತಿರುವುದಿಲ್ಲ. ಇದು ಇಡೀ ಮಗುವಿನ ಭವಿಷ್ಯಕ್ಕೆ ಕಪ್ಪುಚುಕ್ಕೆ ಯಾಗಿಬಿಡುತ್ತದೆ. ಇದು ಆರೋಗ್ಯಪೂರ್ಣ ಸಮಾಜಕ್ಕೆ ಹಾನಿಕಾರಕ.
ಬಿ.ಎಂ.ಶ್ರೀಯವರು ಇಂಗ್ಲೀಷ್‍ನ ಹುಡ್ ಕವಿ ಬರೆದ “Bridge of Sighs”ಕಾವ್ಯವನ್ನ ‘ದುಃಖಸೇತು’ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡಕ್ಕೆ ಅನುವಾದಿಸಿದಾಗ ಅಲ್ಲಿ ಅತ್ಯಾಚಾ ರಕ್ಕೆ ಒಳಗಾದ ಮಹಿಳೆಯ ದಾರುಣಸಾವನ್ನು ಸಾಮಾಜಿಕ ವ್ಯವಸ್ಥೆ, ಕಾಮುಕತನದ ಅಡಿ ಯಲ್ಲಿ ವಿವೇಚಿಸುವ ಪ್ರಯತ್ನ ಮಾಡಿದ್ದಾರೆ.
ಮಹಾಭಾರತದ ಕುಂತಿ ಅಂತಹ ಅಚಾತು ರ್ಯಗಳನ್ನು ಮಾಡುತ್ತಲೇ ಹೋಗುತ್ತಾಳೆ. ಒಂದು ತಪ್ಪನ್ನು ಮುಚ್ಚಲು ಸಾವಿರಸುಳ್ಳುಗಳ ಸುಂದರ ಬಲೆಯನ್ನೇ ನೇಯಬೇಕಾಗುತ್ತದೆ. ಹಾಗೆಯೇ ಇಡೀ ಮಹಾಭಾರತದಲ್ಲಿ ಇಂತಹ ಅಸತ್ಯದ ಸುಂದರ ಬಲೆಗಳು ಸೃಷ್ಟಿಯಾಗಿ ದ್ದನ್ನು ನಾವು ಕಾಣುತ್ತೇವೆ.
ವಿವಾಹ ಪೂರ್ವದಲ್ಲಿ ಪಡೆದ ಮಗುವಿನ ವೃತ್ತಾಂತವನ್ನು ಮುಚ್ಚಿಟ್ಟು, ಪಾಂಡುವಿನ ಮಡದಿಯಾಗಿ ಹೋದಾಗಲೂ ಇಬ್ಬಂದಿತನ ದಲ್ಲಿ ಕುಂತಿ ನಲುಗುತ್ತಾಳೆ.ಸತಿತನದ ಪರಿಪಾ ಲನೆಯಲ್ಲೂ ವಿಚಲಿತಳಾಗಿ ಆತ್ಮಸಾಕ್ಷಿಯನ್ನು ಕೊಂದುಕೊಂಡು ರಾಜಮನೆತನದ ರೀತಿ- ರೀವಾಜುಗಳಂತೆ ಬದುಕುವ ಅನಿವಾರ್ಯ ತೆಗೆ ಒಳಗಾಗುತ್ತಾಳೆ. ತನ್ನ ತಪ್ಪಿನಿಂದಾಗಿ ಕರ್ಣ (ವಿವಾಹ ಪೂರ್ವದಲ್ಲಿ ಸೂರ್ಯ ದೇವನ ಪ್ರಸಾದದಿಂದ ಜನಿಸಿದ ಮಗು) ಜಾತಿ-ಅಂತಸ್ತುಗಳಿಂದ ಅವಳ ಕಣ್ಣೆದುರಿಗೇ ಅವಮಾನಿತನಾಗುತ್ತಿದ್ದರೂ ನೋಡಿಕೊಂಡು ಸುಮ್ಮನೇ ಇರಬೇಕಾದ ಅಸಹಾಯಕತೆಗೆ ಒಳಗಾಗುತ್ತಾಳೆ. ಪಂಚ ಪಾಂಡವರಿಗೆ ಸತ್ಯ ಮುಚಿಟ್ಟ ಕಾರಣ ಕುರುಕ್ಷೇತ್ರ ಯುದ್ಧ ಸಂಭವಿಸುವಾಗ ಪಾಂಡವರ ಸಾವು,ಬದುಕು ಗಳಿಗೆ ಚಿಂತಿಸುವಂತೆ ಕರ್ಣನ ಸಾವು-ಬದುಕು ಗಳನ್ನು ಚಿಂತಿಸಿದರೂ, ರಾಜಕೀಯ ನೀತಿಗೆ ಕೃಷ್ಣನಂತಹ ರಾಜಕೀಯ ನಿಪುಣನಿಂದ ತಾಯ್ತನವನ್ನು ರಾಜಕೀಯ ದಾಳವಾಗಿ ನೀಡಲು ಒಪ್ಪುವ ಅನಿವಾರ್ಯ ಸ್ಥಿತಿಗೆ ಬಂದು ನಿಲ್ಲುತ್ತಾಳೆ.
