ಜಗದ ಕವಿ ಯುಗದ ಕವಿ ಎಂದು ಬೇಂದ್ರೆ ಯವರಿಂದ ಹೊಗಳಿಸಿಕೊಂಡ ರಸಋಷಿ ಕುವೆಂಪು ಅವರ ಪಕ್ಷಿಕಾಶಿ ಕವನದ ಹದಿನೈ ದನೆಯ ಕವನ ಇದು “ದೇವರು ರುಜು ಮಾಡಿದನು.” ಕುವೆಂಪು ಅವರ ಕಾವ್ಯ ವಿಸ್ತಾರದ ಹರವು ಸಾಗರದಂತೆ ವಿಪುಲ ವ್ಯಾಪಕ.ಅವರ ಭಾವಗಳ ಹೊಳಹುಗಳ ಗ್ರಹಣೆ ವಿಶ್ಲೇಷಣೆ ಸುಲಭ ಸಾಧ್ಯವಲ್ಲ.
ಅವರ ಕಲ್ಪನಾ ಶಕ್ತಿಯ ವಿಭಿನ್ನ ನೆಲೆಗಳು ಸಾದೃಶ್ಯಗಳು ವೈರುಧ್ಯಗಳು ಒಂದು ಓದಿಗೆ ಅರ್ಥಗ್ರಾಹ್ಯವೂ ಅಲ್ಲ. ಪ್ರತಿ ಓದಿಗೂ ವಿಭಿನ್ನ ಅರ್ಥ ಕಲ್ಪನೆಗಳನ್ನು ಗರಿಗೆದರಿಸು ತ್ತದೆ. ನನ್ನ ಅಲ್ಪ ಮತಿಗೆ ತೋರಿದ ಒಂದೆರಡು ಅನಿಸಿಕೆಗಳಷ್ಟೇ ಇವು ವಿನಃ ವಿಮರ್ಶೆ ಮಾಡುವಷ್ಟು ಪ್ರಬುದ್ಧಳು ಅಲ್ಲ ಖಂಡಿತ ಆ ಧಾರ್ಷ್ಟ್ಯ ನನಗಿಲ್ಲ .

ಮೊದಲು 2ನೇ ಸಾಲಿನ ಪಲ್ಲವಿಯಲ್ಲಿ ಆರಂಭವಾಗುವ ಕವನ ಷಟ್ಪದಿ ಪಂಚಪದಿ ಹಾಗೂ ಚತುಷ್ಪದಿಗಳಲ್ಲಿ ಮುಂದುವರೆದು ಮತ್ತೆ ಷಟ್ಟದಿಯಲ್ಲಿ ಅಂತ್ಯವಾಗುವುದು ವಿಶೇಷ. ಮೇಲೆ ಹಾರುವ ಬೆಳ್ಳಕ್ಕಿ ಸಾಲು ಕವಿಯ ಕಣ್ಣಿಗೆ ದೇವರ ಹಸ್ತಾಕ್ಷರದಂತೆ ಗೋಚರ! ನಿಜ ರವಿ ಕಾಣದ್ದನ್ನು ಕವಿ ಕಾಣುತ್ತಾನೆ. ಅಂತೆಯೇ ರಸಗ್ರಾಹಯಾದ ಕವಿಯ ಮನದ ಕಲ್ಪನೆ ಸೀಮಾತೀತ.

