ನೀನಂದು ಎದುರ ನಿಂತ ಗಳಿಗೆಯಲಿ
ಬಂದ ಬೆಳಕಿನ ಹೆಸರೇನು?
ಮಿಂಚು ತೆನೆಗಳು ಒಳಗಿಳಿಯುತ್ತ
ಕತ್ತಲ ಮಿಡತೆಯೊಂದು
ಪಟಕ್ಕನೆ ಸರಿದು
ಹೋಯಿತಲ್ಲ
ಯಾಕಿರಬಹುದು?
ಗದ್ದೆ ಬದುವಿನ ಹಾದಿಯಲಿ
ಬಿದ್ದ ಹಸಿರೊಂದು
ಸುಖಾಸುಮ್ಮಗೆ
ಹಾರಿ ನನ್ನ ಅಂಟಿಕೊಂಡಿತಲ್ಲ
ಏನು ಕಾರಣ?
ಎಲ್ಲಿಯೋ ಹಾರುತ್ತಿದ್ದ ಹಾಡು.
ಅಲೆಯುತ್ತಿದ್ದ ಕನಸು
ದಿಕ್ಕು ಬದಲಿಸಿ
ಪುಟಿದು ತಬ್ಬಿದವಲ್ಲ
ಯಾವ ಸೂಚನೆಯದು?
ಅಕ್ಷಿ ಪಟಲದ ಬಡಿತ
ಸಾವ ಸೆಳೆತ ಬಿಗಿದ ಕೊರಳ
ತುಂಬೆಲ್ಲ ಜೀವ ಜೀಕುವ
ಜಿಗಿತ
ನಿಜ ಹೇಳು ನೀನೆ ತಾನೇ
ನನ್ನ ಮಧುಸೂದನ?
✍️ದೀಪ್ತಿ ಭದ್ರಾವತಿ