ಪಾಂಡವರ ಪಕ್ಷಕ್ಕೆ ಕರ್ಣನನ್ನು ಕರೆತರುವಲ್ಲಿ ಸ್ವತಃ ಕೃಷ್ಣ ವಿಫಲನಾದಾಗ, ಅವನು ತನ್ನ ಉದ್ದೇಶದ ಸಫಲತೆಗೆ ಬಳಸಿಕೊಳ್ಳುವುದು ಕುಂತಿಯ ತಾಯ್ತನವನ್ನು.ಅಧಿಕಾರದದಾಹಕ್ಕೆ ಕುಂತಿ ತನ್ನ ತಾಯ್ತನವನ್ನೇ ಬಲಿ ಕೊಡಬೇಕಾ ಗುತ್ತದೆ. ಕೃಷ್ಣನ ರಾಜತಂತ್ರಕ್ಕೆ ಸಿಲುಕಿ ಪಾಂಡವರ ಪ್ರಾಣ ಭಿಕ್ಷೆಗಾಗಿ ಇನ್ನೊಬ್ಬ ಮಗನ (ಕರ್ಣ) ಹತ್ತಿರ ಕೈಯೊಡ್ಡಿ ನಿಲ್ಲುವ ಸಂದಿಗ್ಧತೆಗೆ ಒಳಗಾಗು ತ್ತಾಳೆ.ಕರ್ಣನ ಮೇಲಿನ ಮಮತೆ ಒಂದೆಡೆ, ಪಾಂಡವರ ಪ್ರಾಣ ಇನ್ನೊಂದೆಡೆ,ಕೊನೆಗೂ ತನ್ನತಪ್ಪಿನಿಂದ ಹುಟ್ಟಿದ ಕರ್ಣನನ್ನೇ ಕುಂತಿ ಬಲಿ ತೆಗೆದುಕೊ ಳ್ಳುತ್ತಾಳೆ. ಪಾಂಡವರ ಪ್ರಾಣಭಿಕ್ಷೆ ಬೇಡಿ ತನ್ನ ಎದುರು ದೀನಳಂತೆ ನಿಂತ ತಾಯಿಗೆ ಕರ್ಣ:
ಪಿಡೆಯೇ ಪುರಗಣೆಯಂ ನರ| ನೆಡೆಗೊಂಡೊಡಮುಳಿದ ನಿನ್ನ ಮಕ್ಕಳ ನಿನ್ನೇ || ರ್ದೊಡಮಳಿಯೆಂ ಪೆರ್ಜಸಮನೆ| ಪಿಡಿದೆನ್ನನೆ ರಣದೊಳರಿವೆನಿರದಡಿ ಯೆತ್ತಿಂ|| (ಪಂ.ಭಾ.9ನೇ ಆ)
ಎಂದು ಕಠೋರವಾಗಿ ನಿಷ್ಟುರವಾಗಿ ನುಡಿ ಯುತ್ತಾನೆ.ನಾನು ದಿವ್ಯಾಸ್ತ್ರ ಹಿಡಿಯುವುದಿಲ್ಲ, ಅರ್ಜುನನ್ನು ಹೊರತುಪಡಿಸಿ ಉಳಿದವರ ಪ್ರಾಣಕ್ಕೆ ಹಾನಿ ಮಾಡುವುದಿಲ್ಲ. ರಣರಂಗ – ದಲ್ಲಿ ನನ್ನನ್ನೇ ನಾನು ಬಲಿಕೊಡುತ್ತೇನೆ. ನಿಮಗಿಷ್ಟೇ ಬೇಕಿತ್ತಲ್ಲವೇ? ಈ ಅಭಯ ನೀಡಿದ್ದೇನೆ. ಇನ್ನು ನನ್ನ ಮುಂದೆ ನಿಲ್ಲದೆ ಹೆಜ್ಜೆ ಎತ್ತಿ ನಡೆಯಿರಿ ಎಂದು ಹೆತ್ತಮಗ ನಿಂದಲೇ ವ್ಯಂಗಕ್ಕೆ ಒಳಗಾಗುವ ದುರಂತ ಕುಂತಿಗೆ ಒದಗಿದ್ದು ಅವಳ ಒಂದು ತಪ್ಪಿನಿಂದ.