ಪ್ರಥಮ ಚರಣದಲ್ಲಿ ಕವಿ ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಪರವಶರಾಗಿ ವರ್ಣಿ ಸುವುದು ಹೀಗೆ ಆಕಾಶವನ್ನು ಹಿನ್ನೆಲೆಯಾ ಗಿಸಿ ಗಿರಿಶ್ರೇಣಿಗಳನ್ನು ಸಾಲಾಗಿ ಜೋಡಿಸಿ ದಂತಿದೆ,ಹಸಿರು ಕಾಡಿನ ಮಧ್ಯೆ ತುಂಗೆ ಹರಿ ಯುತ್ತಿರುವವಳು. ನೀಲಾಗಸ, ಉನ್ನತ ಪರ್ವತಗಳು,ಹಸಿರು ಕಾಡು,ಜುಳುಜುಳನೆ ಹರಿವ ನದಿ ಇವುಗಳ ಚಿತ್ರವನ್ನು ರಚಿಸಿದ ಕಲಾವಿದ ದೇವರು ತನ್ನದೇ ಈ ಕೃತಿ ಎಂದು ಹೇಳಲು ಬೆಳ್ಳಕ್ಕಿಯ ಸಾಲಿನ ಮೂಲಕ ತನ್ನ ಸಹಿ ಹಾಕಿದಂತಿದೆ ಎನ್ನುತ್ತಾರೆ. ದೇವ ಚಿತ್ರಕಾರನ ಕುಂಚದಲ್ಲರಳಿದ ಚಿತ್ರ ಈ ಪ್ರಕೃತಿಯ ರಮಣೀಯತೆ ಎನ್ನುತ್ತಾರೆ.

ಮುಂದೆ ವಿಶಾಲ ಕ್ಯಾನ್ವಾಸ್ನಿಂದ ತಮ್ಮ ಸುತ್ತಣ ಪರಿಸರದ ವರ್ಣನೆಗೆ ತೊಡಗುತ್ತಾ ಹರಿಯುವ ನದಿಗೆ ಸಾಕ್ಷಿಯಾದ ಕಾಡು ಮೌನವಾಗಿ ನಿಂತಿರೆ ನೀಲಿಯ ಬಾನು ನಗುತ್ತಿತ್ತು ಎನ್ನುತ್ತಾರೆ.ಎಂತಹ ಸುಂದರ ಕಲ್ಪನೆ!ಆ ನಿರ್ಜನ ಪ್ರದೇಶದ ನಿಶ್ಯಬ್ಧತೆಗೆ ಅಲ್ಲೊಂದು ಇಲ್ಲೊಂದು ಹಕ್ಕಿಯ ಹಾಡು ಕೇಳಿಸಿ ಪುಳಕತರುತ್ತವೆ,ಹಾಗೆಯೇ ಹೊಂಬಿ ಸಿಲಲ್ಲಿ ಬಳುಕುವ ನದಿ ಬಂಡೆಗಳ ಮಧ್ಯೆ ಹರಿದಾಗ ತೊದಲುಲಿಯಂತೆ ಶಬ್ದ ಮಾಡು ತ್ತಾ ಇರುವಾಗ ಇವೆಲ್ಲಕ್ಕೂಶೋಭೆಯಾಗಿದೆ. ದಡದಲ್ಲಿನ ಚಿನ್ನದ ಬಣ್ಣದ ಮರಳು ಎಂದು ವರ್ಣಿಸುತ್ತಾರೆ. ಆ ದೃಶ್ಯ ವೈಭವ ಕಣ್ಣಿಗೆ ಕಟ್ಟುತ್ತದೆ. ಅಲ್ಲದೆ ಇಲ್ಲಿ ನಿರಿವೊನಲು ಪದ ಪ್ರಯೋಗ ತುಂಬಾ ಅಪೂರ್ವ. ಬಂಡೆಗಳ ಮಧ್ಯದಲ್ಲಿ ಸಾಗು ವಾಗ ಜಲಪ್ರವಾಹ ಬಳುಕುವುದು ಸೀರೆಯ ನೆರಿಗೆಗಳು ಅತ್ತಿತ್ತ ಚಿಮ್ಮುವಂತೆ ನೀರಿನ ಹೊನಲು ಚಿಮ್ಮುತ್ತದೆ ಎನ್ನುತ್ತಾರೆ. ಇಂತಹ ಸುಂದರ ಪದ ಸೃಷ್ಟಿ ಪದ ಬೆಸುಗೆಗಳು ಕುವೆಂಪುರವರ ಕಾವ್ಯ ಕಟ್ಟುವಿಕೆಯ ಸುಂದರ ಅಂಶಗಳು.

ಮೇಲೆ ನೀಲಿ ಆಕಾಶ ಕತ್ತೆತ್ತಿದರೆ ಗಿರಿಶೃಂಗ ಮಾಲೆ ಜುಳುಜುಳು ಹರಿವ ಈ ತುಂಗೆ ಇಂತಹ ರಮಣೀಯ ಸಿಬ್ಬಲುಗುಡ್ಡೆ ಕವಿ ಮನಕ್ಕೆ ಸ್ವರ್ಗದಂತೆ ತೋರುವುದು ಅಚ್ಚರಿ ಅಲ್ಲವೇ ಅಲ್ಲ.ಕಣ್ಣಿಗೆ ಗಮನೀಯವಾದದ್ದು ಮನಕ್ಕೆ ಸುಂದರ ಅನುಭೂತಿಯಾಗಿತ್ತು . ಇಲ್ಲಿ ಕವಿವಾಣಿ ಗಮನಿಸಬೇಕು “ಮಧು ಸೌಂದರ್ಯದ ಮಧುರ ಜಗತ್ತು ಹೃದಯ ಜಿಹ್ವೆಗೆ ಜೇನಾಗಿತ್ತು.” ಎಂತಹ ಸಾಲುಗಳು ರಸಾನುಭೂತಿಯನ್ನು ಆತ್ಮಕ್ಕೆ ಸಂವೇದಿ ಸುವ ನುಡಿಗಳು.

ಇಂತಹ ಸನ್ನಿವೇಶದಲ್ಲಿ ದಿಗಂತದ ಆ ಅಂಚಿನಿಂದ ಬಲಾಕ ಪಕ್ಷಿಗಳಸಾಲು ಹಾರಿ ಬಂದಾಗ ಸುಂದರ ವಿನ್ಯಾಸವೊಂದು ಒಡ ಮೂಡಿತ್ತು,ಪದ ಕಾವ್ಯರಚನೆಯಲ್ಲಿ ಸದಾ ಮುಳುಗಿರುವ ಕವಿಮನಸ್ಸಗೆ ಅದು ಅವಾಜ್ಞ್ಮಯ ಛಂದಃ ಪ್ರಾಸ ಎಂದು ತೋರು ತ್ತದೆ.ಕವಿತೆಯ ಛಂದಸ್ಸು ಕಿವಿಗಳಿಗೆಮನೋ ಹರ ಆದರೆ ಛಂದೋಬದ್ಧ ನಿಯಮಿತತೆಯ ಪಕ್ಷಿಸಮೂಹದ ವಿನ್ಯಾಸ ಮಾತಿಗೆ ನಿಲುಕದ ಶಬ್ಧಾತೀತ ಛಂದಃಪ್ರಾಸ ಎನ್ನುತ್ತಾರೆ.