ಕುವೆಂಪುರವರ “ಶ್ಮಶಾನ ಕುರುಕ್ಷೇತ್ರಂ” ನಾಟಕದ ಏಳನೇಯ ದೃಶ್ಯದಲ್ಲಿ ಸ್ವತಃ ಕುಂತಿ ತನ್ನ ತಪ್ಪನ್ನು ತಾನೇ ಒಪ್ಪಿಕೊಳ್ಳುತ್ತಾಳೆ. ಕುವೆಂಪುರವರು ಮಾತೆ ಕುಂತಿಯನ್ನು ಪಶ್ಚಾ ತ್ತಾಪದ ಅಗ್ನಿಯಲ್ಲಿ ಕರಗಿಸಿ ಚೊಕ್ಕಚಿನ್ನವಾಗಿ ಸಿದ್ದಾರೆ.ತನ್ನ ತಪ್ಪಿನಿಂದಾದ ಮಗ ಕರ್ಣನ ದುರಂತ ಸಾವಿಗೆ ತಾನೇ ಕಾರಣಳು ಎಂಬ ಸತ್ಯವನ್ನುಕುಂತಿ ಒಪ್ಪಿಕೊಳ್ಳುತ್ತಾಳೆ.ದುರ್ವಾಸ ಮುನಿಗಳ ವರ ಶಾಪವಾದದ್ದನ್ನು ಗ್ರಹಿಸಿಕೊ ಳ್ಳುತ್ತಾಳೆ.ರಣರಂಗದಲ್ಲಿಸತ್ತ ಕರ್ಣನ ಮುಂದೆ ಹೀಗೆ ದುಃಖಿಸುತ್ತಾಳೆ:ಹೆತ್ತ ಹೊಳೆಗಿತ್ತ ನಿನ್ನನ್ ಸತ್ತ ಸುಡಿಗಾಡಿನೊಳ್ ಮತ್ತೆ ಮುದ್ದಿಪಂತಾ ಯ್ತೆ?ಕನ್ನೆತನದಾ ಲೀಲೆ ಕಣ್ಣನಿರಿವಂತಾಯ್ತು. ನಿನ್ನನೀ ಪಾಡಿ ಗೀಡುಮಾಡಿದ ಪಾಪಿಯನ್ ಮನ್ನಿಸೈ “.(ಶ್ಮಕು.) “ಓ ದುರ್ವಾಸರ, ನೀನಿತ್ತ ವರಂ ಪೆತ್ತಪಣ್ಣನಿದನೀಕ್ಷಿಯ್ “ ಎಂದು ದುರ್ವಾಸರನ್ನು ದೂರುತ್ತಾಳೆ.