ಕಡೆಯ ಚರಣದಲ್ಲಿ ಸಹಿಯ ಅಗತ್ಯತೆ ವ್ಯಾವಹಾರಿಕ ಜಗತ್ತಿನಲ್ಲಿ ಒಪ್ಪಂದಗಳಲ್ಲಿ ಬಳಕೆಯಾಗುವಂತೆ ಸೃಷ್ಟಿಯ ರಚನೆಯ ಕೌಶಲ ಚಂದ ಇವೆಲ್ಲಾ ಲೋಕಕ್ಕೆ ಅಚ್ಚರಿ ಯೇ ಅದರಲ್ಲಿ 2 ಮಾತಿಲ್ಲ. ಇಂತಹ ಈ ಒಪ್ಪಂದಕ್ಕೆ ಭಾಗೀದಾರ ಹಕ್ಕುದಾರ ರಚನೆ ಕಾರ ಎಂಬ ವಿಷಯವನ್ನು ಪ್ರತಿಪಾದಿಸ ಲೆಂದೇ ದೇವರು ಬೆಳ್ಳಕ್ಕಿಗಳ ಸಾಲಿನ ಈ ವಿನ್ಯಾಸದಲ್ಲಿ ಹಸ್ತಾಕ್ಷರ ಹಾಕಿದ್ದಾನೆ ಎನ್ನು ತ್ತಾರೆ.ಇವೆಲ್ಲದರ ಹಿಂದೆ ಕಾರಣಕರ್ತನಾಗಿ ಕಾರಣೀಭೂತನಾಗಿ ನಾನಿರುವೆ ಎಂದು ಜಗಕ್ಕೆ ಬರೆದುಕೊಡುವ ಕರಾರು ಪತ್ರಕ್ಕೆ ಸಹಿ ಹಾಕುವಂತೆ ದೇವರು ರುಜುಹಾಕುತ್ತಿ ದ್ದಾನೆ ಎನ್ನುತ್ತಾರೆ. ಅಗೋಚರ ಶಕ್ತಿಯ ಅಪರಿಮಿತ ವ್ಯಾಪ್ತಿ ಅದು ಕೊಡುವ ಅಭಯ ಭರವಸೆಯ ಅಲೌಕಿಕತೆಯ ದ್ಯೋತಕವಲ್ಲವೇ ಇದು. ಎಂತಹ ಸುಂದರ ಪರಿಕಲ್ಪನೆ!!

ನಾನು ಚಿಕ್ಕವಳಿದ್ದಾಗ ನನ್ನ ತಂದೆ ಇದನ್ನು ಲಯಬದ್ಧವಾಗಿ ಓದುತ್ತಿದ್ದರು.ನನ್ನ ಮನಸ್ಸಿ ನಲ್ಲಿ ಹಕ್ಕಿಸಾಲು ನೋಡಿದಾಗಲೆಲ್ಲ ಅದು ದೇವರು ರುಜು ಎನ್ನುವ ಭಾವ ತಟಕ್ಕನೆ ಮೂಡುತ್ತಿತ್ತು ಅಪ್ರಯತ್ನವಾಗಿ ಕಣ್ಣು – ಮುಚ್ಚಿ ಒಂದು ಕ್ಷಣ ದೇವರನ್ನು ನೆನೆಯು ತ್ತಿತ್ತು. ಈಗ ಹಕ್ಕಿ ಸಾಲಿನ ಹಿಂದೆ ಅಣ್ಣ (ತಂದೆ)ನ ಮುಖವು ತೇಲಿ ಬರುತ್ತೆ.ದೇವರು ಅಣ್ಣ ಇಬ್ಬರನ್ನೂ ನೆನೆಸುವಂತಾಗುತ್ತದೆ. ಕಣ್ತುಂಬಿ ಬರುತ್ತದೆ.ಒಂದು ರಸ ಸೃಷ್ಟಿಯ ದೃಶ್ಯಕಾವ್ಯದ ಅನುಭವವನ್ನು ಆತ್ಮಗ್ರಾಹ್ಯ ವಾಗಿಸಿ ಓದುಗನಿಗೆ ದೈವಿಕ ಅನುಭಾವ ವನ್ನು ನೀಡುವಲ್ಲಿ ಕವನ ತನ್ಮೂಲಕ ಕವಿ ಗೆದ್ದಿದ್ದಾರೆಂದು ಅನ್ನಿಸುತ್ತದೆ. ನಿಮಗೂ ಹಾಗೇನಾ?
🔆🔆🔆
✍️ಸುಜಾತಾ ರವೀಶ್, ಮೈಸೂರು
Tq medam so ನೈಸ್
LikeLike
Tq you mam
LikeLike
welcome babe
LikeLike
ಪ್ರಕಟಣೆಗಾಗಿ ಸಂಪಾದಕರಿಗೆ ಧನ್ಯವಾದಗಳು
ಸುಜಾತಾ
LikeLiked by 1 person
So nice
LikeLike
Nice
LikeLike