“ಓ ಕಂದಾ, ನಿನ್ನ ಮಿತ್ರನ್ ಕೌರವೇಂದ್ರ ನಲ್ತು ನಾನೆ ಕಾರಣಮಲ್ತೆ ಈ ಮಾರಿ ಯೌತಣಕೆ” ಎಂದು ತನ್ನನ್ನು ಹಳಿದುಕೊ ಳ್ಳುವ ಕುಂತಿ ಮುಂದುವರೆದು, ಗಂಗಾಮಾತೆ ಯನ್ನು ಉದ್ದೇಶಿಸಿ: “ಓ ಗಂಗಾಮಾತೆ, ನಿರ್ಮಲಾಂತಃಕರಣೆ, ನಾನಂದು ನಿನಗೆ ಕೈಯಡೆಯಿತ್ತ ಕಂದನನ್ ಇಂದು ಬಾರಾ, ಬಾರಾ ನೋಡಾ, ಇಲ್ಲಿ ಏನಾಗಿರ್ಪನ್! ಪಾಪಿಷ್ಠೆ ಪೆತ್ತೀತನಂ ಅಂದು ನೀನ್ ಪೊರೆದೆ’ ಎಂದು ತನ್ನನ್ನು ‘ಪಾಪಿಷ್ಠೆ’ ಎಂದು ಶಪಿಸಿ ಕೊಳ್ಳುತ್ತಾಳೆ. ಮಗೂ, ಮಗೂ ನಾಂಗೈದ ಮೊದಲ ತಪ್ಪಿಗೆ ಬಿದಿ ನಿನ್ನನೇತರ್ಕೆ ಬೇಳು ದ್ದಿಂತು? ಎನ್ನ ಪಾಪಕೆ ನಿನ್ನ ಜೀವನಂ ಬಲಿಯಾಯ್ತೆ? ಎಂದು ಆಗ ತನ್ನ ಪಾಪದರಿ ವನ್ನು ಕುಂತಿ ಮಾಡಿಕೊಸ್ಳುತ್ತಾಸೆ.“ಓ ಕಂದಾ ನೀನಂದು ಹಸ್ತಿನಾವತಿಯಲ್ಲಿ ಪಾಂಡವರ- ಕೌರವರ ಬಿಲ್ವಿದ್ಯೆ ಪರೀಕ್ಷೆಯಲ್ಲಿ ನಿನ್ನ ಕೈಚಳಕ ತೋರಿಸಿದಾಗ ನಾನು ಹರುಷಪಟ್ಟಿದ್ದೆ. ಆಗಲೂ ನನ್ನ ತಪ್ಪನ್ನು ನೆನೆದು ನಡುಗಿದೆನು.” “ನೆರೆದ ಬೀರರ್ ನಿನ್ನನ್ ಸೂತಕುಲದವ- ನೆಂದು ತೆಗೆಳೆ,ನೀನ್ ಮೊಗಮನಿಳಿಕೆಗೈದಯ್ ಅಗಳುದೊಡಮಾನ್ ನನ್ನಿಯಂ ಪೊರಗೆ ಡಪಿ ಮರಳಿ ನಿನ್ನನ್ ಪಡೆಯಬಹುದಿತ್ತು. ಆದೊಡಂ, ಜನಪದದಪವಾದಂ ಬರ್ಕುಂ ಎಂಬ ಪುಸಿನಾಣಿಂ ಎರ್ದೆಯೊಳುರ್ಕಿದ ಮಗುವಿ ನಳ್ಕರಂ ಮಳ್ಗಿಸಿದೆನ್! ಅಳಿಸಿದೆನ್!” ಅಯ್ಯೋ ನಿನ್ನ ಬಾಳನಳಿಸಿದೆನ್!” ಎಂದು ಕರ್ಣನ ಬಾಳಿನ ನಾಶಕ್ಕೆ ತಾನೇ ಕಾರಣ ಎಂಬ ಸತ್ಯವನ್ನು ಕುಂತಿ ಒಪ್ಪಿಕೊಳ್ಳುತ್ತಾಳೆ.
ಕುಂತಿ ಕೃಷ್ಣನ ತಂತ್ರವನ್ನು ಸಹ ದೂಷಿಸು ತ್ತಾಳೆ.ಒಬ್ಬ ತಾಯಿಯ ತಾಯ್ತನದ ಆಹುತಿಗೆ ಇಡೀಸನ್ನಿವೇಶ ಸಜ್ಜಾಗುವುದನ್ನು ಇಲ್ಲಿ ಗಮ ನಿಸಬಹುದು. “ಓ ಕೃಷ್ಣ, ನಿನ್ನ ನುಡಿಯನ್ ಕೇಳ್ದು ಕೆಟ್ಟೆನ್! ನನ್ನ ಮಗುವನ್ ನಾನೇ ಸುಲಿದು ಕೊಂದೆನಲ್ತೆ! ಅಯ್ಯೋ ನಿನ್ನಾಣತಿ ಯನೆ ಸಗಲೆಂದುಜ್ಜುಗಿಸಿ “ತೊಟ್ಟ ಸರಳನ್ ಮರಸಿ ತೊಡದಿರ್” ಎಂದು ಸೂರುಳಂಗೈ ವಂತೆ ಮಾಡಿದೆನ್! ನನ್ನ ಮಗುವನ್ ನಾನೆ ಮಿಳ್ತುವಿಗೀಡು ಮಾಡಿದೆನ್! ಓ ಬಿದಿಯೆ, ಸುಡು ಎನ್ನ ತಾಯ್ತನಮಂ!” ಎಂದು ಕುಂತಿ ಪ್ರಲಾಪಿಸುತ್ತಾಳೆ.
ಕುಂತಿಯು ಮಾಡಿದ ಒಂದು ತಪ್ಪು ಅವಳ ತಾಯ್ತನಕ್ಕೆ ಪ್ರಶ್ನೆಯಾಗಿ ಕಾಡುತ್ತದೆ.ಕುವೆಂಪು ರವರ ಶ್ಮಶಾನ ಕುರುಕ್ಷೇತ್ರದಲ್ಲಿ ‘ಕುಂತಿ’ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿ ಕೊಳ್ಳುತ್ತಾಳೆ. ಹೆಣ್ತನ,ತಾಯ್ತನ ಗೌರವಕ್ಕೆ ಭಾಜನವಾಗುವ ಅಂಶಗಳು.ದೇವರು ಪುರುಷನಿಗೂ ಕೊಡಲಾ ರದ ಅಪರೂಪದ ಕಾಣಿಕೆಯನ್ನು ವರವನ್ನು ತಾಯ್ತನದ ರೂಪದಲ್ಲಿ ಮಹಿಳೆಗೆ ನೀಡಿದ್ದಾನೆ. ಒಂಭತ್ತು ತಿಂಗಳು ತನ್ನ ಗರ್ಭಗುಡಿಯಲ್ಲಿ ಒಂದು ಪ್ರತಿಜೀವವನ್ನು ಪೋಷಿಸಿ ಜೀವ ಜಗತ್ತಿಗೆ ತರುವ ತಾಯಿಯ ಕೆಲಸ ಸುಲಭ ದ್ದಲ್ಲ. ಆಧುನಿಕತೆಯ ಭರಾಟೆಯಲ್ಲಿ ಹೆಣ್ತನ ಕಳೆದುಹೋಗುತ್ತಿದೆ, ಮಾರಾಟವಾಗುತ್ತಿದೆ. ಬಾಡಿಗೆ ತಾಯಂದಿರ ವ್ಯಾಪಾರ ದೃಷ್ಟಿ ತಾಯ್ತನಕ್ಕೆ ಪ್ರಶ್ನೆ ಮಾಡುತ್ತಿದೆ. ರೋಗ ನಿರೋಧಕ ಶಕ್ತಿ ನೀಡುವ ಉತ್ತಮ ಆಹಾರ ವನ್ನು ಎದೆಹಾಲಿನಿಂದ ಮಗುವಿಗುಣಿಸುವ, ನೀಡುವ ಶಕ್ತಿಯನ್ನು ಆ ಮಾತೆಗೆ ಮಾತ್ರ ದೇವರು ಕರುಣಿಸಿದ ಅಧ್ಭುತವಾದ ವರ. ಅಂತಹ ‘ವರದಾನ’ ಅಚಾತುರ್ಯದಿಂದ ಆಧುನಿಕ ಮಹಿಳೆಗೆ ಶಾಪವಾಗಿ ಪರಿಣಮಿಸ ಬಾರದಲ್ಲವೇ? ಕುಂತಿಯಿಂದಾದ ತಪ್ಪು ಸ್ತ್ರೀಕುಲಕ್ಕೆ ಪಾಠವಾಗ- ಬೇಕಿದೆಯಲ್ಲವೇ? ಕ್ಷಣಿಕ ಸುಖಕ್ಕಾಗಿ ಹೆಣ್ತನ, ತಾಯ್ತನ ಮೌಲ್ಯ ದಿಂದ ಜಾರಬಾರದಲ್ಲವೇ? ಅಚಾತುರ್ಯ ದಿಂದ ಭುವಿಗೆ ಬಂದ ಸಂತಾನಗಳು ನೋಯ ಬಾರದಲ್ಲವೇ?
✍️ಡಾ.ಪುಷ್ಪಾವತಿ ಶಲವಡಿಮಠ. ಮುಖ್ಯಸ್ಥರು,ಕನ್ನಡವಿಭಾಗ ಶ್ರೀಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಹುಕ್ಕೇರಿಮಠ, ಹಾವೇರಿ –581110.